ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಶಹಪುರ ಬಂದ್ ಯಶಸ್ವಿ : ಅಮಿತ್ ಶಾರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಗಡಿಪಾರು ಮಾಡುವಂತೆ ದಲಿತ, ಪ್ರಗತಿಪರ ಸಂಘಟನೆಗಳಿಂದ ಆಗ್ರಹ

 

ಶಹಾಪುರ : ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅಂಬೇಡ್ಕರ್ ಎನ್ನುವುದು ಫ್ಯಾಷನ್ ಎನ್ನುವ ಹೇಳಿಕೆ ಕುರಿತು ಮಾತನಾಡಿರುವುದನ್ನು ಖಂಡಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಶಹಪುರ ನಗರವು ಇಂದು ಸಂಪೂರ್ಣ ಬಂದ್ ಮಾಡಲಾಗಿತ್ತು. ಶಹಪುರ ಬಂದ್ ಗೆ ದಲಿತ ಪರ ಸಂಘಟನೆಗಳ ಒಕ್ಕೂಟ, ತಾಲೂಕು ಕುರುಬರ ಸಂಘ, ವಾಲ್ಮೀಕಿ ಸಂಘ, ಎಸ್ ಡಿ ಪಿ ಐ, ಯಾದವ ಸಂಘ, ರೈತ ಸಂಘ, ಕಾರ್ಮಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಶಹಪುರದ ಬಾರ್ ಕೌನ್ಸಿಲ್ ವಕೀಲರ ಸಂಘ ಸೇರಿದಂತೆ ಹಲವು ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಶಹಾಪುರದ ನಾಗರಿಕರು ವ್ಯಾಪಾರಿಗಳು ವರ್ತಕರು ಬಂದ್ ಗೆ ಸಹಕರಿಸಿದರು. ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ನಗರದ ಕನ್ಯೆಕೂಳೂರು ಅಗಸೆಯಿಂದ ಆರಂಭಿಸಿದ ಪ್ರತಿಭಟನೆ ಸಾವಿರಾರು ಜನರೊಡನೆ ಹೊಸ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಹಳೆ ಬಸ್ ನಿಲ್ದಾಣ ಮೂಲಕ ಬಸವೇಶ್ವರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಅಮಿತ್ ಶಾ ರವರ ಶವಯಾತ್ರೆ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಗತಿಪರರು,ಕಳೆದ ಹತ್ತು ವರ್ಷಗಳಿಂದ ಸಂಸತ್ತಿನ ಕಲಾಪಗಳು ಪುಂಡರ ಗೋಷ್ಠಿಗಳಾಗಿವೆ. ಅಂಬೇಡ್ಕರ್ ಅಂಬೇಡ್ಕರ್ ಎನ್ನುವುದು ಫ್ಯಾಶನ್ ಆಗಿದೆ ಎನ್ನುವ ಹೇಳಿಕೆ ನೀಡಿದ ಅಮಿತ್ ಶಾರ ಸಂಸತ್ ಸದಸ್ಯತ್ವವನ್ನು ರದ್ದು ಮಾಡಿ ಗಡಿಪಾರು ಮಾಡಬೇಕು. ಅಂಬೇಡ್ಕರ್ ಪ್ರತಿಮೆ ಬಳಿ ದೇಶದ ಕ್ಷಮೆಯಾಚಿಸಬೇಕು. ಪದೇ ಪದೇ ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಹಾಗೆ ನಡೆದುಕೊಂಡಿದೆ. ಹೀಗೆ ನಡೆದುಕೊಂಡಿದೆ. ಚುನಾವಣೆಗಳಲ್ಲಿ ಸೋಲಿಸಿದೆ ಎಂದು ಹೇಳುವ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ೧೦ ವರ್ಷಗಳಲ್ಲಿ ದೇಶಕ್ಕಾಗಿ ನೀವೇನು ಮಾಡಿದ್ದೀರಿ. ಅಮಿತ್ ಶಾರ ದುರ್ವರ್ತನೆ ಮಾತುಗಳನ್ನು ಮರೆಮಾಚಲು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಬೇಡ್ಕರ್ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ದೇಶದ ದುರಂತವೇ ಸರಿ. ಆರ್ ಎಸ್ ಎಸ್ ಮತ್ತು ಬಿಜೆಪಿಯವರಿಗೆ ದಲಿತ ಸಮುದಾಯಗಳ ಬಗ್ಗೆ ಅಸಡ್ಡೆ ಮತ್ತು ತುಚ್ಛ ಭಾವನೆಗಳನ್ನು ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ದೇವರು ಸ್ವರ್ಗ ನರಕ ಇವಾವು ಶೋಷಿತ ದಮನಿತ ಮಹಿಳೆಯರ ಬದುಕಿಗೆ ಆಸರೆಯಾಗುವುದಿಲ್ಲ. ಅಂಬೇಡ್ಕರ್ ನೀಡಿದ ಜ್ಞಾನ, ಅರಿವಿನ ಅಳತೆ, ಸ್ವಾಭಿಮಾನದ ಹೋರಾಟದಿಂದ ಘನತೆ ಗೌರವ ತಂದುಕೊಡುತ್ತವೆ. ಚರಿತ್ರೆಯಲ್ಲಿಯೂ ಅಲ್ಲದ ವಾಸ್ತವವು ಅಲ್ಲದ ಕಾಲ್ಪನಿಕ ಪೌರಾಣಿಕ ಪಾತ್ರಗಳನ್ನು ದೇವರೆಂದು ನಂಬಿಸಿ ದೇಶವನ್ನು ಮೌಡ್ಯದ ಕೂಪಕ್ಕೆ ತಳ್ಳಿ, ರಾಜಕೀಯ ಲಾಭ ಪಡೆದುಕೊಳ್ಳುತ್ತಿರುವಿರಿ. ನಿಮ್ಮ ನಡೆ ನುಡಿಗಳ ಕುರಿತು ಎಚ್ಚರವಿರಲಿ. ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಮಿತ್ ಶಾ ರವರನ್ನು ವಜಾಗೊಳಿಸುವಂತೆ ತಹಶೀಲ್ದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಲಿತ ಮತ್ತು ಪ್ರಗತಿಪರ ಅಹಿಂದ ಮುಖಂಡರಾದ ಶರಣಪ್ಪ ಸಲಾದಪೂರ,ನೀಲಕಂಠ ಬಡಿಗೇರ್,ಶರಣು ಬಿ ಗದ್ದುಗೆ, ರಾಯಪ್ಪ ಸಾಲಿಮನಿ,ಮರಿಯಪ್ಪ ಪ್ಯಾಟಿ,ಚನ್ನಬಸ್ಸು ವನದುರ್ಗ,ಶಿವುಪುತ್ರಪ್ಪ ಜವಳಿ,ಗಿರಿಯಪ್ಪಗೌಡ ಬಾಣತಿಹಾಳ,ಎಸ್ಡಿಪಿಐನ ಮಹಮ್ಮದ್ ಖಾಲೀದ್ ಬಲಭೀಮ ಮಡ್ನಾಳ್,ವೆಂಕಟೇಶ ಆಲೂರು ರಾಯಪ್ಪ ಚೆಲುವಾದಿ,ಚಂದ್ರು ಕಟ್ಟಿಮನಿ,ಯಮನಪ್ಪ ಅಗಸ್ಥಿಹಾಳ ಸೇರಿದಂತೆ ಮುಸ್ಲಿಂ ಮುಖಂಡರು ವರ್ತಕರು ಸೇರಿದಂತೆ ಅಪಾರ ಜನಸ್ತೋಮ ಪಾಲ್ಗೊಂಡಿದ್ದರು.