ಹಯ್ಯಳಲಿಂಗೇಶ್ವರ ಜಾತ್ರೆ : ಟೆಂಡರ್ ಬೆಲೆಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ತೆಂಗಿನ ಕಾಯಿ ವ್ಯಾಪಾರಸ್ಥರು : ಸಾರ್ವಜನಿಕರ ಆಕ್ರೋಶ

ವಡಗೇರಾ,,,

ತಾಲೂಕಿನ ಹಯ್ಯಳ ಬಿ ಗ್ರಾಮದ ಆರಾಧ್ಯ ದೈವ ಸಗರನಾಡಿನ ಅಧಿದೇವರು ಹಯ್ಯಳ ಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ಜರುಗುತ್ತದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನದ ತೆಂಗಿನ ಕಾಯಿ ಟೆಂಡರ್ ಪ್ರಕ್ರಿಯೆ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು.

ಟೆಂಡರ್ ಪ್ರಕ್ರಿಯೆಯಲ್ಲಿ ಗ್ರಾಮದ ಮೂರು ಜನರು ಹೆಸರನ್ನು ನೊಂದಾಯಿಸಿದ್ದರು. ದಿನಾಂಕ 13/01/2025 ರಿಂದ 29/01/2025 ರವರೆಗೆ ಜಾತ್ರಾ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಲಾಗಿತ್ತು. ಪ್ರತಿ ತೆಂಗಿನಕಾಯಿ ಬೆಲೆ 30 ರೂ.ಯಂತೆ ಜೋಡಿ ತೆಂಗಿನಕಾಯಿ 60 ರೂಪಾಯಿಯಂತೆ ಮಾರಾಟ ಮಾಡುವಂತೆ ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ ಬೆಲೆ ನಿಗದಿಗೊಳಿಸಲಾಗಿತ್ತು. ಗ್ರಾಮದ ಲಿಂಗಣ್ಣ/ಕಾಮಣ್ಣ ಅವರಿಗೆ ಹರಾಜು ನೀಡಲಾಗಿತ್ತು.

ಆದರೆ ಕಳೆದೆರಡು ದಿನಗಳಿಂದ ಜೋಡಿ ತೆಂಗಿನಕಾಯಿಯ ಬೆಲೆಯನ್ನು 70 ರಿಂದ 100 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಆರೋಪಿಸಿದ್ದಾರೆ.

ಎರಡು ತೆಂಗಿನ ಕಾಯಿಯ ಜೊತೆಗೆ ಹೂವು ನಿಂಬೆಹಣ್ಣು ಕೊಟ್ಟು ಹೆಚ್ಚುವರಿ ಹಣವನ್ನು ತೆಂಗಿನಕಾಯಿ ವ್ಯಾಪರಸ್ಥರು ವಸೂಲಿ ಮಾಡುತ್ತಿದ್ದಾರೆ ಎಂದು ಮೌನೇಶ್ ಆರೋಪಿಸಿದ್ದಾರೆ. ಕೂಡಲೇ ಇದರ ಬಗ್ಗೆ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ..

ಕಾನೂನಾತ್ಮಕವಾಗಿ ಸಾರ್ವಜನಿಕರು ಜಾತ್ರೆಯ ನಿಮಿತ್ತ 60 ರೂಪಾಯಿಗೆ ಜೋಡಿ ತೆಂಗಿನಕಾಯಿಯಂತೆ ಮಾರಾಟ ಮಾಡಲು ಹರಾಜು ಪ್ರಕ್ರಿಯೆ ಮಾಡಿದ್ದೇವೆ. ಜೋಡಿ ತೆಂಗಿನಕಾಯಿಗೆ 60 ರೂಪಾಯಿಯಂತೆ ಗ್ರಾಮದ ಮೂರು ಸ್ಥಳಗಳಲ್ಲಿ ಬ್ಯಾನರ್ ಹಾಕಿದ್ದೇವೆ. ದೇವಸ್ಥಾನದ ಖಾತೆಗೆ ಹಣ ಜಮಾ ಮಾಡಲಾಗಿದೆ. ಭಕ್ತರು ಮತ್ತು ಸಾರ್ವಜನಿಕರು ಗಮನಹರಿಸಿ ಹೆಚ್ಚುವರಿ ಹಣವನ್ನು ತೆಂಗಿನಕಾಯಿ ವ್ಯಾಪರಸ್ಥರಿಗೆ ಕೊಡಬಾರದು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರರು ಹಯ್ಯಳ ಬಿ ಗ್ರಾಮದ ಹಯ್ಯಳಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ತೆಂಗಿನ ಕಾಯಿಗಳನ್ನು ಟೆಂಡರ್ ಅವಧಿಯಲ್ಲಿ ನಿಗದಿ ಪಡಿಸಿದ ದರಕ್ಕೆ ಮಾರಾಟ ಮಾಡುವಂತೆ ಉಪ ತಹಶೀಲ್ದಾರರ ಸಮಕ್ಷಮದಲ್ಲಿ ವ್ಯಾಪಾರಸ್ಥರಿಗೆ ತಿಳಿಸಲಾಯಿತು ಎಂದು ತಹಶೀಲ್ದಾರರಾದ ಶ್ರೀನಿವಾಸ್ ಚಾಪಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.