ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿದ ಬಸವಣ್ಣನವರ ಕರ್ಮಭೂಮಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡ ಸಂತಸದ ಕ್ಷಣಗಳು : ಮುಕ್ಕಣ್ಣ ಕರಿಗಾರ

ಆಚರಣೆ-ಅನುಭವ

ಪ್ರಜಾಪ್ರಭುತ್ವದ ಬೀಜಗಳನ್ನು ಬಿತ್ತಿದ ಬಸವಣ್ಣನವರ ಕರ್ಮಭೂಮಿಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪಾಲ್ಗೊಂಡ ಸಂತಸದ ಕ್ಷಣಗಳು

ಮುಕ್ಕಣ್ಣ ಕರಿಗಾರ

ಸೆಪ್ಟೆಂಬರ್ 15 ರ ದಿನವನ್ನು ‘ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಯನ್ನಾಗಿ ಆಚರಿಸಲಾಗುತ್ತಿದೆ.ವಿಶ್ವಸಂಸ್ಥೆಯು ಸೆಪ್ಟೆಂಬರ್ 15 ಅನ್ನು ‘ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಎಂದು ಘೋಷಿಸಿದ್ದರಿಂದ 2008 ರಿಂದ ಸೆಪ್ಟೆಂಬರ್ 15 ರಂದು ವಿಶ್ವದಾದ್ಯಂತ ಪ್ರಜಾಪ್ರಭುತ್ವದಿನವನ್ನಾಗಿ ಆಚರಿಸಲಾಗುತ್ತಿದೆ.ಇಂದು ಕರ್ನಾಟಕದಲ್ಲಿ ರಾಜ್ಯಸರಕಾರದ ಅದರಲ್ಲೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಾನ್ಯ ಡಾ.ಎಚ್ ಸಿ ಮಹಾದೇವಪ್ಪನವರ ವಿಶೇಷ ಕಾಳಜಿ,ಆಸಕ್ತಿಯ ಕಾರಣದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣದ ಕನಸಿನ ತತ್ತ್ವಗಳಾದ ಸಮಾನತೆ,ಸಹೋದರತೆ ಮತ್ತು ಸರ್ವೋದಯ ಮೌಲ್ಯಗಳ ಬಗ್ಗೆ ನಾಡಿನ ಜನತೆಯಲ್ಲಿ ಪ್ರಜ್ಞೆಯನ್ನು ಮೂಡಿಸುವ ಉದ್ದೇಶದಿಂದ ಬಾಂಧವ್ಯದ ಬೆಸುಗೆಯ ಸಂಕೇತವಾಗಿ ಅತಿದೊಡ್ಡ ಮಾನವ ಸರಪಳಿಯನ್ನು ಏರ್ಪಡಿಸಲಾಗಿತ್ತು.ಬೀದರನಿಂದ ಚಾಮರಾಜನಗರದವರೆಗೆ 2500 ಕಿಲೋಮೀಟರ್ ಗಳ ಉದ್ದದ 25 ಲಕ್ಷ ಜನರ ಪಾಲ್ಗೊಳ್ಳುವಿಕೆಯ ಅತಿದೊಡ್ಡ ಮಾನವಸರಪಳಿ ಕಾರ್ಯಕ್ರಮವನ್ನು ಇಂದು ಕರ್ನಾಟಕ ಸರಕಾರವು ಆಯೋಜಿಸಿತ್ತು.

