ಬೀದರ : ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನಸಾಹಿತ್ಯ ಚಳುವಳಿ ಜಗತ್ತಿನ ಇತಿಹಾಸದಲ್ಲಿ ಇನ್ನೆಲ್ಲಿಯೂ ಕಂಡುಬರದ ವಿಸ್ಮಯಕಾರಿ,ಸಮಾಜ ಸುಧಾರಣೆಯ ಸಾಮೂಹಿಕ ಆಂದೋಲನವಾಗಿದ್ದು ಬಸವಣ್ಣನವರು ಅಂದೇ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿದ್ದರು.ಶಿವಸಮಾಜ ಅಂದರೆ ಸುಖಿಸಮಾಜವನ್ನು ಕಟ್ಟಬಯಸಿದ್ದ ಬಸವಣ್ಣನವರು ಜಾತಿರಹಿತ ,ವರ್ಗರಹಿತ ಆದರ್ಶಸಮಾಜ ಒಂದನ್ನು ಕಟ್ಟಬಯಸಿದ್ದರು.ಬಸವಣ್ಣನವರ ಈ ಮಹಾನ್ ಕಾರ್ಯಕ್ಕೆ ಹೆಗಲುಕೊಟ್ಟು ದುಡಿದ ಶರಣರಲ್ಲಿ ಶಿವಯೋಗಿ ಸಿದ್ಧರಾಮ, ಮಡಿವಾಳ ಮಾಚಿದೇವ ಮತ್ತು ಅಂಬಿಗರ ಚೌಡಯ್ಯನವರು ಪ್ರಮುಖರು.ನಮ್ಮ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಅವರು ಈ ಮೂವರು ಶರಣರ ಬಗ್ಗೆ ಸಾಹಿತ್ಯ ರಚಿಸುವ ಮೂಲಕ ಹನ್ನೆರಡನೆಯ ಶತಮಾನದ ಸಮಾಜೋಧಾರ್ಮಿಕ ಸುಧಾರಣೆಯ ಕಾರ್ಯವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ ” ಎಂದು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆಯವರು ಅಭಿಪ್ರಾಯ ಪಟ್ಟರು.ಅವರಿಂದು ಬೀದರ ಜಿಲ್ಲಾ ಪಂಚಾಯತಿಯಲ್ಲಿ ಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾಗಿದ್ದ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಬರೆದ” ಶಿವಯೋಗಿ ಸಿದ್ಧರಾಮ ” ” ಮಡಿವಾಳ ಮಾಚಿದೇವ ” ಮತ್ತು ” ನಿಜಶರಣ ಅಂಬಿಗರ ಚೌಡಯ್ಯ ” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಮ್ಮ ಮಾತುಗಳನ್ನು ಮುಂದುವರೆಸುತ್ತಾ ಡಾ.ಗಿರೀಶ ಬದೋಲೆಯವರು ” ಮೊಬೈಲ್ ಮತ್ತು ಟಿ ವಿ ಗಳ ಹಾವಳಿಗೆ ಸಿಕ್ಕು ಓದುವ ಅಭ್ಯಾಸದಿಂದ ಆಧುನಿಕ ಯುವ ಸಮಾಜವು ಹಾಳಾಗುತ್ತಿರುವ ದಿನಗಳಲ್ಲಿ ಮುಕ್ಕಣ್ಣ ಕರಿಗಾರ ಅವರು ಶರಣರ ಜೀವನ ಸಂದೇಶಗಳನ್ನು ಸಾರುವ ಕಿರುಪುಸ್ತಕಗಳನ್ನು ಪ್ರಕಟಿಸುವ ಮೂಲಕ ಜನರಲ್ಲಿ ಓದುವ ಅಭ್ಯಾಸವನ್ನು ಪ್ರೇರೇಪಿಸುವ ಅಭಿನಂದನಾರ್ಹ ಕಾರ್ಯ ಮಾಡುತ್ತಿದ್ದಾರೆ.ಅರ್ಧಘಂಟೆಯಲ್ಲಿ ಓದಿ ಮುಗಿಸಬಹುದಾದ ಮುಕ್ಕಣ್ಣ ಕರಿಗಾರ ಅವರ ಈ ಕಿರುಪುಸ್ತಕಗಳು ವಿಚಾರಬೋಧಪ್ರದ ಪುಸ್ತಕಗಳಾಗಿವೆಯಲ್ಲದೆ ಕಡಿಮೆ ಬೆಲೆಯಲ್ಲಿ ಕೊಂಡು ಓದುವ ಪುಸ್ತಕಗಳಾಗಿದ್ದು ನಮ್ಮ ಯುವಕರು ಈ ಪುಸ್ತಕಗಳನ್ನು ಓದಿ ಅವರ ಬುದ್ಧಿಭಾವಗಳನ್ನು ಪ್ರಚೋದಿಸಿಕೊಳ್ಳಬೇಕು”ಎಂದರು.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಮಾತುಗಳನ್ನು ಮುಂದುವರೆಸಿ ” ಓದುವ ಅಭ್ಯಾಸವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು ನಾವು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.