ಕರ್ನಾಟಕ ರಾಜಕಾರಣದ ಅಸ್ಮಿತೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಎಂದರೆ ಅದೊಂದು 40 ವರ್ಷಗಳ ಪರಿಶುದ್ಧ, ಪವಿತ್ರ,ಪ್ರಾಮಾಣಿಕ, ಬದ್ಧತೆಯ, ಮಾನವೀಯ ಮೌಲ್ಯಗಳ  ಜೀವನಕ್ಕಾಗಿ ಜನ ನೀಡಿದ ಆಶೀರ್ವಾದ.

 

ಗ್ರಾಮೀಣ ಪರಿಸರದ ರೈತಾಪಿ ಕುಟುಂಬದಲ್ಲಿ ಜನಿಸಿ, ಬಿಡುಗಾಸಿಲ್ಲದೆ ತತ್ವಾದರ್ಶಗಳಿಂದ ರಾಜಕೀಯ ಪ್ರವೇಶಿಸಿ ರಾಜಕಾರಣದ ಉತ್ತುಂಗಕ್ಕೇರಿದವರು.ಸಿದ್ದರಾಮಯ್ಯರವರು ತನ್ನ ಸುತ್ತಲಿನ ಬಡವರ,ತಳ ಸಮುದಾಯಗಳ ಭೀಕರ ಅಸಹಾಯಕತೆ, ಅವಮಾನಗಳು, ಅಸ್ಪೃಶ್ಯತೆ ಮತ್ತು ಸಂಕಟಗಳನ್ನು ತೀರಾ ಹತ್ತಿರದಿಂದ
ನೋಡಿದವರು,ಅನುಭವಿಸಿದವರು.ಸಾರ್ವಜನಿಕ ಹಣ,ಸಂಪತ್ತು ಸರ್ಕಾರದ ಸವಲತ್ತು,ಉದ್ಯೋಗ ಇವುಗಳೆಲ್ಲವೂ ಎಲ್ಲರಿಗೂ ತಲುಪಬೇಕು ಬಡವರ ಕೈಗೂ ಎಟುಕಬೇಕು ಎಂಬುದು ಸಿದ್ದರಾಮಯ್ಯರವರ ಸಾಮಾಜಿಕ ನ್ಯಾಯಪರ ಕಾಳಜಿ.
ಸಿದ್ದರಾಮಯ್ಯರವರು ಮಂತ್ರಿಯಾಗಿ ಉಪಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಮತ್ತು ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತವಾಗಿ ಕರ್ನಾಟಕದಲ್ಲಿ ಅಭಿವೃದ್ಧಿ ರಾಜಕಾರಣಕ್ಕೆ ಚಾಲನೆ ನೀಡಿದವರು.

ಕೌಟಿಲ್ಯನ ಅರ್ಥಶಾಸ್ತ್ರ, ಗಾಂಧೀಜಿಯ ಸರ್ವೋದಯ, ಅಂಬೇಡ್ಕರ್ ಅಂತ್ಯೋದಯ, ಲೋಹಿಯಾರ ಕಲ್ಯಾಣ ರಾಜ್ಯ ಮೊದಲದ ಮೌಲ್ಯಗಳನ್ನು ಸಿದ್ದರಾಮಯ್ಯರವರ ಆಡಳಿತದಲ್ಲಿ ಕಾಣಬಹುದಾಗಿದೆ.ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ವಿಶೇಷ ಮಹತ್ವ ಹೊಂದಿರುವ ಅಪೂರ್ವ ಜನನಾಯಕ ಮತ್ತು ಮುತ್ಸದ್ಧಿಯಾಗಿದ್ದಾರೆ.

