ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಹೊಸತನದ ಸ್ಪರ್ಶನೀಡಿದ, ಉದಾರ ಹೃದಯದ ಸ್ಪಂದನಶೀಲ ಸಚಿವರು ಪ್ರಿಯಾಂಕ್ ಖರ್ಗೆಯವರು..

ಮುಕ್ಕಣ್ಣ ಕರಿಗಾರ
ಉಪಕಾರ್ಯದರ್ಶಿ ಜಿಪಂ ಬೀದರ
***********
ಇಂದು ಅಂದರೆ ನವೆಂಬರ್ ೨೨ ರಂದು ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಗೌರವಾನ್ವಿತ ಪ್ರಿಯಾಂಕ್ ಖರ್ಗೆಯವರ 46 ನೆಯ ಹುಟ್ಟುಹಬ್ಬ.ಕರ್ನಾಟಕದ ಕೋಟ್ಯಾಂತರ ಗ್ರಾಮೀಣ ಬಡವರು,ದೀನ ದಲಿತರ ಬದುಕುಗಳ ಆಶಾಕಿರಣರಾಗಿರುವ ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಯವರು ನೂರ್ಕಾಲ ಬಾಳಲಿ,ಅವರು ರಾಜಕೀಯಕ್ಷೇತ್ರದಲ್ಲಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಜಗನ್ಮಾತಾಪಿತರುಗಳಾದ ಶಿವ ದುರ್ಗಾದೇವಿಯರಲ್ಲಿ ಪ್ರಾರ್ಥಿಸುವೆ.
ಗೌರವಾನ್ವಿತರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ 46 ನೆಯ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ ನಾನು ಕಂಡಂತೆ ಅವರ ವ್ಯಕ್ತಿತ್ವದ ಕಿರುಚಿತ್ರಣದ ಲೇಖನವನ್ನು ಬರೆಯಲು ಹರ್ಷಿಸುತ್ತೇನೆ.ಈ ಹಿಂದೆ ಹಲವಾರು ಬಾರಿ ನಾನು ಮಾನ್ಯ ಪ್ರಿಯಾಂಕ್ ಖರ್ಗೆ ಅವರನ್ನು ಕಂಡಿದ್ದೆನಾದರೂ ಅವರ ಉದಾರ ವ್ಯಕ್ತಿತ್ವ ,ಸ್ಪಂದನಶೀಲ ಹೃದಯದ ಅನುಭವ ನನಗಾದದ್ದು ಕೆಲವು ತಿಂಗಳುಗಳ ಹಿಂದಷ್ಟೆ.ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 1997 ನೆಯ ವರ್ಷದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಗೊಂಡು ಕಾರ್ಯನಿರ್ವಾಹಕ ಅಧಿಕಾರಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ನಾನು 2006 ರಲ್ಲಿ ಉಪಕಾರ್ಯದರ್ಶಿ ಹುದ್ದೆಗೆ ಪದೋನ್ನತಿ ಹೊಂದಿದ್ದೆ.