ಕಾರ್ಯಕ್ರಮದ ಪ್ರಾರಂಭದ ಮುಂಚಿನ ದಿನಗಳಲ್ಲಿ ಬೀದರನಿಂದ ಚಾಮರಾಜನಗರದವರೆಗೆ ಮಾನವಸರಪಳಿಯನ್ನು ಆಯೋಜಿಸಲು ನಿರ್ಧರಿಸಲಾಗಿತ್ತು.ಆದರೆ ‘ಬಸವಪ್ರಜ್ಞೆ’ ಯ ಪ್ರಸಾರದಲ್ಲಿ ಅತೀವ ಆಸಕ್ತಿ,ಶ್ರದ್ಧೆಗಳುಳ್ಳ ಬಸವಾನುಯಾಯಿಗಳಾದ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆಯವರ ಆಸಕ್ತಿ ಮತ್ತು ಪ್ರಯತ್ನದ ಫಲವಾಗಿ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಯಾಗಿ ಬೀದರಜಿಲ್ಲೆಯ ಬಸವಕಲ್ಯಾಣದಿಂದ ಚಾಮರಾಜನಗರದವರೆಗೆ ಮಾನವಸರಪಳಿ ಆಯೋಜಿಸಲಾಯಿತು.ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆಯವರ ಆಲೋಚನೆಯು ನಾಡಿಗೆ ಒಂದು ಮಹತ್ವದ ಸಂದೇಶವನ್ನು ಸಾರಿದ ಸಮಯೋಚಿತ ನಿರ್ಧಾರವಾಗಿತ್ತು.ಬಸವಕಲ್ಯಾಣವು ವಿಶ್ವದ ಮಹಾನ್ ದಾರ್ಶನಿಕ,ಮೇರುಪುರುಷ ಬಸವಣ್ಣನವರ ಕರ್ಮಭೂಮಿ,ಕಾರ್ಯಕ್ಷೇತ್ರ.ಸುಮಾರು ಎಂಟು ನೂರಾ ಐವತ್ತು ವರ್ಷಗಳ ಹಿಂದೆಯೇ ಬಸವಣ್ಣನವರು ಈ ನೆಲದಲ್ಲಿ ಪ್ರಜಾಪ್ರಭುತ್ವದ ಸತ್ತ್ವಯುತ ಬೀಜಗಳನ್ನು ಬಿತ್ತಿದ್ದರು.ಹದಿನಾರನೇ ಶತಮಾನದಿಂದೀಚೆಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಾತಂತ್ರದ ಗಾಳಿ ಬೀಸುತ್ತಿದೆ.ಆದರೆ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲೇ ಅದೂ ರಾಜಪ್ರಭುತ್ವದ ಕಾಲಘಟ್ಟದಲ್ಲಿಯೇ ಕರುನಾಡಿನ ಈ ನೆಲದಲ್ಲಿ ಸ್ವಾತಂತ್ರ್ಯ,ಸಮಾನತೆ ಮತ್ತು ಸರ್ವೋದಯ ಪರಿಕಲ್ಪನೆಗಳನ್ನು ಪರಿಚಯಿಸಿದ್ದರಲ್ಲದೆ ಸ್ವಯಂ ಅನುಷ್ಠಾನ ಮಾಡಿದ್ದರು.ಇಂದು ಸಂಸತ್ತು ( Parliament) ಪ್ರಜಾಪ್ರಭುತ್ವದ ಸಾಕಾರಸದನ ಎನ್ನಿಸಿಕೊಂಡಿದೆ.