ಶಹಾಪೂರ :ವಕ್ಫ್ ಆಸ್ತಿ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿ ಈ ನೆಲದ ಮಣ್ಣಿನ ಮಕ್ಕಳ ಭೂಮಿಯ ಹಕ್ಕು ಕಸಿಯಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ ಅಹ್ಮದಖಾನ ಅವರನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸುತ್ತಿದೆ ಎಂದು ಕರಣ್ ಸುಬೇದಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ವಕ್ಫ್ ಆಸ್ತಿ ವಿವಾದ ಸಿದ್ದರಾಮಯ್ಯನವರ ಮೂಗಿನಡಿಯಲ್ಲಿ ಸೃಷ್ಟಿಯಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.ಯಾದಗಿರಿ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದದ ಜ್ವಾಲೆ ಇದೀಗ ರಾಜ್ಯವ್ಯಾಪಿ ಆವರಿಸಲು ಆರಂಭವಾಗಿದೆ. ಯಾದಗಿರಿಯ 1,440 ರೈತರ ಜಮೀನುಗಳ ಪಹಣಿ ಕಾಲಂ 11 ರಲ್ಲಿ ದಿಢೀರ್ ವಕ್ಫ್ ಮಂಡಳಿ ಬೆಂಗಳೂರು ಎಂದು ನಮೂದಿಸಿದ್ದು, ವಕ್ಫ್ ಹೆಸರು ಬಂದಿರುವುದನ್ನು ನೋಡಿದರೆ ಅನ್ನದಾತರ ಬದುಕನ್ನು ಕಸಿದುಕೊಳ್ಳುವುದು ಕಾಂಗ್ರೆಸ್ ಸರ್ಕಾರದ ಅಜೆಂಡಾ ಇದ್ದಂತಿದೆ.
ಏಕಾಏಕಿ ರೈತರ ಪಹಣಿ ಹಾಗೂ ಆರ್.ಟಿ.ಸಿಗಳಲ್ಲಿ ವಕ್ಫ್ ಆಸ್ತಿ ಉಲ್ಲೇಖದ ಹಿಂದಿರುವ ದುರುದ್ದೇಶದ ಕುರಿತು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. ಬಡ ರೈತರ ಜಮೀನು ಕಬಳಿಸುವ ಹುನ್ನಾರಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನೆಲ,ಜಲ, ಭಾಷೆಯ ವಿಷಯದಲ್ಲಿ ಸ್ವಾಭಿಮಾನಿ ಕನ್ನಡಿಗರ ಹಾಗೂ ಈ ನೆಲದ ಮಣ್ಣಿನ ಮಕ್ಕಳಾದ ರೈತ ಸಮೂಹದ ತಾಳ್ಮೆ ಕೆಣಕಿದಂತಾಗುತ್ತದೆ ಎಂದು ಕಿಡಿಕಾರಿದರು.
ಬಿಜೆಪಿ ಪಕ್ಷ ಈ ವಿವಾದವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ತಲತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ನಮ್ಮ ರೈತರಿಂದ ಒಂದೇ ಒಂದು ಇಂಚು ಭೂಮಿಯನ್ನೂ ಕಸಿಯಲು ಬಿಡುವುದಿಲ್ಲ, ಇದಕ್ಕಾಗಿ ಎಂತಹ ಹೋರಾಟಕ್ಕೂ ಬಿಜೆಪಿ ಕಟಿಬದ್ಧವಾಗಿದೆ ಎಂದು ಎಚ್ಚರಿಸಿದರು.
ಜಿಲ್ಲೆಯ ರೈತರು ಯಾವುದೇ ಆತಂಕಕ್ಕೊಳಗಾಗದೆ , ಕಾನೂನಾತ್ಮಕ ಹೋರಾಟಕ್ಕೆ ಎಲ್ಲಾ ರೀತಿಯಿಂದಲೂ ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ. ರೈತರು ಆತಂಕ ಪಡದೆ ದೈರ್ಯದಿಂದ ಅನ್ಯಾಯದ ವಿರುದ್ದ ಹೋರಾಟ ಮಾಡೋಣ. ವಕ್ಫ ಬೋರ್ಡ್ ನಿಂದ ಯಾವುದೇ ತೊಂದರೆ ಆದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.