ಬದುಕು ಪೂರ್ವನಿರ್ಧಾರಿತ ಎನ್ನುವುದಕ್ಕೆ ಸಾಕ್ಷಿಯಾದಳು ಮಗಳು ವಿಂಧ್ಯಾ: ಮುಕ್ಕಣ್ಣ ಕರಿಗಾರ

‘ ಬದುಕು ಪೂರ್ವನಿರ್ಧಾರಿತ’ ಎನ್ನುವ ಮಾತನ್ನು ನಾನು ಸಾವಿರಾರು ಸಾರೆ ಹೇಳಿದ್ದೇನೆ,ಹೇಳುತ್ತಲೂ ಇದ್ದೇನೆ.ನನ್ನ ಬದುಕಿನ ಘಟನೆಗಳು ಮತ್ತು ಪ್ರಪಂಚದ ವಿದ್ಯಮಾನಗಳನ್ನು ಅದನ್ನು ದೃಢಪಡಿಸಿವೆ.ಬದುಕು ಪರಮಾತ್ಮನ ಎಣಿಕೆಯಂತೆ,ಪರಮಾತ್ಮನ ಎಣಿಕೆಯಂತೆ ಮನುಷ್ಯರಾದ ನಾವುಗಳು ನಮನಮಗೆ ಒದಗಿ ಬಂದಿರುವ ಪಾತ್ರಗಳನ್ನು ನಿರ್ವಹಿಸಲಷ್ಟೇ ಸ್ವತಂತ್ರರು.ನಾವು ಎಲ್ಲಿ ಹುಟ್ಟಬೇಕು,ಎಲ್ಲಿ ಓದಬೇಕು,ಎಲ್ಲಿ ಉದ್ಯೋಗ ಮಾಡಬೇಕು ಎಂಬುದೆಲ್ಲ ಭಗವಂತನ ಎಣಿಕೆಯಂತೆ ಮೊದಲೇ ನಿರ್ಧಾರವಾಗಿರುತ್ತದೆ.ನಮ್ಮ ಬದುಕಿನಲ್ಲಿ ಬರುವ ವ್ಯಕ್ತಿಗಳು,ಬಂದೊದಗುವ ಪ್ರಸಂಗಗಳು ಮತ್ತು ನಮ್ಮ ಪ್ರಯತ್ನ ಪೂರ್ವನಿರ್ಧಾರಿತ ಬದುಕಿನ ಪೂರಕ ಕ್ರಿಯೆಗಳಷ್ಟೆ.

ನಾನು ನಂಬಿದ ‘ ಬದುಕು ಪೂರ್ವನಿರ್ಧಾರಿತ’ ಎನ್ನುವ ಸೃಷ್ಟಿಸೂತ್ರಕ್ಕೆ ಇಂದು ನನ್ನ ಮಗಳು ವಿಂಧ್ಯಾಳು ಕೂಡ ಸಾಕ್ಷಿಯಾದಳು.ಮೂರುವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷದಲ್ಲಿ ಕಾಲಿಟ್ಟಿರುವ ಮಗಳು ವಿಂಧ್ಯಾಳನ್ನು ಇಂದು ನಮ್ಮೂರು ಗಬ್ಬೂರಿನ ವಿದ್ಯಾಜ್ಯೋತಿ ನವೋದಯ ಶಾಲೆಯ ಪೂರ್ವಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯನ್ನಾಗಿ ಶಾಲೆಗೆ ಕಳುಹಿಸಿದೆ.ಚೆನ್ನಪ್ಪ ಬೂದಿನಾಳ ಅವರ ಒಡೆತನದ ವಿದ್ಯಾಜ್ಯೋತಿ ನವೋದಯ ಶಾಲೆಯು ನಮ್ಮ ಭಾಗದ ಅತ್ಯುತ್ತಮಗುಣಮಟ್ಟದ ಶಿಕ್ಷಣ ಸಂಸ್ಥೆ ಎಂದು ಹೆಸರಾಗಿದ್ದರಿಂದ ಮತ್ತು ಚೆನ್ನಪ್ಪ ಬೂದಿನಾಳ ಅವರು ನಾನು ಅಧಿಕಾರಿಯಾಗಿ ಸರಕಾರಿ ಸೇವೆಗೆ ಸೇರುವ ಪೂರ್ವದಲ್ಲಿ ನಮ್ಮೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕನಾಗಿದ್ದ ಅವಧಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರಿಂದ ಸಹಜವಾಗಿಯೇ ಅವರು ನನ್ನ ಮಗಳ ಶಿಕ್ಷಣದಲ್ಲಿ ವಿಶೇಷ ಆಸಕ್ತಿವಹಿಸುತ್ತಾರೆ ಎನ್ನುವ ಕಾರಣದಿಂದ ವಿದ್ಯಾಜ್ಯೋತಿ ನವೋದಯ ಶಾಲೆಗೆ ಮಗಳನ್ನು ಸೇರಿಸಿದೆ.