ಬಹಳಷ್ಟು ಮುಖ್ಯಮಂತ್ರಿಗಳು ಆಳಿದ್ದರೂ ಸಹ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು,ರಾಮಕೃಷ್ಣ ಹೆಗಡೆ ಹಾಗೂ ಸಿದ್ದರಾಮಯ್ಯ ಪ್ರಮುಖರೆನಿಸುತ್ತಾರೆ. ಸಿದ್ದರಾಮಯ್ಯರವರು ಓದು, ಬರಹ,ಚಿಂತನೆಗಳೊಂದಿಗೆ ಸಾಹಿತ್ಯ, ಸಂಸ್ಕೃತಿಯ ಪೋಷಕರು ಹೌದು. ಅವರತನದ ಭಾಷಣಗಳು ಈ ಕಾರಣಕ್ಕೆ ಜನರಿಗೆ ಅತಿ ಆಪ್ತವೆನಿಸುವುದು.

ಕರ್ನಾಟಕವನ್ನು ಮಾನವೀಯ, ಪ್ರಗತಿಪರ ರಾಜ್ಯವಾಗಿಸಬೇಕೆಂಬ ಮಹಾದಾಶಯದೊಂದಿಗೆ ಶ್ರಮಿಸುತ್ತಿರುವ ಕ್ರಿಯಾಶೀಲ ರಾಜಕಾರಣಿ ಎಂದರೇ ತಪ್ಪಾಗಲಾರದು.ಮುಖ್ಯಮಂತ್ರಿಯಾಗಿ ಕೈಗೊಂಡ ಕ್ರಮಗಳು ಮಹಾನ್ ಸಂತರು ಮತ್ತು ಮುತ್ಸದ್ದಿಗಳ ಬದುಕಿನಿಂದ ಪ್ರಭಾವಿತವಾದವಾಗಿವೆ.ಆಡಳಿತ ಸರ್ಕಾರದ ನಡೆ ಮತ್ತು ನುಡಿಗಳೆರಡು ಒಂದೇ ಆಗಿರುವ ಹಿನ್ನೆಲೆಯಲ್ಲಿ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ಘೋಷಿಸಿ ಪೋಷಿಸುತ್ತಿದ್ದಾರೆ. ಸಾಮಾಜಿಕ ನೆಲೆಯಲ್ಲಿ ಸಿದ್ದರಾಮಯ್ಯ ರೂಪಿಸಿದ ಹಲವಾರು ಯೋಜನೆಗಳು ಇಡೀ ರಾಷ್ಟ್ರದಲ್ಲಿಯೇ ವಿನೂತನವೆನಿಸಿವೆ.
ದಕ್ಷ ಆಡಳಿತಗಾರರೆನಿಸಿಕೊಂಡರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಅಧಿಕಾರ ವ್ಯಾಪ್ತಿಯಲ್ಲಿ ಅನವಶ್ಯಕ ಹಸ್ತಕ್ಷೇಪ ಮಾಡುವವರಲ್ಲ, ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಮಾರ್ಗದರ್ಶನ ಮಾಡುವಂತಹವರು.

 

ಅಭಿವೃದ್ಧಿಯಲ್ಲಿ ಎಂದಿಗೂ ರಾಜಕೀಯ ಬೆರೆಸದೆ,ದ್ವೇಷ ರಾಜಕಾರಣ,ಪಕ್ಷಪಾತ ನೀತಿ ಇದಾವುದನ್ನು ಮಾಡದೆ ಅಭಿವೃದ್ಧಿ ಮಾಡಿದವರಾಗಿದ್ದಾರೆ. ರಾಜಕೀಯವನ್ನು ಎಲ್ಲಿಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಬೆರೆಸುತ್ತೇವೆಯೋ, ಪಕ್ಷದ ವಾತಾವರಣ ಉಂಟುಮಾಡುತ್ತೇವೆಯೋ, ಅಲ್ಲಿಯವರೆಗೂ ನಾವು ದೇಶದ ಪ್ರಗತಿ ಕಾಣಲು ಸಾಧ್ಯವಿಲ್ಲ ಎಂಬ ಧ್ಯೇಯ ಹೊಂದಿದವರಾಗಿದ್ದಾರೆ. ಇಂತಹ ಆದರ್ಶ ರಾಜಕಾರಣಿ ಈಗ ದ್ವೇಷ ರಾಜಕಾರಣದಲ್ಲಿ ಸಿಲುಕಿರುವುದು ದುರಂತ.

