ಅನುಭಾವ ಚಿಂತನೆ
‘ಜಂಗಮ’ ವು ಜಾತಿಯಲ್ಲ,ತತ್ತ್ವ; ಅಂತಃಸತ್ತ್ವ
ಮುಕ್ಕಣ್ಣ ಕರಿಗಾರ
‘ ಜಂಗಮ’ ಎಂದರೆ ಏನು ಎಂದು ಅರ್ಥೈಸಿಕೊಳ್ಳಲಾಗದವರು ಅಯ್ಯನೋರು ಅಥವಾ ವೀರಶೈವರ ಅಯ್ಯಗಳ ಜಾತಿಯ ಜನರನ್ನು ಜಂಗಮ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.’ಜಂಗಮ’ ಎನ್ನುವುದು ಜಾತಿಯಲ್ಲ, ಅದೊಂದು ತತ್ತ್ವ,ಎಲ್ಲರ ಅಂತರ್ಗತ ಶಕ್ತಿ,ಚೈತನ್ಯ.ಅಯ್ಯಗಳ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ‘ ಜಂಗಮರು’ ಆಗಲಾರರು,ಮಠ ಪೀಠಗಳ ಸ್ವಾಮಿಗಳು, ಪೀಠಾಧಿಪತಿಗಳು ಆದ ಮಾತ್ರಕ್ಕೆ ಜಂಗಮರು ಆಗಲಾರರು.ಅಯ್ಯಗಳ ಜಾತಿಯ ವ್ಯಕ್ತಿಗಳು ಮಠ ಮಂದಿರಗಳ ಪೀಠಾಧಿಪತಿಗಳಾದರೆ ಸ್ವಾಮಿಗಳು, ಮಠಾಧೀಶರು ಆಗಬಹುದೇ ಹೊರತು ಜಂಗಮರು ಆಗಲಾರರು.ದಡ್ಡ ಜನರು ಅಯ್ಯಗಳ ಜಾತಿಯವರನ್ನು ಜಂಗಮರು ಎಂದು ಭ್ರಮಿಸಿ,ಹಾಳಾಗುತ್ತಾರೆ.ಜ್ಞಾನಿಗಳು, ಯೋಗಿಗಳು ಜಾತಿಯಿಂದ ಜಂಗಮತ್ವವನ್ನು ಗುರುತಿಸುವುದಿಲ್ಲ,ಜಾತಿಯಿಂದ ಜಂಗಮರಾದವರನ್ನು ಶ್ರೇಷ್ಠರು ಎಂದು ಒಪ್ಪುವುದಿಲ್ಲ.
‘ಜಂಗಮ’ ಎನ್ನುವುದು ಒಂದು ತತ್ತ್ವ.ಯಾರಲ್ಲಿ ಶಿವ ಚೈತನ್ಯ ಜಾಗೃತವಾಗಿದೆಯೇ ಅವನೇ ಜಂಗಮ. ಮೃಡಚೇತನರೇ ಜಂಗಮರು,ಜಡದೇಹಿಗಳಲ್ಲ.ಜಗತ್ತಿನಲ್ಲಿ ಶಿವನೊಬ್ಬನೇ ಜಂಗಮ,ಮನುಷ್ಯರಾರೂ ಜಂಗಮರಲ್ಲ ! ಬಸವಣ್ಣನವರು ಅಲ್ಲಮಪ್ರಭುದೇವರನ್ನು ಮಾತ್ರ ಜಂಗಮ ಎಂದು ಪರಿಗಣಿಸಿ ಪ್ರಭುದೇವರನ್ನು ‘ಶೂನ್ಯಸಿಂಹಾಸನ’ ದ ಅಧ್ಯಕ್ಷರನ್ನಾಗಿ ಪಟ್ಟಗಟ್ಟಿದ್ದರು.ಅಲ್ಲಮಪ್ರಭುದೇವರು ಹುಟ್ಟಿದ ಜಾತಿಯಿಂದ ಕೆಳವರ್ಗದ ‘ ನಟುವ’ ಜಾತಿಗೆ ಸೇರಿದ್ದರು.ಆದರೆ ಹಠಯೋಗ ಸಾಧನೆಯಲ್ಲಿ ಅವರನ್ನು ಮೀರಿಸುವ ಮತ್ತೋರ್ವ ಸಾಧಕರು ಇರಲಿಲ್ಲ,ವ್ಯೋಮಕಾಯಸಿದ್ಧಿಯನ್ನು ಪಡೆದ ಏಕೈಕವ್ಯಕ್ತಿಯಾಗಿದ್ದರು,ಅತ್ಯದ್ಭುತ ಸಾಧಕರು ಆಗಿದ್ದರು.ನಮ್ಮ ದೇಶದಲ್ಲಿ ರಾಮಕೃಷ್ಣ ಪರಮಹಂಸರು,ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಮತ್ತು ರಮಣಮಹರ್ಷಿಗಳನ್ನು ಮಹಾನ್ ಯೋಗಿಗಳು ಎಂದು ಪರಿಗಣಿಸಲಾಗಿದೆ.ಆದರೆ ಇವರಾರಿಗೂ ‘ವ್ಯೋಮಕಾಯಸಿದ್ಧಿ’ ಪ್ರಾಪ್ತಿಯಾಗಿರಲಿಲ್ಲ ಎನ್ನುವುದನ್ನು ಆರೈದುನೋಡಿದಾಗ ಅಲ್ಲಮಪ್ರಭುದೇವರ ವಿಶೇಷತೆ ಅರ್ಥವಾಗುತ್ತದೆ.ಅಲ್ಲಮಪ್ರಭುದೇವರು ಪರಶಿವನ ಚಿತ್ಕಲಾಂಶ ಸಂಭೂತರಾದುದರಿಂದ ಅವರಿಗೆ ಮಾತ್ರ ವ್ಯೋಮಕಾಯಸಿದ್ಧಿ ಪ್ರಾಪ್ತಿಯಾಯಿತು,ಪರಶಿವನಸ್ವರೂಪವನ್ನು ಪಡೆದಿದ್ದರಿಂದ ಅಲ್ಲಮಪ್ರಭುದೇವರು ‘ ಜಂಗಮರು’ ಆದರು.ಅಲ್ಲಮಪ್ರಭುದೇವರ ಚರಿತ್ರೆಯನ್ನು ಓದಿದರೆ ಅವರ ಜಂಗಮ ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳಬಹುದು.