ಇಲ್ಲಿ ಪೂರ್ವನಿರ್ಧಾರಿತ ಸಂಗತಿ ಏನು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ ಎಂದು ನಾನು ಬಲ್ಲೆ.ನನ್ನ ಮಾವ ಕರಬಸಪ್ಪ ಹಾಸಗೊಂಡ ಮತ್ತು ಅತ್ತೆ ಶಾರದಾಬಾಯಿಯವರು ನನ್ನ ಮಗಳು ವಿಂಧ್ಯಾಳನ್ನು ಕಲ್ಬುರ್ಗಿಯಲ್ಲಿ ಓದಿಸಬೇಕು ಎಂದು ಇಚ್ಛೆಪಟ್ಟಿದ್ದರು.ನನಗೆ ಬಹಳ ತಡವಾಗಿ ಮಕ್ಕಳು ಆಗಿದ್ದರಿಂದ ಆ ಕೊರಗಿನಲ್ಲಿದ್ದ ಅತ್ತೆ ಮಾವಂದಿರು ೨೦೧೯ ರಲ್ಲಿ ವಿಂಧ್ಯಾಳು ಹುಟ್ಟಿದಾಗ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು.ಅವಳ ಬದುಕು,ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಕಂಡಿದ್ದರು.ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದ ನಮ್ಮ ಮಾವ ‘ ಮೊಮ್ಮಗಳನ್ನು ಶರಣಬಸವೇಶ್ವರ ಶಾಲೆಯಲ್ಲಿ ಓದಿಸುತ್ತೇನೆ’ ಎನ್ನುತ್ತಿದ್ದರೆ ಅತ್ತೆಯವರು ‘ ಮೊಮ್ಮಗಳಿಗಾಗಿ ಒಂದು ಕಾರನ್ನು ಖರೀದಿಸುತ್ತೇವೆ,ಬೆಳಿಗ್ಗೆ ಅವರ ತಾತ ಬಿಟ್ಟುಬಂದು ಸಾಯಂಕಾಲ ಕರೆತರುತ್ತಾರೆ’ ಎನ್ನುತ್ತಿದ್ದರು.ಅವರ ಪ್ರೀತಿ,ಕಾಳಜಿಗಳು ಮೊಮ್ಮಗಳ ಮೇಲಿನ ಅತೀವ ವಾತ್ಸಲ್ಯವನ್ನು ತೋರುತ್ತಿದ್ದವು.

ನಾನು ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾಗಿದ್ದ ಎರಡುವರ್ಷಗಳ ಕಾಲ ನನ್ನೊಂದಿಗೆ ನನ್ನ ಸರಕಾರಿ ವಸತಿಗೃಹ ‘ ವಿಂಧ್ಯಾದ್ರಿ’ ಯಲ್ಲಿ ವಾಸಿಸುತ್ತಿದ್ದ ಅತ್ತೆ ಮಾವ ಇಬ್ಬರು ಸಮಯಸಿಕ್ಕಾಗಲೆಲ್ಲ ಈ ಮಾತನ್ನು ಹೇಳುತ್ತಿದ್ದರು.ನನ್ನ ಹೆಂಡತಿ ಸಾಧನಾಳಿಗೂ ಮಗಳನ್ನು ಕಲ್ಬುರ್ಗಿಯ ಎಸ್ ಬಿ ಆರ್ ಶಾಲೆಯಲ್ಲಿ ಓದಿಸುವ ಅಪೇಕ್ಷೆ ಇತ್ತು.ಆದರೆ ನಾನು ‘ ನೋಡೋಣ’ ಎನ್ನುತ್ತಿದ್ದೆನೇ ಹೋರತು ‘ ಆಗಲಿ’ ಎನ್ನಲಿಲ್ಲ !