ಅಂಬೇಡ್ಕರ್ ಸಂವಿಧಾನ ಭಾರತ ಸಂಸ್ಥೆಯ ಪರಿಚಯ ಪುಸ್ತಿಕೆ ಬಿಡುಗಡೆ 

ಬೀದರ,,,

ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಸ್ಥಾಪಿಸಿರುವ ‘ ಅಂಬೇಡ್ಕರ್ ಸಂವಿಧಾನ ಭಾರತ ಸಂಸ್ಥೆ’ ಪರಿಚಯ ಪುಸ್ತಿಕೆಯನ್ನು ಜನೆವರಿ ೨೧ ರಂದು ಬಿಡುಗಡೆಗೊಳಿಸಲಾಯಿತು. ಬೀದರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರೂ ಬಾಬಾ ಸಾಹೇಬ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಬೀದರ ಜಿಲ್ಲೆಯಾದ್ಯಂತ ಪಸರಿಸಲು ಪ್ರಯತ್ನಿಸುತ್ತಿರುವ ವಿಚಾರವಾದಿ,ಚಿಂತಕ ಬಾಬುರಾವ್ ಪಾಸ್ವಾನ್ ಅವರು ‘ ಅಂಬೇಡ್ಕರ್ ಸಂವಿಧಾನ ಭಾರತ ಸಂಸ್ಥೆ’ ಯ ಪರಿಚಯ ಪುಸ್ತಿಕೆಯನ್ನು ಲೋಕಾರ್ಪಣೆ ಮಾಡಿದರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ,ಸಾಧನೆ ಮತ್ತು ಭಾರತಕ್ಕೆ ಅವರ ಅನರ್ಘ್ಯ ಕೊಡುಗೆಯಾದ ಸಂವಿಧಾನದ ಬಗ್ಗೆ ಜನತೆಯಲ್ಲಿ ಪ್ರಜ್ಞೆಯನ್ನು ಉಂಟುಮಾಡುವ, ಸಂವಿಧಾನದ ಧ್ಯೇಯಾದರ್ಶಗಳು,ತತ್ವ,ಸಂದೇಶಗಳು ಮತ್ತು ಸಂವಿಧಾನದ ಬಗ್ಗೆ ಜನಜಾಗೃತಿಯನ್ನು ಉಂಟು ಮಾಡುವ ಉದ್ದೇಶದಿಂದ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಶ್ರೀ ಮುಕ್ಕಣ್ಣ ಕರಿಗಾರ ಅವರು 14.01.2025 ರ ಮಕರ ಸಂಕ್ರಾಂತಿಯ ದಿನದಂದು ‘ ಅಂಬೇಡ್ಕರ್ ಸಂವಿಧಾನ ಭಾರತ ಸಂಸ್ಥೆ’ ಯನ್ನು ಬೀದರಿನಲ್ಲಿ ಸ್ಥಾಪಿಸಿದ್ದಾರೆ.ಈ ಸಂಸ್ಥೆಯು ವೈಯಕ್ತಿಕ ನೆಲೆಯಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಯಾಗಿರುತ್ತದೆ.

ಅಂಬೇಡ್ಕರ್ ಸಂವಿಧಾನ ಭಾರತ ಸಂಸ್ಥೆಯನ್ನು ಈ ಮುಂದಿನ ಉದ್ದೇಶಗಳ ಸಾಧನೆಗಾಗಿ ಸ್ಥಾಪಿಸಲಾಗಿದೆ :-
1.ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನ,ಸಾಧನೆಗಳನ್ನು ಪರಿಚಯಿಸುವುದು
2. ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಬರಹಗಳು, ಭಾಷಣಗಳು, ಸಾಹಿತ್ಯವನ್ನು ಕರ್ನಾಟಕದ ಜನತೆಗೆ ಪರಿಚಯಿಸುವುದು.
3. ಭಾರತದ ಸಂವಿಧಾನದ ಬಗ್ಗೆ ಜನಜಾಗೃತಿಯನ್ನುಂಟು ಮಾಡುವುದು.
4.ಭಾರತ ಸಂವಿಧಾನದ ಕುರಿತು ಪುಸ್ತಕಗಳನ್ನು ಪ್ರಕಟಿಸುವುದು,ವಿಚಾರೋಪನ್ಯಾಸ,ಕಾರ್ಯಾಗಾರಗಳನ್ನು ಏರ್ಪಡಿಸುವುದು.
5. ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನದ ಪ್ರಜ್ಞೆಯನ್ನು ಪಸರಿಸಲು ಪತ್ರಿಕೆಗಳನ್ನು ಪ್ರಕಟಿಸುವುದು,ಸಂಶೋಧನಾ ಗ್ರಂಥಗಳು, ಪ್ರೌಢ ಪ್ರಬಂಧಗಳನ್ನು ಪ್ರಕಟಿಸುವುದು.

ರಾಜ್ಯ ಮಟ್ಟದ ಸಂಸ್ಥೆಯಾಗಿರುವ ‘ ಅಂಬೇಡ್ಕರ್ ಸಂವಿಧಾನ ಭಾರತ ಸಂಸ್ಥೆ’ ಯ ಕೇಂದ್ರ ಕಛೇರಿಯು ಬೀದರಿನಲ್ಲಿ ಇರುತ್ತದೆ.

ಸಂಸ್ಥೆಯ ಪರಿಚಯಪುಸ್ತಿಕೆಯ ಲೋಕಾರ್ಪಣೆಯ ಸರಳ ಸಮಾರಂಭದಲ್ಲಿ ಬೀದರ ಜಿಲ್ಲಾ ಪಂಚಾಯತಿಯ ಆಡಳಿತ ವಿಭಾಗದ ಸಹಾಯಕ ನಿರ್ದೇಶಕರಾದ ಜಯಪ್ರಕಾಶ ಚೌಹಾಣ್,ದಲಿತ ಸಂಘರ್ಷ ಸಮಿತಿಯ ಮುಖಂಡ ರಾಜಕುಮಾರ ಶೆರಿಕಾರ,ಮಲ್ಕಾಂಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಉಮೇಶ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗೊಂಡ ಸಮಾಜದ ಜಿಲ್ಲಾ ಯುವ ಮುಖಂಡರಾದ ಸಚಿನ್ ಮಲ್ಕಾಂಪುರೆ
ಮತ್ತು ಉಪಕಾರ್ಯದರ್ಶಿಯವರ ಆಪ್ತಸಹಾಯಕರಾದ ಶ್ರೀನಿವಾಸ ಉಪಸ್ಥಿತರಿದ್ದರು.