ಬೀದರ : ಬೀದರ ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಸರಕಾರದ ಜಲಶಕ್ತಿ ಸಚಿವಾಲಯದ ನಿರ್ದೇಶಕರಾದ ಶ್ರೀ ಅನೀಶ ರಾಜನ್ ಅವರ ನೇತೃತ್ವದಲ್ಲಿನ ತಂಡದೊಂದಿಗೆ ಇಂದು ಸಂಜೆ ಬೀದರಿನ ಐತಿಹಾಸಿಕ ಮಹತ್ವದ ಕೋಟೆಗೆ ಭೇಟಿ ನೀಡಿದೆ.ನೂರಾರು ಎಕರೆ ವಿಸ್ತೀರ್ಣದ ಕೋಟೆಯಲ್ಲಿ ನೋಡುವ ಸಾಕಷ್ಟು ಸ್ಥಳಗಳಿವೆ.ಆದರೆ ಸಮಯಾಭಾವದಿಂದ ನಾವು ಇಂದು ಒಂದು ಘಂಟೆ ಮಾತ್ರ ಬೀದರ ಕೋಟೆಯಲ್ಲಿದ್ದು ಕೋಟೆಯ ಅತಿ ಮಹತ್ವದ ಸ್ಥಳಗಳನ್ನು ಮಾತ್ರ ನೋಡಿದೆವು.
ಹದಿನಾರು ಕಂಬಗಳ ಪ್ರಾರ್ಥನಾ ಸ್ಥಳವು ವಿಶಿಷ್ಟವಾಗಿದೆ. ಸುಲ್ತಾನರು ಹದಿನಾರು ಕಂಬಗಳ ಈ ಪ್ರಾರ್ಥನಾ ಮಂದಿರದಲ್ಲಿ ನಮಾಜ್ ಮಾಡುತ್ತಿದ್ದರಂತೆ.ಇದರ ಕೆಳಗೆ ನೆಲದಾಳದಲ್ಲಿಯೂ ಒಂದು ಪ್ರಾರ್ಥನಾ ಮಂದಿರ ಇರುವುದಾಗಿ ಕೋಟೆ ಸಿಬ್ಬಂದಿ ತಿಳಿಸಿದರು.ಹಾಗೆಯೇ ರಾಣಿಮಹಲ್ ತನ್ನ ವಿಶಿಷ್ಟ ರಚನೆಯಿಂದ ಗಮನಸೆಳೆಯುತ್ತ ಬೀದರನ ಸುಲ್ತಾನರ ಭೋಗ ಮತ್ತು ವಿಲಾಸಿಜೀವನದತ್ತ ಬೆಳಕು ಚೆಲ್ಲುತ್ತದೆ.ರಾಣಿ ಮಹಲಿನ ಮುಂಭಾಗದ ಪುಟ್ಟ ಸ್ನಾನದ ತೊಟ್ಟಿಯು ಸರಳ,ಸುಂದರವಾಗಿದೆ.ಮೂರಂತಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ನಿಂತು ನೋಡಿದರೆ ಬೀದರ ನಗರವನ್ನು ಕಣ್ತುಂಬಿಕೊಳ್ಳಬಹುದು.
ಸುಲ್ತಾನರ ಅರಮನೆ,ರಾಣಿಮಹಲ್ ಗಳ ಸುತ್ತಲೂ ಕೋಟೆ,ಕಂದಕ,ಆನೆಪಾಯಗಳಿರುವುದನ್ನು ಗಮನಿಸಿದಾಗ ಅವರ ರಕ್ಷಣಾ ವ್ಯವಸ್ಥೆ ಅದ್ಭುತವಾಗಿತ್ತು ಎನ್ನುವುದು ಮನದಟ್ಟಾಗುತ್ತದೆ.ಗಚ್ಚನ್ನು ಬಳಸಿಕೊಂಡು ಕಟ್ಟಿದ ಅರಮನೆ,ರಾಣಿಮಹಲ್,ಆಯುಧಾಗಾರ,ಕೋಟೆ ಮೊದಲಾದವುಗಳು ಇಂದಿಗೂ ಸುಭದ್ರವಾಗಿಯೇ ಇವೆ.ನಮ್ಮ ಇಂಜನಿಯರ್ಗಳು ಕಟ್ಟುವ ಸ್ಟೀಲ್ ,ಸಿಮೆಂಟ್ ಕಟ್ಟಡಗಳು ಇಪ್ಪತ್ತೈದು ವರ್ಷಗಳ ಕಾಲ ಬಾಳುವ ಖಾತ್ರಿ ಇಲ್ಲ.ಆದರೆ ಬೀದರ ಕೋಟೆ ಮತ್ತು ಅದರಲ್ಲಿನ ಸ್ಮಾರಕಗಳು ನಾಲ್ಕೈದು ನೂರು ವರ್ಷಗಳಿಂದಲೂ ಮಳೆ ಗಾಳಿ ಬಿಸಿಲಿಗೆ ಮೈಯೊಡ್ಡಿ ಗಟ್ಟಿಯಾಗಿ ನಿಂತಿವೆ ಎನ್ನುವುದು ಗಮನಾರ್ಹ.