ಗಣಪತಿಗೆ ಹುಲಿ ಸಿಂಹಗಳನ್ನು ಬಿಟ್ಟು ಆನೆಯ ತಲೆಯನ್ನೇ ಏಕೆ ಇಡಲಾಯಿತು ?

ಅನುಭಾವ ಚಿಂತನೆ

ಗಣಪತಿಗೆ ಹುಲಿ ಸಿಂಹಗಳನ್ನು ಬಿಟ್ಟು ಆನೆಯ ತಲೆಯನ್ನೇ ಏಕೆ ಇಡಲಾಯಿತು ?

ಮುಕ್ಕಣ್ಣ ಕರಿಗಾರ

ಗಣೇಶ ಚತುರ್ಥಿಯಂದು ನಾನು ಬರೆದಿದ್ದ ‘ ಗೌರಿ ಗಣೇಶ ಹಬ್ಬದ ಆಧ್ಯಾತ್ಮಿಕ ಮಹತ್ವ’ ಚಿಂತನೆಯು ಬಹಳಷ್ಟು ಜನರ ಚಿಂತನೆಗೆ ಸ್ಫೂರ್ತಿಯಾಗಿದ್ದು ಒಬ್ಬರಾದ ಮೇಲೆ ಒಬ್ಬರಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ‘ ಕಾಮನ್ ಮ್ಯಾನ್’ ಸೇರಿದಂತೆ ನನ್ನ ಲೇಖನಗಳು ಶೇರ್ ಮಾಡಲ್ಪಡುತ್ತಿರುವ ವಾಟ್ಸಾಪ್ ಗುಂಪುಗಳಲ್ಲಿ.ಶಿಷ್ಯ ಮಂಜುನಾಥ ಕರಿಗಾರ ಕೂಡ ‘ ಕಾಡಿನಲ್ಲಿ ಹುಲಿ ಸಿಂಹ ಚಿರತೆಗಳಂತಹ ಸಾಕಷ್ಟು ಕಾಡು ಪ್ರಾಣಿಗಳಿದ್ದರೂ ಗೌರಿಪುತ್ರನಿಗೆ ಆನೆಯ ತಲೆಯನ್ನೇ ಏಕೆ ಇಡಲಾಯಿತು ? ಎಂದು ಪ್ರಶ್ನಿಸಿದ್ದಾರೆ.ಇದೊಂದು ಉತ್ತಮ ಪ್ರಶ್ನೆ.ಇಂತಹ ಸಂದೇಹಗಳು ಮೂಡಿದಾಗಲೇ ಅಧ್ಯಾತ್ಮಿಕ ಪಥದಿ ಪ್ರಯಾಣ ಸುಲಭವಾಗುತ್ತದೆ.ಗಣಪತಿಗೆ ಆನೆಯ ತಲೆಯನ್ನು ಇಟ್ಟಿದ್ದನ್ನು ಎಲ್ಲರೂ ಬಲ್ಲರು ಮತ್ತು ಅದನ್ನು ಸಹಜವೆಂಬಂತೆ ಸ್ವೀಕರಿಸಿದ್ದಾರೆ.ಆದರೆ ಆನೆಯ ತಲೆಯೇ ಏಕೆ ಎನ್ನುವುದು ಮಂಜುನಾಥ ಕರಿಗಾರರಂತಹವರ ಶಿವಪಥಗಾಮಿಗಳ ಮತಿಗೆ ಹೊಳೆವ ದಿಟವನ್ನರಿವ ಸಂದೇಹ.

