ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಮುಕ್ಕಣ್ಣ ಕರಿಗಾರ

 

ಧರ್ಮಸ್ಥಳದ ಶ್ರೀ ಮಂಜುನಾಥನ ಲೀಲೆ ; ಭೇಟಿಯಾದೆ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು

ಮುಕ್ಕಣ್ಣ ಕರಿಗಾರ
ಉಪಕಾರ್ಯದರ್ಶಿ
ಜಿಲ್ಲಾ ಪಂಚಾಯತ್ ಬೀದರ

 

ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯು ‘ ಕಲಿಯುಗದ ಪ್ರತ್ಯಕ್ಷ ದೇವರು’ ಎನ್ನುವುದನ್ನು ನಾನು ನಂಬುತ್ತೇನೆ ಮತ್ತು ಸ್ವೀಕರಿಸಿದ್ದೇನೆ.ಮಂಜುನಾಥಸ್ವಾಮಿ ತನ್ನ ಭಕ್ತರ ಮೊರೆ,ಪ್ರಾರ್ಥನೆಗಳಿಗೆ ಓಗೊಡುವ ದೇವರು.ನನ್ನ ಬದುಕಿನಲ್ಲಿ ಶಿಕ್ಷಕರ ದಿನಾಚರಣೆಯ ದಿನವಾದ ಇಂದು ಧರ್ಮಸ್ಥಳದ ಮಂಜುನಾಥನ ಲೀಲೆಯ ಅನುಭವವಾಯಿತು.ಎರಡು ದಿನಗಳ ಹಿಂದೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಬೀದರಗೆ ಬರಲಿರುವ ಸುದ್ದಿ ತಿಳಿಯಿತು.ನಾನು ಮಂಜುನಾಥಸ್ವಾಮಿಯನ್ನು ‘ಧರ್ಮಾಧಿಕಾರಿಗಳ ಭೇಟಿಗೆ ಅವಕಾಶ ಕಲ್ಪಿಸು’ ಎಂದು ಪ್ರಾರ್ಥಿಸಿದ್ದೆ.ನಮ್ಮ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಕಾಶಿಯಿಂದ ಬಂದು ನೆಲೆಸಿ ನಿತ್ಯಸತ್ಯಲೀಲೆ ಮೆರೆಯುತ್ತಿರುವ ವಿಶ್ವನಾಥನೆ ಮಂಜುನಾಥನಲ್ಲವೆ ? ನನ್ನ ಮೊರೆ ಕೇಳದೆ ಇರುತ್ತಾನೆಯೆ ಮಂಜುನಾಥ?

ಪವಾಡಸದೃಶ ರೀತಿಯಲ್ಲಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ದರ್ಶನ ಏರ್ಪಟಿತು ಇಂದು.ಮಂಜುನಾಥಸ್ವಾಮಿಯ ಕೃಪಾವಿಶೇಷವೋ ಎಂಬಂತೆ ಬೀದರನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಬೀದರಿನಲ್ಲಿ ನಾನು ತಂಗಿರುವ ಹೆಬ್ಸಿಕೋಟೆ ಗೆಸ್ಟ್ ಹೌಸ್ ನಲ್ಲಿಯೇ ನಿನ್ನೆ ರಾತ್ರಿ ಬಂದು ತಂಗಿದ್ದಾರೆ! ಇಂದು ಬೆಳಿಗ್ಗೆ 9.40 ರಿಂದ 9.50 ರವರೆಗೆ ಹತ್ತುನಿಮಿಷಗಳ ಕಾಲ ಅವರೊಂದಿಗೆ ಮಾತನಾಡುವ ಸುಯೋಗ ಒದಗಿತ್ತು.

ಈ ಸಂದರ್ಭದಲ್ಲಿ ನನ್ನ’ ಶಿವತತ್ತ್ವ ಚಿಂತನೆ’ , ‘ ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಮತ್ತು ‘ ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ’ ಎನ್ನುವ ಮೂರು ಪುಸ್ತಕಗಳನ್ನು ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ನೀಡಿದೆ.’ ಶಿವತತ್ತ್ವ ಚಿಂತನೆ’ ಪುಸ್ತಕವನ್ನು ಅವರು ಕುತೂಹಲದಿಂದ ಓದಿ,ಹರ್ಷವ್ಯಕ್ತಪಡಿಸಿದರು.

ಶ್ರೀವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಂತಹ ಮಹಾನ್ ಜಾಗೃತಧಾರ್ಮಿಕ ಕ್ಷೇತ್ರದ ಮುಖ್ಯಸ್ಥರಾಗಿ,ವಿಶ್ವಪ್ರಸಿದ್ಧರಾದ,ರಾಜ್ಯಸಭೆಯ ಸದಸ್ಯರಾದ ಅತಿಗಣ್ಯವ್ಯಕ್ತಿಯಾಗಿದ್ದರೂ ಬಿಂಕ ಬಿಗುಮಾನ ಇಲ್ಲದ,ಸರಳ ಸಜ್ಜನಿಕೆಯ ಸರ್ವಜನಾದರಣೀಯ ಹಿರಿಯರು ಎನ್ನುವುದು ಅವರೊಂದಿಗಿನ ನನ್ನ ಹತ್ತು ನಿಮಿಷಗಳ ಭೇಟಿಯಲ್ಲಿ ಅನುಭವಕ್ಕೆ ಬಂದಿತು.ದೊಡ್ಡವರು ದೊಡ್ಡವರಾಗಿಯೇ ಇರುತ್ತಾರೆ ಎನ್ನುವದಕ್ಕೆ ನಿದರ್ಶನರಾಗಿದ್ದಾರೆ ಮಹಾನ್ ಚೇತನ ಶ್ರೀ ವೀರೇಂದ್ರ ಹೆಗ್ಗಡೆಯವರು.ಶ್ರೀ ಮಂಜುನಾಥ ಸ್ವಾಮಿಯು ಅವರಿಗೆ ಸಕಲ ಯಶಸ್ಸು,ಶ್ರೇಯಸ್ಸುಗಳನ್ನು ಕರುಣಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ಈ ಕಿರು ಸ್ವಗತ ಲೇಖನವನ್ನು ಮಂಗಲಗೊಳಿಸುವೆ.

‌‌ ‌೦೫.೦೯.೨೦೨೪

About The Author