ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ ಕಾರ್ಯದರ್ಶಿಗಳಿಗೆ ತರಬೇತಿ ಶಿಬಿರ

ಶಹಾಪುರ : ಸಹಕಾರಿ ಸಂಘಗಳ ಅಭಿವೃದ್ಧಿಯಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಸಹಕಾರಿ ಸಂಘಗಳು ಸ್ವಾವಲಂಬಿಯಾಗಿ ಬೆಳವಣಿಗೆ ಹೊಂದಬೇಕು ಎಂದು ನಿವೃತ್ತ ಸಹಕಾರ ಸಂಘಗಳ ನಿಬಂಧಕರು ಮತ್ತು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಕೆಂಚಪ್ಪ ನಗನೂರ ತಿಳಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಯವರ ಸಯುಕ್ತಾಶ್ರಯದಲ್ಲಿ ಜಿಲ್ಲೆಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ  ತಾಲೂಕಿನ ನೌಕರರ ಭವನದಲ್ಲಿ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.ಬೆಂಗಳೂರಿನ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿಯ ರಾಜ್ಯ ನಿರ್ದೇಶಕರಾದ ಶಾಂತಗೌಡ ನಾಗನಟಿಗಿ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲೆಯಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘಗಳು ಹೆಚ್ಚಿನ ಸದಸ್ಯತ್ವ ತೆಗೆದುಕೊಳ್ಳಬೇಕು. ಮಾಸಿಕ ಸಭೆ ಮತ್ತು ಆಡಳಿತ ಹಾಗೂ ವಾರ್ಷಿಕ ಮಹಾ ಸಭೆಗಳನ್ನು ಕಡ್ಡಾಯವಾಗಿ ಕರೆಯಬೇಕು. ನಡವಳಿಕೆ ಪುಸ್ತಕ, ಕ್ಯಾಶ್ ಬುಕ್, ಜಮಾ ಪುಸ್ತಕ, ಸದಸ್ಯತ್ವ ನೋಂದಣಿ ಪುಸ್ತಕ ಹೊಂದಿರಬೇಕು. ಸಪ್ಟೆಂಬರ್ 25ರೊಳಗೆ ವಾರ್ಷಿಕ ಮಹಾಸಭೆ ಕರೆಯಬೇಕು ಎಂದು ತಿಳಿಸಿದರು.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಸಹಾಯಕ ನಿರ್ದೇಶಕರಾದ ಡಾ. ರಾಜಶೇಖರ್ ಖಾಸಭಾಗ ಮಾತನಾಡಿ, ಕುರಿ ಮತ್ತು ಮೇಕೆಗಳಿಗೆ ನೆರಡಿ ರೋಗ, ಪಿಪಿಆರ್ ಕಾಲು ಬಾಯಿ ರೋಗ ಬರುತ್ತವೆ. ಆಸ್ಪತ್ರೆಯ ಕಡೆಯಿಂದ ಚಿಕಿತ್ಸೆ ಮತ್ತು ಚುಚ್ಚುಮದ್ದುಗಳಿಗೆ ವಾರ್ಷಿಕ ವೇಳಾಪಟ್ಟಿಯ ಪ್ರಕಾರ ಚುಚ್ಚುಮತ್ತುಗಳನ್ನು ನೀಡಬೇಕು. ನಿಗಮದ ವತಿಯಿಂದ ಕೈಪಿಡಿ ಸಿಗುತ್ತಿದ್ದು, ಅದರಲ್ಲಿ ಕುರಿಗಾರರಿಗೆ ಎಲ್ಲ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು. ಕುರಿ ಸಾಕಾಣಿಕೆ ಈಗ ಉದ್ಯಮವಾಗಿ ಬೆಳೆದಿದೆ. ಸಂಚಾರಿ ಕುರಿಗಾರರಿಗೆ ಸರಕಾರದಿಂದ ಹಲವು ಸೌಲಭ್ಯಗಳಿದ್ದು ಸರಕಾರದ ವತಿಯಿಂದ ಒದಗಿಸಲಾಗುವುದು. ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ನೀಡಲಾಗುವುದು.ಸಂಚಾರಿ ಕುರಿಗಾರರ ಮಕ್ಕಳಿಗೆ ಇದರಿಂದ  ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷರಾದ ಎಂ ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಡಾ. ಅಂಬ್ರಣ್ಣಗೌಡ ಗಡ್ಡೆಸೂಗೂರು,ಶರಭಣ್ಣ ರಸ್ತಾಪುರ, ಮಹಮ್ಮದ್ ಅಲಿ, ಬಸವರಾಜ ಬಸವಂತಪುರ, ಬಲಭೀಮ ಮಡ್ನಾಳ್, ಮಾಳಪ್ಪ ಸುಂಕದ ಕೆಂಭಾವಿ, ಬಸವರಾಜ ಪೂಜಾರಿ, ಯಮನೂರಪ್ಪ, ಬೀರಲಿಂಗ ಪೂಜಾರಿ, ಬಸ್ಸು ಕದ್ರಳ್ಳಿ, ಅಂಬರೀಶ ಮಕಾಶಿ, ಬೀರಲಿಂಗ ಪೂಜಾರಿ, ನರಸಪ್ಪ ವಿಭೂತಿಹಳ್ಳಿ ಸೇರಿದಂತೆ ಜಿಲ್ಲೆಯ ಕುರಿ ಮತ್ತು ಉಣ್ಣೆ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸಹಕಾರ ಒಕ್ಕೂಟದ ರೇಖಾ ನಿರೂಪಿಸಿದರು. ಸುಜಾತ ಮಟ್ಟ ಸ್ವಾಗತಿಸಿ ವಂದಿಸಿದರು.
*****************************************************
ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳಿಗೆ ಯಾವುದೇ ತರಹದ ಲಾಭವಿಲ್ಲ. ಸ್ವಯಂಕೃತವಾಗಿ ಪ್ರಬಲವಾಗಬೇಕಿದೆ. ಜಿಲ್ಲಾ ಸಹಕಾರ ಒಕ್ಕೂಟದಲ್ಲಿ ಸದಸ್ಯತ್ವ ತೆಗೆದುಕೊಂಡು ಕುರಿ ಸಂಘಗಳ ಬೆಳವಣಿಗೆಗೆ ತಾವು  ಶ್ರಮಿಸಬೇಕು.ಕೆಲವು ನಬಾರ್ಡ್ ಯೋಜನೆಗಳು ಆರ್ಥಿಕವಾಗಿ ಪ್ರಬಲವಾದ ಕುರಿಗಾರರಿಗೆ ಅನುಕೂಲವಾಗುತ್ತದೆ. ಸಣ್ಣ ಕುರಿಗಾರರಿಗೆ ಲಾಭವಿಲ್ಲ. ಆದ್ದರಿಂದ ಡಿಸಿಸಿ ಬ್ಯಾಂಕ್ ನಿಂದ ಸದಸ್ಯತ್ವ ಕೊಡಿಸಿ ಕುರಿಗಾರರಿಗೆ ಬಡ್ಡಿ ರಹಿತ ಸಾಲ ಒದಗಿಸಿ ಕೊಡಬೇಕೊಟ್ಠರೆ ಅನುಕೂಲವಾಗುತ್ತದೆ ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಯಾದಗಿರಿ ಜಿಲ್ಲಾ ಸಹಕಾರಿ ಒಕ್ಕೂಟಕ್ಕೆ ಮನವಿ ಮಾಡಿದರು.