ಜಗದ್ಭರಿತನಾದವನು,ಜಗವನ್ನು ಮೀರಿನಿಂದವನು,ಗಮನಾಗಮನ ಇಲ್ಲದವನು ಅಂದರೆ ಜಗದ ಆಗು ಚೇಗುಗಳಿಗೆ ಒಳಗಾಗದವನು ಮಾತ್ರ ‘ಜಂಗಮ’.ಜಗತ್ತಿನ ಎಲ್ಲೆಡೆಯೂ ವ್ಯಾಪಿಸಿರುವುದು ಗಾಳಿ ಮಾತ್ರ.ಗಾಳಿಸ್ವರೂಪನಾಗಿ ಜಗತ್ತಿನ ಎಲ್ಲೆಡೆ ವ್ಯಾಪಿಸಿರುವವನು ಪರಶಿವನೊಬ್ಬನೇ.ವಾಯುರೂಪದಲ್ಲಿ ಜಗದೆಲ್ಲೆಡೆ ಇರುವುದರಿಂದ ಶಿವನನ್ನು ರುದ್ರ ಎನ್ನುತ್ತಾರೆ.ಪುರಾಣಗಳು ಹೇಳುವ ಅಳುವ, ರೋದನ ಶಬ್ದ ರುದ್ರ ಶಬ್ದದ ನಿಜಾರ್ಥವಲ್ಲ;ಅಪಾರ್ಥ.ಪರಶಿವನ ಪ್ರಕಟರೂಪವೇ ರುದ್ರ ಸುಳಿದು,ಸುತ್ತಾಡಿ,ಜಗವನ್ನು ವಾಯುರೂಪದಲ್ಲಿ ವ್ಯಾಪಿಸಿ ಸದ್ದನ್ನುಂಟು ಮಾಡುವುದರಿಂದ ಆತ ರುದ್ರ.ರುದ್ರಾಂಶಸಂಭೂತನೆಂದೇ ಆಂಜನೇಯನಿಗೆ ಅಷ್ಟೊಂದು ಮಹತ್ವವಿದೆ.ಮರುತ್ತುಗಳನ್ನು ನಿಯಂತ್ರಿಸುವ ಮಹಾದೇವನ ಮಗನಾದ್ದರಿಂದ ಮಾರುತಿಗೆ ಮಹಿಮೆಪ್ರಾಪ್ತವಾಗಿದೆಯೇ ಹೊರತು ರಾಮದೂತನಾದ ಕಾರಣದಿಂದ ಆಂಜನೇಯನಿಗೆ ಮಹಿಮೆ ಪ್ರಾಪ್ತವಾಗಿಲ್ಲ.ರಾಮನೂ ಶಿವಭಕ್ತನೆ,ಆಂಜನೇಯನೂ ಶಿವಭಕ್ತನೆ.ಆದರೆ ಆಂಜನೇಯನ ಶಕ್ತಿ ಸಾಮರ್ಥ್ಯಗಳು ರಾಮನಲ್ಲಿ ಇರಲಿಲ್ಲ.ಆಂಜನೇಯನಲ್ಲಿ ಮಾತ್ರವಲ್ಲ ಲಕ್ಷ್ಮಣ,ಅಂಗದ ,ಜಾಂಬವಂತ ಈ ಯಾರಲ್ಲಿಯೂ ಆಂಜನೇಯನ ಶಕ್ತಿ ಸಾಮರ್ಥ್ಯ ಇರಲಿಲ್ಲ.ಮಹಾಬಲಶಾಲಿಯಾದ ರಾವಣನೂ ಆಂಜನೇಯನಿಗೆ ಸಮನಾಗಿರಲಿಲ್ಲ.ಹನುಮ ಮನಸ್ಸು ಮಾಡಿದ್ದರೆ ರಾವಣನನ್ನು ಒಂದೇ ಒದೆತಕ್ಕೆ ಸಂಹರಿಸುತ್ತಿದ್ದ.ಆದರೆ ಹನುಮಂತ ಯೋಗಿಯಾಗಿದ್ದರಿಂದ,ಪರಮಾತ್ಮನ ಸಂಕಲ್ಪವನ್ನು ಅರಿತದ್ದರಿಂದ ರಾಮನಿಂದ ರಾವಣನವಧೆಯಾಗುವ ಪರಮಾತ್ಮ ಸಂಕಲ್ಪವನ್ನು ಬಲ್ಲವನಾದ್ದರಿಂದ ರಾವಣನನ್ನು ಸಂಹರಿಸಲಿಲ್ಲವಷ್ಟೆ.