ಸ್ಮರಣೆ
ಮಹಾನ್ ಚೇತನದ ಸ್ಮರಣೆಯ ‘ ಮಹಾಪರಿನಿರ್ವಾಣ’ ದಿನಾಚರಣೆ
ಮುಕ್ಕಣ್ಣ ಕರಿಗಾರ
ನಾಳೆ ಡಿಸೆಂಬರ್ 06 ರಂದು ದೇಶದಾದ್ಯಂತ ‘ ಮಹಾಪರಿನಿರ್ವಾಣ’ ದಿವಸವನ್ನು ಆಚರಿಸಲಾಗುತ್ತದೆ.ಸಂವಿಧಾನ ಶಿಲ್ಪಿ,ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ ಅವರು 1956 ರ ಡಿಸೆಂಬರ್ 06 ರಂದು ದೆಹಲಿಯ ತಮ್ಮ ಮನೆಯಲ್ಲಿ ನಿದ್ದೆಯಲ್ಲಿದ್ದಾಗಲೇ ಇಹಲೋಕ ತ್ಯಜಿಸಿದರು.ಡಾ.ಬಿ.ಆರ್.ಅಂಬೇಡ್ಕರ ಅವರು ಪರಂಧಾಮವನ್ನೈದಿದ ದಿನವಾದ್ದರಿಂದ ಪ್ರತಿವರ್ಷ ಡಿಸೆಂಬರ್ 06 ರಂದು ‘ ಮಹಾಪರಿನಿರ್ವಾಣ ದಿವಸ್’ ಆಚರಿಸಲಾಗುತ್ತಿದೆ.
‘ ಮಹಾಪರಿನಿರ್ವಾಣ’ ವು ಸಂಸ್ಕೃತ ಶಬ್ದವಾಗಿದ್ದು ಬೌದ್ಧಧರ್ಮದ ಮುಖ್ಯ ತತ್ತ್ವಗಳಲ್ಲಿ ಅದೂ ಒಂದಾಗಿದೆ.ಬೌದ್ಧಧರ್ಮಸೂತ್ರವಾದ ‘ ಮಹಾಪರಿನಿಬ್ಬಾಣ ಸುತ್ತ’ ದಲ್ಲಿ ಇದರ ವಿವರಗಳಿವೆ.ಬುದ್ಧರು ಇಹಲೋಕ ತ್ಯಜಿಸಿದ ದಿನವನ್ನು ಬೌದ್ಧರು ‘ ಮಹಾಪರಿನಿರ್ವಾಣದಿನ’ ವನ್ನಾಗಿ ಆಚರಿಸುತ್ತಾರೆ.ಮಹಾಪರಿನಿರ್ವಾಣ ಎಂದರೆ ಮೋಕ್ಷ ಎಂದರ್ಥ.ಬೌದ್ಧಧರ್ಮದಂತೆ ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ.ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ ಅವರು ಡಿಸೆಂಬರ್ 6 ರಾತ್ರಿ ಬುದ್ಧತತ್ತ್ವದಲ್ಲಿ ಲೀನರಾದರು.ಅದುವೇ ಮಹಾಪರಿನಿರ್ವಾಣ ದಿನಾಚರಣೆ.
ಭಾರತರತ್ನ ಡಾಕ್ಟರ್ ಬಿ.ಆರ್.ಅಂಬೇಡ್ಕರ ಅವರು ಆಧುನಿಕ ಭಾರತದ ನಿರ್ಮಾತೃಗಳಲ್ಲೊಬ್ಬರು,ಭಾರತದ ಮಹಾನ್ ನಾಯಕರು.ಸಹಸ್ರಾರು ವರ್ಷಗಳಿಂದ ಸ್ವಾತಂತ್ರ್ಯ,ಸಮಾನತೆಯ ಅರ್ಥವನ್ನೇ ಅರಿಯದಿದ್ದ ದಲಿತರು,ಪದದುಳಿತರು ಮತ್ತು ತುಳಿತಕ್ಕೆ ಒಳಗಾದ ಎಲ್ಲರಿಗೂ ಸಮಾನತೆಯ ಅಸ್ತ್ರವನ್ನಿತ್ತು ಪದದುಳಿತರ ಭಾಗ್ಯವಿಧಾತರಾದರು.ಜೀವನದ ಸವಿ ಸೊಬಗನ್ನು ಆನಂದಿಸದೆ ಕತ್ತಲೆಯ ಗುಡಿಸಲು,ಅಂಧಕಾರದ ಗೂಡುಗಳಲ್ಲಿ ಬದುಕುತ್ತಿದ್ದ ಕೋಟ್ಯಾಂತರ ಜನರ ಬಾಳು ಬೆಳಗಿದ ಭುವಿಯಭಾಸ್ಕರರಾದರು,ಪದದುಳಿತರಪಾಲಿನ ಸೂರ್ಯರಾದರು.’ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ’ ಎನ್ನುತ್ತ ದಲಿತರು,ದುರ್ಬಲರು ಮತ್ತು ಮಹಿಳೆಯರಿಗೆ ಸಮಾನತೆಯ ರಕ್ಷಾಕವಚವನ್ನಿತ್ತು ಅವಕಾಶವಂಚಿತರೆಲ್ಲರಿಗೂ ಉದ್ಧಾರದ ಮಹಾಮಾರ್ಗವನ್ನು ತೋರಿಸಿದರು.