‘ ಗಜಮುಖ’ ನ ತತ್ತ್ವಾರ್ಥವನ್ನು ಮತ್ತೊಮ್ಮೆ ವಿವರಿಸುವೆ.ಗೌರಿಪುತ್ರನಿಗೆ ಆನೆಯ ತಲೆಯನ್ನೆ ಏಕೆ ಇಡಲಾಯಿತು ಎನ್ನುವುದನ್ನು ಈ ಚಿಂತನೆಯಲ್ಲಿ ವಿವರಿಸುವೆ.ಮಗನ ಶಿರಶ್ಛೇದನದಿಂದ ಮಹಾಕಾಳಿಯ ರೂಪತಳೆದು ಗೌರಿಯು ಉಗ್ರಭಯಂಕರಳಾಗಿ ನರ್ತಿಸುತ್ತಿದ್ದಳಷ್ಟೆ.ಗೌರಿಯ ರುದ್ರನರ್ತನದಿಂದ ಪ್ರಪಂಚವು ಅಕಾಲ ಪ್ರಳಯ ಭೀತಿಗೆ ಒಳಗಾಗಿದ್ದರಿಂದ ಬ್ರಹ್ಮ,ವಿಷ್ಣು ಇಂದ್ರಾದಿ ದೇವತೆಗಳು ಕೈಲಾಸಕ್ಕೆ ಧಾವಿಸಿ ಘಟಿಸಿದ ಅನರ್ಥವನ್ನು ಕಾಣುತ್ತಾರೆ.ಗೌರಿಯು ಶಾಂತಳಾಗದೆ ಪ್ರಪಂಚಕ್ಕೆ ಉಳಿಗಾಲವಿಲ್ಲ ಎಂದರಿತ ಬ್ರಹ್ಮ ವಿಷ್ಣುಗಳು ಗೌರಿತನಯನನ್ನು ಬದುಕಿಸುವಂತೆ ಶಿವನನ್ನು ಪ್ರಾರ್ಥಿಸುವರು.ಪರಿಸ್ಥಿತಿಯ ಪ್ರಕೋಪವನ್ನರಿತಿದ್ದ ಶಿವನು ಕೂಡ ಗೌರಿಸುತನನ್ನು ಬದುಕಿಸಲೇಬೇಕಿತ್ತು.ಶಿವನು ‘ ಉತ್ತರಕ್ಕೆ ಮುಖ ಮಾಡಿ ಮಲಗಿರುವ ಪ್ರಾಣಿಯ ತಲೆಯನ್ನು ಕತ್ತರಿಸಿ ತನ್ನಿ’ ಎನ್ನುತ್ತಾನೆ.ಹುಡುಕುತ್ತ ಹೊರಟ ದೇವತೆಗಳು ಆನೆಯ ತಲೆಯನ್ನು ಕತ್ತರಿಸಿ ತರುತ್ತಾರೆ.ಕಾಡಿನಲ್ಲಿ ಹುಲಿ ಸಿಂಹ ಶರಭ ಶಾರ್ದೂಲಗಳಂತಹ ಸಾಕಷ್ಟು ಪ್ರಾಣಿಗಳಿದ್ದರೂ ಅವು ಯಾವವೂ ಉತ್ತರಕ್ಕೆ ಮುಖಮಾಡಿ ಮಲಗಿರಲಿಲ್ಲ.ಬಡಪಾಯಿ ಆನೆಯೊಂದು ಉತ್ತರಕ್ಕೆ ಮುಖಮಾಡಿ ಮಲಗಿತ್ತು! ದೇವತೆಗಳು ಉತ್ತರಕ್ಕೆ ಮುಖಮಾಡಿ ಮಲಗಿದ್ದ ಆನೆಯ ಕತ್ತನ್ನು ತರಿದು ತಂದರು.ಶಿವನು ಅದನ್ನೇ ಗೌರಿಪುತ್ರನ ದೇಹಕ್ಕೆ ಇಟ್ಟು ಅವನಿಗೆ ಜೀವದಾನಗೈಯುವನು ತನ್ನ ಅಮೃತಹಸ್ತಸ್ಪರ್ಶದಿಂದ.

