ಶ್ರಾವಣ ಬಂತಂದ್ರೆ ನವೋಲ್ಲಾಸ ಬಂದಂತೆ – ಮುದ್ನೂರ

ಶಹಾಪುರಃ ಶ್ರಾವಣ ಎಂಬ ಹೆಸರೇ ನವೋಲ್ಲಾಸ ತರುವಂತಹದ್ದು, ಬೇಸಿಗೆಯ ಬಿಸಿಲಲಿ ಬೆಂದು ಮಳೆಗಾಲ ಆರಂಭವಾಗಿ ಮಳೆ ಬಂದು ಎಲ್ಲಡೆ ಹಸಿರೊತ್ತ ಬೆಟ್ಟ ಗುಡ್ಡಗಳು ಹುಲ್ಲು ಕಡ್ಡಿಗಳು ನಳನಳಿಸುವ ವಾತವಾರಣ ಅಷ್ಟೆ ಅಲ್ಲದೆ ಅಲ್ಲಲ್ಲಿ ಹಳ್ಳ, ಕೊಳ್ಳ ಹೊಳೆ ಧುಮ್ಮಿಕ್ಕಿ ಹರಿಯುವ ನಾದ ಕೇಳುವ ಮೂಲಕ ಮನದಲ್ಲಿ ಶುಭ್ರತೆಯ ಭಾವ ಮೂಡಿಸುತ್ತಿದೆ ಅಂದರೆ ಅದು ಶ್ರಾವಣ ಮಾಸವೇ ಅಂದ್ಕೊಳ್ಳಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ತಿಳಿಸಿದರು.ನಗರದ ನಂದಗೋಕುಲ ಪದವಿ ಮಹಾವಿದ್ಯಾಲಯದಲ್ಲಿ ಚಿರಂಜೀವಿ ಸಾಂಸ್ಕೃತಿಕ ಸಾಮಾಜಿಕ ಕಲಾ ಸಂಸ್ಥೆ(ರಿ) ಸೋಮವಾರ ಆಯೋಜಿಸಿದ್ದ ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕವಿ ದ.ರಾ.ಬೇಂದ್ರೆಯವರ ರಚಿಸಿ ಕಾವ್ಯದಂತೆ ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ ಬಂತು ಬೀಡಿಗೆ ಎಂದು ಶ್ರಾವಣ ಮಾಸದಲ್ಲಿ ಕಣ್ಣಿಗೆ ಹಿತ ನೀಡುವ ಪ್ರಕೃತಿಮಯ ವಾತವಾರಣದ ಕುರಿತು ಸುಂದರ ಸಾಲುಗಳನ್ನು ಬರೆದಿದ್ದಾರೆ. ಶ್ರಾವಣ ಕಾಡುಮೇಡು ಸೇರಿದಂತೆ ನಾಡಿನಲ್ಲಿ ಪ್ರತಿ ಗೂಡಿನಲ್ಲಿ, ದೇವಸ್ಥಾನಗಳಲ್ಲಿ ಶ್ರಾವಣ ಆಚರಣೆಯ ಸಂಪ್ರದಾಯ ಪಾರಂಪರೆ ಕಾಣಬಹುದು.ಭಾರತೀಯ ಸಾಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ಅತಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಇಡಿ ಮಾಸ ನಾಗರಾಧನೆ ಸೇರಿದಂತೆ ಮಂಗಳಗೌರಿ ವ್ರತ, ವರಮಹಾಲಕ್ಷ್ಮೀ ವ್ರತ, ಗಣೇಶ ಹಬ್ಬ ಹೀಗೆ ಸಾಲು ಸಾಲು ಹಬ್ಬಗಳು ವಿಧ ವಿಧದ ಸಂಸ್ಕೃತಿ ಪದ್ಧತಿಯಂತೆ ಆಚರಿಸಲಾಗುತ್ತದೆ. ದೇವರ ಸ್ಮರಣೆಯಿಂದ ಮಾನಸಿಕವಾಗಿ ಬಲ ಹೆಚ್ಚಾಗಲಿದೆ ಒಳಿತ್ಯಾವದು ಕೆಡಕ್ಯಾವದು ಎಂಬುದು ಗ್ರಹಿಸುವ ಶಕ್ತಿ ಒದಗಿ ಬರಲಿದೆ. ಇದರಿಂದ ಬದುಕಿನ ಬಂಡಿ ಸನ್ಮಾರ್ಗದತ್ತ ಸಾಗಲಿದೆ. ಹೀಗಾಗಿ ನಮ್ಮ ಪೂರ್ವಜರು ಇಂತಹ ಹಬ್ಬ ಹರಿದಿನಗಳ ಆಚರಣೆಗೆ ತಂದಿದ್ದಾರೆ. ಇದನ್ನು ನಾವೆಲ್ಲ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ, ನಾಗನಟಿಗಿಯ ಸಿದ್ರಾಮಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಎಂ.ನಾರಾಯಣ ಉದ್ಘಾಟಿಸಿದರು. ಕಲಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಬೋನೇರ ಅಧ್ಯಕ್ಷತೆವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಮೊಹ್ಮದ್ ಇಮ್ರಾನ್ ಇದ್ದರು. ಕನ್ನಡಪರ ಹೋರಾಟಗಾರ ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿ ವಂದಿಸಿದರು.

About The Author