ವೈಯಕ್ತಿಕ ಕಾರಣಗಳಿಂದ ಸರಕಾರಿ ಸೇವೆಯಲ್ಲಿ ಮುಂದುವರೆಯುವುದು ಬೇಡ ಎಂದು 2022 ರಲ್ಲಿ ಸರಕಾರಿ ಸೇವೆಗೆ ಸ್ವಯಂ ನಿವೃತ್ತಿ ಸಲ್ಲಿಸಿದೆ.ನನ್ನ ಮೇಲಿನ ಅಭಿಮಾನದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ನನ್ನ ಸ್ವಯಂ ನಿವೃತ್ತಿಯ ಅರ್ಜಿಯನ್ನು ಅಂಗೀಕರಿಸಿರಲಿಲ್ಲ.ಈ ನಡುವೆ ನಾನು ನನ್ನ ನಿರ್ಧಾರವನ್ನು ಬದಲಿಸಿಕೊಂಡು ಮತ್ತೆ ಸರಕಾರಿಸೇವೆಗೆ ಸೇರಲಿಚ್ಛಿಸಿ 2024 ರ ಜುಲೈ 12 ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರಮುಖ್ಯಕಾರ್ಯದರ್ಶಿಗಳಾಗಿರುವ ಮಾನ್ಯ ಶ್ರೀ ಅಜುಂ ಪರ್ವೇಜ್ ಅವರನ್ನು ಕಂಡು ನಾನು ಸ್ವಯಂನಿವೃತ್ತಿಯನ್ನು ಹಿಂಪಡೆದು ಪುನಃ ಸರಕಾರಿ ಸೇವೆಯಲ್ಲಿ ಮುಂದುವರೆಯಲಿ ಇಚ್ಛಿಸುವುದಾಗಿ ಕೋರಿ ಪತ್ರ ನೀಡಿದೆ.ಅಧಿಕಾರದಿಂದಷ್ಟೇ ಅಲ್ಲದೆ ಮಾನವೀಯತೆ ಮತ್ತು ಹೃದಯವಂತಿಕೆಗಳಿಂದಲೂ ಹಿರಿಯರಾಗಿರುವ ಮಾನ್ಯ ಅಜುಂ ಪರ್ವೇಜ್ ಅವರು ನನಗೆ ಕೂಡಲೆ ಕರ್ತವ್ಯ ಹಾಜರಾಗಲು ಅನುಮತಿಸಿ,ಔದಾರ್ಯ ಮೆರೆದರು.
ಅದಾಗಲೆ 2024 ನೇ ಸಾಲಿನ ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆ ಪ್ರಾರಂಭವಾಗಿತ್ತು.ಅಲ್ಲದೆ ಸ್ವಯಂ ನಿವೃತ್ತಿಗೆ ಅರ್ಜಿಸಲ್ಲಿಸುವ ಪೂರ್ವದಲ್ಲಿ ನಾನು ಸೇವೆಸಲ್ಲಿಸಿದ್ದ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಡಿ ಆರ್ ಡಿ ಎ ವಿಭಾಗದ ಯೋಜನಾನಿರ್ದೇಶಕರ ಹುದ್ದೆಯಲ್ಲಿ ಶ್ರೀ ಕೊರವರ್ ಎನ್ನುವ ಅಧಿಕಾರಿಯವರು ಕರ್ತವ್ಯನಿರ್ವಹಿಸುತ್ತಿದ್ದುದರಿಂದ ಆ ಹುದ್ದೆಯು ಖಾಲಿ ಇರಲಿಲ್ಲವಾಗಿ ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ ಸ್ಥಳ ನಿರೀಕ್ಷೆಯಲ್ಲಿದ್ದೆ.ಸರಕಾರಿ ಸೇವೆಗೇನೋ ಮರಳಿದ್ದು ಆಗಿತ್ತು,ಆದರೆ ಹುದ್ದೆ ಒಂದನ್ನು ಪಡೆಯಬೇಕಿತ್ತು.ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ಉಪಕಾರ್ಯದರ್ಶಿ ಹುದ್ದೆಗಳ ಮಾಹಿತಿ ಪಡೆದೆ.