ಮುಕ್ಕಣ್ಣ ಕರಿಗಾರ ಅವರ ಪುಸ್ತಕಗಳನ್ನು ಓದುವ ಮೂಲಕ ನನ್ನಂತಹ ಹೊರರಾಜ್ಯದಿಂದ ಬಂದವರಿಗೆ ಕರ್ನಾಟಕದ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಉಂಟಾಗುತ್ತದೆ.ಕರ್ನಾಟಕದ ಸಂಸ್ಕೃತಿ,ಕನ್ನಡ ಭಾಷೆ,ನಾಡು – ನುಡಿಗಳ ಕುರಿತಾಗಿ ಅವರ ನುರಿತಲೇಖನಿಯಿಂದ ಮತ್ತಷ್ಟು ಸಾಹಿತ್ಯ ಕೃತಿಗಳು ಹೊರಬರಲಿ” ಎಂದು ಹಾರೈಸಿ ” ಇಂದು 2024 ರ ಕೊನೆಯ ದಿನ.ವರ್ಷದ ಕೊನೆಯ ದಿನವನ್ನು ಶರಣರ ಸ್ಮರಣೆಯೊಂದಿಗೆ ಮುಕ್ತಾಯಗೊಳಿಸುತ್ತಿರುವ ನಾವು ಬರಲಿರುವ ಹೊಸವರ್ಷವನ್ನು ಹೊಸ ಸಂಕಲ್ಪದೊಂದಿಗೆ ಸ್ವಾಗತಿಸೋಣ.ಹೊಸ ಗುರಿ,ಹೊಸ ಬದ್ಧತೆಯೊಂದಿಗೆ ಕೆಲಸ ಮಾಡುತ್ತ ಬೀದರ ಜಿಲ್ಲಾ ಪಂಚಾಯತಿಯನ್ನು ಜನಮನದ ಹತ್ತಿರಕ್ಕೆ ಕೊಂಡೊಯ್ಯೋಣ.ಹೊಸವರ್ಷದ ಗುರಿಗಳನ್ನು ಇಂದೇ ನಿಗದಿಪಡಿಸಿಕೊಂಡು ಆ ದಿಸೆಯಲ್ಲಿ ಕಾರ್ಯತತ್ಪರರಾಗೋಣ” ಎಂದು ಅಧ್ಯಕ್ಷೀಯ ಭಾಷಣದ ಆಶಯನುಡಿಗಳನ್ನಾಡಿದರು.
ಬೀದರಿನ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಪಾಟೀಲ್ ಅವರು ಮುಕ್ಕಣ್ಣ ಕರಿಗಾರ ಅವರ ಮೂರು ಪುಸ್ತಕಗಳ ಕುರಿತು ಉಪನ್ಯಾಸ ಮಂಡಿಸಿದರು.ಬಸವಣ್ಣನವರ ಒಡನಾಟದಲ್ಲಿದ್ದ ಪ್ರಮುಖ ವಚನಕಾರರಾದ ಶಿವಯೋಗಿ ಸಿದ್ಧರಾಮ, ಮಡಿವಾಳ ಮಾಚಿದೇವ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಅವರುಗಳ ಜೀವನ- ಧ್ಯೇಯಗಳ ಬಗ್ಗೆ ಪುಸ್ತಕಗಳನ್ನು ರಚಿಸುವ ಮೂಲಕ ಮುಕ್ಕಣ್ಣ ಕರಿಗಾರ ಅವರು ಹನ್ನೆರಡನೆಯ ಶತಮಾನವನ್ನು ನಮ್ಮ ಕಣ್ಣೆದುರು ಕಂಗೊಳೊಸುವಂತೆ ಬಣ್ಣಿಸಿದ್ದಾರೆ. ಸರಕಾರದ ಉನ್ನತ ಅಧಿಕಾರಿಗಳಾಗಿಯೂ ಜನಸೇಬವಾಬದ್ಧತೆಯಿಂದ ದುಡಿಯುತ್ತ ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ಮಾತಿಗೆ ನಿದರ್ಶನರಾಗಿದ್ದಾರೆ.ಬಸವಾದಿ ಶರಣರ ಪ್ರಖರಪ್ರಭಾಪುಂಜದ ಸೆಳೆತಕ್ಕೆ ಒಳಗಾಗಿ ಬರೆಯುತ್ತ, ಬದುಕುತ್ತ ನಮ್ಮ ನಡುವಿನ ಬೆಡಗಿನಂತೆ ಕಾಣಿಸುತ್ತಾರೆ ಮುಕ್ಕಣ್ಣ ಕರಿಗಾರ ಅವರು” ಎಂದು ನುಡಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ,ಮುಖ್ಯಲೆಕ್ಕಾಧಿಕಾರಿ ಶ್ರೀಕಾಂತ, ಡಿ ಆರ್ ಡಿ ಎ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ,ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್ ಮತ್ತು ಬೀದರ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣಪಾಟೀಲ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಭಿವೃದ್ಧಿ ವಿಭಾಗದ ಅಧೀಕ್ಷಕರಾದ ಮಹ್ಮದ್ ಬಶೀರ ಅವರು ಪ್ರಸ್ತಾಪಿಸಿದರೆ ಹಿರಿಯ ಕವಿ ಎಸ್ ಬಿ ಕುಚಬಾಳೆಯವರು ಭಾರತಾಂಬೆಯ ಕುರಿತಾದ ಹಾಡನ್ನು ಹಾಡುತ್ತ ಪ್ರಾರ್ಥಿಸುವ ಮೂಲಕ ಸಭಿಕರ ಗಮನಸೆಳೆದರು. ಬೀದರ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರವೀಣಸ್ವಾಮಿಯವರು ಕಾರ್ಯಕ್ರಮ ನಿರೂಪಿಸಿದರು.