ಸಚಿವರಿಂದ ನೂತನ ಡಯಾಲಿಸಿಸ್ ಸಿಟಿ ಸ್ಕ್ಯಾನ್ ಯಂತ್ರಗಳ ಲೋಕಾರ್ಪಣೆ : ಸಾರ್ವಜನಿಕ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಲಾಗುವುದು : ಸಚಿವ ದರ್ಶನಾಪುರ

ಶಹಪುರ : ಶಹಪುರದ ಸಾರ್ವಜನಿಕ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯ ಮಾದರಿಯಲ್ಲಿಯೇ ಹೈಟೆಕ್ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿದರು. ನಗರದ ಸರಕಾರಿ ಆಸ್ಪತ್ರೆಯಲ್ಲಿ ಇಂದು ಸಿಟಿ ಸ್ಕ್ಯಾನ್, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಡಯಾಲಿಸಿಸ್ ಯಂತ್ರಗಳು ಸೇರಿದಂತೆ ವಿವಿಧ ಸೇವೆಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಾಗಿ ಬಡವರು ಬರುತ್ತಾರೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಸೇರಿದಂತೆ 14 ಜನ ವೈದ್ಯರಿದ್ದು, ರೋಗಿಗಳ ಆರೈಕೆ ಒಳ್ಳೆಯ ರೀತಿಯಿಂದ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಕಿವಿಮಾತು ಹೇಳಿದರು.25 ಲಕ್ಷ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ರವರು ಮೂರು ಡಯಾಲಿಸಿಸ್ ಯಂತ್ರಗಳನ್ನು ಸಾರ್ವಜನಿಕ ಆಸ್ಪತ್ರೆಗೆ ನೀಡಿರುವುದು ಸಂತಸದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಖಾಸಗಿಯವರು ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಸಂತಸ ತಂದಿದೆ ಎಂದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆಯು ಕಾಪಾಡಿಕೊಂಡು ಬರಲಾಗಿದ್ದು ಸಂತಸ ತಂದಿದೆ. ಸರಕಾರಿ ಆಸ್ಪತ್ರೆಗೆ ಬರುವುದು ಆಸ್ಪತ್ರೆಯ ನಮ್ಮದು ಎಂದು ಸಾರ್ವಜನಿಕರು ಕೂಡ ಸ್ವಚ್ಛತೆ ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ ಎಂದು ತಿಳಿಸಿದರು.

