Bidar : ಬೀದರ ಜಿಲ್ಲೆಯ ಗ್ರಾಮ ಪಂಚಾಯತಿಗಳು ತೆರಿಗೆ ವಸೂಲಾತಿಯಲ್ಲಿ ಅಕ್ಟೋಬರ್ 25 ರಂದು ಒಂದು ಮಹತ್ವದ ಸಾಧನೆ ಮಾಡಿವೆ.ಅಕ್ಟೋಬರ್ 25 ರ ಒಂದೇ ದಿನದಂದು ಬೀದರ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ₹ 7759260( ಎಪ್ಪತ್ತೇಳು ಲಕ್ಷ ಐವತ್ತೊಂಬತ್ತು ಸಾವಿರದ ಇನ್ನೂರ ಅರವತ್ತು ರೂಪಾಯಿಗಳು) ಗಳ ತೆರಿಗೆ ವಸೂಲಿ ಆಗಿದೆ.ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ಬದೋಲೆಯವರ ಕಾರ್ಯತಂತ್ರದ ಫಲವಾಗಿ ಬೀದರ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 77 ಲಕ್ಷ ರೂಪಾಯಿಗಳ ತೆರಿಗೆ ವಸೂಲಾತಿ ಆಗಿದೆ.
ತೆರಿಗೆ ವಸೂಲಾತಿಯಲ್ಲಿ ಗಣನೀಯ ಪ್ರಗತಿ ಸಾಧಿಸುವ ಉದ್ದೇಶದಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 21.10.2024 ರಿಂದ 31.10.2024 ರ ವರೆಗೆ ಜಿಲ್ಲೆಯ ಎಲ್ಲಾ 185 ಗ್ರಾಮ ಪಂಚಾಯತಿಗಳಲ್ಲಿ ‘ ತೆರಿಗೆ ವಸೂಲಾತಿ ಅಭಿಯಾನ ‘ ಪ್ರಾರಂಭಿಸಲು ಸೂಚನೆಗಳನ್ನು ನೀಡಿದ್ದರು.ಅಲ್ಲದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳನ್ನು ತೆರಿಗೆ ವಸೂಲಾತಿ ಅಭಿಯಾನದ ಉಸ್ತುವಾರಿ ಅಧಿಕಾರಿಗಳು ಎಂದು ಜಿಲ್ಲೆಯ ಎಂಟು ತಾಲ್ಲೂಕುಗಳಿಗೆ ನಿಯೋಜಿಸಿದ್ದರು.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿರುವ ಡಾ. ಗಿರೀಶ ದಿಲೀಪ್ ಬದೋಲೆಯವರು ಭಾಲ್ಕಿ ತಾಲ್ಲೂಕಿನ ಉಸ್ತುವಾರಿ ವಹಿಸಿಕೊಂಡಿದ್ದರೆ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಬಸವಕಲ್ಯಾಣ ತಾಲ್ಲೂಕಿನ ಉಸ್ತುವಾರಿ ವಹಿಸಿಕೊಂಡಿದ್ದರು.ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿಯವರು ಬೀದರ ತಾಲ್ಲೂಕಿನ ಉಸ್ತುವಾರಿ ವಹಿಸಿಕೊಂಡಿದ್ದರೆ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆಯವರು ಹುಮನಾಬಾದ್ ತಾಲ್ಲೂಕಿನ ಉಸ್ತುವಾರಿ ಅಧಿಕಾರಿಗಳಾಗಿದ್ದರು.ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ ಅವರು ಔರಾದ ತಾಲೂಕಿನ ಉಸ್ತುವಾರಿ ಅಧಿಕಾರಿಗಳಾಗಿದ್ದರೆ ಸಹಾಯಕ ಕಾರ್ಯದರ್ಶಿ ( ಆಡಳಿತ) ಜಯಪ್ರಕಾಶ ಚಹ್ವಾಣ ಚಿಟಗುಪ್ಪಾ ತಾಲೂಕಿನ ಉಸ್ತುವಾರಿ ವಹಿಸಿಕೊಂಡಿದ್ದರೆ ಮತ್ತೋರ್ವ ಸಹಾಯಕ ಕಾರ್ಯದರ್ಶಿ ( ಅಭಿವೃದ್ಧಿ) ಬೀರೇಂದ್ರ ಸಿಂಗ್ ಅವರಿಗೆ ಕಮಲನಗರ ಮತ್ತು ಹುಲಸೂರು ತಾಲೂಕುಗಳ ಉಸ್ತುವಾರಿ ನೀಡಲಾಗಿತ್ತು.
