ಬೀದರ,ನವೆಂಬರ್ ೦೧
” ‘ ಕನ್ನಡ’ ಎಂದರೆ ಅದೊಂದು ಭಾಷೆಯಲ್ಲ,ಅದೊಂದು ಸಂಸ್ಕೃತಿ.ಸಾವಿರಾರು ವರ್ಷಗಳಿಂದ ಈ ನೆಲದ ಪೂರ್ವಿಕರು ಕನ್ನಡವಾಗಿ ಬಾಳಿದ್ದಾರೆ.ಕನ್ನಡವಾಗಿ ಬಾಳುವುದರಲ್ಲಿಯೇ ರಾಜ್ಯದ ಹಿತ ಅಡಗಿದೆ.ಕನ್ನಡವು ಭಾರತದ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದು.ಐತಿಹಾಸಿಕವಾಗಿ ಬಹು ಪುರಾತನವಾದುದು ಕನ್ನಡ ಸಂಸ್ಕೃತಿ.ಆಧುನಿಕ ಕಾಲದ ಅಗತ್ಯಗಳೊಂದಿಗೆ ಕನ್ನಡವನ್ನು ವಿಸ್ತರಿಸುತ್ತ ಬೆಳೆಯಬೇಕಿದೆ.ನಾಡಿನ ಅನ್ನದ ಭಾಷೆಯಾದ ಕನ್ನಡವನ್ನು ಎತ್ತಿ ಹಿಡಿಯುವುದು ಕನ್ನಡಿಗರೆಲ್ಲರ ಕರ್ತವ್ಯ” ಎಂದು ಕನ್ನಡಾಭಿಮಾನವನ್ನು ಎತ್ತಿ ಹಿಡಿದು ಪ್ರತಿಪಾದಿಸಿದರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ಬದೋಲೆಯವರು.
ಅವರಿಂದು ಬೆಳಿಗ್ಗೆ ಬೀದರ ಜಿಲ್ಲಾ ಪಂಚಾಯತಿಯಲ್ಲಿ ನಡೆದ ೬೯ ನೆಯ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ,ಮಾತನಾಡಿದರು.ಡಾಕ್ಟರ್ ಗಿರೀಶ ಬದೋಲೆಯವರು ಮುಂದುವರೆದು ಮಾತನಾಡುತ್ತ ‘ ಕರ್ನಾಟಕದಲ್ಲಿ ಹತ್ತಾರು ಭಾಷೆಗಳಿವೆ,ನೂರಾರು ಜಾತಿಗಳಿವೆ.ಆದರೂ ನಾವೆಲ್ಲರೂ ಕನ್ನಡಿಗರು ಎನ್ನುವ ಏಕತೆಯ ಭಾವನೆಯಿಂದ ನಾಡಿನ ಜನತೆಯೆಲ್ಲ ಒಟ್ಟಾಗಿ ದುಡಿಯುತ್ತ ಕರ್ನಾಟಕವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡಿದ್ದಾರೆ.ಕರ್ನಾಟಕದಲ್ಲಿ ವಾಸಿಸುವವರೆಲ್ಲರೂ ಕನ್ನಡದಲ್ಲಿಯೇ ಮಾತನಾಡಬೇಕು,ಕನ್ನಡದಲ್ಲಿಯೇ ವ್ಯವಹರಿಸಬೇಕು.ಕನ್ನಡವು ರಾಜ್ಯದ ಅಧಿಕೃತ ಭಾಷೆಯಾದುದರಿಂದ ಎಲ್ಲರೂ ಕನ್ನಡವನ್ನು ಸ್ವೀಕರಿಸಿ,ಗೌರವಿಸಬೇಕು’ಎಂದು ಕನ್ನಡ ಪರ ಕಾಳಜಿಯ ಮಾತುಗಳನ್ನಾಡಿ ಕನ್ನಡಾಭಿವನ್ನು ವ್ಯಕ್ತಪಡಿಸಿದರು.
ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ,ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ,ಸಹಾಯಕ ಕಾರ್ಯದರ್ಶಿಗಳಾದ ರಮೇಶ ನಾಥೆ,ಜಯಪ್ರಕಾಶ ಚಹ್ವಾಣ,ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ದೊಣೆ,ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗ ಬಿರಾದರ ಮತ್ತು ಎರಡು ಇಂಜನಿಯರಿಂಗ್ ವಿಭಾಗಗಳ ಸಿಬ್ಬಂದಿ,ಜಿಲ್ಲಾ ಪಂಚಾಯತಿಯ ಇತರ ಅಧಿಕಾರಿಗಳು,ಸಿಬ್ಬಂದಿಯವರು ಪಾಲ್ಗೊಂಡಿದ್ದರು.ಪ್ರವೀಣಸ್ವಾಮಿ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.