ಯಾಕೋ ನನ್ನ ಬಾಯಿಂದ ಅಂತಹ ಮಾತು ಹೊರಡಲೇ ಇಲ್ಲ.ವಿಧಿವಿಲಾಸ ಎಂಬಂತೆ ನನ್ನ ಮಗಳು ವಿಂಧ್ಯಾಳ ಬಗ್ಗೆ ಎಲ್ಲಿಲ್ಲದ ಆಸೆ,ಕನಸುಗಳನ್ನು ಕಂಡಿದ್ದ ನನ್ನ ಮಾವ ಅತ್ತೆ ಇಬ್ಬರೂ ನಿಧನರಾದರು ಒಂದು ವರ್ಷದ ಅವಧಿಯಲ್ಲೇ.೨೦೨೧ ರ‌ ಮೇ ೧ ಕ್ಕೆ ನಮ್ಮ ಮಾವ ಕರಬಸಪ್ಪನವರು ನಿಧನರಾದರೆ ೨೦೨೨ ರ ಎಪ್ರಿಲ್ ೧೦ ರಂದು ನಮ್ಮ ಅತ್ತೆ ಶಾರದಾಬಾಯಿಯವರು ನಿಧನ ಹೊಂದಿದರು.ನನ್ನ ಮಕ್ಕಳನ್ನು ಪ್ರೀತಿ,ಮಮತೆಯಿಂದ ಕಾಣುತ್ತಿರುವ ಅಳಿಯಂದಿರಾದ ಸುನಿಲ್ ಮತ್ತು ಅನಿಲ್ ಇಬ್ಬರೂ ಇದ್ದಾರಾದರೂ ಈಗ ಅವರವರ ಬದುಕಿನ ಹೊಣೆ ಅವರು ನಿರ್ವಹಿಸಬೇಕಾದವರು ಎನ್ನಿಸಿದ್ದರಿಂದ ನಾನು ಮಗಳು ವಿಂಧ್ಯಾಳನ್ನು ಗಬ್ಬೂರಿನಲ್ಲಿಯೇ ಓದಿಸಲು ಬಯಸಿದೆ.

ಸರಕಾರಿ ಶಾಲೆಗೆ ಸೇರಲಿಲ್ಲವಾದರೂ ಮಗಳು ಗಬ್ಬೂರಿನಲ್ಲಿ ಓದುತ್ತಿದ್ದಾಳೆ.

ನಾನು ಪಿಯುಸಿವರೆಗೆ ಓದಿದ್ದು ನಮ್ಮೂರು ಗಬ್ಬೂರಿನ ಸರಕಾರಿ ಶಾಲೆ,ಕಾಲೇಜುಗಳಲ್ಲಿ.ನನಗೆ ಸರಕಾರಿ ಶಾಲೆಗಳ ಬಗ್ಗೆ ವಿಶೇಷ ಆಸಕ್ತಿ,ಅಭಿಮಾನ.ನನ್ನ ಮಗಳು ವಿಂಧ್ಯಾಳನ್ನು ಕೂಡ ಗಬ್ಬೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸೇರಿಸಬೇಕು,ಪ್ರೌಢಶಾಲೆಯವರೆಗೆ ಅವಳ ವಿದ್ಯಾಭ್ಯಾಸ ಗಬ್ಬೂರಿನ ಸರಕಾರಿ ಶಾಲೆಯಲ್ಲಿಯೇ ನಡೆಯಬೇಕು ಎನ್ನುವುದು ನನ್ನ ಅಪೇಕ್ಷೆ ಆಗಿತ್ತು.ಆದರೆ ನನ್ನ ಹೆಂಡತಿ ಸಾಧನಾ ಇದನ್ನು ತೀವ್ರವಾಗಿ ವಿರೋಧಿಸಿದಳು.ಅವಳಿಗೆ ಸರಕಾರಿ ಶಾಲೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ.ಅವಳು ವಿದ್ಯಾರ್ಥಿನಿ ಆಗಿದ್ದಾಗ ಸರಕಾರಿ ಶಾಲೆಯಲ್ಲಿ ಮೇಷ್ಟ್ರುಗಳು ಸರಿಯಾಗಿ ಪಾಠಮಾಡಲಿಲ್ಲವೆಂದು ಅವರಪ್ಪ ಅಲ್ಲಿಂದ ಟಿ ಸಿ ಕಿತ್ತುಕೊಂಡು ಬಂದು ಕಲ್ಬುರ್ಗಿಯ ನೂತನ ವಿದ್ಯಾಲಯದಲ್ಲಿ ಓದಿಸಿದರಂತೆ.’ಕೆಲವು ಸರಕಾರಿ ಶಾಲೆಗಳಲ್ಲಿ ಇಂತಹ ಕೆಟ್ಟ ಮೇಷ್ಟ್ರುಗಳು ಇರಬಹುದು,ಆದರೆ ಎಲ್ಲ ಶಾಲೆಗಳಲ್ಲಿ ಹಾಗಿರುವುದಿಲ್ಲವಲ್ಲ.