ಕಾಯಕನಿಷ್ಠ ಶರಣ ನುಲಿಯ ಚಂದಯ್ಯ : ಮುಕ್ಕಣ್ಣ ಕರಿಗಾರ

ಕಾಯಕನಿಷ್ಠ ಶರಣ ನುಲಿಯ ಚಂದಯ್ಯ

            ಮುಕ್ಕಣ್ಣ ಕರಿಗಾರ

 ಕಂದಿಸಿ ಕುಂದಿಸಿ ಬಂಧಿಸಿ,ನೋಯಿಸಿ
ಕಂಡಕಂಡವರ ಬೇಡಿ ತಂದು,
ಜಂಗಮಲಿಂಗಕ್ಕೆ ಮಾಡಿಹೆನೆಂಬ ದಂದುಗದ
ಮಾಟಕ್ಕೆ ಲಿಂಗನೈವೇದ್ಯ ಸಲ್ಲದು.
ತನುಕರಗಿ ಮನಬಳಲಿ ಬಂದತೆರವನರಿದು
ಸಂದಿಲ್ಲದೆ,ಸಂಶಯವಿಲ್ಲದೆ
ಜಂಗಮಲಿಂಗಕ್ಕೆ ದಾಸೋಹವೇ ಮಾಟ
ಕಾರೆಯ ಸೊಪ್ಪಾದರೂ ಕಾಯಕದಿಂದ
ಬಂದುದು ಲಿಂಗಾರ್ಪಿತವಲ್ಲದೆ
ದುರಾಸೆಯಿಂದ ಬಂದುದು ಅನರ್ಪಿತ
ಇದು ಕಾರಣ ಸತ್ಯಶುದ್ಧ ಕಾಯಕದ
ನಿತ್ಯದ್ರವ್ಯವಾದರೆ ಚಂದೇಶ್ವರ ಲಿಂಗಕ್ಕೆ
ನೈವೇದ್ಯ ಸಂದಿತ್ತು ಕೇಳಯ್ಯ
     ಎಂದು ಕಾಯಕಶುದ್ಧಿಯ,ಆತ್ಮಶುದ್ಧಿಯ ಮಹತಿಯನ್ನು ಸಾರಿದ ಮಹಾಶರಣ ನುಲಿಯ ಚಂದಯ್ಯ ಬಸವಣ್ಣನವರ ಸಮಕಾಲೀನ ಶರಣರು,ವಚನಕಾರರು.ಲಿಂಗಪೂಜೆ,ಜಂಗಮಸೇವೆ ಎಂದು ಕಂಡಕಂಡವರನ್ನು ಬೇಡಿ ತಂದು ಮಾಡುವ ಪೂಜೆಯಿಂದ ಲಿಂಗತೃಪ್ತಿಹೊಂದದು,ಜಂಗಮ ಸಂತೃಪ್ತನಾಗಲಾರ.ದೈಹಿಕ ಪರಿಶ್ರಮದಿಂದ ತರುವ ಕಾರೆಕಾಯಿಯಸೊಪ್ಪಿನ ನೈವೇದ್ಯವಾದರೂ ಸರಿಯೆ ಜಂಗಮಾರ್ಪಿತವಾಗುತ್ತದೆ,ಶಿವನನ್ನು ಸಂತೃಪ್ತನನ್ನಾಗಿಸುತ್ತದೆ.ವಾಮಮಾರ್ಗದಿಂದ ಗಳಿಸಿದ ಸಂಪತ್ತಿನಿಂದ ದೊಡ್ಡದೊಡ್ಡ ಪೂಜೆ,ಸೇವೆಗಳನ್ನು ಮಾಡಿಸಿದರೆ ಶಿವನು ಸಂತೃಪ್ತನಾಗಲಾರ.ಶ್ರಮಪಟ್ಟು ತರುವ ಕಾಡುಕಾಯಿಯಾದ ಕಾರೆಕಾಯಿಯನ್ನು ನೈವೇದ್ಯವೆಂದರ್ಪಿಸಿದರೂ ಪರಶಿವನು ಅದನ್ನು ಪರಮಸಂತೋಷದಿಂದ ಸ್ವೀಕರಿಸುತ್ತಾನೆ ಎನ್ನುವ ನುಲಿಯಚಂದಯ್ಯನವರು ಸತ್ಯಶುದ್ಧಕಾಯಕತತ್ತ್ವವನ್ನು ಪ್ರತಿಪಾದಿಸಿದ ಕಾಯಕಯೋಗಿಗಳು,ಕಾಯಕದಲ್ಲೇ ಶಿವನನ್ನು ಕಂಡ ಪರಮಾನುಭವಿಗಳು.