ಹನ್ನೆರಡನೆಯ ಶತಮಾನದ,ಪ್ರಜಾಪ್ರಭುತ್ವ ಗಂಧ ಗಾಳಿಯೇ ಇಲ್ಲದ ದಿನಗಳಲ್ಲಿ ಬಸವಣ್ಣನವರು ಮನುಷ್ಯಸಮಾಜದ ಉದ್ಧಾರದ ಬದ್ಧತೆಯಿಂದ ಕಾರ್ಯಗೈದು ಸರ್ವೋದಯ ಸಮಾಜ,ಶಿವ ಸಮಾಜ ನಿರ್ಮಾಣ ಮಾಡುವ ಕನಸು,ಹೆಗ್ಗುರಿಯಿಂದ ಕಲ್ಯಾಣದಲ್ಲಿ ‘ಅನುಭವ ಮಂಟಪ’ವನ್ನು ಸ್ಥಾಪಿಸಿ ಸಮಾಜದ ಸರ್ವಜಾತಿ ಜನಾಂಗಗಳಿಗೆ ಅದರ ಪ್ರವೇಶದ್ವಾರ ತೆರೆದಿಟ್ಟರು.ಅಂದಿನ ಸಮಾಜದಲ್ಲಿ ಶೂದ್ರರು,ದಲಿತರುಗಳಿಗೆ ದೇವಾಲಯಗಳ ಬಾಗಿಲುಗಳು ಮುಚ್ಚಿದ್ದವು.ಅರಸೊತ್ತಿಗೆಯ ಕಬಂಧಬಾಹುಗಳಡಿ ಸಿಕ್ಕಿ ನಲುಗುತ್ತಿದ್ದ ದಿನಗಳಲ್ಲಿ ಶೂದ್ರರು,ದಲಿತರು ಅರಮನೆಯ ದ್ವಾರವನ್ನು ದೂರದಿಂದಲೇ ನೋಡಿ ಕೈಮುಗಿಯಬೇಕಿತ್ತು.ಅಂದರೆ ಸಮಾಜದ ತಳವರ್ಗಗಳ ಜನತೆಗೆ ಅತ್ತ ಧಾರ್ಮಿಕ ಸ್ವಾತಂತ್ರ್ಯವೂ ಇರಲಿಲ್ಲ,ಇತ್ತ ರಾಜ್ಯಾಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರಲಿಲ್ಲ.ಕರ್ನಾಟಕ ಮಾತ್ರವಲ್ಲ,ಹನ್ನೆರಡನೆಯ ಶತಮಾನದ ಅವಧಿಯ ಭಾರತದಲ್ಲಿ ಇದು ಸಾಮಾನ್ಯ ಸ್ಥಿತಿಯಾಗಿತ್ತು.ಬಸವಣ್ಣನವರು ಕಲ್ಯಾಣದಲ್ಲಿ ‘ ಅನುಭವ ಮಂಟಪ’ ವನ್ನು ಸ್ಥಾಪಿಸಿ,ಶೂದ್ರರು,ದಲಿತರು ಮತ್ತು ಮಹಿಳೆಯರಿಗೆ ಅನುಭವ ಮಂಟಪದ ಬಾಗಿಲನ್ನು ತೆರೆದಿಡುವ ಮೂಲಕ ಪ್ರಜಾಪ್ರಭುತ್ವದ ಸತ್ತ್ವಯುತ ಬೀಜಗಳನ್ನು ಬಿತ್ತಿದರು.ಅನುಭವ ಮಂಟಪದಲ್ಲಿ ಎಲ್ಲ ಜಾತಿ ವರ್ಗಗಳಿಂದ ಬಂದಿದ್ದ ಶರಣ ಶರಣೆಯರಿಗೆ ಅವರ ಅನುಭವಗಳನ್ನು ಹೇಳಿಕೊಳ್ಳಲು ಮುಕ್ತ ಮತ್ತು ಸಮಾನ ಅವಕಾಶ ನೀಡಿದರು.ಅಕ್ಕಮಹಾದೇವಿಯಂತಹ ಮಹಾನ್ ಸ್ತ್ರೀಚೈತನ್ಯವು ಪ್ರಕಟಗೊಂಡು,ಮಹೋಜ್ವಲ ವ್ಯಕ್ತಿತ್ವದಿಂದ ಪ್ರಕಟಗೊಳ್ಳಲು ಕಾರಣರಾದರು.ಅನುಭವ ಮಂಟಪದಲ್ಲಿ ಪ್ರತಿನಿತ್ಯ ಏಳುನೂರಾ ಎಪ್ಪತ್ತು ಜನ ಶರಣಶರಣೆಯರು ಪಾಲ್ಗೊಳ್ಳುತ್ತಿದ್ದರು,ತಮ್ಮ ಜೀವನಾನುಭವನ್ನು,ಕಂಡುಂಡ ದರ್ಶನವನ್ನು ಹಂಚಿಕೊಳ್ಳುತ್ತಿದ್ದರು.ಅನುಭವಮಂಟಪವು ಪ್ರಪಂಚದ ಮೊದಲ ಸಂಸತ್ತು ಆದರೆ ಬಸವಣ್ಣನವರು ಪ್ರಜಾಪ್ರಭುತ್ವದ ಅಮರಬೀಜಗಳನ್ನು ಬಿತ್ತಿದ ಅಗ್ರಪುರುಷರು,ಪುರುಷೋತ್ತಮರು.

