ಜನತೆಯ ಮನಗೆದ್ದ ಜನನಾಯಕ ; ಅಜಾತಶತ್ರು ರಾಜಕಾರಣಿ ಈಶ್ವರ ಖಂಡ್ರೆ

ವ್ಯಕ್ತಿಚಿತ್ರ

ಜನತೆಯ ಮನಗೆದ್ದ ಜನನಾಯಕ ; ಅಜಾತಶತ್ರು ರಾಜಕಾರಣಿ ಈಶ್ವರ ಖಂಡ್ರೆಯವರು

ಮುಕ್ಕಣ್ಣ ಕರಿಗಾರ

ಭಾರತದ ರಾಜಕಾರಣಿಗಳಲ್ಲಿ ಸರ್ವಾಜನಾದರಣೀಯ ನಾಯಕತ್ವದ ಗುಣಗಳಿಂದ ದಿವಂವತ‌ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ‘ ಅಜಾತಶತ್ರು’ ಎನ್ನುವ ಬಿರುದಿಗೆ ಪಾತ್ರರಾಗಿದ್ದರು.ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ದಿವಂಗತ ಧರ್ಮಸಿಂಗ್ ಅವರು ಅವರ ಸಂಘರ್ಷರಹಿತ,ಸೌಮ್ಯಸ್ವಭಾವದಿಂದ ‘ ಅಜಾತಶತ್ರು’ ಎನ್ನುವ ಬಿರುದಿಗೆ ಪಾತ್ರರಾಗಿದ್ದರು. ಪ್ರಸ್ತುತ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಚಿವ ಸಂಪುಟದ ಪ್ರಮುಖ ಮತ್ತು ಪ್ರಭಾವಿ ಸಚಿವರಲ್ಲೊಬ್ಬರಾಗಿರುವ ಶ್ರೀಯುತ ಈಶ್ವರ ಖಂಡ್ರೆಯವರು ತಮ್ಮ ಸರ್ವಜನಾದರಣೀಯ ವ್ಯಕ್ತಿತ್ವದಿಂದಾಗಿ ‘ ಅಜಾತಶತ್ರು’ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ ಎನ್ನುವುದು ಆಧುನಿಕ ಕಾಲಘಟ್ಟದ ಮಹತ್ವದ ರಾಜಕೀಯ ಸಂಗತಿ.ಹಾಗಂತ ಈಶ್ವರ ಖಂಡ್ರೆಯವರಿಗೆ ರಾಜಕೀಯ ವಿರೋಧಿಗಳು ಇಲ್ಲವೆಂದಲ್ಲ.ಆದರೆ ರಾಜಕೀಯ ಕಾರಣದಿಂದ ಅವರನ್ನು ವಿರೋಧಿಸಬಹುದೇ ಹೊರತು ವ್ಯಕ್ತಿಗತವಾಗಿ ಈಶ್ವರಖಂಡ್ರೆಯವರನ್ನು ವಿರೋಧಿಸುವವರಿಲ್ಲ.ಕಾರಣ ಆಡಳಿತ ಪಕ್ಷದವರು,ವಿರೋಧ ಪಕ್ಷದವರು ಎನ್ನುವ ಭೇದಭಾವವಿಲ್ಲದೆ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲರೊಂದಿಗೆ ಬೆರೆತು,ಎಲ್ಲರ ಅಭಿಪ್ರಾಯಗಳನ್ನು ಆಲಿಸುವ ಸೌಜನ್ಯ ಮತ್ತು ಸೌಶೀಲ್ಯದಿಂದಾಗಿ ಈಶ್ವರ ಖಂಡ್ರೆಯವರು ಅವರ ವಿರೋಧಿಗಳ ಮನಸ್ಸುಗಳನ್ನು ಗೆದ್ದ ಮುತ್ಸದ್ದಿರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ,ಅಜಾತಶತ್ರು ಪಟ್ಟವನ್ನು ಅಲಂಕರಿಸಿದ್ದಾರೆ.