        ವಚನ ಚಳವಳಿಯ ಕಾಲದ ಮೇರು ವ್ಯಕ್ತಿತ್ವಗಳಲ್ಲೊಬ್ಬರಾದ ನುಲಿಯ ಚಂದಯ್ಯನವರ ಕಾಲ ಸು ೧೧೬೦.ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮವು ಚಂದಯ್ಯನ ಜನ್ಮಸ್ಥಳ.ಇತ್ತೀಚಿನ ಕೆಲವು ಸಂಶೋಧಕರುಗಳು ನುಲಿಯ ಚಂದಯ್ಯ ಒರಿಸ್ಸಾದ ರಾಜಮನೆತನದವನು,ಕೈಕಡ ಗ್ರಾಮದಿಂದ ಬಂದವನು ,ಕಲ್ಯಾಣಕ್ಕೆ ಬರುವ ಮಾರ್ಗದಲ್ಲಿ ಕೆಲವು ಕಾಲ ಶಿವಣಗಿಯಲ್ಲಿ ತಂಗಿದ್ದನು ಎನ್ನುತ್ತಾರೆ.ಬಸವಪುರಾಣ,ಶೂನ್ಯಸಂಪಾದನೆ,ಶಿವತತ್ತ್ವ ಚಿಂತಾಮಣಿ,ಚೆನ್ನಬಸವಪುರಾಣ,ಗುರುರಾಜ ಚರಿತೆ,ರಾಘವಾಂಕ ಚರಿತೆ ಮತ್ತು ಭೈರವೇಶ್ವರಕಾವ್ಯದ ಕಥಾಮಣಿಸೂತ್ರ ರತ್ನಾಕರ ಮೊದಲಾದ ಕೃತಿಗಳಲ್ಲಿ ನುಲಿಯ ಚಂದಯ್ಯನ ವ್ಯಕ್ತಿತ್ವ,ಕಾಯಕನಿಷ್ಠೆಯ ಬಗ್ಗೆ ವಿವರಿಸಲಾಗಿದೆ.ಈ ಕೃತಿಗಳಂತೆ  ನುಲಿಯನ್ನು ಹೊಸೆದು ಹಗ್ಗ ಕಣಿಗಳನ್ನು ಮಾಡಿ ಕಲ್ಯಾಣನಗರದಲ್ಲಿ ಅವುಗಳನ್ನು ಮಾರಿ ಬಂದ ಹಣದಲ್ಲಿ ಗುರುಲಿಂಗ ಜಂಗಮದಾಸೋಹ ಮಾಡಿಸುತ್ತಿದ್ದನು.
        ನುಲಿಯ ಚಂದಯ್ಯನವರ ಬದುಕಿನ ಒಂದು ಪ್ರಸಂಗವು ಉಲ್ಲೇಖನಾರ್ಹವಾದ ,ನುಲಿಯ ಚಂದಯ್ಯನವರ ಕಾಯಕ ನಿಷ್ಠೆ ಮತ್ತು ವ್ಯಕ್ತಿತ್ವದ ಗಟ್ಟಿತನವನ್ನು  ತೋರಿಸುವ ಮಹತ್ವದ ಪ್ರಸಂಗವಾಗಿದೆ.ಚಂದಯ್ಯನು ಹಗ್ಗ ಮಾಡಲು ಪ್ರತಿದಿನ ಹುಲ್ಲುಕೊಯ್ದು ತರುತ್ತಿದ್ದ.ಎಂದಿನಂತೆ ಒಂದು ದಿನ ಹಳ್ಳದಲ್ಲಿ ಹುಲ್ಲುಕೊಯ್ಯುತ್ತಿದ್ದಾಗ ಚಂದಯ್ಯನ ಕೊರಳ ಲಿಂಗವು ಜಾರಿ ನೀರಿನಲ್ಲಿ ಬಿದ್ದು ಅಡಗಿತು.ಹುಲ್ಲುಕೊಯ್ಯುವ ಕಾಯಕದಲ್ಲಿ ಮಗ್ನನಾಗಿದ್ದ ಚಂದಯ್ಯ ಲಿಂಗವು ಹರಿದು ಬಿದ್ದುದನ್ನು  ಗಮನಿಸಲಿಲ್ಲ.ಹುಲ್ಲಿನ ಹೊರೆಹೊತ್ತು ಮರಳಲಾರಂಭಿಸಿದ.ಆಗ ಲಿಂಗವು ಎದ್ದು ‘ನಾನು ಬರುವೆ,ಕರೆದುಕೊಂಡು ಹೋಗು’ ಎಂದು ಪರಿಪರಿಯಾಗಿ ಕಾಡಿ ಬೇಡಿದರೂ ಚಂದಯ್ಯ ‘ಹರಿದುಬಿದ್ದುದರಿಂದ ನಿನ್ನ ಹಂಗುಹರಿಯಿತು,ನಾನು ಜಂಗಮಸೇವೆಯಲ್ಲೇ ಸಂತೃಪ್ತನಾಗುವೆ’ ಎಂದು ಉತ್ತರಿಸಿ ತನ್ನ ಹಿಂದೆ ನಡೆದು ಬರುತ್ತಿದ್ದ ಲಿಂಗವನ್ನು ಕರೆಯದೆ ಮುಂದೆ ನಡೆಯುತ್ತಾನೆ.ಚಂದಯ್ಯನು ಮನೆಗೆ ಮರಳುವ ಮಾರ್ಗದಲ್ಲಿ ಮಡಿವಾಳ ಮಾಚಿದೇವರ ಮನೆ ಇತ್ತು.ಚಂದಯ್ಯನ ಹಿಂದೆ ಜಂಗಮರೂಪಧರಿಸಿ ನಡೆದು ಬರುತ್ತಿದ್ದ ಲಿಂಗದೇವನು ‘ ನೀವಾದರೂ ಹೇಳಬಾರದೆ ಚಂದಯ್ಯನವರಿಗೆ ನನ್ನನ್ನು ಧರಿಸಲು ?’ ಎಂದು ದೂರುತ್ತಾನೆ.ಮಡಿವಾಳ ಮಾಚಿದೇವರು ‘ ಅಂಗವಿರುವವರೆಗೆ ಅಂಗದಮೇಲೆ ಲಿಂಗವಿರಬೇಕು,ಲಿಂಗಪೂಜೆಯು ನಡೆಯುತ್ತಿರಬೇಕು’ ಎಂದು ಚಂದಯ್ಯನಿಗೆ ಬುದ್ಧಿವಾದ ಹೇಳುವರು;
   ಅರಿವನರಿದಿಹೆನೆಂದು ಕ್ರಿಯೆಯ ಬಿಡಬಹುದೆ ?
