ವಿಶ್ವ ಸಾಮಾಜಿಕ ದಿನಾಚರಣೆ : ಕಾನೂನು ಅರಿವು ಕಾರ್ಯಕ್ರಮ

ಶಹಾಪುರ :  ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್, ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ  ವಿಶ್ವ ಸಾಮಾಜಿಕ ದಿನಾಚರಣೆ ಹಾಗೂ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮದ ಅಂಗವಾಗಿ  ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ  ಬಸವರಾಜ ಅವರು ಮಾತನಾಡಿ, ಪೋಷಕರು ಲಿಂಗ ತಾರತಮ್ಯವನ್ನು ಮಾಡದೆ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಅಕ್ಷರವು ನಮ್ಮ ಅರಿವಿನ ಬೆಳಕನ್ನು ವಿಸ್ತರಿಸುತ್ತದೆ. ಮಹಿಳೆಯರು ಅಕ್ಷರದ ಕ್ರಾಂತಿಯ ಕಡೆ ಸಾಗಿದಾಗ ಸಮ ಸಮಾಜ ನಿರ್ಮಿಸಲು ಸಾಧ್ಯ. ಪ್ರತಿಯೊಬ್ಬರು ಕನಿಷ್ಠ ಕಾನೂನು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೆ ಆದ ಗೌರವ ಅಂತಸ್ತು ಇದೆ.  ಎಲ್ಲರೂ ಸಮಾನ ಭಾವದಲ್ಲಿ ಮುನ್ನೆಡೆಯಬೇಕು. ಮಹಿಳೆಯರ ಸಂರಕ್ಷಣೆ ಹಾಗೂ ಸಮಾನತೆಗಾಗಿ ಸಾಕಷ್ಟು ಕಾನೂನು ಜಾರಿ ಇವೆ. ಕಾನೂನು ಅರಿತುಕೊಂಡು ಸಾಗಬೇಕು. ನಮ್ಮ ಹಕ್ಕುಗಳಿಗೆ ಚ್ಯುತಿ ಉಂಟಾದರೆ ಪ್ರತಿಭಟಿಸಬೇಕು. ಕಾನೂನು ಉಲ್ಲಂಘಿಸಿದರೆ ಶಿಕ್ಷೆಯಾಗುತ್ತದೆ ಎಂಬುವುದು ಮರೆಯಬೇಡಿ ಎಂದರು.
 ಪ್ರದಾನ ಸಿವಿಲ್ ನ್ಯಾಯಾಧೀಶೆ ಶೋಭಾ,  ಸಂಘದ ಕಾರ್ಯದರ್ಶಿ  ಅಮರೇಶ ನಾಯಕ ಇಟಗಿ, ಎಪಿಪಿ ಮರೆಪ್ಪ ಹೊಸಮನಿ, ಪಿಎಸ್ ಐ ಸೋಮಲಿಂಗಪ್ಪ, ಪ್ಯಾನಲ್ ವಕೀಲರಾದ ಮಲ್ಲಪ್ಪ ಕುರಿ, ಆಯಿಷ್ ರಿಜ್ವಾನ್ ಜಮಖಂಡಿ, ವಸತಿ ನಿಲಯದ ಅಧಿಕಾರಿಗಳಾದ ಪ್ರೀತಿ ದೇಸಾಯಿ, ಸುರೇಖಾ ಭಾಗವಹಿಸಿದ್ದರು.