ಡಾ.ಬಿ.ಆರ್.ಅಂಬೇಡ್ಕರು ಅವರು ಹಾಕಿಕೊಟ್ಟ ಸಮಾನತೆಯ ಪಥದಲ್ಲಿ ಕ್ರಮಿಸುವುದೇ ಭಾರತದ ಉದ್ಧಾರದ,ಉನ್ನತಿಯ ಸೂತ್ರವಾಗಿದೆ.ಭಾರತೀಯರೆಲ್ಲರಿಗೂ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ- ಹಕ್ಕುಗಳು ದಕ್ಕಬೇಕಿದೆ.ದಲಿತರಿಗೆ ಎಲ್ಲರಂತೆ ಸಮಾನಸ್ಥಾನಮಾನದ ಗೌರವದ ಸ್ಥಾನಸಿಕ್ಕಬೇಕಿದೆ.ನಮ್ಮ ಸಂವಿಧಾನವು ಆ ದಿಸೆಯಲ್ಲಿ ನಮ್ಮನ್ನು ಪ್ರೇರೇಪಿಸುತ್ತಿದೆ.ಬಾಬಾಸಾಹೇಬರು ಸಮಾನತೆಯಹಕ್ಕನ್ನು ಮೂಲಭೂತಹಕ್ಕನ್ನಾಗಿಸುವ ಮೂಲಕ ದೀನ ದುರ್ಬಲರು,ಪದದುಳಿತರಿಗೆ ಸ್ವಾಭಿಮಾನದ,ಆತ್ಮಗೌರವದ ಬದುಕನ್ನು ಬಾಳಲು ಅವಕಾಶನೀಡಿದ್ದಾರೆ.
ಸಹಸ್ರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಸಮುದಾಯಗಳಿಗೆ ಬೆಳಕಾದ,ಬದುಕಗಳನ್ನು ರೂಪಿಸಿದ ಮಹಾನ್ ಚೇತನ ಡಾ. ಬಿ ಆರ್ ಅಂಬೇಡ್ಕರ ಅವರ ಸಮಾನತೆಯ ತತ್ತ್ವವನ್ನು ಎತ್ತಿಹಿಡಿದು ಭಾರತದ ಘನತೆ ಗೌರವಗಳನ್ನು ಪ್ರತಿಷ್ಠಾಪಿಸಬೇಕಿದೆ.ಅಂಬೇಡ್ಕರ ಅವರು ನೀಡಿದ ಸಂವಿಧಾನವೆಂಬ ಮಹಾ ಅಭಯಾಸ್ತ್ರವನ್ನು ಹಿಡಿದು,ಅದರ ರಕ್ಷಣೆಯಲ್ಲಿ ಮುನ್ನಡೆಯಬೇಕಿದೆ ಅವಕಾಶವಂಚಿತ ಜನಸಮುದಾಯಗಳು.ಡಾ.ಬಿ.ಆರ್.ಅಂಬೇಡ್ಕರವರ ಸಮಸಮಾಜ ನಿರ್ಮಾಣದ ಕನಸಿಗೆ ಸಂಕಲ್ಪಬದ್ಧರಾಗುವುದೇ ನಾವು ಆ ಮಹಾನ್ ಚೇತನಕ್ಕೆ ಸಲ್ಲಿಸುವ ನಿಜವಾದ ಗೌರವವಾಗಿದೆ.
೦೫.೧೨.೨೦೨೪