 ಮಧುರಕ್ಕೆ ಮಧುರ ಒದಗಲಾಗಿ ಆ ಸವಿಗೆ ಸವಿಕೊರತೆಯುಂಟೆ?
ದ್ರವ್ಯಕ್ಕೆ ದ್ರವ್ಯ ಒದಗಲಾಗಿ ಬಡತನಕಡಹುಂಟೆ ?
ಮಾಡುವ ಮಾಟ,ಶಿವಪೂಜೆಯನೋಟ ಭಾವವಿರಬೇಕು,
ಅದು ಕಲಿದೇವಯ್ಯನ ಕೂಟವಲ್ಲವೆ ಚಂದಯ್ಯ
   ಎಂದು ತಿಳಿಹೇಳಿದ ಮಡಿವಾಳ ಮಾಚಿದೇವರ ಮಾತಿಗೆ ಚಂದಯ್ಯನವರು ಮಾರ್ನುಡಿದದ್ದು ;
  ಆವಾವ ಕಾಯಕದಲ್ಲಿ ಬಂದಾದಡೂ ಭಾವಶುದ್ಧವಾಗಿ
ಗುರು ಲಿಂಗ ಜಂಗಮಕ್ಕೆ ಮಾಡುವುದೇ ಶಿವಪೂಜೆ,
ಮಾಡುವ ಮಾಟವಿಲ್ಲದೆ ಮಾತಿಂಗೆ ಮಾಡುವುದು ಅದೇತರ ಪೂಜೆ?
ಅದು ಚಂದೇಶ್ವರ ಲಿಂಗಕ್ಕೆ ಒಪ್ಪವಿಲ್ಲ ಮಡಿವಾಳಯ್ಯ.
     ವಿಷಯವನ್ನು ಅನುಭವಮಂಟಪದಲ್ಲಿಯೇ ಇತ್ಯರ್ಥಪಡಿಸಬೇಕೆಂದು ಮರುದಿನ ಮಡಿವಾಳ ಮಾಚಿದೇವರು ಈ ವಿಷಯವನ್ನು  ಅಲ್ಲಮಪ್ರಭುದೇವರ ಮುಂದೆ ಪ್ರಸ್ತಾಪಿಸುವರು.ಪ್ರಭುದೇವರು ಚಂದಯ್ಯನವರ ನಿಲುವನ್ನು ಪ್ರಶ್ನಿಸಲು ಚಂದಯ್ಯನವರು
  ಗುರುವಿಂದ ಲಿಂಗಕ್ಕೆ ಮಾಡಿ
  ಹಿಂದಣ ಮುಂದಣ ಸಂದೇಹಕ್ಕೀಡಾಗದೆ
 ಜಂಗಮಲಿಂಗಕ್ಕೆ ಮನಸಂದು
ಧನವಕೊಟ್ಟು ಸರ್ವಪದಾರ್ಥವ
ಅರ್ಪಿತವ ಮಾಡಲಾಗಿ ಚಂದೇಶ್ವರಲಿಂಗಕ್ಕೆ
ಹಿಂದು ಮುಂದೆಂಬುದಿಲ್ಲ.