ಡಯಾಲಿಸಿಸ್ ರೋಗಿಗಳು ಇನ್ನು ಮುಂದೆ ಕಲಬುರ್ಗಿಗೆ ಹೋಗುವ ಅಗತ್ಯವಿರುವುದಿಲ್ಲ. ನಮ್ಮ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಐದು ಡಯಾಲಿಸಿಸ್ ಕೇಂದ್ರಗಳಿದ್ದು ಒಬ್ಬರಿಗೆ ಡಯಾಲಿಸಿಸ್ ಮಾಡಲು ನಾಲ್ಕು ತಾಸು ಬೇಕಾಗುತ್ತದೆ. 18 ಜನ ಡಯಾಲಿಸಿಸ್ ರೋಗಿಗಳಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳುವುದರ ಜೊತೆಗೆ ಸಿಟಿ ಸ್ಕ್ಯಾನ್ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಘಟಕ ರಕ್ತ ಶೇಖರಣೆ ಘಟಕಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರೋಗಿಯ ಹಿಂದಿನ ಮಾಹಿತಿ ಸಿಗಲಿ ಎನ್ನುವ ಉದ್ದೇಶದಿಂದ ಹೊರರೋಗಿಗಳಿಗೆ ಪರಿಚಯ ಪುಸ್ತಕವನ್ನು ಹೊರತಂದಿರುವುದು ಸಂತಸದ ವಿಷಯ ಎಂದರು.ಪ್ರಸ್ತುತದಲ್ಲಿ ಸರಕಾರಿ ಆಸ್ಪತ್ರೆಯನ್ನು 100 ರಿಂದ 150 ಬೆಡ್ ವರೆಗೆ ಉನ್ನತೀಕರಿಸಲಾಗಿದ್ದು ಹಂತಹಂತವಾಗಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡಲಾಗುವು.ದು ಹಳೆಯ ತಹಶೀಲ್ ಕಚೇರಿಯಲ್ಲಿ 20 ಕೋಟಿ ವೆಚ್ಚದಲ್ಲಿ ತಾಯಿ ಮಗುವಿನ ಸರ್ಕಾರಿ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಸರ್ಕಾರದಿಂದ ಈಗಾಗಲೇ 10 ಕೋಟಿ ರೂಪಾಯಿ ಮಂಜೂರು ಮಾಡಲಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನುಳಿದ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ವಿಭಾಗಿಯ ವ್ಯವಸ್ಥಾಪಕರಾದ ನಾಗಾರ್ಜುನರೆಡ್ಡಿ ಮಾತನಾಡಿ ರಾಜ್ಯಾದ್ಯಂತ ನಮ್ಮ ಬ್ಯಾಂಕಿನಿಂದ 65 ಶಾಖೆಗಳಿದ್ದು ಸಾರ್ವಜನಿಕರ ಸೇವೆಗಾಗಿ ನಾವು ಮುಂದೆ ಬಂದಿದ್ದು ಕಲ್ಬುರ್ಗಿ ಲಿಂಗಸುಗೂರು ಶಹಪುರ ಸೇರಿದಂತೆ ಐದು ಸ್ಥಳಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ನೀಡಲಾಗಿದೆ. ಅವಕಾಶ ಕೊಟ್ಟರೆ ಸರ್ಕಾರ ಜೊತೆಗೆ ನಾವು ಸಹಕರಿಸುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಶೇಷಗಿರಾವ್ ಪಾಟೀಲ್, ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಯಲ್ಲಪ್ಪ ಹುಲ್ಕಲ್ ವೈದ್ಯರಾದ ವೆಂಕಟೇಶ್ ಬೈರಮಡಗಿ ಮುಖಂಡರಾದ ಲಿಯಾಕತ್ ಖುರೇಶಿ ಸೇರಿದಂತೆ ಇತರರು ಇದ್ದರು.

ಸಚಿವರಿಂದ ಲೋಕಾರ್ಪಣೆಗೊಂಡ ಸೇವೆಗಳು

*ಪ್ರಸ್ತುತ ನಗರ ಸಾರ್ವಜನಿಕ ಆಸ್ಪತ್ರೆಯನ್ನು 100ರಿಂದ 150 ಬೆಡ್ ಉನ್ನತೀಕರಿಸಿರುವುದು.
*ಹಳೆಯ ತಹಸೀಲ್ ಕಚೇರಿಯ 3 ಎಕರೆ 30 ಗುಂಟೆ ಜಾಗದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ತಾಯಿ ಮಗುವಿನ ಆಸ್ಪತ್ರೆ ನಿರ್ಮಾಣ. ಪ್ರಸ್ತುತ ಆರ್ಥಿಕ ವರ್ಷದಲ್ಲಿ 10 ಕೋಟಿ ರೂಪಾಯಿ ಬಿಡುಗಡೆ.              *ಶಹಪೂರು ನಗರ ಆಸ್ಪತ್ರೆಯನ್ನು ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡುವ ಪ್ರಯತ್ನ.              * ಕ್ಷೇತ್ರ ಶಿಕ್ಷಣಾಧಿಕಾರಿಗಳ ಕೇಂದ್ರ ಕಚೇರಿಯನ್ನು ಸಿಪಿಎಸ್ ಶಾಲಾ ಮೈದಾನದಲ್ಲಿ ಹೊಸ ಕಟ್ಟಡದಲ್ಲಿ ಆದಷ್ಟು ಬೇಗನೆ ವರ್ಗಾವಣೆ.
*ಮೂರು ಡಯಾಲಿಸಿಸ್ ಯಂತ್ರಗಳು,ಸಿಟಿ ಸ್ಕ್ಯಾನ್,  ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರಗಳಿಗೆ ಚಾಲನೆ.
*ಆರೋಗ್ಯ ಪ್ರಯೋಗಾಲಯ ಘಟಕ   *ರಕ್ತ ಶೇಖರಣ ಘಟಕ ಲೋಕಾರ್ಪಣೆ *ಹೊರರೋಗಿಗಳ ಪರಿಚಯ ಪುಸ್ತಕ ಚಾಲನೆ

About The Author