ಬಸವಣ್ಣನವರ ಶಿವದರ್ಶನ–೦೭ : ಶಿವಮಂತ್ರದಿಂದ ಸರ್ವಸಿದ್ಧಿಗಳು ಲಭಿಸುತ್ತವೆ : ಮುಕ್ಕಣ್ಣ ಕರಿಗಾರ

ಬಸವಣ್ಣನವರ ಶಿವದರ್ಶನ–೦೭  :
  ಶಿವಮಂತ್ರದಿಂದ ಸರ್ವಸಿದ್ಧಿಗಳು ಲಭಿಸುತ್ತವೆ
            ಮುಕ್ಕಣ್ಣ ಕರಿಗಾರ
 ಅಕಟಕಟಾ! ಬೆಡಗು ಬಿನ್ನಾಣವೆಂಬುದೇನೋ ?
 ‘ ಓಂ ನಮಃ ಶಿವಾಯ’ ಎಂಬುದೇ ಮಂತ್ರ ;
  ‘ ಓಂ ನಮಃ ಶಿವಾಯ’ ಎಂಬುದೇ ತಂತ್ರ ;
  ನಮ್ಮ ಕೂಡಲ ಸಂಗಮದೇವರ ನೆನೆವುದೇ ಮಂತ್ರ.
       ಜಗದ್ವಂದ್ಯರಾಗಬೇಕು,ಜನಪ್ರಿಯರಾಗಬೇಕು ಎನ್ನುವ ಕೀಳುವಾಂಛೆಯಿಂದ ಕೆಲವು ಜನರು ತಾಂತ್ರಿಕ ವಿದ್ಯೆಯ ಮೊರೆಹೋಗುತ್ತಿದ್ದಾರೆ.ತಾಂತ್ರಿಕವಿದ್ಯೆಯು ನಿರ್ದಿಷ್ಟಪಡಿಸಿದ ವಿವಿಧ ಮಂತ್ರ ತಂತ್ರಗಳಿಂದ ತಮ್ಮ ಅಭೀಷ್ಟಸಿದ್ಧಿಸಿಕೊಳ್ಳುತ್ತಾರೆ ವಾಮಾಚಾರಿಗಳು.ಇದು ಸಲ್ಲದು ಎನ್ನುವ ಬಸವಣ್ಣನವರು ‘ ಓಂ ನಮಃ ಶಿವಾಯ’ ಎನ್ನುವುದು ಎಲ್ಲ ಮಂತ್ರಗಳಿಗೂ ಮಿಗಿಲಾದ ಮಂತ್ರವಾಗಿದ್ದು,ಮಹಾಮಂತ್ರ ಎನ್ನಿಸಿಕೊಂಡಿದೆ.ಶಿವಮಂತ್ರಸಾಧನೆಯಿಂದ ಸಕಲ ಸಿದ್ಧಿಗಳನ್ನು ಪಡೆಯಬಹುದು,ಸಕಲ ವಿದ್ಯೆಗಳನ್ನು ಕೈವಶ ಮಾಡಿಕೊಳ್ಳಬಹುದು; ಇಂತಹ ಶಿವಮಹಾಮಂತ್ರವನ್ನು ಬಿಟ್ಟು ಅನ್ಯ ಕ್ಷುದ್ರಮಂತ್ರ- ತಂತ್ರಗಳ ಮೊರೆಹೋಗುವವರು ದಡ್ಡರಲ್ಲವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಈ ವಚನದಲ್ಲಿ.
      ಬೆಡಗು- ಬಿನ್ನಾಣಗಳು ಪವಾಡಗಳಿಗೆ ಸಂಬಂಧಿಸಿದ ಸಂಗತಿಗಳಾಗಿದ್ದು ತಾಂತ್ರಿಕ ಸಾಧಕರುಗಳು ತಮ್ಮ ತಂತ್ರವಿದ್ಯಾ ನೈಪುಣ್ಯ,ಕೈ ಚಳಕದಿಂದ ಜನರನ್ನು ತಮ್ಮತ್ತ ಆಕರ್ಷಿತರನ್ನಾಗಿ ಮಾಡಿಕೊಳ್ಳುತ್ತಾರೆ.ಜನಸಾಮಾನ್ಯರಿಗೆ ಅದ್ಭುತ ಎನ್ನಿಸಬಹುದಾದ ಕೆಲವು ಕ್ಷುದ್ರಸಿದ್ಧಿಗಳನ್ನು ಸಂಪಾದಿಸಿಕೊಂಡು ಜನರೆದುರು ದೊಡ್ಡವರಾಗುತ್ತಾರೆ.ಭೂತ,ಪ್ರೇತ,ಬೇತಾಳಗಳನ್ನು ವಶಪಡಿಸಿಕೊಂಡು ಅವುಗಳ ಮೂಲಕ ತಮ್ಮ ಕಾರ್ಯಸಾಧಿಸಿಕೊಳ್ಳುವ ತಾಂತ್ರಿಕ ಸಾಧಕರುಗಳು ಆಧ್ಯಾತ್ಮಿಕವಾಗಿ ದೊಡ್ಡ ಸೊನ್ನೆಯೇ ಆಗಿರುತ್ತಾರೆ.ಆದರೆ ಮುಗ್ಧ ಜನರು ಅಧ್ಯಾತ್ಮ ಯಾವುದು,ತಾಂತ್ರಿಕ ಸಾಧನೆ ಯಾವುದು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ತಾಂತ್ರಿಕ ವಿದ್ಯಾ ಸಾಧಕರುಗಳನ್ನೇ ದೊಡ್ಡ ಶರಣರು,ಸಂತರು ಎಂದು ಭ್ರಮಿಸಿ,ಮೋಸ ಹೋಗುತ್ತಾರೆ.ತಾಂತ್ರಿಕ ಸಾಧಕರುಗಳ ‘ ಕಣ್ಕಟ್ಟು ವಿದ್ಯೆ’ ಗಳಿಗೆ ಬಲಿಯಾಗದೆ ಭಕ್ತರು ‘ ಓಂ ನಮಃ ಶಿವಾಯ’ ಎನ್ನುವ ಶಿವಷಡಕ್ಷರಿ ಮಹಾಮಂತ್ರವನ್ನು ಅನುಗಾಲವು ಜಪಿಸುತ್ತಿರಬೇಕು.’ ಓಂ ನಮಃ ಶಿವಾಯ’ ಮಂತ್ರವನ್ನು ಸದಾ ಕಾಲ ಜಪಿಸುತ್ತಿದ್ದರೆ ಎಲ್ಲ ಬಗೆಯ ಪವಾಡಗಳನ್ನು ಮಾಡಬಹುದು,ಲೀಲೆಗಳನ್ನು ತೋರಬಹುದು.