  ‌ಚಂದಯ್ಯನವರ ಮಾತಿಗೆ ಒಪ್ಪದೆ ಅಲ್ಲಮಪ್ರಭುದೇವರು,
  ಪರುಷವಾದರೂ ಒಂದರಲ್ಲಿ ಇರಿಸಿರಬೇಕು,
ರತ್ನವಿಶೇಷವಾದರೂ ಕುಂದಣದಲ್ಲಿ ಬಂಧಿಸಿರಬೇಕು,
ಲಿಂಗವ ಹಿಡಿದಲ್ಲಿ ಪೂಜಿಸುವ ಅಂಗವಿರಬೇಕು,
ಇದು ಕಾರಣ ಗುಹೇಶ್ವರಲಿಂಗವನರಿದು
ಮರೆಯಲಿಲ್ಲ ಕಾಣಾ ಚಂದಯ್ಯ
   ‌ಪ್ರಭುದೇವರ ವಚನೋಕ್ತಿಯನ್ನು ಕೇಳಿ ವಿಚಲಿತ್ತರಾಗದೆ ಚಂದಯ್ಯನವರು ಮತ್ತೆ ಉತ್ತರಿಸುವರು ;
 ಗುರುಸೇವೆಯ ಮಾಡಿದರೆ ಇಹದಲ್ಲಿ ಸುಖ
 ಲಿಂಗಸೇವೆಯ ಮಾಡಿದರೆ ಪರದಲ್ಲಿ ಸುಖ
ಜಂಗಮಸೇವೆಯ ಮಾಡಿದರೆ ಇಹಪರವೆಂಬುಭಯನಾಸ್ತಿ
ಇದು ಚಂದೇಶ್ವರಲಿಂಗದ ಭಾವ ಕಾಣಾಪ್ರಭುವೆ!
     ತಮ್ಮ ಸಲಹೆಯನ್ನು ಒಪ್ಪದ ಚಂದಯ್ಯನವರಿಗೆ ತಿಳಿಹೇಳಲು ಪ್ರಭುದೇವರು ಬಸವಣ್ಣನವರಿಗೆ ತಿಳಿಸುವರು .ಶರಣರಲ್ಲಿ ಕೂಡಲಸಂಗಮನನ್ನೇ ಕಾಣುತ್ತಿದ್ದ ಪರಮವಿನಯವ್ರತಿಯಾದ ಬಸವಣ್ಣನವರು ಚಂದಯ್ಯನವರ ನಿಲುವನ್ನು ಖಂಡಿಸಲು ಸಾಧ್ಯವಿತ್ತೆ ? ಅವರು ತಮ್ಮದೇ ಧಾಟಿಯಲ್ಲಿ ಪ್ರಭುದೇವರಿಗೆ ಉತ್ತರಿಸಿದ್ದು ;
ಜಂಗಮಸೇವೆಯೇ ಗುರುಪೂಜೆಯೆಂದರಿದ;
ಜಂಗಮ ಸೇವೆಯೇ ಲಿಂಗಪೂಜೆಯೆಂದರಿದ ,
 ಜಂಗಮಸೇವೆಯೇ ತನ್ನಿರವೆಂದರಿದ
ಜಂಗಮಸೇವೆಯೇ ತನ್ನ ನಿಜವೆಂದರಿದ
ಜಂಗಮಸೇವೆಯೇ ಸ್ವಯವೆಂದರಿದ
ಜಂಗಮಸೇವೆಯೇ ನಿತ್ಯಪದವೆಂದರಿದ
ಇದು ಕಾರಣ ನಮ್ಮ ಕೂಡಲ ಸಂಗಮದೇವರಲ್ಲಿ
ಜಂಗಮಪ್ರಾಣಿಯಾದ ಚಂದಯ್ಯನ ಹಳೆಯ ಮಗನಾಗಿ
ಆತನ ಶ್ರೀಚರಣಕ್ಕೆ ಶರಣೆಂದು ಶುದ್ಧನು
ಆ ಮಹಾಮಹಿಮನ ಘನವ ನಾನೆತ್ತ ಬಲ್ಲೆನಯ್ಯಾ ಪ್ರಭುವೆ ? 
   ಬಸವಣ್ಣನವರ ಮನದಿಂಗಿತವನ್ನರಿತ ಪ್ರಭುದೇವರು ಚೆನ್ನಬಸವಣ್ಣನವರತ್ತ ನೋಡುತ್ತಾ ;
ಅಂಗದ ಲಿಂಗವೆ ಮನದಲಿಂಗ ;
 ಮನದ ಲಿಂಗವೇ ಭಾವಲಿಂಗ ;
ಭಾವಲಿಂಗವೇ ಜಂಗಮದಾಸೋಹ ;
ದಾಸೋಹವೆಂಬುದಿ ಸಂದಿಲ್ಲದ ನಿಜನೋಡಾ !
ಅದರಂದವನೆ ತಿಳಿದು,ನಿಂದ ನಿಲುಕಡೆಯ
ಭೇದವನೆ ಕೇಳಬೇಕೆಂದು ಬಂದಲ್ಲಿಯ ತಿಳುಹಬೇಕಯ್ಯ.
ಇಂತೀ ಪ್ರಕಾರದಲ್ಲಿ ಸಂದ ಸೌಖ್ಯದ ಭೇದವನು
ಸಂದಿಲ್ಲದ ಲಿಂಗದ ನಿಜವನು ಇಂದು ನಮ್ಮ ಗುಹೇಶ್ವರ ಲಿಂಗದಲ್ಲಿ
ಚಂದಯ್ಯಂಗೆ ತಿಳಿಸಿಕೊಡಾ ಚೆನ್ನಬಸವಣ್ಣ.