ಹಣ,ಆಸ್ತಿ ಮಾಡುವ ಉದ್ದೇಶ ಸಿದ್ದರಾಮಯ್ಯ ರವರಿಗೆ ಇದ್ದಿದ್ದರೆ ರಾಜಕೀಯದ ಕೊನೆ ದಿನಗಳವರೆಗೆ ಕಾಯುವ ಅಗತ್ಯವಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಎಲ್ಲಾ ಕಪ್ಪುಚುಕ್ಕೆ ಹೊಂದಿದ ರಾಜಕಾರಣಿಗಳು ಇಂದು ಬಿಳಿ ಹಾಳೆಯಂತಹ ಸಿದ್ದರಾಮಯ್ಯರಿಗೆ ಕಪ್ಪುಚುಕ್ಕೆ ಇಡಲು ಪ್ರಯತ್ನಿಸುತ್ತಿರುವುದು ದ್ವೇಷ ರಾಜಕಾರಣದ ಉದಾಹರಣೆಯಾಗಿ ಕಾಣುತ್ತಿದೆ.
*********
ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ದೇವರಾಜ ಅರಸು ಅವರ ರೀತಿಯೇ  ವ್ಯವಸ್ಥಿತ ಸಂಚನ್ನು ರೂಪಿಸಲಾಗಿದ್ದು,ದಿಲ್ಲಿಯ ನಾಯಕತ್ವವು ಇದರ ಹಿಂದೆ ಕಾಣುತ್ತಿದೆ. ಇಂತಹ ಸನ್ನಿವೇಶ ನೋಡುತ್ತಿದ್ದರೆ ಎಲ್ಲಾ ಹಿಂದುಳಿದ ಶೋಷಿತ ವರ್ಗಗಳೆಲ್ಲವು ಸಿದ್ದರಾಮಯ್ಯ ಅವರನ್ನು ರಕ್ಷಿಸಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ. ಹಾಗೆಯೇ ಧ್ವನಿ ಇಲ್ಲದವರ ಧ್ವನಿಯಾಗಿದ್ದಕ್ಕೆ ಈ ಪರಿ ಧ್ವನಿ ಅಡಗಿಸುವ ನಡೆಗಳಿಗೆ ಸರ್ವರೂ ಸೇರಿ ಸಿದ್ದರಾಮಯ್ಯರ ಧ್ವನಿ ಆಗಬೇಕಿದೆ. ಮತ್ತಷ್ಟು ಕಾಲ ಬೆಳಕಿಲ್ಲದವರ ಬೆಳಕಾಗಲು ಸಿದ್ದರಾಮಯ್ಯರವರನ್ನು ಉಳಿಸಿಕೊಳ್ಳಬೇಕಿದೆ.