ತೆರಿಗೆ ವಸೂಲಾತಿಯಲ್ಲಿ ಗಣನೀಯ ಪ್ರಮಾಣದ ಸಾಧನೆ ಮಾಡುವ ಉದ್ದೇಶದಿಂದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಗಿರೀಶ ದಿಲೀಪ್ ಬದೋಲೆಯವರು ತಮ್ಮ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿಯ ಅಧಿಕಾರಿಗಳನ್ನು ಉಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಿದ್ದಲ್ಲದೆ ಜಿಲ್ಲಾ ಪಂಚಾಯತಿಯಿಂದ ನಿಯತವಾಗಿ ಮೇಲ್ವಿಚಾರಣೆ ಮಾಡಿ ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರುಗಳು ಮತ್ತು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಅಗತ್ಯ ಸಲಹೆ- ಸೂಚನೆ,ಮಾರ್ಗದರ್ಶನಗಳನ್ನು ನೀಡುವ ಏರ್ಪಾಟು ಮಾಡಿದ್ದರು
ಇವೆಲ್ಲವುಗಳಿಗಿಂತ ಮಿಗಿಲಾಗಿ ಡಾ. ಗಿರೀಶ ಬದೋಲೆಯವರು ಜಿಲ್ಲೆಯಲ್ಲಿ ಒಂದೇ ದಿನ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಬೇಕು ಎನ್ನುವ ಉದ್ದೇಶದಿಂದ 25.10.2024 ರಂದು ಜಿಲ್ಲೆಯಾದ್ಯಂತ ಒಂದು ಕೋಟಿ ತೆರಿಗೆ ವಸೂಲಾತಿ ಮಾಡಬೇಕು ಎನ್ನುವ ಗುರಿ ನಿಗದಿಪಡಿಸಿ ಅದಕ್ಕೆ ಕಾರ್ಯತಂತ್ರವನ್ನು ರೂಪಿಸಿದ್ದರು.ಅದರಂತೆ 25.10.2025 ರಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು,ಉಪಕಾರ್ಯದರ್ಶಿಯವರು ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಬೆಳಿಗ್ಗೆ ಎಂಟು ಘಂಟೆಗೆ ಅವರಿಗೆ ವಹಿಸಿಕೊಡಲ್ಪಟ್ಟ ತಾಲೂಕುಗಳಿಗೆ ತೆರಳಿ ಸಂಜೆಯವರೆಗೆ ತೆರಿಗೆ ವಸೂಲಾತಿ ಆಂದೋಲನದಲ್ಲಿ ಪಾಲ್ಗೊಂಡು ಅತಿಹೆಚ್ಚು ತೆರಿಗೆ ವಸೂಲು ಮಾಡುವ ಮೂಲಕ ‘ಒಂದೇದಿನದಲ್ಲಿ ಒಂದುಕೋಟಿ ‘ ತೆರಿಗೆ ವಸೂಲಾತಿ ಗುರಿ ಸಾಧಿಸಲು ನಿರ್ಧರಿಸಲಾಗಿತ್ತು.ಆದರೆ 25.10.2024 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಉಪಕಾರ್ಯದರ್ಶಿಯವರು ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಹಾಗೂ ತಾಲ್ಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತಿಯಲ್ಲಿ ನಡೆದ ಎರಡು ಸಭೆಗಳಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆಯಿಂದಾಗಿ ನಿಯೋಜಿತ ತಾಲೂಕುಗಳಿಗೆ ತೆರಳಲು ಆಗಲಿಲ್ಲ.ಆದರೂ ತಾಲೂಕಾ ಪಂಚಾಯತಿಗಳ ಸಹಾಯಕ ನಿರ್ದೇಶಕರುಗಳು,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು ,ಕರವಸೂಲಿಗಾರರು ಮತ್ತು ಗ್ರಾಮ ಪಂಚಾಯತಿಗಳ ಸಿಬ್ಬಂದಿಯವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರು ತಮ್ಮೆಲ್ಲರಲ್ಲಿ ಇರಿಸಿದ್ದ ವಿಶ್ವಾಸವನ್ನು ಹುಸಿಗೊಳಿಸದೆ ಬೆಳಿಗ್ಗೆಯಿಂದಲೇ ತೆರಿಗೆ ವಸೂಲಾತಿ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡು ಒಂದೇ ದಿನದಲ್ಲಿ 7759260 ರೂಪಾಯಿಗಳ ತೆರಿಗೆ ವಸೂಲಾತಿ ಮಾಡಿದ್ದಾರೆ.