   ಎನ್ನುವರು. ಚೆನ್ನಬಸವಣ್ಣನವರು ಜಂಗಮದಾಸೋಹಿಯಾದರೂ ಲಿಂಗವಿಡಿದೇ ಆಚರಿಸಬೇಕೆಂಬ ಜಂಗಮೋಪಾಸನೆಯ ರಹಸ್ಯವನ್ನು ಚಂದಯ್ಯನವರಿಗೆ ಮನದಟ್ಟಾಗುವಂತೆ ವಿವರಿಸುವರು ;
  ಜಂಗಮವೆ ಪರವೆಂದರಿದಡೇನು ?
  ಆ ಜಂಗಮದಂಗವಲ್ಲವೆ ಲಿಂಗ ?
 ಆ ಲಿಂಗ ಚೈತನ್ಯದರಿವೆಲ್ಲವು ಜಂಗಮವಲ್ಲವೆ ?
 ಅಂಗವಿಲ್ಲದ ಜೀವ,ಆತ್ಮನಿಲ್ಲದಂಗಕ್ಕೆ ಸರ್ವಭೋಗಸುಖವುಂಟೆ ?
ಮಣ್ಣಿಲ್ಲದೆ ಮರನುಂಟೆ ? ಮರನಿಲ್ಲದ ಹಣ್ಣುಂಟೆ ?
ಹಣ್ಣಿಲ್ಲದ ಸ್ವಾದವುಂಟೆ ? ಹೀಂಗೆ ಅರಿವುದಕ್ಕೆ ಕ್ರಮ
ಅಂಗವೆ ಮಣ್ಣು,ಲಿಂಗವೆ ಮರನು,ಫಲವೆ ಜಂಗಮ
ರುಚಿಯ ಪ್ರಸಾದ,ಇದು ಕಾರಣ ಕೂಡಲ ಚೆನ್ನಸಂಗಯ್ಯನಲ್ಲಿ
ಸಾಕಾರಲಿಂಗವೆ ಜಂಗಮದಂಗವಯ್ಯಾ ಪ್ರಭುವೆ !
   ಚೆನ್ನಬಸವಣ್ಣನವರ ಉಪದೇಶವಚನವಾಕ್ಕಿನಿಂದ ಚಂದಯ್ಯನವರ ಸಂದೇಹ ನಿವಾರಣೆಯಾಗಿ ಅಂಗ ಲಿಂಗ,ಜಂಗಮ- ಪ್ರಸಾದಗಳು ಪರಸ್ಪರಾವಲಂಬಿಗಳಾದ ಶಿವಚೈತನ್ಯತತ್ತ್ವವೆಂಬರಿವು ಉಂಟಾಗಿ ಮರಳಿ ಲಿಂಗವನ್ನು ಧರಿಸುವರು.
     ಈ ಪ್ರಸಂಗವು ಚಂದಯ್ಯನವರ ಕಾಯಕನಿಷ್ಠೆ ಮತ್ತು ಅವರು ಸಾಧಿಸಿದ ಶಿವಯೋಗದೆತ್ತರವನ್ನು ಬಿತ್ತರಿಸುತ್ತದೆ.ಅದುವರೆಗೂ ಕೊರಳಲಿಂಗವು ಹರಿದು ಬಿದ್ದರೆ ಭಕ್ತನು ತನ್ನ ಪ್ರಾಣತ್ಯಾಗ ಮಾಡುವ ಕಠೋರವ್ರತವು ಆಚರಣೆಯಲ್ಲಿತ್ತು.ಇದು ಕೂಡದು ಎನ್ನುವ ಸಂದೇಶವನ್ನು ಶರಣಗಣಕ್ಕೆ ಸಾರುವ ಸಂಕಲ್ಪದಿಂದಲೇ ಪರಶಿವನು ಚಂದಯ್ಯನವರ ಲಿಂಗ ಹರಿದು ಬೀಳುವ ಲೀಲೆಯನ್ನಾಡಿ ಲಿಂಗವು ಅಂಗದಿಂದ ಕಡೆಗಾಗುವುದು ಕೆಡುಕಲ್ಲ,ಕೇಡಲ್ಲ ಅದಕ್ಕಾಗಿ ವ್ಯಥಿಸದೆ ಮತ್ತೊಂದು ಲಿಂಗವನ್ನು ಧರಿಸಿ,ಲಿಂಗಪೂಜೆಯನ್ನು ಗೈಯಬೇಕು ಎನ್ನುವ ಭಕ್ತಿಸೂತ್ರವನ್ನು ಜಗತ್ತಿಗೆ ಕರುಣಿಸಿದ್ದಾನೆ.