ನನ್ನ ಉದಾಹರಣೆಯನ್ನೇ ತೆಗದುಕೊ.ನಾನು ನಮ್ಮೂರಿನ ಸರಕಾರಿ ಶಾಲೆಗಳಲ್ಲಿ ಓದಿಯೇ ಹಿರಿಯ ಅಧಿಕಾರಿಯಾಗಲಿಲ್ಲವೆ?’ ಎನ್ನುವ ನನ್ನ ಮಾತು ಮಡದಿಗೆ ಹಿಡಿಸಲಿಲ್ಲ. ನಾನು ನಮ್ಮೂರಿನ ಸರಕಾರಿ ಪ್ರಾಥಮಿಕ ಶಾಲೆ,ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಮಗೆ ಪಾಠಮಾಡುತ್ತಿದ್ದ ಮೇಷ್ಟ್ರುಗಳೆಲ್ಲ ಅತ್ಯುತ್ತಮಶಿಕ್ಷಕರಾಗಿದ್ದರು,ಅವರವರ ವಿಷಯಗಳಲ್ಲಿ ನುರಿತವರಾಗಿದ್ದರು.ಅಗಾಧ ಪಾಂಡಿತ್ಯ ಉಳ್ಳ ಕೆಲವರು ನನ್ನ ಗುರುಗಳು ಆಗಿದ್ದರು ಎನ್ನುವುದು ವಿಶೇಷ.ಈಗಲೂ ಕೂಡ ಸರಕಾರಿ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ.ಆದರೆ ಬಹಳಷ್ಟು ಜನರಿಗೆ ಸರಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಮನೋಭಾವ.ನನ್ನ ಹೆಂಡತಿ ಸಾಧನಾ ನನ್ನ ಮಕ್ಕಳಿಬ್ಬರಲ್ಲಿ ಒಬ್ಬರನ್ನು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬರನ್ನು ಡಾಕ್ಟರ್ ಅನ್ನು ಆಗಿ ಮಾಡುವ ಕನಸು ಕಂಡಿದ್ದಾಳೆ.ಆದರೆ ನಾನು ಅಂತಹ ಯಾವುದೇ ಕನಸು ಕಂಡವನಲ್ಲ, ಬದುಕು ಪೂರ್ವನಿರ್ಧಾರಿತ ಎನ್ನುವ ನನ್ನ ಅಚಲ ನಂಬಿಕೆಯ ಕಾರಣದಿಂದ.ನನ್ನ ಇಬ್ಬರು ಮಕ್ಕಳಿಗೆ ಚೆನ್ನಾಗಿ ಓದಿಸಿ,ಸುಶಿಕ್ಷಿತರನ್ನಾಗಿ ಮಾಡುವುದಷ್ಟೇ ತಂದೆಯಾದ ನನ್ನ ಜವಾಬ್ದಾರಿ.ಅವರು ಏನಾಗಬೇಕು ಎಂದು ನಿರ್ಧಾರವಾಗಿದೆಯೋ ಅದಕ್ಕೆ ಅನುಗುಣವಾಗಿ ರೂಪುಗೊಳ್ಳುತ್ತದೆ ಅವರ ಭವಿಷ್ಯ.ಇದು ನನ್ನ ಇಬ್ಬರ ಮಕ್ಕಳ ವಿಷಯದಲ್ಲಿ ಮಾತ್ರವಲ್ಲ ,ಜಗತ್ತಿನ ಎಲ್ಲ ಮಕ್ಕಳ ವಿಷಯದಲ್ಲೂ ಸತ್ಯ.ಆದರೆ ಮಕ್ಕಳ ತಂದೆ ತಾಯಂದಿರುಗಳು ವಿಶೇಷ ಕನಸುಕಾಣುತ್ತಾರೆ,ತಮ್ಮ ಮಕ್ಕಳು ತಾವು ಕಂಡ ಕನಸಿನಂತೆಯೇ ಬೆಳೆಯಬೇಕು ಎಂದು ನಿರ್ಧರಿಸುತ್ತಾರೆ.ಇದರಿಂದ ಮಕ್ಕಳ ಎಳೆ ಮನಸ್ಸಿನ ಮೇಲೆ ವಿಪರೀತ ಒತ್ತಡ ಉಂಟಾಗಿ ಅವರ ವ್ಯಕ್ತಿತ್ವದ ಪ್ರಭಾವ ಬೀರುತ್ತದೆ.