ಗ್ರಾಮೀಣಾಭಿವೃದ್ಧಿ ,ಪಂಚಾಯತ್ ರಾಜ್ ಹಾಗೂ ಐ ಟಿ ಬಿಟಿ ಸಚಿವರಾಗಿರುವ ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಯವರು ನೇರ ನಡೆನುಡಿಯ ಸಚಿವರು ಎಂದು ನನಗೆ ಗೊತ್ತಿತ್ತು.ಹಾಗಾಗಿ ಅವರನ್ನು ಭೇಟಿಯಾಗಲೆಂದು ಒಂದೆರಡು ಸಾರೆ ವಿಕಾಸಸೌಧದ ಅವರ ಕಛೇರಿಗೆ ಹೋಗಿದ್ದೆ.ಅವರು ತುಂಬ ಬ್ಯುಸಿ ಆಗಿದ್ದುದರಿಂದ ಭೇಟಿಯಾಗಲು ಸಾಧ್ಯವಾಗಲಿಲ್ಲ.2024 ರ ಜುಲೈ 14 ರಂದು ನಾನು ನನ್ನ ಸಮಸ್ಯೆಗಳನ್ನು ನಿವೇದಿಸಿಕೊಂಡು ಬೀದರ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ಉಪಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿ ಎಂದು ಗೌರವಾನ್ವಿತ ಪ್ರಿಯಾಂಕ್ ಖರ್ಗೆ ಸಾಹೇಬರ ವೈಯಕ್ತಿಕ ಮೊಬೈಲ್ ನಂಬರ್ ಗೆ ಒಂದು ವಾಟ್ಸಾಪ್ ಮೆಸೇಜ್ ಮಾಡಿದೆ.ಬಹುಶಃ ಬೇರೆ ಸಚಿವರು ಆಗಿದ್ದರೆ ಅವರ ಪರ್ಸನಲ್ ನಂಬರ್ ಗೆ ಮೆಸೇಜ್ ಮಾಡಿದ್ದಕ್ಕೆ ಕೆಂಡಾಮಂಡಲರಾಗಿ ನನ್ನ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶಿಸುತ್ತಿದ್ದರೇನೋ ! ಆದರೆ ಸ್ಪಂದನಶೀಲಹೃದಯದ,ಉದಾರವ್ಯಕ್ತಿತ್ವದ ಪ್ರಿಯಾಂಕ್ ಖರ್ಗೆ ಸಾಹೇಬರು ನನ್ನ ಮೆಸೇಜ್ ಅನ್ನು ಓದಿ ಅವರ ಆಪ್ತಕಾರ್ಯದರ್ಶಿ ಶ್ರೀ ಭೀಮಾಶಂಕರ ತೆಗ್ಗಳ್ಳಿಯವರನ್ನು ಕರೆದು’ ಇವರನ್ನು ಬೀದರ ಡಿ ಎಸ್ ಎಂದು ವರ್ಗಾಯಿಸಿ’ ಎಂದು ನಿರ್ದೇಶನ ನೀಡಿದರು.ಇದು ಪ್ರಿಯಾಂಕ್ ಖರ್ಗೆ ಸಾಹೇಬರ ಔದಾರ್ಯ,ದೊಡ್ಡಸ್ತಿಕೆ.
ಶ್ರೀ ಭೀಮಾಶಂಕರ ತೆಗ್ಗಳ್ಳಿಯವರು ಮಾನ್ಯ ಪ್ರಿಯಾಂಕ್ ಖರ್ಗೆಯವರಿಗೆ ತಕ್ಕ ಆಪ್ತಕಾರ್ಯದರ್ಶಿಗಳು.ಸದಾ ಪ್ರಿಯಾಂಕ್ ಖರ್ಗೆಯವರ ಹಿತವನ್ನೇ ಬಯಸುತ್ತ ಭೀಮಾಶಂಕರ ತೆಗ್ಗಳ್ಳಿಯವರು ಪ್ರಿಯಾಂಕ್ ಖರ್ಗೆಯವರ ಜನಪರ ಕಾರ್ಯ,ಯೋಜನೆಗಳು, ಕನಸು ಕಲ್ಪನೆಗಳನ್ನು ಸಾಕಾರಗೊಳಿಸಲು ಪರಿಶುದ್ಧಹೃದಯದಿಂದ,ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅಪರೂಪದ ಅಧಿಕಾರಿಗಳು.