ಕಲ್ಯಾಣಕರ್ನಾಟಕ‌ದ ಪ್ರಭಾವಿ ರಾಜಕಾರಣಿಗಳಾಗಿದ್ದ ಸ್ವಾತಂತ್ರ್ಯ ಹೋರಾಟಗಾರ,ಅಪ್ರತಿಮ ದೇಶಭಕ್ತ,ಸಹಕಾರ ಚಳುವಳಿಯ ಅಗ್ರ ನಾಯಕ,ಇಂದಿರಾಗಾಂಧಿ, ರಾಜೀವಗಾಂಧಿಯವರಂತಹ ಮಹಾನ್ ನಾಯಕರುಗಳ ಆತ್ಮೀಯವಲಯದಲ್ಲಿ ಗುರುತಿಸಿಕೊಂಡಿದ್ದ ‘ಲೋಕನಾಯಕ’ ಖ್ಯಾತಿಯ ಭೀಮಣ್ಣ ಖಂಡ್ರೆಯವರ ಮಗನಾಗಿ ಈಶ್ವರ ಖಂಡ್ರೆಯವರು ಅವರ ತಂದೆಯವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ತಮ್ಮದೆ ಆದ ವ್ಯಕ್ತಿತ್ವಮಹತಿಯನ್ನು ನಿರ್ಮಿಸಿದ್ದಾರೆ,ಸ್ವಂತಿಕೆಯನ್ನು ಮೆರೆದಿದ್ದಾರೆ.ಜನೆವರಿ 15,1962 ರಲ್ಲಿ ಜನಿಸಿದ ಈಶ್ವರ ಖಂಡ್ರೆಯವರು ಕಲ್ಬುರ್ಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪಿಡಿಎ ಇಂಜನಿಯರಿಂಗ್ ಕಾಲೇಜಿನಿಂದ ಬಿ.ಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಪಡೆದವರು.ತಂದೆ ಭೀಮಣ್ಣ ಖಂಡ್ರೆಯವರ ಪ್ರೇರಣೆ- ಪ್ರಭಾವದಿಂದಾಗಿ ತಾರುಣ್ಯದ ದಿನಗಳಲ್ಲಿಯೇ ರಾಜಕೀಯದತ್ತ ಆಕರ್ಷಿತರಾದ ಈಶ್ವರ ಖಂಡ್ರೆಯವರು 1979 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ಸದಸ್ಯರಾಗಿ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಪ್ರವೇಶಿಸಿದರು.ರಾಜೀವಗಾಂಧಿಯವರ ನೇತೃತ್ವದಲ್ಲಿ 1985 ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಸೇವಾದಳದ ರಾಷ್ಟ್ರೀಯ ತರಬೇತಿಯ ಯಶಸ್ಸಿನಲ್ಲಿ ತಮ್ಮ ಕೊಡುಗೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಹಿರಿಯರ ಕಣ್ಣಿಗೆ ಬಿದ್ದರು,ಕಣ್ಮಣಿನಾಯಕರು ಎಂದು ಗುರುತಿಸಲ್ಪಟ್ಟರು.1987 ರಲ್ಲಿ ಭಾಲ್ಕಿಯಲ್ಲಿ ಬೀದರ ಜಿಲ್ಲೆಯ ಸೇವಾದಳ ಜಿಲ್ಲಾ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿ ಜನಮನ್ನಣೆ ಗಳಿಸಿದ ಪರಿಣಾಮವಾಗಿ 1989 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಸೇವಾದಳ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡರು.

ಬೀದರ ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ 1994 ರಲ್ಲಿ ಅವಿರೋಧವಾಗಿ ಆಯ್ಕೆಯಾದ ಈಶ್ವರಖಂಡ್ರೆಯವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಾತ್ರವಾಗುವಂತೆ ಅದನ್ನು ಕಟ್ಟಿಬೆಳೆಸಿದ್ದಾರೆ.ಶಾಂತಿವರ್ಧಕ ಶಿಕ್ಷಣ ಸಂಸ್ಥೆಯು ಇಂದು 25 ಕ್ಕಿಂತ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎನ್ನುವುದು ಗಮನಾರ್ಹವಾದುದು.ಶಾಂತಿವರ್ಧಕ ಶಿಕ್ಷಣ ಟ್ರಸ್ಟ್ ನಡಿ 10,000 ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿವಿಧ ಕೋರ್ಸುಗಳಲ್ಲಿ ಓದುತ್ತಿದ್ದರೆ 1000 ಕ್ಕೂ ಹೆಚ್ಚು ಸಂಖ್ಯೆಯ ಬೋಧಕ ಸಿಬ್ಬಂದಿಯವರಿದ್ದಾರೆ.ಬೀದರ ಜಿಲ್ಲೆಯ ರೈತರ ಪಾಲಿನ ಭಾಗ್ಯದೇವತೆಯಾಗಿದ್ದ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ 1999 ರಲ್ಲಿ ಚುನಾಯಿತರಾದ ಈಶ್ವರಖಂಡ್ರೆಯವರು ತಮ್ಮ ಪಾದರಸದ ಚುರುಕಿನ ನಾಯಕತ್ವದಿಂದ ಬಿ ಎಸ್ ಎಸ್ ಕೆ ಯನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದರು.