ಬಸವಣ್ಣನವರ ಶ್ರೀಪಾದಸ್ಪರ್ಶದಿಂದ ಪಾವನಗೊಂಡ ಕಲ್ಯಾಣದ ಅನುಭವಮಂಟಪದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಕನಸಿನ ಸರ್ವೋದಯ ಭಾರತನಿರ್ಮಾಣದ ಪ್ರತೀಕವಾದ ‘ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಯಲ್ಲಿ ಕಾರ್ಯಕ್ರಮಕ್ಕಾಗಿ ದುಡಿದವರಲ್ಲೊಬ್ಬನಾಗಿ ಪಾಲ್ಗೊಳ್ಳುವ ಸುಯೋಗ ನನಗೆ ಒದಗಿ ಬಂದಿತ್ತು.ರಾಜ್ಯ ಸರಕಾರದ ನಿರ್ದೇಶನದಂತೆ ಹಾಗೂ ಬೀದರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಗೌರವಾನ್ವಿತ ಶ್ರೀ ಈಶ್ವರ ಬಿ ಖಂಡ್ರೆಯವರ ವಿಶೇಷ ಆಸಕ್ತಿಯಂತೆ ಬೀದರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಮಾನ್ಯ ಶ್ರೀಮತಿ ಶಿಲ್ಪಾಶರ್ಮಾ ಮೇಡಂ ಅವರು ಕಾರ್ಯಕ್ರಮದ ಯಶಸ್ಸಿಗೆ ವಿಶೇಷಪರಿಶ್ರಮ ವಹಿಸಿ ಹಗಲಿರುಳು ಪರಿಶ್ರಮಿಸಿದರು.ಜಿಲ್ಲಾಧಿಕಾರಿಗಳವರಿಗೆ ಹೆಗಲೆಣೆಯಾಗಿ ಸರ್ವವಿಧದ ಸಹಕಾರ ನೀಡಿ‌,ಪರಿಶ್ರಮಿಸಿದರು ನಮ್ಮ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಆದರಣೀಯ ಡಾಕ್ಟರ್ ಗಿರೀಶ ಬದೋಲೆಯವರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಮಾನ್ಯ ಶ್ರೀ ಪ್ರದೀಪ ಗುಂಟೆಯವರ ಶ್ರಮ,ಕಾರ್ಯತತ್ಪರತೆ,ಆಲೋಚನಾ ಕ್ರಮಗಳು ಸಹ ಉಲ್ಲೇಖನೀಯ.

ಬೀದರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳವರ ನೆರವಿಗೆ ನಿಂತು ಪರಿಶ್ರಮಿಸಿದವರು ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಶಿವಕುಮಾರ ಶೀಲವಂತ ಅವರಾಗಿದ್ದರೆ ನಮ್ಮ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಾನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ತಂಡವನ್ನು ಮುನ್ನಡೆಸುತ್ತಿದ್ದೆ.ನಮ್ಮ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಡಾ.ಗಿರೀಶ ಬದೋಲೆಯವರು ಸಮರ್ಥ ಅಧಿಕಾರಿಗಳನ್ನು ಬೆಂಬಲಿಸುವ ಹೃದಯಸಂಪನ್ನ ಅಧಿಕಾರಿಗಳಾಗಿದ್ದು ನನಗೆ ಪೂರ್ಣಸ್ವಾತಂತ್ರ್ಯನೀಡಿ ಅವಶ್ಯಕತೆಯಿದ್ದಾಗ ಮಾರ್ಗದರ್ಶನ ಮಾಡುತ್ತಿದ್ದುದರಿಂದ ನಮ್ಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಂಡವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ,ಪ್ರಶಂಸೆಗೆ ಪಾತ್ರವಾಯಿತು.ಬಸವಕಲ್ಯಾಣದಿಂದ ಹಳ್ಳಿಖೇಡ ( ಕೆ) ಗ್ರಾಪಂಯ ಮೂಲಕ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ 25 ಕಿಲೋಮೀಟರ್ ಗಳಷ್ಟು ದೂರದವರೆಗೆ ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಬಸವಕಲ್ಯಾಣ ಮತ್ತು ಹುಮನಾಬಾದ್ ಪಟ್ಟಣಪಂಚಾಯತಿಗಳು ಹಾಗೂ ಬಸವಕಲ್ಯಾಣ ತಾಲ್ಲೂಕಿನ ಎಂಟು ಹಾಗೂ ಹುಮನಾಬಾದ್ ತಾಲೂಕಿನ ಮೂರು ಗ್ರಾಮ ಪಂಚಾಯತಿಗಳು ಬರುತ್ತಿವೆ.ಸಸ್ತಾಪುರ,ಯರಂಡಿ,ರಾಜೋಳಾ,ರಾಜೇಶ್ವರ,ಹನುಮಂತವಾಡಿ,ತಡೋಳಾ,ಯರಬಾಗ ಮತ್ತು ಇಸ್ಲಾಂಪುರ ಗ್ರಾಮ ಪಂಚಾಯತಿಗಳು ಬಸವಕಲ್ಯಾಣ ತಾಲ್ಲೂಕಿನಲ್ಲಿದ್ದರೆ ಹುಮನಾಬಾದ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 65 ಕ್ಕೆ ಹೊಂದಿಕೊಂಡಂತೆ ಇವೆ ಮಾಣಿಕನಗರ,ಕಲ್ಲೂರು ಮತ್ತು ಹಳ್ಳಿಖೇಡ ( ಕೆ) ಗ್ರಾಮಪಂಚಾಯತಿಗಳು.ಜಿಲ್ಲಾ ಪಂಚಾಯತಿಯ ನಿರ್ದೇಶನಗಳನ್ನು ಪಾಲಿಸಿ ತಮ್ಮ ತಂಡಗಳನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರೆ ಹುಮನಾಬಾದ್ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ದೀಪಿಕಾ ನಾಯಕ್ ಮತ್ತು ಬಸವಕಲ್ಯಾಣ ತಾಲ್ಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ರಮೇಶ ಸುಲ್ಪಿ.ಈ ಹನ್ನೊಂದು ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು,ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದಾರೆ. ಈ ಎರಡು ತಾಲ್ಲೂಕಾ ಪಂಚಾಯತಿಗಳ ಸಹಾಯಕ ನಿರ್ದೇಶಕರುಗಳು ಕಾರ್ಯಕ್ರಮದ ಯಶಸ್ಸಿಗೆ ಪರಿಶ್ರಮಿಸಿದ್ದಾರೆ.ನಮ್ಮ‌ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಪಂಚಾಯತಿ ಸಿಬ್ಬಂದಿಯವರು ನಿಷ್ಠೆ,ಶ್ರದ್ಧಾಪೂರ್ವಕವಾಗಿ ದುಡಿದು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆಯವರ ಬಸವಹಸ್ತದಿಂದ ಉದ್ಘಾಟನೆಗೊಂಡು ಆರಂಭವಾದ ‘ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ನಿರೀಕ್ಷೆಗೂ‌ಮೀರಿ ಯಶಸ್ಸು ಕಂಡ ಸಾರ್ಥಕತೆಯ ಕ್ಷಣಗಳಿಗೆ ನಾನು ಸಾಕ್ಷಿಯಾಗಿದ್ದೇನೆ.ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳೊಂದಿಗೆ ಕೈಜೋಡಿಸಿ ಹಗಲಿರುಳುದುಡಿದಿದ್ದಾರೆ ಎಲ್ಲ ಇಲಾಖೆಗಳ ಅಧಿಕಾರಿಗಳು.ಅದರಲ್ಲೂ ಸಮಾಜಕಲ್ಯಾಣ ಇಲಾಖೆಯ ಬೀದರ ಜಿಲ್ಲೆಯ ಉಪನಿರ್ದೇಶಕರಾದ ಶ್ರೀಮತಿ ಸಿಂಧು ಅವರ ಪರಿಶ್ರಮ ವಿಶೇಷ,ಉಲ್ಲೇಖನೀಯ.ಮುವ್ವತ್ತುಸಾವಿರಕ್ಕೂ ಹೆಚ್ಚುಜನ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ.ವಿವಿಧ ಸಂಘಟನೆಗಳ ಸಹಸ್ರಾರು ಜನರು ನಮ್ಮೊಂದಿಗೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯಾದ ನಾನು ನಮ್ಮ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಶ್ರೀ ಜಯಪ್ರಕಾಶ ಚಹ್ವಾಣ ಮತ್ತು ಗ್ರಾಮ ಪಂಚಾಯತ್ ವಿಷಯಗಳ ವಿಷಯ ನಿರ್ವಾಹಕ ಶ್ರೀ ಹನುಮಂತ ಚಿದ್ರಿಯರೊಂದಿಗೆ ಪಾಲ್ಗೊಂಡಿದ್ದೆ.

೧೫.೦೯.೨೦೨೪

About The Author