ಕಾಡು ಪ್ರಾಣಿಗಳಲ್ಲಿ ಆನೆಯೊಂದೇ ಉತ್ತರಕ್ಕೆ ಮುಖ ಮಾಡಿ ಮಲಗುತ್ತದೆ.ಉತ್ತರದಿಕ್ಕಿನಿಂದ ಬೀಸುವ ಗಾಳಿಯು ಆನೆಗೆ ತುಂಬ ಇಷ್ಟವಂತೆ.ಹಾಗಾಗಿ ಅದು ತನ್ನ ಸೊಂಡಿಲನ್ನೆತ್ತಿ ಉತ್ತರಕ್ಕೆ ಮುಖ ಮಾಡಿ ಮಲಗುತ್ತದೆ.ದಿಕ್ಕುಗಳಲ್ಲಿ ಉತ್ತರದಿಕ್ಕು ಅಭಿವೃದ್ಧಿಯ ಸಂಕೇತವಾಗಿದ್ದರಿಂದ ಉತ್ತರದಿಕ್ಕಿಗೆ ಮುಖಮಾಡಿ ಮಲಗಿದ್ದ ಆನೆಯ ತಲೆಯನ್ನು ಇಡುವ ಮೂಲಕ ಗಣೇಶನಿಗೆ ಪ್ರಾಣದಾನ ಮಾಡಲಾಯಿತು.ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುವಾಗ ‘ ಉತ್ತರೋತ್ತರ ಅಭಿವೃದ್ಧಿ ಆಗಲಿ’ ಎಂದು ಹಾರೈಸುವುದನ್ನು ಗಮನಿಸಬಹುದು.ನಿರಂತರ ಏಳ್ಗೆ ಆಗುತ್ತಿರಲಿ ಎನ್ನುವುದೇ ಉತ್ತರೋತ್ತರ ಅಭಿವೃದ್ಧಿಯ ಅರ್ಥ.ಉತ್ತರದಿಕ್ಕು ಕುಬೇರನ ದಿಕ್ಕೂ ಹೌದು,ಉತ್ತರ ಮತ್ತು‌ಪಶ್ಚಿಮಗಳ ನಡುವೆ ವಾಯುವಿನ ಸ್ಥಾನವೂ ಇದೆ.ಗಾಳಿಯು ಎಲ್ಲಾ ದಿಕ್ಕುಗಳಲ್ಲಿ ಸಂಚರಿಸುವುದಾದರೂ ಜೀವರುಗಳಿಗೆ ಆಶ್ರಯವಾದ ಪ್ರಾಣವಾಯುವಿನ ಉತ್ಪತ್ತಿ ಉತ್ತರದಿಕ್ಕಿನಲ್ಲಿ ಆಗುತ್ತದೆ.ಉತ್ತರದಿಕ್ಕು ಅನಂತತೆಯ,ಶಾಶ್ವತತೆಯ ಸಂಕೇತವೂ ಹೌದು.ಆನೆಗಳು ದೀರ್ಘಾಯುಗಳಾಗಿ ಬದುಕುತ್ತವೆ.ಆನೆಯ ಬೃಹತ್ ಶರೀರ,ಅದರ ಗಾಂಭೀರ್ಯ ಎಲ್ಲವೂ ಅದನ್ನು ಒಂದು ವಿಶಿಷ್ಟಪ್ರಾಣಿಯನ್ನಾಗಿಸಿವೆ.’ ಆನೆ ನಡೆದುದೇ ಹಾದಿ’ ಎನ್ನುವ ಗಾದೆ ಮಾತು ಒಂದುಂಟು.ಆನೆಯೇ ಪಥ ನಿರ್ಮಾಪಕ ಪ್ರಾಣಿ.ಹಾಗೆಯೇ ದೊಡ್ಡವರು ನಡೆದು ಸಮಾಜಕ್ಕೆ,ದೇಶಕ್ಕೆ ಆದರ್ಶರಾಗುತ್ತಾರೆ.ಶಿವನಿಂದ ಗಜಮುಖನಾಗಿ ಮರುಹುಟ್ಟುಪಡೆದ ಗಣೇಶನು ಆದಿಪೂಜಿತನಾದ,ಲೋಕವಂದಿತನಾದ.

