ರಾಜ್ಯೋತ್ಸವ ಪ್ರಶಸ್ತಿಯ ಆಕಾಂಕ್ಷಿ :: ಜಿಲ್ಲೆಯ ಬಯಲಾಟ ಕಲಾವಿದ ಸಣ್ಣ ವೆಂಕಟೇಶ

ರಾಯಚೂರು : ಆತ್ಮೀಯ ರಾಯಚೂರಿನ ಕಲಾ ಬಂಧುಗಳು ಹಾಗೂ ಸಾಂಸ್ಕೃತಿಕ ಲೋಕದ ಮಹಾನೀಯರೇ, ರಾಯಚೂರು ಜಿಲ್ಲೆ ತನ್ನದೇ ಆದ ಸಾಂಸ್ಕೃತಿಕ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಕಲೆ ಸಾಹಿತ್ಯ ವಾಸ್ತುಶಿಲ್ಪ, ಜಾನಪದ, ಸ್ವಾತಂತ್ರ್ಯ ಹೋರಾಟಗಾರರು, ವಚನಕಾರರು, ಕೀರ್ತನಕಾರರು, ಹೀಗೆಯೇ ರಾಯಚೂರು ನಾಡಿನಲ್ಲಿ ಈ ಎಲ್ಲವೂ ಕಂಡುಬರುತ್ತದೆ ಪರಂಪರೆಯ ಹಾದಿಯಲ್ಲಿ. ಇದೀಗ ರಾಯಚೂರು ಜಿಲ್ಲೆ ಅನೇಕ ಕಲಾವಿದರಿಂದ ಪ್ರಖ್ಯಾತಿ ಹೊಂದಿದೆ. ಅದರಲ್ಲೂ ಜಾನಪದದ ಒಂದು ಸ್ವರೂಪದ ಭಾಗವನ್ನು ಆವರಿಸಿಕೊಂಡಿರುವ ದೊಡ್ಡಾಟ ಬಯಲಾಟ ತನ್ನದೇ ಆದ ಸಂಸ್ಕೃತಿಯ ಹಾದಿ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಅನೇಕ ಕಲಾವಿದರು ಇದನ್ನು ಬೆಳೆಸುತ್ತಾ ಉಳಿಸುತ್ತಾ ಸಾಗುತ್ತಿರುವ ದೃಷ್ಟಿಯಿಂದ ರಾಜ್ಯದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಉಳಿದುಕೊಂಡಿರುವುದು ಅನಿವಾರ್ಯ ಎಂಬ ಮಾತು ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹುಟ್ಟಿ ಬೆಳೆದು ಇಡೀ ಜಾನಪದ ಲೋಕದಲ್ಲಿ ಜಗತ್ತಿನಾದ್ಯಂತ ಪ್ರಸಿದ್ಧಿಯಾಗುತ್ತಿದೆ. ಇಂತಹ ಕಲೆಗೆ ಕಳೆದ ನಲವತ್ತು ವರ್ಷಗಳಿಂದ ಜೀವ ತುಂಬುತ್ತಾ ಬರುತ್ತಿರುವುದು ಜಿಲ್ಲೆಯ ಏಕೈಕ ಕಲಾವಿದ ಯಾಪಲದಿನ್ನಿಯ ಸಣ್ಣ ವೆಂಕಟೇಶ ರವರು.