ಬಸವಕಲ್ಯಾಣ ತಾಲೂಕಿನಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಆಗಿದ್ದು ಬಸವಕಲ್ಯಾಣ ತಾಲೂಕಿನಲ್ಲಿ ಇಂದು 2803456 ರೂಗಳ ತೆರಿಗೆ ವಸೂಲಿ ಮಾಡಲ್ಪಟ್ಟಿದೆ. ಬೀದರ ತಾಲೂಕಿನಲ್ಲಿ 1890601 ರೂಪಾಯಿಗಳು,ಹುಮನಾಬಾದ್ ತಾಲೂಕಿನಲ್ಲಿ 1308416 ರೂಪಾಯಿಗಳು,ಕಮಲನಗರ ತಾಲೂಕಿನಲ್ಲಿ 603134 ರೂಪಾಯಿಗಳು,ಔರಾದ ತಾಲೂಕಿನಲ್ಲಿ 436764 ರೂಪಾಯಿಗಳು,ಭಾಲ್ಕಿ ತಾಲೂಕಿನಲ್ಲಿ 308740 ರೂಪಾಯಿಗಳು,ಚಿಟಗುಪ್ಪ ತಾಲೂಕಿನಲ್ಲಿ 227554 ರೂಪಾಯಿಗಳು ಮತ್ತು ಹುಲಸೂರು ತಾಲೂಕಿನಲ್ಲಿ 181594 ರೂಪಾಯಿಗಳು ಹೀಗೆ ಒಟ್ಟು 7759260 ರೂಪಾಯಿಗಳ ತೆರಿಗೆ ವಸೂಲಾತಿ ಆಗಿದೆ.ಅಧಿಕಾರಿಗಳು ಸಮನ್ವಯ ಮತ್ತು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದರೆ ಅದ್ಭುತ ಕಾರ್ಯಗಳನ್ನು ಸಾಧಿಸಬಹುದು ಎನ್ನುವುದಕ್ಕೆ ಬೀದರ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 77 ಲಕ್ಷ ರೂಪಾಯಿಗಳ ತೆರಿಗೆ ವಸೂಲು ಮಾಡಿದ್ದು ಉತ್ತಮ ನಿದರ್ಶನವಾಗಿದೆ.
ಈ ಅದ್ಭುತ ಸಾಧನೆ ಗೈದುದಕ್ಕೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ಜಿಲ್ಲಾ ಪಂಚಾಯತಿಯ ಅಧಿಕಾರಿಗಳು,ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರುಗಳು,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು,ಕರವಸೂಲಿಗಾರರು ಮತ್ತು ಗ್ರಾಮ ಪಂಚಾಯತಿಗಳ ಸಿಬ್ಬಂದಿಯವರನ್ನು ಅಭಿನಂದಿಸಿ ಇದೇ ಸ್ಫೂರ್ತಿಯಲ್ಲಿ ಮುನ್ನಡೆದು ಅಭಿಯಾನದ ಅವಧಿಯಲ್ಲಿ ಗರಿಷ್ಠ ತೆರಿಗೆ ವಸೂಲಾತಿ ಮಾಡುವಂತೆ ಶುಭ ಹಾರೈಸಿದ್ದಾರೆ.
ಮುಕ್ಕಣ್ಣ ಕರಿಗಾರ
ಉಪಕಾರ್ಯದರ್ಶಿ
ಜಿಲ್ಲಾ ಪಂಚಾಯತ್ ಬೀದರ್