ರಾಮಾಯಣವನ್ನು ಓದಿದಾಗ ಹನುಮಂತನು ಸಾಧಿಸಿದ ಅದ್ಭುತ ಕಾರ್ಯಗಳನ್ನು ಇತರರು ಸಾಧಿಸಲಿಲ್ಲ ಎನ್ನುವುದು ಮನದಟ್ಟಾಗುತ್ತದೆ.ಹನುಮಂತನು ರುದ್ರಾಂಶ ಸಂಭೂತನಾಗಿದ್ದರಿಂದಲೇ ಅಂತಹ ಅಘಟಿತಗಳನ್ನು ಘಟಿಸುವಂತೆ ಮಾಡಬಲ್ಲವನಾಗಿದ್ದ.ಹನುಮಂತನು ರುದ್ರನ ಪ್ರಕಟರೂಪವಾದರೆ ಅಲ್ಲಮ ಪ್ರಭುದೇವರು ಪರಶಿವನ ಪ್ರಕಟರೂಪ ! ಆಂಜನೇಯನೂ ಜಂಗಮನೆ,ಅಲ್ಲಮಪ್ರಭುದೇವರೂ ಜಂಗಮರೆ! ಇದು ಜಂಗಮ ತತ್ತ್ವದ ಅರ್ಥ,ಮಹತ್ವ.
ಇನ್ನೊಂದು ಪ್ರಶ್ನೆ ಇದೆ,ಮನುಷ್ಯರು ಜಂಗಮರು ಆಗಬಹುದೆ? ಖಂಡಿತ ನರರು ಜಂಗಮರು ಆಗಬಹುದು.ಹರಸ್ವಭಾವವನ್ನು ಅಂಗವಿಸಿಕೊಂಡವನೇ ಜಂಗಮನು.ಹರನ ಭಾವ- ಸ್ವಭಾವವನ್ನು ಅಳವಡಿಸಿಕೊಳ್ಳುವ ಮೂಲಕ ನರನು ಹರನಾಗಬಲ್ಲ,ಜಂಗಮನಾಗಬಲ್ಲ.ಎಲ್ಲರಲ್ಲಿಯೂ ಹರನ ಜಂಗಮ ಚೈತನ್ಯವಿದೆ.ತಮ್ಮೊಳಗಣ ಹರಸ್ವಭಾವವನ್ನು ಅರಿಯದೆ ಮಾನವರು ಮರುಳರಾಗುತ್ತಿದ್ದಾರೆ,ಮಾಯಾವಶರಾಗಿ ಬಳಲುತ್ತಿದ್ದಾರೆ.ತಮ್ಮಲ್ಲಿನ ಹರಸ್ವರೂಪವನ್ನು ಅರಿತು,ಆಚರಿಸಿದರೆ,ಹರಭಾವವನ್ನು ಜಾಗೃತಗೊಳಿಸಿಕೊಂಡರೆ ಪ್ರತಿಯೊಬ್ಬರೂ ಜಂಗಮರು ಆಗಬಹುದು.ಜಂಗಮತ್ವ ಯಾರೊಬ್ಬರ ಖಾಸಗಿಸ್ವತ್ತಲ್ಲ,ಎಲ್ಲರ ಹಕ್ಕು,ಅಂತರ್ಗತ ಚೈತನ್ಯ. ಸಾಧನೆಯ ಬಲದಿಂದ ಯಾರು ಬೇಕಾದರೂ ಜಂಗಮರು ಆಗಬಹುದು.ನೀತಿಯಿಂದ ಜಂಗಮರಾದವರು,ಅಂತಃಸತ್ತ್ವದ ಬಲದಿಂದ ಜಂಗಮರು ಆದವರು ನಿಜಜಂಗಮರು.ಅಂತಹ ನಿಜ ಜಂಗಮರ ಸನ್ನಿಧಿಯಲ್ಲಿಯೇ ಪರಶಿವನಿದ್ದಾನೆ,ಶರಣರಿದ್ದ ಎಡೆಯಲ್ಲಿಯೇ ಕೈಲಾಸವಿದೆ.