ಜಾತಿಗಣತಿ ವರದಿ ಒಪ್ಪದಿರಲು ವೀರಶೈವ-ಲಿಂಗಾಯತ ಮಹಾಸಭಾ ತೀರ್ಮಾನ : ಕರಣ್ ಸುಬೇದಾರ

ಶಹಾಪೂರ : ಕಾಂತರಾಜು ನೇತೃತ್ವದ ಸಮಿತಿ ನಡೆಸಿರುವ ಜಾತಿ ಜನಗಣತಿ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿದ್ದು, ಈ ಬಗ್ಗೆ ವೀರಶೈವ-ಲಿಂಗಾಯತ ಮಹಾಸಭಾ ಆಕ್ಷೇಪ ವ್ಯಕ್ತಪಡಿಸಿದೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾತಿ ಗಣತಿ ಕುರಿತ ಸರ್ಕಾರದ ನಡೆಯನ್ನು ಖಂಡಿಸಲಾಗಿದೆ ಎಂದು ಬಿಜೆಪಿ ಮುಖಂಡ ಕರಣ ಸುಬೇದಾರ  ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿದ ಅವರು ಬೆಂಗಳೂರಿನಲ್ಲಿ ನಡೆದ  ಸಭೆಯ ಪ್ರಮುಖ ನಿರ್ಣಯದಂತೆ  ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆಯು ಬಸವಾದಿ ತತ್ವಗಳನ್ನು ಪ್ರತಿಪಾದಿಸುತ್ತಿದ್ದು, ಸರ್ವರಿಗೂ ಒಳಿತನ್ನು ಬಯಸುವ ಸಮಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಶರಣರ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಸಂಸ್ಥೆಯಾಗಿದೆ. ನಾವು ಜಾತಿಗಣತಿಯ ವಿರೋಧಿಗಳಲ್ಲ ಎಂದು ಹೇಳಿದರು.

ಕಳೆದ 10 ವರ್ಷಗಳ ಹಿಂದೆ ನಡೆಸಲಾದ ಈ ಜನಗಣತಿಯು ಹಲವು ಲೋಪಗಳಿಂದ ಕೂಡಿದ್ದು ಸರಿಪಡಿಸುವ ಅಗತ್ಯವಿದೆ. ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ.ಪ್ರಸ್ತುತ ವರದಿಯು  ಅಸಂವಿಧಾನಿಕವಾದುದ್ದು ಸ್ವೀಕಾರಕ್ಕೆ ಆರ್ಹವಲ್ಲವೆಂದು ಮಹಾಸಭೆಯ ಅಭಿಪ್ರಾಯಪಟ್ಟಿದೆ.ಮುಖ್ಯಮಂತ್ರಿಗಳು ಈ ವರದಿಯನ್ನು ಕೈಬಿಡಬೇಕು.ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ವಿವಿಧ  ಲಿಂಗಾಯತ ಉಪಪಂಗಡಗಳ ಹೆಸರಿನ ಜೊತೆಯಲ್ಲಿ ‘ಲಿಂಗಾಯತ’ ಪದವಿಲ್ಲದೇ ಕೇವಲ ಉಪಪಂಗಡಗಳ ಹೆಸರನ್ನು ಮಾತ್ರ ನಮೂದಿಸಲಾಗಿರುತ್ತದೆ. ಎಲ್ಲಾ ಲಿಂಗಾಯತ ಉಪಪಂಗಡಗಳ ಜೊತೆಯಲ್ಲಿ ‘ಲಿಂಗಾಯತ’ ಎಂದು ನಮೂದಿಸಿದ ಆಯ್ಕೆಯನ್ನು ಈಗಿರುವ ಪಟ್ಟಿಯಲ್ಲಿ, ಉಪಪಂಗಡಗಳಿರುವ ವರ್ಗಗಳನ್ನು ಬದಲಾಯಿಸದೇ ಸರ್ಕಾರದ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಗಿದೆ ಎಂದರು.

ವೀರಶೈವ-ಲಿಂಗಾಯತ ಎಲ್ಲಾ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಕೇಂದ್ರಕ್ಕೆ  ಮುಖ್ಯಮಂತ್ರಿಗಳು ಶಿಫಾರಸ್ಸು ಮಾಡಬೇಕು.  ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತಾದ ಸರ್ಕಾರದ ಎಲ್ಲಾ ಸೈದ್ಧಾಂತಿಕ, ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ವೀರಶೈವ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ನಿಂತು ಬೆಂಬಲಿಸುತ್ತದೆ ಸಮುದಾಯದ ಪರವಾಗಿ ಮಹಾಸಭೆಯ ಅಧ್ಯಕ್ಷರಾದ ಶಂಕರ ಬಿದರಿ ತಿಳಿಸಿದ್ದಾರೆ. ಸಭೆಯಲ್ಲಿ  ಮಹಾಸಭಾದಿಂದ 6 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.ಸರ್ಕಾರ ನಿರ್ಣಯಗಳಿಗೆ ಸ್ಪಂದಿಸಬೇಕು. ಒಂದು ವೇಳೆ ಸ್ಪಂದಿಸದಿದ್ದರೆ ಮಹಾಸಭಾದ ಅಧ್ಯಕ್ಷರಾದ ಶಂಕರ ಬಿದರಿ ಅವರು ಆದೇಶದ ಪ್ರಕಾರ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಸುಬೇದಾರ ತಿಳಿಸಿದರು.

About The Author