ಭಾಲ್ಕಿ ವಿಧಾನಸಭಾ ಕ್ಷೇತ್ರದಿಂದ 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ತುರುಸಿನ ಚುನಾವಣೆಯಲ್ಲಿ 21241 ಮತಗಳ ಅಂತರದಿಂದ ಎದುರಾಳಿಯನ್ನು ಸೋಲಿಸಿ ಸಕ್ರೀಯ ರಾಜಕೀಯ ಪ್ರವೇಶಿಸಿದ ಈಶ್ವರ ಖಂಡ್ರೆಯವರು ನಾಲ್ಕು ಬಾರಿ ಭಾಲ್ಕಿ ಕ್ಷೇತ್ರದ ಶಾಸಕರಾಗಿ ಭಾಲ್ಕಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಪಟ್ಟು,ಭಾಲ್ಕಿ ತಾಲೂಕಿಗೆ ಬೀದರ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನ ಸಲ್ಲಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾಲ್ಕುಬಾರಿ ಶಾಸಕರಾಗಿ ಸತತವಾಗಿ ಗೆಲ್ಲುವುದು ಎಂದರೆ ಸಾಮಾನ್ಯ ಸಂಗತಿಯಲ್ಲ.ಈಶ್ವರ ಖಂಡ್ರೆಯವರಲ್ಲಿ ಭಾಲ್ಕಿ ತಾಲೂಕಿನ ಜನತೆ ತಮ್ಮ ಭರವಸೆಯ ನಾಯಕ ಮತ್ತು ಹಿತೈಷಿ ರಾಜಕಾರಣಿಯನ್ನು ಕಂಡಿದ್ದರಿಂದ ಸತತವಾಗಿ ಗೆಲ್ಲಿಸುತ್ತಿದ್ದಾರೆ ಈಶ್ವರ ಖಂಡ್ರೆಯವರನ್ನು.ಈಶ್ವರಖಂಡ್ರೆಯವರ ಜನಪ್ರಿಯತೆಗೆ ಕಳಶಪ್ರಾಯವಾದ ಘಟನೆ ಅವರ ಪುತ್ರ ಸಾಗರ ಖಂಡ್ರೆಯವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂದರೆ ಅವರ 26 ನೇ ವಯಸ್ಸಿಗೆ ಬೀದರ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದದ್ದು.ಈಶ್ವರ ಖಂಡ್ರೆಯವರ ಜನಪ್ರಿಯತೆಗೆ ಮತ್ತೊಂದು ನಿದರ್ಶನ ಕಾಂಗ್ರಸ್ ಪಕ್ಷವು 2018 ರಲ್ಲಿ ಅವರನ್ನು ಕಲ್ಯಾಣಕರ್ನಾಟಕ ಪ್ರದೇಶದ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದಾಗ 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಲ್ಯಾಣ ಕರ್ನಾಟಕ ಪ್ರದೇಶದ 41 ಸ್ಥಾನಗಳಲ್ಲಿ 21 ಸ್ಥಾನಗಳಲ್ಲಿ ವಿಜಯಸಾಧಿಸಿದ್ದು.