**************
ಇಂತಹ ಧೀಮಂತ,ಮುತ್ಸದಿ ನಾಯಕನನ್ನು ಮಣಿಸಲು ಇಷ್ಟು ಕುತಂತ್ರ,ಷಡ್ಯಂತ್ರಗಳು ನಡೆಯುತ್ತಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಸಾಮಾನ್ಯ ಶೋಷಿತ ಜನರು ರಾಜಕಾರಣದಲ್ಲಿ ಗುರುತಿಸಿಕೊಳ್ಳಲಾದೀತೇ, ಅಧಿಕಾರಕ್ಕೇರಲು ಸಾಧ್ಯವಾದೀತೇ, ಸಾಮಾಜಿಕ ನ್ಯಾಯ ಎತ್ತಿಹಿಡಿಯಲಾದೀತೇ, ಕನ್ನಡಿಗರ ಅಭ್ಯುದಯ ಕಾಣಲಾದೀತೇ ಎಂಬಿತ್ಯಾದಿ ಅಂಶಗಳೆಲ್ಲವೂ ಉದ್ಭವಿಸುತ್ತಿದೆ. ಇದೆಲ್ಲವೂ ಮುಂದಿನ ದಿನಗಳಲ್ಲಿ ಸಾಧ್ಯವಾಗಬೇಕೆಂದರೆ ಕರ್ನಾಟಕದ ಪ್ರಜ್ಞಾವಂತ ನಾಗರೀಕರು ಶೋಷಣೆಗಳನ್ನುಂಡು ಆಶಾಕಿರಣವಾಗಿರುವ ಸಿದ್ದರಾಮಯ್ಯರನ್ನು ರಾಜಕಾರಣದಲ್ಲಿ ರಕ್ಷಿಸಿಕೊಂಡು ಶೋಷಿತರ ರಾಜಕಾರಣಕ್ಕೆ ಭದ್ರಬುನಾದಿ ಹಾಕಿಕೊಳ್ಳಬೇಕಿದೆ ಇದು ಅನಿವಾರ್ಯತೆಯು ಹೌದು,ಕರ್ತವ್ಯವು ಹೌದು!
**************
ಬುದ್ಧರ ಆಶಯಗಳೊಡನೆ ಬಸವಣ್ಣರ ಅನುಭವ ಮಂಟಪದ ಪ್ರತಿಪಾದಕರಾಗಿ,ಅಂಬೇಡ್ಕರರ ದೂರ ದೃಷ್ಟಿಯನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯರು ಪ್ರಸ್ತುತದಲ್ಲಿ ಕರ್ನಾಟಕ ರಾಜಕಾರಣದ ವಜ್ರ ಹಾಗೂ ಶೋಷಿತ ರಾಜಕಾರಣದ ಅಸ್ಮಿತೆ.ನೆಲ,ಜಲ,ಭಾಷೆಗೆ ಸಂಬಂಧಿಸಿದಂತೆ ಭವಿಷ್ಯದ ದಿನಗಳಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡುವ ಸರ್ವಾಂಗೀಣ ಅಭಿವೃದ್ಧಿ,ಸಮಾನತೆಗೆ ಮತ್ತೊಂದು ಹೆಸರಾಗಿ ಕರ್ನಾಟಕವನ್ನು ರೂಪಿಸುವ ಕನಸು ಹೊತ್ತಿರುವ ಸಿದ್ದರಾಮಯ್ಯರಿಗೆ ಹೆಗಲಾಗಬೇಕಿದೆ ಕನ್ನಡಿಗರು.
***********
ಜನಹಿತಕ್ಕಾಗಿ ಆಡಳಿತದಲ್ಲಿ ಪ್ರಯೋಗಶೀಲತೆ ಅಳವಡಿಸಿಕೊಂಡ ರಾಜಕಾರಣಿ ಸಿದ್ದರಾಮಯ್ಯ. ತನ್ನ ಸ್ವಂತ ಮಗ ರಾಕೇಶ್ ಸಾವಿಗೀಡಾದ ಕೆಲ ದಿನದಲ್ಲೇ ಆಡಳಿತದೆಡೆಗೆ ಗಮನಹರಿಸಿದ ಬದ್ಧತೆಯ ನಾಯಕ. ಆರ್ಥಿಕ ಕ್ಷೇತ್ರದಲ್ಲಿಯೂ ಸಾಮಾಜಿಕ ನ್ಯಾಯ ಒದಗಿಸಿದವರಾಗಿದ್ದು, ಹಣಕಾಸು ಬಜೆಟ್ ಮಂಡನೆಯಲ್ಲಿ ಅದ್ವಿತೀಯ ಸಾಧಕರು ಹೌದು, ವಿಶ್ವ ಬ್ಯಾಂಕ್ ತಂಡದವರು ಸಿದ್ದರಾಮಯ್ಯ ಕಾಲದಲ್ಲಿ ಕರ್ನಾಟಕ ರಾಜ್ಯದ ಆರ್ಥಿಕ ನಿರ್ವಹಣೆ ಉತ್ತಮವಾಗಿದೆ ಎಂದು ಪ್ರಶಂಸಿಸಿದ್ದಾರೆ.
