ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿಯಾದ ವಿಜ್ಞಾನ ವಸ್ತು ಪ್ರದರ್ಶನ.ದೇವೇಂದ್ರಪ್ಪ ಮೇಟಿ.

ಶಹಾಪುರ : ಪ್ರತಿಯೊಬ್ಬ ವಿದ್ಯಾರ್ಥಿಯ ಹುಮ್ಮಸ್ಸು ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಲು ವಿಜ್ಞಾನ ಶಿಕ್ಷಕರು ಹಾಗೂ ಇನ್ನಿತರ ವಿಷಯ ಶಿಕ್ಷಕರಲ್ಲಿನ ಪ್ರಾಮಾಣಿಕತೆಗೆ ಇಲ್ಲಿನ ವರ್ಗ ಕೋಣೆಗಳಲ್ಲಿರುವ ಸಂಭ್ರಮಕ್ಕೆ ಈ ವಿಜ್ಞಾನ ವಸ್ತು ಪ್ರದರ್ಶನವು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ದಿ.ದೇವರಾಜ ಅರಸು ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದೇವೇಂದ್ರಪ್ಪ ಮೇಟಿ ಹೇಳಿದರು.

  ನಗರದ ಡಿಡಿಯು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶನಿವಾರ ಜರುಗಿದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬರೀ ಓದು ಬರಹ ಕಲಿತರೆ ಸಾಲದು ಯಾವುದಾದರೂ ಒಂದೊಂದು ಕ್ರಿಯಾತ್ಮಕ ಕಲೆಯನ್ನು ಬೆಳೆಸಿಕೊಂಡು ಸಂಶೋಧನೆ ಮಾಡುವ ಪ್ರಯತ್ನ ಬೆಳೆಸಿಕೊಳ್ಳಬೇಕು. ಅಂತಹ ಮಹತ್ವದ ತಿರುವು ನೀಡಲು ಇಂತಹ ವಸ್ತು ಪ್ರದರ್ಶನವನ್ನು ಆಯೋಜಿಸುವುದು ಉತ್ತಮ ಎಂದರು.

  ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರುಗಳಾದ ಯಂಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಪಠ್ಯ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

  ವಿದ್ಯಾರ್ಥಿಗಳು ತಮ್ಮ ವಿಷಯ ಶಿಕ್ಷಕರೆಲ್ಲರ ಮಾರ್ಗದರ್ಶನದಲ್ಲಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವರು ಎಂದರು.
 ಭಾಗವಹಿಸಿದ ವಿದ್ಯಾರ್ಥಿಗಳು ಶೈಕ್ಷಣಿಕ ಆಟಿಕೆ ಮತ್ತು ಗಣತಿ ಮಾದರಿ ಹೀಗೆ ಆರು ವಿಭಾಗಗಳನ್ನಾಗಿ ಮಾಡಿ ಪರಸರ ಸಂರಕ್ಷಣೆ ಜತೆಗೆ ಲಭ್ಯವಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಹೇಗೆ ಅಭಿವೃದ್ಧಿ ಕಾರ್ಯ ನಡೆಸಬಹುದು ಎಂಬುದನ್ನು ವಸ್ತುಪ್ರದರ್ಶನದಲ್ಲಿ ತಿಳಿಸಿಕೊಡುತ್ತಿರುವುದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಪತ್ರಕರ್ತರಾದ,ಪ್ರಕಾಶ ಜಿ, ಬಸವರಾಜ ಕರೇಗಾರ,ಶಿಕ್ಷಕರಾದ ಅರುಂಧದತಿ,ಲಕ್ಷ್ಮೀ, ರಾಹುಲ್, ಪರಪ್ಪಗೌಡ, ರಾಹುಲ್ಳ ಶರಣಪ್ಪ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮಾಜ ಶಿಕ್ಷಕಿಯರಾದ ವಾಣಿಶ್ರೀ ನಿರೂಪಿಸಿ ವಂದಿಸಿದರು.