      ಚಂದಯ್ಯನವರು ಚಂದೇಶ್ವರಲಿಂಗ ವಚನಾಂಕಿತದಲ್ಲಿ ಬರೆದ ೪೮ ವಚನಗಳು ಉಪಲಬ್ಧವಿವೆ.ಚಂದಯ್ಯನವರ ಸತ್ಯಶುದ್ಧ ಕಾಯಕನಿಷ್ಠೆ,ಜಂಗಮದಾಸೋಹಭಾವ ಅವರ ವಚನಗಳಲ್ಲಿ ಎದ್ದುಕಾಣುವ ಶರಣತತ್ತ್ವ,ವಚನಸತ್ತ್ವ.ಅಷ್ಟಾಗಿಯೂ ಚಂದಯ್ಯನವರು ತಾವು ಕಂಡುಂಡ ಸಮಾಜದ ಡಾಂಬಿಕತೆ,ಆಡಂಬರ,ಹುಸಿಪೊಗರು ,ಅರ್ಥಹೀನ ಧಾರ್ಮಿಕ ಆಚರಣೆಗಳನ್ನು ಖಂಡಿಸದೆ ಬಿಟ್ಟಿಲ್ಲ.
 ಕೈದ ಹಿಡಿದಾಡುವವರೆಲ್ಲ ಇರಿವರೆ ?
 ಸಾಧನೆಯ ಮಾಡುವವರೆಲ್ಲ ಕಾದಬಲ್ಲರೆ ?
 ಅರ್ಥಿಗೆ ಮಾಡುವ ಕೃತ್ಯವಂತರೆಲ್ಲ ಭಕ್ತರಪ್ಪರೆ ?
 ಅದು ಚಂದೇಶ್ವರ ಲಿಂಗಕ್ಕೆ ಮುಟ್ಟದ ಮಾಟ
    ಎಂದು ಧನದಾಸೆಗೆ ಜಂಗಮರು,ಪುರೋಹಿತರು ಮಾಡುವ ವಿವಿಧ ಪೂಜೆ,ವ್ರತ ನೇಮಗಳ ಕೃತ್ರಿಮತೆಯನ್ನು ವಿಡಂಬಿಸಿದ್ದಾರೆ.ಕೈಯಲ್ಲಿ ಆಯುಧ ಹಿಡಿದವರೆಲ್ಲ ಯುದ್ಧದಲ್ಲಿ ಹೋರಾಡಿ ಶತ್ರುವನ್ನು ಕೊಲ್ಲಬಲ್ಲರೆ ?  ಅದೇ ಆಗ ಯುದ್ಧಾಭ್ಯಾಸ ಆರಂಭಿಸಿದವರು ಯುದ್ಧದಲ್ಲಿ ಶತ್ರುಸೈನ್ಯದೊಂದಿಗೆ ಹೋರಾಡಬಲ್ಲರೆ?ಹಣದಾಸೆಗಾಗಿ ಭಕ್ತಿಯನ್ನಾಚರಿಸುವವರು ಶಿವಭಕ್ತರಾಗುವರೆ ? ಹಣದ ಆಸೆಗಾಗಿ ಆ ಪೂಜೆ,ಈ ಸೇವೆ ಎಂದು ದುಡ್ಡುವಸೂಲು ಮಾಡುವವರು ನಿಜಭಕ್ತರಲ್ಲ,ಹಣಪಡೆದು ಮಾಡುವ ಅರ್ಚನೆ,ವ್ರತ ನಿಯಮಗಳು ಶಿವನಿಗೆ ಪ್ರಿಯವಲ್ಲ ಎನ್ನುತ್ತಾರೆ ಚಂದಯ್ಯನವರು.
         ಶಿವನನ್ನು ಮೆಚ್ಚಿಸಲು ಭಕ್ತಿಯನ್ನಾಚರಿಸಬೇಕಲ್ಲದೆ ಜನರ ಮೆಚ್ಚಿಗೆಗಾಗಿ ಇಲ್ಲವೆ ಆಳರಸರ ಅಥವಾ ಚೋರರಭಯದಿಂದ ಶಿವನಿಷ್ಠೆಯನ್ನು ನಟಿಸಬಾರದು ಎನ್ನುವುದನ್ನು ಮಾರ್ಮಿಕವಾಗಿ ನುಡಿದಿದ್ದಾರೆ ಚಂದಯ್ಯನವರು ;
 ಇದಿರ ಭೂತಹಿತಕ್ಕಾಗಿ ಗುರುಭಕ್ತಿಯ ಮಾಡಲಿಲ್ಲ
ಅರ್ತಿಗಾರಿಕೆಯ ಲಿಂಗವ ಬಿಟ್ಟು ಪೂಜಿಸಲಿಲ್ಲ
ರಾಜ ಚೋರರ ಭಯಕ್ಕಂಜಿ ಜಂಗಮದಾಸೋಹ ಮಾಡಲಿಲ್ಲ.
