ಶಹಾಪುರಃ ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವವು ಅಸ್ತಿತ್ವಕ್ಕೆ ಬಂದ ದಿನವೇ ಜ. 26ರ ಸಂಭ್ರಮವಾಗಿದೆ. ಸಂವಿಧಾನದ ಪೀಠಿಕೆ ನಾಗರಿಕರಿಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆಯ ಭ್ರಾತೃತ್ವದಲ್ಲಿ ಭದ್ರಪಡಿಸುತ್ತದೆ ಎಂದು ತಹಶೀಲ್ದಾರ ಉಮಾಕಾಂತ ಹಳ್ಳೆ ತಿಳಿಸಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ರವಿವಾರ ತಾಲೂಕಾಡಳಿತ ಮತ್ತು ನಗರಸಭೆಯಿಂದ 76 ನೇ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂವಿಧಾನದ ರಕ್ಷಣೆಯಲ್ಲಿ ಸಮಾನತೆಯ ನೆಲೆ ಕಂಡುಕೊಂಡು ಬದುಕು ಮುನ್ನಡೆಸುತ್ತಿದ್ದೇವೆ ಅಂದರೆ ಅದಕ್ಕೆ ಮುಖ್ಯವಾಗಿ ಸಂವಿಧಾನ ಕೊಟ್ಟ ಡಾ.ಅಂಬೇಡ್ಕರರ ಸ್ಮರಣೆ ಮಾಡಲೇಬೇಕು.
ಸಂವಿಧಾನ ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ದೇಶವು ಸಾರ್ವಭೌಮತೆಯ ಸಾಮಾಜಿಕ ನ್ಯಾಯದ ಜ್ಯಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯ ನಮ್ಮದಾಗಿದೆ.
ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸುವಲ್ಲಿ ತಮ್ಮ ತನು-ಮನ-ಧನಗಳಿಂದ ತ್ಯಾಗ, ಬಲಿದಾನ ಮಾಡಿದ ಮೇರು ನಾಯಕರುಗಳನ್ನು, ಅಸಂಖ್ಯಾತ ಯೋಧರನ್ನು ದೇಶಾಭಿಮಾನಿಗಳನ್ನು ಕೃತಜ್ಞತಾ ಭಾವನೆಯಿಂದ ನನೆಯುವುದು ಈ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.
ಸಾಧಕರಿಗೆ ಸನ್ಮಾನಃ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಂದಾಯ ಇಲಾಖೆ ಗ್ರೇಡ್ 2 ತಹಸೀಲ್ದಾರ್ ಸೇತು ಮಾಧವ ಕುಲಕರ್ಣಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಷಣ್ಮುಖಪ್ಪ ಗೊಂಗಡಿ, ಕೃಷಿ ಇಲಾಖೆಯ ಡಾ.ರೂಪಾದೇವಿ, ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶನದ ನಂದಕುಮಾರ ಹಿಪ್ಪರಿಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ಧರಾಮಪ್ಪ ಕ್ಯಾತನಳ್ಳಿ, ಪತ್ರಿಕಾ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡಿದ ಹಿರಿಯ ಪತ್ರಕರ್ತರಾದ ನಾರಾಯಣ ಆಚಾರ್ಯ ಸಗರ್, ಟಿ.ನಾಗೇಂದ್ರ ಮತ್ತು ಮಲ್ಲಿಕಾರ್ಜುನ ಮುದ್ನೂರ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಮೆಹರುನ್ ಬೇಗಂ, ತಾಪಂ ಇಓ ಬಸವರಾಜ ಶರಬೈ, ಖಜಾನೆ ಇಲಾಖೆ ಅಧಿಕಾರಿ ಡಾ.ಮೋನಪ್ಪ ಶಿರವಾಳ, ಪೌರಾಯುಕ್ತ ರಮೇಶ ಬಡಿಗೇರ್, ಟಿಎಚ್‍ಓ ಡಾ.ರಮೇಶ ಗುತ್ತೇದಾರ, ಬಿಇಓ ಜಾಹೀದಾ ಬೇಗಂ, ಪಿಎಸ್‍ಐ ಶ್ಯಾಮಸಂದರ ನಾಯಕ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದಾರ್ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು. ಶಾಲಾ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನವು ಗಮನ ಸೆಳೆಯಿತು.