ಪ್ರಿಯಾಂಕ್ ಖರ್ಗೆ ಸಾಹೇಬರು ಭೀಮಾಶಂಕರ ತೆಗ್ಗಳ್ಳಿಯವರಿಗೆ ಹೇಳಿದ್ದಲ್ಲದೆ ಅರಣ್ಯಮತ್ತು ಜೀವಿಶಾಸ್ತ್ರ ಸಚಿವರೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗೌರವಾನ್ವಿತ ಈಶ್ವರ ಬಿ ಖಂಡ್ರೆ ಅವರಿಗೆ ಫೋನ್ ಮಾಡಿ ‘ ಬೀದರ ಜಿಲ್ಲಾ ಪಂಚಾಯತಿಗೆ ಒಬ್ಬ ಒಳ್ಳೆಯ ಡಿ ಎಸ್ ಅವರನ್ನು ಪೋಸ್ಟ್ ಮಾಡುತ್ತಿದ್ದೇವೆ ‘ ಎಂದು ಕೂಡ ಹೇಳಿದರು.ಈಶ್ವರ ಖಂಡ್ರೆ ಸಾಹೇಬರು ಕೂಡ ಉತ್ತಮ ಅಧಿಕಾರಿಗಳನ್ನು ಇಷ್ಟಪಡುವ ಜನಪರಕಾಳಜಿಯ ಸನ್ನಡತೆಗೆ ಹೆಸರಾದ ಸಚಿವರಾಗಿದ್ದು ಪ್ರಿಯಾಂಕ್ ಖರ್ಗೆ ಸಾಹೇಬರ ಫೋನ್ ಸಂದೇಶದಿಂದ ನನ್ನ ಬಗ್ಗೆ ಉತ್ಸುಕರಾಗಿ ಫೋನ್ ಕರೆಮಾಡಿ ನನ್ನ ಬಗ್ಗೆ ವಿಚಾರಿಸಿ ‘ ಆಯಿತು ಬೀದರಗೆ ಬನ್ನಿ,ಉತ್ತಮವಾಗಿ ಕೆಲಸಮಾಡಿ’ ಎಂದು ಹಾರೈಸಿದರು.ಆಶ್ಚರ್ಯದ ಸಂಗತಿ ಎಂದರೆ ನಾನು ಮಾನ್ಯ ಪ್ರಿಯಾಂಕ್ ಖರ್ಗೆಯವರನ್ನಾಗಲಿ ಅಥವಾ ಮಾನ್ಯ ಈಶ್ವರ ಖಂಡ್ರೆಯವರನ್ನಾಗಿ ಮುಖತಃ ಭೇಟಿ ಮಾಡಿರಲಿಲ್ಲ.ಆದರೂ ಅವರಿಬ್ಬರು ಆರ್ಡಪಿಆರ್ ನಲ್ಲಿ ನನ್ನ ಸೇವೆಯ ಹಿರಿತನ ಮತ್ತು ದಕ್ಷತೆ,ಕರ್ತವ್ಯನಿಷ್ಠೆಯ ಬಗ್ಗೆ ಕೇಳಿ ನನ್ನನ್ನು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಮಾನ್ಯ ಪ್ರಿಯಾಂಕ್ ಖರ್ಗೆಯವರ ಬಗ್ಗೆ ಅವರ ರಾಜಕೀಯ ವಿರೋಧಿಗಳು ಏನನ್ನೋ ಮಾತನಾಡಬಹುದು.ಆದರೆ ಅವರ ಪ್ರಾಮಾಣಿಕತೆಗೆ ನಾನೇ ನಿದರ್ಶನನಾಗಿದ್ದೇನೆ.ನನ್ನಿಂದ ಬಿಡಿಗಾಸನ್ನೂ ನಿರೀಕ್ಷಿಸದೆ ನನ್ನನ್ನು ಮುಖತಃ ಭೇಟಿ ಆಗಲು ಕೂಡ ತಿಳಿಸದೆ ಕೇವಲ ನನ್ನ ಒಂದು ವಾಟ್ಸಾಪ್ ಮೆಸೇಜ್ ಗೆ ಸ್ಪಂದಿಸಿ ಹೃದಯವಂತಿಕೆ ಮೆರೆದು ನನ್ನನ್ನು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿದ್ದಾರೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಪ್ಪತ್ತಾರು ವರ್ಷಗಳ ಸುದೀರ್ಘಸೇವೆಯಲ್ಲಿ ನಾನು ಮರೆಯಲಾರದ ಮೂವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಲ್ಲಿ ಆದರಣೀಯರಾದ ಪ್ರಿಯಾಂಕ್ ಖರ್ಗೆಯವರು ಕೂಡ ಒಬ್ಬರು ಎನ್ನುವುದನ್ನು ನಾನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವೆ.
ನನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಪರೀಕ್ಷಾರ್ಥ ಕ್ಷೇತ್ರಾಭಿವೃದ್ಧಿ ಅಧಿಕಾರಿಯಾಗಿದ್ದ ನನಗೆ ಪದೋನ್ನತಿ ನೀಡಿ ಸಂಡೂರು ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಿಸಿದ್ದ ಕೀರ್ತಿಶೇಷ ಎಂ ವೈ ಘೋರ್ಪಡೆಯವರು ನಾನು ಸದಾ ಸ್ಮರಿಸುವ ಆರ್ಡಪಿಆರ್ ಸಚಿವರಲ್ಲಿ ಮೊದಲಿಗರು.ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವರು ಸ್ವಯಂ ನನ್ನನ್ನು ಗುರುತಿಸಿ ಕ್ಷೇತ್ರಾಭಿವೃದ್ಧಿ ಅಧಿಕಾರಿ ಹುದ್ದೆಯಿಂದ( ಪರೀಕ್ಷಾರ್ಥ ಅವಧಿಯಲ್ಲಿದ್ದೆ) ಕಾರ್ಯ ನಿರ್ವಾಹಕ ಅಧಿಕಾರಿ ಹುದ್ದೆಗೆ ಬಡ್ತಿನೀಡಿ ಸಂಡೂರು ತಾಲೂಕಾ ಪಂಚಾಯತಿಗೆ ನೇಮಿಸಿಕೊಂಡಿದ್ದಲ್ಲದೆ ದುರ್ಲಭವಾಗಿದ್ದ ಅವರ ‘ ಶಿವಪುರ ಅರಮನೆ’ ಗೆ ನನಗೆ ಸದಾ ಮುಕ್ತಪ್ರವೇಶದ ಅವಕಾಶ ನೀಡಿದ್ದರು.ಆಗಿನ್ನೂ ಏರುಜವ್ವನದ ತರುಣ ಅಧಿಕಾರಿ ಆಗಿದ್ದ ನನ್ನಲ್ಲಿ ಎಂ ವೈ ಘೋರ್ಪಡೆಯವರು ತೋರಿಸಿದ್ದ ಪ್ರೀತಿ,ವಿಶ್ವಾಸ,ಅಭಿಮಾನಗಳು ನನ್ನ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿವೆ.ನನ್ನ ‘ ಮಾದಾರ ಚೆನ್ನಯ್ಯ’ ಮತ್ತು ‘ ಡೋಹಾರ ಕಕ್ಕಯ್ಯ’ ಎನ್ನುವ ಎರಡು ವ್ಯಕ್ತಿಚಿತ್ರಣ ಕೃತಿಗಳನ್ನು ಎಂ ವೈ ಘೋರ್ಪಡೆಯವರು ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶಿವಪುರ ಅರಮನೆಯಲ್ಲಿ ಬಿಡುಗಡೆ ಮಾಡಿ ನನ್ನನ್ನು ಪ್ರೋತ್ಸಾಹಿಸಿದ್ದರು.