‌ಯೋಗದ ಪರಿಭಾಷೆಯಲ್ಲಿ ಇದನ್ನು ವಿವರಿಸುವುದಾದರೆ ಮೂಲಾಧಾರ ಚಕ್ರದಲ್ಲಿ ಸುಪ್ತವಾಗಿರುವ ಕುಂಡಲಿನಿಯು ಒಂದಾದ ಮೇಲೆ ಒಂದರಂತೆ ಚಕ್ರಗಳನ್ನು ದಾಟುತ್ತ ಆಜ್ಞಾಚಕ್ರದ ಆಚೆಯ ಗುರುಚಕ್ರವಾದನಿರಾಲಂಬಪುರಿಯನ್ನು ದಾಟಿ ಬ್ರಹ್ಮರಂಧ್ರದ ಮೂಲಕ ಸಹಸ್ರಾರವನ್ನು ತಲುಪುವುದು ಉತ್ತರಮುಖಿಯಾಗಿಯೆ! ಕೆಲವು ನದಿಗಳು ಉತ್ತರಮುಖಿಯಾಗಿ ಹರಿಯುವ ಮೂಲಕ ತಮ್ಮ ವೈಶಿಷ್ಟ್ಯ ಮೆರೆದಿವೆ.ಕುಂಡಲಿನಿ ಶಕ್ತಿಯು ಸಹಸ್ರಾರ ಚಕ್ರವನ್ನು‌ಉತ್ತರಮುಖಿಯಾಗಿಯೇ ಪ್ರವೇಶಿಸುತ್ತದೆ.ಸಹಸ್ರಾರಚಕ್ರಭೇದನ ಕ್ರಮವನ್ನರಿತ ಯೋಗಿಯು ಜರಾಮರಣಮುಕ್ತನಾಗುತ್ತಾನೆ ಸಹಸ್ರದಳ ಕಮಲದ ಮಧ್ಯೆ ಪವಡಿಸಿರ್ಪ ಪರಶಿವನನ್ನು ಕಂಡು.ಗೌರಿಪುತ್ರನು ತನ್ನ ಅಜ್ಞಾನದ ತಲೆಯನ್ನು ಕಳೆದುಕೊಂಡು ಪರಶಿವನ ಅನುಗ್ರಹದಿಂದ ಸುಜ್ಞಾನಿಯಾದ,ಮಹಾಜ್ಞಾನಿಯಾದ,ಜ್ಞಾನಕ್ಕೆ ಅಧಿಪತಿಯೂ ಆದ.ಪರಶಿವನ ಅನುಗ್ರಹವಿಶೇಷದಿಂದ ಗಣಪತಿಯು ಮರಣಮುಕ್ತನಾಗಿ ಅಮರನಾದ,ದಿವ್ಯಾತ್ಮನಾದ.

‌ ಬಹುಶಃ ಈ ಪ್ರಸಂಗದಿಂದ ಪ್ರೇರಿತರಾಗಿಯೋ ಏನೋ ಹಳ್ಳಿಗಳಲ್ಲಿ ಹಿರಿಯರು ತಮ್ಮ ಮಕ್ಕಳು ಮಲಗುವಾಗ ಉತ್ತರಕ್ಕೆ ತಲೆಕೊಟ್ಟು ಮಲಗಬೇಡಿ ಎಂದು ಎಚ್ಚರಿಸುವುದು ! ಉತ್ತರಕ್ಕೆ ತಲೆಕೊಟ್ಟು ಮಲಗಿದವರಿಗೆ ತಲೆಕತ್ತರಿಸುವ,ಅಪಮೃತ್ಯುವಿನ ಭಯವಿದೆ ಎಂದು ಗ್ರಹಿಸಿದ್ದಾರೆ ನಮ್ಮ ಹಿರಿಯರು ಗೌರಿಪುತ್ರನನ್ನು ಬದುಕಿಸಲು ದೇವತೆಗಳು ಉತ್ತರಕ್ಕೆ ತಲೆಕೊಟ್ಟು ಮಲಗಿದ್ದ ಆನೆಯ ತಲೆಯು ಕತ್ತರಿಸಲ್ಪಟ್ಟಿದ್ದರಿಂದ.

‌ ೧೦.೦೯.೨೦೨೪

About The Author