ಭಾಲ್ಕಿ ವಿಧಾನಸಭಾ ಕ್ಷೇತ್ರ ಮತ್ತು ಬೀದರ ಜಿಲ್ಲೆಯಲ್ಲಿ ಕ್ರಿಯಾಶೀಲರಾಗಿರುವಂತೆಯೇ ವಿಧಾನಸಭೆಯ ಅಧಿವೇಶನಗಳಲ್ಲಿ ಪಾಲ್ಗೊಳ್ಳುವ ಅತ್ಯಂತ ಕ್ರಿಯಾಶೀಲ ಶಾಸಕರು ಎನ್ನುವ ಹಿರಿಮೆಯೂ ಈಶ್ವರ ಖಂಡ್ರೆಯವರದ್ದಾಗಿದೆ.ಅವರು ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸಿದ 2008ರಿಂದ ಇಲ್ಲಿಯವರೆಗೆ ಭಾಲ್ಕಿ ವಿಧಾನಸಭಾ ಕ್ಷೇತ್ರ,ಬೀದರ ಜಿಲ್ಲೆಯ ಅಭಿವೃದ್ಧಿ ಹಾಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಸಭೆಯ ಅಧಿವೇಶನಗಳಲ್ಲಿ 354 ಪ್ರಶ್ನೆಗಳನ್ನು ಕೇಳಿ ಅತಿಹೆಚ್ಚು ಪ್ರಶ್ನೆಗಳನ್ನು ಕೇಳಿದ ಶಾಸಕರಲ್ಲಿ ಎರಡನೆಯವರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.ಮಂಗಳೂರು ಶಾಸಕರು 383 ಪ್ರಶ್ನೆಗಳನ್ನು ಕೇಳುವ ಮೂಲಕ ಮೊದಲಸ್ಥಾನದಲ್ಲಿದ್ದರೆ ಈಶ್ವರಖಂಡ್ರೆಯವರು ಎರಡನೇ ಸ್ಥಾನದಲ್ಲಿದ್ದಾರೆ ಎನ್ನುವುದು ಜನಸಾಮಾನ್ಯರ ಸಮಸ್ಯೆಗಳಿಗೆ ಅವರ ಸ್ಪಂದನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ.ಸದನದಲ್ಲಿ ಅತಿಹೆಚ್ಚು ಪ್ರಶ್ನೆಗಳನ್ನು ಕೇಳಿದ,ಜನಪರ ಕಾಳಜಿಯ ಶಾಸಕರು ಎನ್ನುವ ಕಾರಣದಿಂದ ಕರ್ನಾಟಕದ ಪ್ರತಿಷ್ಠಿತ ಸರ್ಕಾರೇತರ ಸಂಸ್ಥೆಯಾದ ” ದಕ್ಷ” ಸಂಸ್ಥೆಯು ಈಶ್ವರ ಖಂಡ್ರೆಯವರನ್ನು ಸನ್ಮಾನಿಸಿ,ಅಭಿನಂದಿಸಿತು.ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರೂ ಕರ್ನಾಟಕದ ಖ್ಯಾತಿವೆತ್ತ ಲೋಕಾಯುಕ್ತರು ಆಗಿದ್ದ ನ್ಯಾಯಮೂರ್ತಿ ಸಂತೋಷ ಹೆಗಡೆಯವರು ಈಶ್ವರಖಂಡ್ರೆಯವರ ಜನಪರ ಕಾಳಜಿಯನ್ನು ಮುಕ್ತಮನಸ್ಸಿನಿಂದ ಶ್ಲಾಘಿಸಿದ್ದು ಸ್ಮರಣೀಯ.

ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆಯಾದ ವಿಜಯಕರ್ನಾಟಕವು ಶಾಸಕರುಗಳ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಿ 08.02.2013 ರಂದು ಪ್ರಕಟಿಸಿದ ರಿಪೋರ್ಟ್ ಕಾರ್ಡಿನಂತೆ 10 ಅಂಕಗಳ ರೇಟ್ ಕಾರ್ಡಿನಲ್ಲಿ ಈಶ್ವರಖಂಡ್ರೆಯವರು 7 ಅಂಕಗಳನ್ನು ಪಡೆದು ಯಶಸ್ವಿ ಜನನಾಯಕರುಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟರು.

‌ ‌ಕರ್ನಾಟಕದ ಪೌರಾಡಳಿತ ಸಚಿವರಾಗಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿರುವ ಈಶ್ವರಖಂಡ್ರೆಯವರು ಪ್ರಸ್ತುತ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಂಪುಟದಲ್ಲಿ ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ತಮ್ಮ ಕಾರ್ಯದಕ್ಷತೆ,ಪ್ರಾಮಾಣಿಕತೆಯಿಂದ ಹೆಸರಾಗಿದ್ದಾರೆ.ಅಷ್ಟೇನೂ ಜನಪ್ರಿಯವಲ್ಲದ ಅರಣ್ಯ ಇಲಾಖೆಯನ್ನು ಸಾರ್ವಜನಿಕ ಮಹತ್ವದ ಇಲಾಖೆಯನ್ನಾಗಿ ಪರಿವರ್ತಿಸಿದ್ದು ಈಶ್ವರ ಖಂಡ್ರೆಯವರ ಶ್ರೇಯಸ್ಸು.ಅರಣ್ಯ ಇಲಾಖೆಯಲ್ಲಿ ಅವರು ಕೈಗೊಂಡ ನಿರ್ಭೀತ ನಿಲುವಿನ ಸುಧಾರಣಾ ಕ್ರಮಗಳು, ಪ್ರಗತಿಪರ ಆಲೋಚನೆಗಳಿಂದ ಅರಣ್ಯ ಇಲಾಖೆಯನ್ನು ಕರ್ನಾಟಕದ ಮಹತ್ವದ ಇಲಾಖೆಗಳಲ್ಲಿ ಒಂದನ್ನಾಗಿಸಿದ್ದಾರೆ.