ಮತ್ತೋರ್ವ ಹಿರಿಯ ಚೇತನ ಶ್ರೀ ಎಂ ಪಿ ಪ್ರಕಾಶ ಅವರನ್ನು ಕೂಡ ನಾನು ಸ್ಮರಿಸುತ್ತಿರುತ್ತೇನೆ.ಸುಸಂಸ್ಕೃತ ವ್ಯಕ್ತಿತ್ವದ ಅವರು ನಾನು ಕವಿ ಸಾಹಿತಿ ಎಂದರಿತು ಅವರ ಮನೆ ಮತ್ತು ಕಛೇರಿಗಳಿಗೆ ನನಗೆ ಸದಾ ಮುಕ್ತ ಅವಕಾಶ ನೀಡಿದ್ದಲ್ಲದೆ ‘ ಹೊಸದಾಗಿ ಏನು ಬರೆದಿದ್ದೀರಿ?’ ‘ ಚೆನ್ನಾಗಿ ಬರೆಯುತ್ತೀರಿ,ಸದಾ ಬರೆಯುತ್ತಾ ಇರಿ’ ಎಂದು ಪ್ರೋತ್ಸಾಹಿಸುತ್ತಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಗ್ಗೆ ನನ್ನಿಂದ ಎರಡು ಸಂಶೋಧನಾ ಲೇಖನಗಳನ್ನು ಕೂಡ ಬರೆಸಿದ್ದರು.
ಈಗ ಪ್ರಿಯಾಂಕ್ ಖರ್ಗೆಯವರು ನನ್ನ ಪ್ರಾತಃಸ್ಮರಣೀಯ ಸಚಿವರು ಆಗಿದ್ದಾರೆ.ಸರಕಾರಿ ಸೇವೆಯಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದ ನನ್ನಲ್ಲಿ ಒಳ್ಳೆಯತನಕ್ಕೆ ಬೆಲೆ ಇದೆ ಎನ್ನುವ ಭರವಸೆ ಮೂಡಿಸಿದ ಪುಣ್ಯಾತ್ಮರವರು.ಪ್ರಿಯಾಂಕ್ ಖರ್ಗೆ ಸಾಹೇಬರು ದೇವರನ್ನು ನಂಬುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನನಗಂತೂ ಅವರ ‘ದೇವರಪ್ರತಿನಿಧಿ’ ಯಾಗಿ ಕಾಣಿಸುತ್ತಾರೆ.ಪ್ರತ್ಯಕ್ಷವಾಗಿ ಕಾಣದ ದೇವರು ಮನುಷ್ಯರ ಮೂಲಕ ಪ್ರಕಟಗೊಳ್ಳುತ್ತಾನೆ ಎನ್ನುವ ಮಾತಿಗೆ ಪ್ರಿಯಾಂಕ್ ಖರ್ಗೆಯವರು ದೈವಪ್ರತಿನಿಧಿತ್ವದ ಸಾಕ್ಷಿಯಾಗಿದ್ದಾರೆ,ನಿದರ್ಶನರಾಗಿದ್ದಾರೆ.ನನಗೊಬ್ಬನಿಗೇ ಅಲ್ಲ ನನ್ನಂತಹ ನೂರಾರು ಜನ ನೊಂದ ಬೆಂದ ಅಧಿಕಾರಿಗಳ ಬಾಳ ಭರವಸೆಯಾಗಿದ್ದಾರೆ ಮಾನ್ಯ ಪ್ರಿಯಾಂಕ್ ಖರ್ಗೆ ಸಾಹೇಬರು.ಶುಭ,ಮಂಗಳ ಮತ್ತು ಒಳಿತಿನ ಸಂಕೇತವೇ ಆದ ಪರಶಿವ ಮತ್ತು ಸರ್ವಮಂಗಳೆಯಾದ ತಾಯಿ ದುರ್ಗಾದೇವಿಯವರು ಪ್ರಿಯಾಂಕ್ ಖರ್ಗೆ ಸಾಹೇಬರಿಗೆ ಸದಾ ಒಳಿತನ್ನೇ ಉಂಟುಮಾಡಲಿ,ಅವರಿಗೆ ರಾಜಕೀಯ ಉನ್ನತಾಧಿಕಾರಗಳನ್ನಿತ್ತು ಪೊರೆದು ಸರ್ವಮಂಗಳಗಳನ್ನುಂಟು ಮಾಡಲಿ ಎನ್ನುವ ಪ್ರಾರ್ಥನೆಯೊಂದಿಗೆ ಈ ಲೇಖನವನ್ನು ಪರಿಸಮಾಪ್ತಿಗೊಳಿಸುವೆ.
೨೨.೧೧.೨೦೨೪