ತಂದೆ ತಾಯಿ ಇಬ್ಬರನ್ನು ಒಂದೇ ವರ್ಷದಲ್ಲಿ ಕಳೆದುಕೊಂಡ ದುಃಖದಿಂದ ಇನ್ನೂ ಪೂರ್ತಿಯಾಗಿ ಹೊರಬರದೆ ಇರುವ ಕಾರಣದಿಂದ ಹೆಂಡತಿಗೆ ಇನ್ನೂ ಹೆಚ್ಚಿನ ದುಃಖ ಉಂಟು ಮಾಡಬಾರದೆಂದು ಅವಳ ಇಚ್ಛೆಯಂತೆ ಖಾಸಗಿ ಶಾಲೆಯಲ್ಲಿ ಓದಿಸಲು ಒಪ್ಪಿದೆ.ಈಗ ಗಬ್ಬೂರಿನಲ್ಲಿ ನನ್ನ ಹಳೆಯ ವಿದ್ಯಾರ್ಥಿಗಳೆ ನಾಲ್ಕಾರು ಖಾಸಗಿ ಶಿಕ್ಷಣಸಂಸ್ಥೆಗಳನ್ನು ತೆರೆದಿದ್ದಾರೆ,ಎಲ್ಲರೂ ಅವರವರ ಯೋಗ್ಯತಾನುಸಾರ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ.ಆದರೆ ಚೆನ್ನಪ್ಪ ಬೂದಿನಾಳ ಅವರ ವಿದ್ಯಾಜ್ಯೋತಿ ನವೋದಯ ಶಾಲೆಯ ಪ್ರಾರಂಭಗೊಂಡು ಇಪ್ಪತ್ತು ವರ್ಷಗಳಾಗಿದ್ದು ಪ್ರಾರಂಭದಿಂದಲೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ಹಾಗೂ ಈಗ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಾಗಿ ಒಂದಾಗಿ ಹೆಸರುಪಡೆದಿರುವುದರಿಂದ ಇವೆಲ್ಲವುಗಳಿಗಿಂತ ಹೆಚ್ಚಾಗಿ ಚೆನ್ನಪ್ಪ ಬೂದಿನಾಳ ಅವರು ವಿಂಧ್ಯಾಳ ಬಗ್ಗೆ ವಿಶೇಷ ಆಸಕ್ತಿವಹಿಸುತ್ತಾರೆ ಎನ್ನುವ ಕಾರಣದಿಂದ ಅವರ ಒಡೆತನದ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಗೆ ಮಗಳನ್ನು ನೊಂದಣಿ ಮಾಡಿಸಲು ಇಚ್ಛಿಸಿ,ನಿನ್ನೆ ಅವರ ಸಂಸ್ಥೆಗೆ ಭೇಟಿ ನೀಡಿ ಇಂದು ಶಾಲೆಗೆ ಕಳಿಸಿದೆ.

ಮಗಳು ವಿಂಧ್ಯಾಳು ವಿದ್ಯಾಜ್ಯೋತಿ ನವೋದಯ ಶಾಲೆಯ ಪೂರ್ವಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿ ಬೆಳಿಗ್ಗೆ ಸಿದ್ಧಳಾಗಿ ನಿಂತಾಗ ನನ್ನ ತಾಯಿ ಮಲ್ಲಮ್ಮ ಕರಿಗಾರ ಅವರು ಮೊಮ್ಮಗಳನ್ನು ಕಂಡು ಸಂಭ್ರಮಿಸಿದರು.ಅಳಿಯ ತ್ರಯಂಬಕೇಶ ಅವಳನ್ನು ಶಾಲೆಗೆ ಬಿಟ್ಟುಬರಲು ತೆರಳಿದಾಗ ಮಡದಿ ಸಾಧನಾ ಸೇರಿದಂತೆ ಇಡೀ‌ ಕುಟುಂಬವು ಸಂತೋಷದಲ್ಲಿ ತೇಲಾಡಿತು.

About The Author