*************
ಸಂಪನ್ಮೂಲ ಕ್ರೂಢೀಕರಣ, ಯೋಜನಾ ವೆಚ್ಚ ನಿರ್ವಹಣೆ ಮತ್ತು ತೆರಿಗೆ ವಸೂಲಿ ಮುಖಾಂತರ ಆರ್ಥಿಕತೆ ಬೆಳವಣಿಗೆಗೆ ಈ ಮೂರು ವಿಚಾರಗಳಲ್ಲಿ ಕರ್ನಾಟಕ ಬಹಳ ಉತ್ತಮ ಕೆಲಸ ಮಾಡಲು ಸಿದ್ದರಾಮಯ್ಯನವರ ಪರಿಶ್ರಮ ಬಹಳ ಮುಖ್ಯ ಕಾರಣ ಎಂದು ಅಂದಿನ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ.ಪಂತ್ ಪ್ರಶಂಸೆ ಮಾಡಿದ್ದಾರೆ.2013ರಲ್ಲಿ ಮೊದಲಿಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಂದೆ ಬಡ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ಘೋಷಿಸಿದರು. ಅನ್ನಭಾಗ್ಯ,ಹಾಲು ಉತ್ಪಾದಕರ ಪ್ರೋತ್ಸಾಹ ಧನ,ಬಡವರ ಮನೆ ನಿರ್ಮಾಣಕ್ಕಾಗಿ ಸಹಾಯಧನ ಹೀಗೆ ಹಲವಾರು ಯೋಜನೆಗಳ ವಿತರಕರಾಗಿದ್ದಾರೆ. ಇವರ ಅನ್ನಭಾಗ್ಯ ಮತ್ತು ಋಣಮುಕ್ತ ಯೋಜನೆಗಳು ಬಡವರಿಗೆ ಆರ್ಥಿಕತೆ ಮತ್ತು ಆಹಾರ ಸುರಕ್ಷತೆ ಒದಗಿಸಿದವು. ಇಂದಿರಾ ಕ್ಯಾಂಟೀನ್,ವಸತಿ ಭಾಗ್ಯ, ಕ್ಷೀರಭಾಗ್ಯ,ಭಾಗ್ಯಜ್ಯೋತಿ, ಮನಸ್ವಿನಿ,ಸಾಂತ್ವನ,ಮೈತ್ರಿ, ವಿದ್ಯಾಸಿರಿ ಮೊದಲಾದ ಯೋಜನೆಗಳು ತಳ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿವುದರೊಂದಿಗೆ ಸಾಮಾಜಿಕ ಭದ್ರತೆ ಒದಗಿಸಿದ ಸರ್ಕಾರವಾಯಿತು.
***************
ಅಭಿವೃದ್ಧಿ ಅಸಮತೋಲನ ನಿವಾರಿಸಿ ಅಲಕ್ಷಿತ ಜನ ವರ್ಗಗಳ ಅಭಿವೃದ್ಧಿಗೆ ಜಾತ್ಯಾತೀತವಾಗಿ ಸ್ಪಂದಿಸಿದ ಸರ್ಕಾರವಾಗಿದೆ.
