ಶಹಾಪುರ : ರೈತ ಹೋರಾಟಗಾರ, ಸಂಶೋಧಕ, ಚಿಂತಕ, ನ್ಯಾಯವಾದಿ ದಿ. ಭಾಸ್ಕರ್ ರಾವ್ ಮುಡಬೂಳ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ನಾಗರಿಕರಿಂದ ಶ್ರದ್ಧಾಂಜಲಿ ಸಮರ್ಪಣಾ ಸಭೆಯನ್ನು ತಾಲೂಕಿನ ಭೀಮರಾಯನ ಗುಡಿಯ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆ. ೧೦ ಗಂಟೆಗೆ ನಡೆಯಲಿದ್ದು ಈ ಸಭೆಗೆ ವಿವಿಧ ರಾಜಕೀಯ ಮುಖಂಡರು ಚಿಂತಕರು ರೈತರು, ಅವರ ಅಭಿಮಾನಿಗಳು ಹಿತೈಷಿಗಳು ಹಾಗೂ ಕುಟುಂಬಸ್ಥರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಸ್ಕರ್ರಾವ್ ರವರ ವ್ಯಕ್ತಿತ್ವ ಕೇವಲ ವಕೀಲ ವೃತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸಂಸ್ಕೃತಿ ಚಿಂತಕರು ಮತ್ತು ಬರಹಗಾರರಾಗಿಯೂ ಕೂಡ ಖ್ಯಾತಿ ಗಳಿಸಿದ್ದರು.
ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಬಗೆಗೆ ಅಪಾರವಾದ ಆಸಕ್ತಿ ಮತ್ತು ಜ್ಞಾನವನ್ನು ಹೊಂದಿದ್ದರು. ಸುರಪುರ ಸಂಸ್ಥಾನದ ಇತಿಹಾಸದ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ ಇವರು ೨೦೦೧ರಲ್ಲಿ ‘ಮರೆತುಹೋದ ಸುರಪುರ ಇತಿಹಾಸವೆಂಬ ಮೌಲಿಕವಾದ ಕೃತಿಯನ್ನು ಪ್ರಕಟಿಸಿದ್ದಾರೆ. ೨೦೦೮ರಲ್ಲಿ ಭೀಮರಾಯನ ಗುಡಿಯಲ್ಲಿ ಇತಿಹಾಸ ಸಂಶೋಧನಾ ಕೇಂದ್ರವೊAದನ್ನು ಸ್ಥಾಪಿಸಿದ್ದಾರೆ.ಒಟ್ಟಿನಲ್ಲಿ ಶ್ರೀ ಭಾಸ್ಕರರಾವ ಮುಡಬೂಳ ಅವರು ವೃತ್ತಿಯಿಂದ ವಕೀಲರಾಗಿದ್ದರೂ ಪ್ರವೃತ್ತಿಯಿಂದ ರೈತ ಸಂಘಟನೆಯ ನೇತಾರನಾಗಿ, ಇತಿಹಾಸ-ಸಂಸ್ಕೃತಿ ಮತ್ತು ಸಾಹಿತ್ಯಗಳ ಆರಾಧಕರೂ, ಚಿಂತಕರೂ ಆಗಿದ್ದರು. ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳಲ್ಲಿ ಸ್ಥಳೀಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರ ಅಧ್ಯಯನ ಮತ್ತು ಚಿಂತನೆಯ ಆಸಕ್ತಿಯಿಂದಾಗಿ ‘ಮರೆತು ಹೋದ ಸುರಪುರ ಇತಿಹಾಸ’ ಮತ್ತು ‘ದಕ್ಷಿಣದ ಗಂಗೆ-ಕೃಷ್ಣ’ ಎಂಬ ಎರಡು ಮೌಲಿಕ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಚಿರಕಾಣಿಕೆಗಳಾಗಿವೆ.ಸರ್ಕಾರಗಳು ರೈತ ಜನವಿರೋಧಿ ನೀತಿಗಳನ್ನು ರೂಪಿಸಿದಾಗ ಜನರು ಮತ್ತು ರೈತರು ಐಕ್ಯತೆಯಿಂದ ಹೋರಾಡಬೇಕು ಎಂದು ಹೇಳುತ್ತಿದ್ದರು. ರೈತರ ಚಳುವಳಿಗಳು ಸ್ವತಂತ್ರವಾಗಿರಬೇಕು. ಆಳುವ ರಾಜಕೀಯ ಪಕ್ಷಗಳಿಂದ ಸ್ವತಂತ್ರವಾಗಿರಬೇಕು. ಆಗ ಮಾತ್ರ ಅವರ ಮೇಲೆ ಒತ್ತಡ ಹೇರಲು ಸಾಧ್ಯ ಎಂದು ರೈತರಿಗೆ ಸಂಘಟನೆಗಳಿಗೆ ಒಂದು ಪ್ರೇರಕ ಶಕ್ತಿಯಾಗಿ ಸಂಘಟನಾತ್ಮಕ ಹೋರಾಟದ ಕಾವು ಕೊಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿತ್ವ ಮುಡಬೂಳ ಅವರದಾಗಿತ್ತು. ಇಂಥ ಮಹಾನ್ ಚೇತನವನ್ನು ಕಳೆದುಕೊಂಡ ರೈತರು ರೈತ ಸಂಘಟನೆ ಗಳಿಗೆ ಮತ್ತು ಇತಿಹಾಸಕ್ಕೆ ತುಂಬಲಾರದ ನಷ್ಟವಾಗಿದೆ. ಇಂಥ ಮರೆಯದ ಮಾಣಿಕ್ಯ ಭಾಸ್ಕರರಾವ್ ಮುಡಬೂಳ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬಳ್ಳಾರಿಯ ರೈತ ಹೋರಾಟ ನಾಯಕ ಮತ್ತು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಚಾಗನೂರ ತಿಳಿಸಿದ್ದಾರೆ.