       ಉದರನಿಮಿತ್ತವಾಗಿ ಹತ್ತೆಂಟು ದೈವಗಳನ್ನು ಪೂಜಿಸುತ್ತ,ಹಲವಾರು ಕ್ಷುದ್ರವಿದ್ಯೆಗಳನ್ನು ಅನುಷ್ಠಾನಿಸುತ್ತ ವ್ಯರ್ಥ ಹಾಳಾಗುವ ತಾಂತ್ರಿಕೋಪಾಸಕರುಗಳ ಬಗ್ಗೆ ಬಸವಣ್ಣನವರು ಈ ವಚನದಲ್ಲಿ ಅನುಕಂಪ ವ್ಯಕ್ತಪಡಿಸಿದ್ದಾರೆ.ಕೇವಲ ಹೊಟ್ಟೆಹೊರೆಯಲು ಬಗೆಬಗೆಯ ಮಂತ್ರ- ತಂತ್ರಗಳ ಸಾಧನೆ ಕೈಗೊಳ್ಳುವ ಬದಲು ‘ ಓಂ ನಮಃ ಶಿವಾಯ’ ಎನ್ನುವ ಮಂತ್ರ ಜಪಿಸಬಾರದೆ ? ಶಿವಮಹಾಮಂತ್ರದ ಅನವರತ ಜಪ- ಧ್ಯಾನಗಳಿಂದ ಪ್ರಕೃತಿಯ ಮೇಲೆ ಪ್ರಭುತ್ವವು ಸಿದ್ಧಿಸಿ ಶಿವಯೋಗಿಯು ಅಸಾಧ್ಯಕಾರ್ಯಗಳನ್ನು ಸಾಧಿಸಬಲ್ಲನು,ಅಘಟಿತಗಳನ್ನು ಘಟಿಸುವಂತೆ ಮಾಡಬಲ್ಲನು.ಶಿವಯೋಗಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಈ ಪ್ರಪಂಚದಲ್ಲಿ.ಅಂದಬಳಿಕ ಶಿವಮಂತ್ರವನ್ನು ಬಿಟ್ಟು ಅನ್ಯಮಂತ್ರಗಳನ್ನು ಆಶ್ರಯಿಸುವುದು ದಡ್ಡತನವಲ್ಲವೆ ? ‘ಓಂ ನಮಃ ಶಿವಾಯ’ ಎನ್ನುವ ಶಿವಮಹಾಮಂತ್ರದ ಅನವರತ ಜಪ- ಧ್ಯಾನಗಳಿಂದ ಇಹಲೋಕದಲ್ಲಿ ಭೋಗವೂ ಪರಲೋಕದಲ್ಲಿ ಮೋಕ್ಷವೂ ಪ್ರಾಪ್ತವಾಗುತ್ತಿರುವಾಗ ಕೇವಲ ಐಹಿಕ ಬದುಕಿನ ಕ್ಷಣಿಕ ತೃಪ್ತಿ ನೀಡುವ ಕ್ಷುದ್ರ ಮಂತ್ರ ತಂತ್ರಗಳ ಸಾಧಕರುಗಳು ಮೂರ್ಖರಲ್ಲವೆ ? ಐಹಿಕಾಮುಷ್ಮಿಕ ಫಲ ಪದವಿಗಳನ್ನು ನೀಡುವ ‘ಓಂ ನಮಃ ಶಿವಾಯ’ ಮಹಾಮಂತ್ರವನ್ನು ಜಪಿಸುತ್ತ ಬಹುಬಾಧೆ ಮತ್ತು ಭವಬಾಧೆಯಿಂದ ಮುಕ್ತರಾಗಬಹುದು.
           ೧೨.೦೮.೨೦೨೪

About The Author