ಆವ ಕೃಪೆಯಾದಡೂ ಭಾವಶುದ್ಧವಾಗಿರಬೇಕು,
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗವನರಿಯಬಲ್ಲಡೆ
     ಚಂದಯ್ಯನವರು ಕಾಟಾಚಾರದ ಲಿಂಗಭಕ್ತಿಯ ಲಿಂಗವಂತರು – ಜಂಗಮರನ್ನು ಒಪ್ಪುತ್ತಿರಲಿಲ್ಲ.ಕಾಯಗುಣವಳಿದಲ್ಲದೆ ಲಿಂಗಧಾರಿಯಲ್ಲ,ಜಂಗಮನಲ್ಲ ಎನ್ನುವ ನಿಲುವ ಅಳವಡಿಸಿಕೊಂಡ ಚಂದಯ್ಯನವರು ಆತ್ಮಜ್ಞಾನವು ಅಳವಟ್ಟವನೇ ನಿಜಶರಣ,ನಿಜ ಜಂಗಮ ಎಂದು ನಂಬಿದವರು ;
  ಕಾಯದಿಂದ ಕಾಬುದು ಕುರುಡಿನ ಮೂರ್ತಿಯು
ಆತ್ಮದಿಂದ ಕಾಬುದು ಅರಿವಿನ ಮೂರ್ತಿಯು
ಅರಿವ ಕುರುಹ ಮರೆದಲ್ಲಿ
ಪರಮ ದಾಸೋಹದಿಂದ ಪರಶಿವಮೂರ್ತಿಯ ಕಾಣಬಂದಿತ್ತು
ಚೆನ್ನಬಸವಣ್ಣಪ್ರಿಯ ಚಂದೇಶ್ವರ ನೀನೇ ಬಲ್ಲೆ.
      ‌ಕಾಯಕದ ಮಹತಿಯನ್ನು ಒತ್ತಿಹೇಳುತ್ತ ಚಂದಯ್ಯನವರು ಗುರುವಾದರೂ ಸರಿಯೆ,ಲಿಂಗವಾದರೂ ಸರಿಯೆ ಅಥವಾ ಜಂಗಮವಾದರೂ ಸರಿಯೇ ಕಾಯಕವನ್ನು ಮಾಡಿಯೇ ಜೀವಿಸಬೇಕು.ಕಾಯಕದಿಂದ ಯಾರಿಗೂ ವಿನಾಯತಿ ಇಲ್ಲ ಎನ್ನುತ್ತಾರೆ ;
  ಗುರುವಾದಡೂ ಕಾಯಕದಿಂದಲೆ ಜೀವನ್ಮುಕ್ತಿ,
 ಲಿಂಗವಾದಡೂ ಕಾಯಕದಿಂದಲೇ ವೇಷದ ಪಾಶ ಹರಿವುದು
ಗುರುವಾದಡೂ ಚರಸೇವೆಯ ಮಾಡಬೇಕು
ಲಿಂಗವಾದಡೂ ಚರಸೇವೆಯ ಮಾಡಬೇಕು
ಜಂಗಮವಾದಡೂ ಚರಸೇವೆಯ ಮಾಡಬೇಕು
ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು.
   ‌ವ್ರತ ನೇಮಗಳೆಂದು ವ್ಯರ್ಥ ಬಳಲಿ ಬೆಂಡಾಗುತ್ತಿರುವ ಜನರಿಗೆ ನೇಮ ವ್ರತಗಳಿಗೆ ತುದಿ ಮೊದಲಿಲ್ಲ,ಒಂದು ನೇಮಪೂರೈಸಿದ ಬಳಿಕ ಮತ್ತೊಂದು ನೇಮ,ಅದಾದ ಬಳಿಕ‌ಮಗದೊಂದು ನೇಮ.ಹೀಗೆ ವ್ರತನೇಮಗಳ ಸರಣಿಸಾಲು ಸಾಗುತ್ತದೆಯೇ ಹೊರತು ಈ ವ್ರತನೇಮಗಳಿಂದ ಆತ್ಮಜ್ಞಾನವಾಗಲಿ,ಪರಮಾತ್ಮನ ಸಾಕ್ಷಾತ್ಕಾರವಾಗಲಿ ಸಾಧ್ಯವಿಲ್ಲದ್ದರಿಂದ ವ್ರತನಿಯಮಗಳ ದ್ವಂದ್ವ,ಗೊಂದಲಬೇಡವೆನ್ನುತ್ತಾರೆ ಚಂದಯ್ಯನವರು ;
  ಗೋಡೆಯ ತೊಳೆದು ಕೆಸರ ಕೆಡಿಸಿಹೆನೆಂದಡೆ
 ಅದಾರ ವಶ?
ನೇಮಕ್ಕೆ ಕಡೆ ನಡುಮೊದಲಿಲ್ಲ.
ಒಂದಬಿಟ್ಟು ಒಂದ ಹಿಡಿದಿಹೆನೆಂದಡೆ
ಸಂದಿಲ್ಲದ ಸಂಶಯ
ಅದು ಚಂದೇಶ್ವರ ಲಿಂಗಕ್ಕೆ ದೂರ ಮಡಿವಾಳಯ್ಯ.