ಪ್ರಸ್ತುತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಗೃಹಜೋತಿ,ಗೃಹಲಕ್ಷ್ಮಿ,ಶಕ್ತಿ ಉಚಿತ ಪ್ರಯಾಣ,ಯುವನಿಧಿಗಳೆಂಬ ಗ್ಯಾರಂಟಿ ಯೋಜನೆ ನೀಡಿ ಸರ್ವರಿಗೂ ಅನುಕೂಲ ನೀಡಿದ ಮುಖ್ಯಮಂತ್ರಿಯಾಗಿದ್ದಾರೆ. ಅಲಕ್ಷಿತ ಜನ ವರ್ಗಗಳ ಮಾನವ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ನ್ಯಾಯೋಚಿತ ಅವಕಾಶ ದೊರಕಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುವ ಸಿದ್ದರಾಮಯ್ಯರು ಮುಖ್ಯಮಂತ್ರಿ ಆಗಿ ಮತ್ತಷ್ಟು ಕಾಲ ಆಡಳಿತ ನಡೆಸಬೇಕೆಂಬುದು ಶೋಷಿತ ವರ್ಗಗಳೆಲ್ಲರೊಂದಿಗೆ ಎಲ್ಲಾ ಪ್ರಜ್ಞಾವಂತ ನಾಗರೀಕರ ಬಯಕೆ.
ಹಣ,ಜಾತಿ,ಧರ್ಮ,ಕೋಮುವಾದ,ದ್ವೇಷ,ಸುಳ್ಳುಗಳಿಂದ ಆವೃತವಾಗಿರುವ ರಾಜಕಾರಣದಲ್ಲಿ  ಸಿದ್ದರಾಮಯ್ಯರಂತಹ ಮಾನವೀಯ ಮೌಲ್ಯಗಳೊಂದಿಗೆ ರಾಜಕಾರಣ ಮಾಡುವ ಮನೋಧರ್ಮ ನಿಜಕ್ಕೂ ಎಲ್ಲರಿಗೂ ಅನುಕರಣೀಯ.
ಅವರ ಈ ಚಿಂತನೆಗಳನ್ನು ರಾಜಕಾರಣಿಗಳು ಅತಿ ಜರುರಾಗಿ ಅರ್ಥೈಸಿಕೊಳ್ಳುವ ಅವಶ್ಯವಿದೆ.
**************
ಅದೇನೆ ಇರಲಿ ಆದರೆ ಗ್ರಾಮೀಣ ಸೊಗಡಿನ,ಆದರ್ಶ,ನೇರ ನಡೆ-ನುಡಿಯ,ಸಾದಾ,ಹಮ್ಮು ಬಿಮ್ಮಿಲ್ಲದ,ಸಮಾಜವಾದಿ, ಮಾನವತಾವಾದಿ,ಬಡತನವನ್ನು ಅನುಭವಿಸಿ ಬಂದಿರುವ,ಜನರ ನೋವು ನಲಿವು ಅರಿತಿರುವ,ದೂರದೃಷ್ಟಿ ಹೊಂದಿರುವ,ರಾಜಕಾರಣದ ಪವಿತ್ರತೆ ಕಾಪಾಡಿಕೊಂಡು ಸಾಗಿ ಬಂದಿರುವ,ದ್ವೇಷ ರಹಿತ,ಸ್ನೇಹ ಸಹಿತ,ಜನಪರ ನಿಲುವುಗಳ, ಕನ್ನಡದ ವರ ಪುತ್ರ ಸಿದ್ದರಾಮಯ್ಯ  ರಾಜಕಾರಣ ಪ್ರಸ್ತುತತೆಯ ಅನಿವಾರ್ಯ ಹಾಗೂ ಭವಿಷ್ಯದ ಮಾದರಿ ಎಂಬುದು ಕರ್ನಾಟಕ ರಾಜಕಾರಣದ ವಾಸ್ತವ..!