ಮೂಲತಃ ಅಲೆಮಾರಿ ಜನಾಂಗದ ಚೆನ್ನದಾಸರ ಪರಿಶಿಷ್ಠ ಜಾತಿಗೆ ಸೇರಿದವರಾಗಿದ್ದು, ಕಳೆದ ನಲವತ್ತು ವರ್ಷಗಳಿಂದ ನಮ್ಮ ಉತ್ತರ ಕರ್ನಾಟಕದ ದೊಡ್ಡಾಟವಾದ ಬಯಲಾಟವನ್ನು ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಮ್ಮ ಜನಾಂಗದ ಪರಂಪರೆಯ ಸಂಕೇತವಾದ ಈ ಕರ್ನಾಟಕ ಪ್ರಸಿದ್ಧ ದೊಡ್ಡಾಟ ಬಯಲಾಟವನ್ನು ಕಲಿತು ಇಡೀ ತಾಲ್ಲೂಕು, ಜಿಲ್ಲೆ, ವಿಭಾಗ, ಹಾಗೂ ರಾಜ್ಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಈ ಕಲೆಯನ್ನು  ಇಡೀ ರಾಜ್ಯಕ್ಕೆ ವಿಸ್ತರಿಸಿ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸತತ ಪರಿಶ್ರಮ ಪಡುತ್ತಿದ್ದಾರೆ. ಅಲ್ಲದೆ  ಈ ಬಯಲಾಟದ ಮೂಲಕ ಹಳ್ಳಿಯಿಂದ ಹಿಡಿದು ರಾಜ್ಯಮಟ್ಟದ ವರೆಗೂ ಅನೇಕ ಪೌರಾಣಿಕ ನಾಟಕಗಳನ್ನು ಮಾಡಿಸಿ ಬಯಲಾಟ ಕಲೆಯನ್ನು ಉಳಿಸುತ್ತಾ ಜೀವನ ಸಾಗಿಸುತ್ತಿದ್ದಾರೆ.  ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಇಡೀ ರಾಜ್ಯಾದ್ಯಂತ ಬಹಳಷ್ಟು ಬಯಲಾಟ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದೇ ಅಕಾಡೆಮಿಗಳಿಂದ ಪ್ರಶಸ್ತಿಗಳಿಗೆ  ಪುರಸ್ಕೃತಗೊಂಡಿದ್ದಾರೆ.
ಅಲ್ಲದೆ ಇಡೀ ರಾಜ್ಯದ ಧಾರವಾಡ, ಗುಲ್ಬರ್ಗ, ಬೆಂಗಳೂರು ವಿಭಾಗದ ರಂಗಾಯಣದ ತರಬೇತಿದಾರರಿಗೆ ನಿರ್ದೇಶಕನಾಗಿ ಕಾರ್ಯನಿರ್ವಹಿಸಿ ಬಯಲಾಟದ ಮಹತ್ವವನ್ನು ಉಳಿಸುವ ಬೆಳೆಸುವ ಮೂಲಕ ನನ್ನ ಕಲೆಯನ್ನು ಪ್ರಮಾಣಿಕವಾಗಿ ಮಾಡಿದ್ದಾರೆ ಮೈಸೂರಿನ ದಸರಾ, ಕಲ್ಯಾಣ ಕರ್ನಾಟಕ ಉತ್ಸವ, ಜಾನಪದ ಉತ್ಸವ, ಇಲಾಖೆಗಳ ಅನೇಕ ಕಲಾಮೇಳಗಳಲ್ಲಿ ಭಾಗವಹಿಸಿ ಈ ಬಯಲಾಟವನ್ನು ಪ್ರಸ್ತುತ ಪಡಿಸಿ ದೊಡ್ಡಾಟ ಬಯಲಾಟದ ಕಲಾವಿದನಾಗಿ ಉಳಿಸುವ ನೆಲೆಯಲ್ಲಿ ಕಾರ್ಯತತ್ಪರತೆಯನ್ನು ಕಂಡುಕೊಂಡಿದ್ದಾರೆ. ಇವರ ಬಯಲಾಟ ಕಲೆಯನ್ನು , ನಾಟಕವನ್ನು ನಿರ್ದೇಶಿಸಿದ ಅನೇಕ ಕಾರ್ಯಕ್ರಮಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜಿಲ್ಲೆ, ರಾಜ್ಯ ಮಟ್ಟದ ಅನೇಕ ಖ್ಯಾತ ಕಲಾವಿದರಿಂದ ಗೌರವಕ್ಕೆ ಪಾತ್ರನಾಗಿದ್ದಾರೆ.
ಇಡೀ ರಾಯಚೂರು ಜಿಲ್ಲೆಯಲ್ಲಿ ದೊಡ್ಡಾಟ ಕಲೆಯಾದ ಬಯಲಾಟವನ್ನು ನಲವತ್ತು ವರ್ಷಗಳಿಂದ ಹರಡುತ್ತಾ, ಉಳಿಸುತ್ತಾ ಬಂದಿದ್ದೇನೆ, ಅಲೆಮಾರಿ ಜನಾಂಗದ ಈ ಬಡಪಾಯಿ ಕಲಾವಿದನಿಗೆ ಬೆಂಬಲವಾಗಿ ನಿಂತು ಈ 2024 ನೆಯ ಸಾಲಿನ  ಕರ್ನಾಟಕ ರಾಜ್ಯ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಕಲಾವಿದರನ್ನು ಆಯ್ಕೆ ಮಾಡಿ ಜಿಲ್ಲೆಗೆ   ರಾಜ್ಯದ ಮುಖ್ಯಮಂತ್ರಿ ಹಾಗೂ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಬೇಕಾಗಿ ತಮ್ಮಲ್ಲಿ ಗೌರವಪೂರಕವಾಗಿ ವಿನಂತಿಸಿಕೊಳ್ಳುತ್ತೇನೆ. ಇಡೀ ಜಿಲ್ಲೆಯ ಬಯಲಾಟದ ಏಕೈಕ ಕಲಾವಿದನಾಗಿ, ನಿರ್ದೇಶಕನಾಗಿ ಈ ಕಲೆಯನ್ನು ಉಳಿಸುತ್ತಾ ಬಂದಿದ್ದೇನೆ. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುತ್ತೀರಿ ಎನ್ನುವ ಮನದಾಳದ ಆಶಯದಿಂದ ಈ ಲೇಖನ  ಬರೆಯುತ್ತಿದ್ದೇನೆ.