       ನಡೆನುಡಿಗಳು ಒಂದಾದವರೆ ಶ್ರೇಷ್ಠರು,ನಡೆ ನುಡಿ ಶುದ್ಧವಿದ್ಧವರನ್ನು ಮಾತ್ರ ಶಿವನು‌ಒಪ್ಪುತ್ತಾನಲ್ಲದೆ ನಡೆಯೊಂದು ನುಡಿ ಇನ್ನೊಂದಾದ ಜೀವರುಗಳನ್ನು ಶಿವನೊಪ್ಪಲಾರ ಎನ್ನುವುದನ್ನು ಸಾರುವ ಚಂದಯ್ಯನವರ ವಚನ ;
  ನುಡಿದ ಮಾತಿಂಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗನೋಡಾ,
ಹಿಡಿದ ಕುಳಕ್ಕೆ ಹಾನಿಬಂದಲ್ಲಿ
ಒಡಲನಿರಿಸುವದೆ ಭಂಗ ನೋಡಯ್ಯಾ
ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರಲಿಂಗವಾದಡೂ ತಪ್ಪನೊಳಕೊಳ್ಳ
ಕಾಣಾ ಮಡಿವಾಳಯ್ಯಾ.
      ಶಿವಭಕ್ತರು ಸತ್ಯಶುದ್ಧಕಾಯಕವನ್ನಾಚರಿಸಬೇಕು.ಕಾಯಕದಿಂದ ಬಂದ ದ್ರವ್ಯದಲ್ಲಿಯೇ ಗುರು ಲಿಂಗ ಜಂಗಮಸೇವೆಯನ್ನಾಚರಿಸಬೇಕಲ್ಲದೆ ಹೊನ್ನಿನ ಆಸೆಗೆ ವಾಮಮಾರ್ಗವ ಹಿಡಿದು ಧನ ಸಂಪಾದಿಸಿ ಆ ಧನದಲ್ಲಿ ಪೂಜೆ ಮಾಡಿದರೆ ಅದು ಶಿವನಿಗೆ ಒಪ್ಪಿಗೆಯಾಗದು ಎನ್ನುತ್ತಾರೆ ಚಂದಯ್ಯನವರು ;
 ಸತ್ಯಶುದ್ಧ ಕಾಯಕದಿಂದ ಬಂದ ದ್ರವ್ಯದಲ್ಲಿ
ಚಿತ್ತವಿಚ್ಛಂದವಾಗದಿರಬೇಕು
ನೇಮದ ಕೂಲಿಯಂದಿನ ನಿತ್ಯನೇಮದಲ್ಲಿ ಸಂದಿಲ್ಲದಿರಬೇಕು
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದಡೆ
ತಾ ಮಾಡುವ ಸೇವೆಯ ನಷ್ಟವಯ್ಯಾ
ನಿನ್ನಾಸೆಯ ವೇಷದ ಪಾಶಕ್ಕೆ ನೀನೇ ಹೋಗಿ.
ನನಗೆ ನಮ್ಮ ಜಂಗಮದ ಪ್ರಸಾದದಾಗೆ
ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯ.
     ಕಲ್ಯಾಣದಲ್ಲಿ ತ್ರಿಪುರಾಂತಕನ ಕೆರೆಯ ಬಳಿ ‘ ನುಲಿಯಚಂದಯ್ಯನ ಗವಿ’ ಎನ್ನುವ ಒಂದು ಗವಿ‌ಇದ್ದು ಚಂದಯ್ಯನವರು ಕಲ್ಯಾಣದಲ್ಲಿದ್ದ ಅವಧಿಯಲ್ಲಿ ಈ ಗುಹೆಯಲ್ಲಿ  ಶಿವಯೋಗಸಾಧನೆ ಸಾಧಿಸಿರಬೇಕು.ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ವಚನಗಳ ರಕ್ಷಣೆಗೈಯುತ್ತ ಉಳವಿಗೆ ಹೋದ ಚಂದಯ್ಯನವರು ಉಳವಿ,ಎಣ್ಣೆಹೊಳೆ,ನಂದಿ,ಕಲ್ಲತ್ತಿಗೆರೆ,ನುಲೇನೂರು,ಮುರುಕ ನಂದಿಗಳ ಮೂಲಕ ಬಂದು ನುಲೆನೂರಿನಲ್ಲಿ ಶಿವೈಕ್ಯರಾಗಿದ್ದು ಅಲ್ಲಿ ಅವರ ಸಮಾಧಿ ಇರುತ್ತದೆ.ಪ್ರತಿವರ್ಷ ಅಶ್ವಯುಜ ಮಾಸದ ಮೊದಲ ಸೋಮವಾರದಂದು ನುಲೇನೂರಿನಲ್ಲಿ ನುಲಿಯ ಚಂದಯ್ಯನವರ ಜಾತ್ರೆ ನಡೆಯುತ್ತದೆ.
            ೧೮.೦೮.೨೦೨೪

About The Author