*************
ನಿಮ್ಮ ಜೊತೆ ನಾವಿದ್ದೇವೆ ಧೈರ್ಯವಾಗಿ ಹೋರಾಡಿ ಎಂದು ಕೋರ್ಟ್ ಆದೇಶದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಕರೆ ಮಾಡಿ ರಾಜಕೀಯದಲ್ಲಿ ಇಂತಹ ಷಡ್ಯಂತ್ರ ಹಾಗೂ ಸವಾಲು ಸಹಜ.ಸಮರ್ಥವಾಗಿ ಎದುರಿಸಿ ಹೊರಬನ್ನಿ ಹೈಕಮಾಂಡ್ ಮತ್ತು ಜನತೆ ನಿಮ್ಮ ಜತೆ ಇದ್ದಾರೆ ಎಂದಿದ್ದಾರೆ.
***********
ಕರ್ನಾಟಕದ ಜನತೆಯು ಸಿದ್ದರಾಮಯ್ಯರ ಪರವಾಗಿ ಅನೇಕ ಪ್ರತಿಭಟನೆ,ಬೆಂಬಲವಾಗಿ ನಿಂತಿದ್ದಾರೆ.ಸಿದ್ದರಾಮಯ್ಯರಂತಹ ನಾಯಕರು ಆಡಳಿತ ನಡೆಸಬೇಕು ಎಂಬ ಅಭಿಯಾನ ನಡೆಯುತ್ತಿದೆ. ಸರ್ವರ ಅಭಿವೃದ್ಧಿಗಾಗಿ ಸಾಮಾಜಿಕ ನ್ಯಾಯದ ವಿತರಣೆ ಮಾಡಿದ ನಾಯಕ ನಮ್ಮನ್ನಾಳಬೇಕು ಎಂಬ ಘೋಷ ವಾಕ್ಯಗಳು ಮೊಳಗುತ್ತಿವೆ.
************
ಅಂದಿನ ಹುಬ್ಬಳ್ಳಿಯ ಅಹಿಂದ ಸಮಾವೇಶದಿಂದ ಹಿಡಿದು ದಾವಣಗೆರೆಯಲ್ಲಿ ಜರುಗಿದ ಸಿದ್ದರಾಮೋತ್ಸವ, ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶ ಇವೆಲ್ಲವೂ ಅಂದಿನಿಂದ ಇಂದಿನವರೆಗೂ ಸಿದ್ದರಾಮಯ್ಯರ ಜನಪ್ರಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇದರಿಂದ ಸಿದ್ದರಾಮಯ್ಯ ಜನರ ನಡುವಿನ ನಾಯಕ ಎಂಬುದು ಅರಿವಿಗೆ ಬರುತ್ತದೆ.
***********
ಸೈದ್ಧಾಂತಿಕವಾಗಿ ಸಿದ್ದರಾಮಯ್ಯರು ಎಷ್ಟು ಗಟ್ಟಿತನದಿಂದ ಇದ್ದಾರೆ ಎಂಬುದಕ್ಕೆ ಸಿದ್ದರಾಮಯ್ಯರಿಗೆ ಸಿದ್ದರಾಮಯ್ಯರು ಮಾತ್ರವೇ ಸಾಟಿಯಾಗಲು ಸಾಧ್ಯ.ಸಿದ್ದರಾಮಯ್ಯರವರ ಸ್ವಂತ ಸಹೋದರರು ಇಂದಿಗೂ ಸಣ್ಣ ರೈತರು, ಅವರ ಕುಟುಂಬಸ್ಥರು ಕೃಷಿಕರು ಎಂಬುದು ಅವರ ನಡೆ-ನುಡಿಗೆ ಸ್ಪಷ್ಟೀಕರಣವಾಗಿ ಗೋಚರಿಸುತ್ತದೆ.
ಲೇಖಕರು
ಡಾ.ಹೆಚ್.ಬೀರಪ್ಪ
ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕರು ಹಾಗೂ ರಾಜಕೀಯ ವಿಶ್ಲೇಷಕರು.

About The Author