ಇಡೀ ರಾಜ್ಯದಲ್ಲಿ ದೊಡ್ಡಾಟ ಕಲೆಯಾಗಿ ಬಯಲಾಟ ಗುರುತಿಸಿ ಕೊಂಡಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕಲೆಯಾಗಿ ಪ್ರಸಿದ್ಧಿಯಾಗಿದೆ. ಇನ್ನೂ ಹತ್ತಿರಕ್ಕೆ ಬಂದಾಗ ನಮ್ಮ ರಾಯಚೂರು ಜಿಲ್ಲೆ ಹೊರತು ಪಡಿಸಿದರೆ ಬೇರೆ ಯಾವ ಜಿಲ್ಲೆಯಲ್ಲೂ ಈ ಬಯಲಾಟ ಕಲೆ ಕಾಣಲಾಗುತ್ತಿಲ್ಲ.  ಅಲೆಮಾರಿ ಜನಾಂಗದ ಚೆನ್ನದಾಸರ ವಂಶ ಪರಂಪರೆಯಾಗಿ ಮೂಡಿ ಬಂದಂತಹ ಈ ಬಯಲಾಟ ಕಲೆಯನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ಬಯಲಾಟ ಕಲೆ ರಾಯಚೂರು ಬಿಟ್ಟರೆ ಬೇರೆ ಯಾವ ಜಿಲ್ಲೆಯಲ್ಲೂ ಈ ಕಲೆಯನ್ನು ಮತ್ತು ಕಲಾವಿದರನ್ನು ಕಾಣಲಾಗುತ್ತಿಲ್ಲ.
ಹಾಗಾಗಿ ಪ್ರಸ್ತುತ ದಿನಮಾನಗಳಲ್ಲಿ ಈ ಕಲೆ ಉಳಿಯಬೇಕಾದರೆ ನಮ್ಮ ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಗ್ರಾಮದ ಸಣ್ಣ ವೆಂಕಟೇಶ ರವರು ಮೂಲ ಕಾರಣವೆಂದೇ ಹೇಳಬೇಕು. ಹಾಗಾಗಿ ಸಣ್ಣ ವೆಂಕಟೇಶ ರವರು ಕಳೆದ ನಲವತ್ತು ವರ್ಷಗಳಿಂದ ಬಯಲಾಟ ಕಲೆಯನ್ನು ಎಲ್ಲಾ ಜಿಲ್ಲೆ, ರಾಜ್ಯ, ಹೊರನಾಡಿನಲ್ಲಿಯೂ ಈ ಬಯಲಾಟ ಕಲೆಯ ಬಗ್ಗೆ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಕಳೆದ 5-6 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿಯನ್ನು ಹಾಕಿದರೂ ಕಡೆಗಣಿಸುತ್ತಿರುವುದು ಸೋಜಿಗದ ಸಂಗತಿ. ಹಾಗಾಗಿ ನನ್ನೆಲ್ಲಾ ಬಂಧುಗಳೇ ನಾವೆಲ್ಲರೂ ಸಣ್ಣ ವೆಂಕಟೇಶ್ ಅವರಿಗೆ ಎಲ್ಲಾ ರೀತಿಯಿಂದಲೂ ಅಂದರೆ ರಾಜಕೀಯ, ಆರ್ಥಿಕ, ಸಮಾಜಿಕವಾಗಿ ಅವರಿಗೆ ಬೆಂಬಲ ನೀಡುವುದರೊಂದಿಗೆ ನಮ್ಮ ರಾಯಚೂರು ಜಿಲ್ಲೆಯ ಎಲ್ಲಾ ಅಧಿಕಾರಿಗಳನ್ನು, ರಾಜಕೀಯ ಗಣ್ಯರನ್ನು ಭೇಟಿ ಮಾಡಿ ವೆಂಕಟೇಶ ಅವರ ಬಯಲಾಟ ಕಲೆಯ ಸಾಧನೆಯನ್ನು ತಿಳಿಸಿ ಮನವರಿಕೆ ಮಾಡಿಕೊಡಬೇಕು. ಇಂತಹ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಹಕರಿಸಿದಾಗ ಒಬ್ಬ ವ್ಯಕ್ತಿಗೆ ಸಹಾಯ ಮಾಡಿದ ಸಂತೃಪ್ತಿ ಸಿಗುತ್ತದೆ. ಇಂದು ಎಲ್ಲರೂ ಒಬ್ಬನಿಗಾಗಿ ನಾಳೆ ಒಬ್ಬನು ಎಲ್ಲರಿಗಾಗಿ ಎನ್ನುವ ಮಾತಿನಂತೆ ಎಲ್ಲರೂ ಸಣ್ಣ ವೆಂಕಟೇಶ್ ಬಯಲಾಟ ಕಲಾವಿದ ಯಾಪಲದಿನ್ನಿ ಅವರಿಗೆ ಬೆಂಬಲ ನೀಡಬೇಕಾಗಿದೆ.
ರಾಯಚೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನ ಹಳ್ಳಿಗಳಲ್ಲಿ ನಿರಂತರವಾಗಿ ಬಯಲಾಟದ ವೇದಿಕೆಗಳನ್ನು ಸೃಷ್ಟಿಸುತ್ತಾ, ಅನೇಕ ಕಲಾವಿದರನ್ನು ಬೆಳೆಸುತ್ತಾ, ಇಂತಹ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಅವರ ಪರಿಶ್ರಮ ಸಾಧನೆಗೆ ಅರ್ಹವಾಗಿದೆ. ಪ್ರತಿಹಳ್ಳಿಯಲ್ಲೂ ಈಗಲೂ ಸಾವಿರಾರು ಬಯಲಾಟ ಪ್ರದರ್ಶನಗಳನ್ನು ಮಾಡುತ್ತಾ ಬಂದಿದ್ದು ಕಲೆಯೇ ಅವರ ಉಸಿರೆಂದು ಭಾವಿಸಿ ಬದುಕು ಸಾಗಿಸುತ್ತಿರುವ ಜಿಲ್ಲೆಯ ಪ್ರಮಾಣಿಕ ನಿಷ್ಠಾವಂತ ಏಕೈಕ ಕಲಾವಿದ ಸಣ್ಣ ವೆಂಕಟೇಶ್ ಕಟ್ಟಿಮನಿಯವರು. ಇವರು ಈಗಾಗಲೇ ಪ್ರಸಿದ್ಧ ವೇದಿಕೆಗಳಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದು ಸಮಾಜ ಸೇವಕರು, ರಾಜಕಾರಣಿಗಳು, ಅಧಿಕಾರಿ ವರ್ಗದವರು ಈಗಾಗಲೇ ಗೌರವ ನೀಡಿ ಸನ್ಮಾನಿಸಿದ್ದಾರೆ.‌ ಹಾಗಾಗಿ ಅವರ ಜೀವನೋಪಾಯಕ್ಕಾಗಿ ಬಯಲಾಟವನ್ನೇ ಜೀವನ ಎಂದು ಸಾಗಿಸುತ್ತಿರುವ ಇವರಿಗೆ ಜಿಲ್ಲೆಯ ಎಲ್ಲಾ ಕಲಾವಿದರು, ರಾಜಕಾರಣಿಗಳು, ಸಮಾಜ ಸೇವಕರು, ಹೋರಾಟ ವರ್ಗದವರು, ಜಾನಪದ ಕಲಾವಿದರು, ಮಾಧ್ಯಮ ಮಿತ್ರರು, ಪತ್ರಕರ್ತರು ಇವರ ಕಲೆಗೆ ಪ್ರೊತ್ಸಾಹ ನೀಡಿ ರಾಜ್ಯೋತ್ಸವ ಪ್ರಶಸ್ತಿಗೆ ಪೂರಕವಾಗಿ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ನಮ್ಮೆಲ್ಲರ ಆಶಯವಾಗಿದೆ..
ಡಾ. ಶರಣಪ್ಪ ಗಬ್ಬೂರು
ಉಪನ್ಯಾಸಕರು, ಕವಿಗಳು

About The Author