ಬಸವಣ್ಣನವರ ಶಿವದರ್ಶನ –೦೬
ಶಿವನಾಮವು ಭಕ್ತರ ಸಕಲೇಷ್ಟಸಿದ್ಧಿಯ ಸಾಧನವು
ಮುಕ್ಕಣ್ಣ ಕರಿಗಾರ
ಜಪ- ತಪ- ನಿತ್ಯನೇಮವೆನಗುಪದೇಶ ;
ನಿಮ್ಮ ನಾಮವೆನಗೆ ಮಂತ್ರ.
ಶಿವನಾಮವೆನಗೆ ತಂತ್ರ,ಕೂಡಲ ಸಂಗಮದೇವಯ್ಯಾ,
ನಿಮ್ಮ ನಾಮ ಕಾಮಧೇನುವೆನಗೆ.
ಶಿವೋಪದೇಶ,ಶಿವಮಂತ್ರದೀಕ್ಷೆ ಪಡೆದ ಶಿವಭಕ್ತನು ನಿತ್ಯಜಪತಪನೇಮಗಳನ್ನಾಚರಿಸುತ್ತ,ಅನು ಗಾಲವು ಶಿವನ ಸ್ಮರಣೆಯೊಳಿರಬೇಕು.ಶಿವನಾಮ ಸ್ಮರಣೆ,ಜಪ ತಪದಿಂದ ಭಕ್ತರು ತಮಗೆ ಬೇಕಾದುದನ್ನು ಪಡೆಯಬಹುದಾದ್ದರಿಂದ ಶಿವನಾಮವು ಕಾಮಧೇನುವಿನಂತೆ ಎನ್ನುವ ಬಸವಣ್ಣನವರು ಶಿವಸಂಸ್ಕಾರದ ಮಹತ್ವವನ್ನು ಈ ವಚನದಲ್ಲಿ ಹೇಳಿದ್ದಾರೆ.
ಶಿವಮಂತ್ರೋಪದೇಶ ಪಡೆದ ಶಿವಭಕ್ತರು ನಿತ್ಯನೈಮಿತ್ತಿಕ ಶಿವ ಪೂಜೆ,ಅರ್ಚನೆ- ಆರಾಧನೆಗಳನ್ನು ಕೈಗೊಳ್ಳಲೇಬೇಕು.ಶಿವಮಂತ್ರವನ್ನು ಸದಾ ಕಾಲ ಸ್ಮರಿಸುವ ಜಪ ಮತ್ತು ಶಿವಧ್ಯಾನದೊಳು ಸಮಾಧಿಸ್ಥಿತನಾಗುವ ಶಿವತಪಸ್ಸುಗಳು ಶಿವಭಕ್ತರು ಕೈಗೊಳ್ಳಬೇಕಾದ ನಿತ್ಯಕರ್ಮಗಳು.ಶಿವನಾಮವೆ ಮಹಾಮಂತ್ರವು.ಶಿವನಾಮ ಸ್ಮರಣೆಯಿಂದ ಭಕ್ತರು ತಾವು ಮನಸ್ಸಿನಲ್ಲಿ ಬಯಸಿದ ಭೋಗ- ಭಾಗ್ಯಗಳನ್ನು ಪಡೆಯಬಲ್ಲರು.ಶಿವನಾಮವು ಸಕಲ ಇಷ್ಟಾರ್ಥಗಳನ್ನು ಈಡೇರಿಸಿಕೊಡುವ ಸುಲಭ ತಂತ್ರವೂ ಹೌದು.ತಂತ್ರವಿದ್ಯಾಸಾಧನೆಗಾಗಿ ಕ್ಷುದ್ರಸಾಧಕರು ಭೀಕರವಾದ ವ್ರತಾಚರಣೆಗಳನ್ನು ಕೈಗೊಳ್ಳುತ್ತಾರೆ.ಅಂತಹ ಭೀಕರ ಆಚರಣೆಗಳ ಅಗತ್ಯ ಇಲ್ಲ ಎನ್ನುವ ಬಸವಣ್ಣನವರು ಶಿವನಾಮದ ನಿರಂತರ ಸ್ಮರಣೆಯಿಂದ ಭಕ್ತರಸರ್ವಮನೋಭಿಷ್ಟಗಳು ಕೈಗೂಡುವುದರಿಂದ ಶಿವನಾಮವೇ ತಂತ್ರ.ಮುಂದುವರೆದು ಬಸವಣ್ಣನವರು ಶಿವನಾಮವೇ ಭಕ್ತರ ಕಾಮಧೇನು ಎನ್ನುತ್ತಾರೆ.ದೇವಲೋಕದ ಹಸುವಾಗಿರುವ ಕಾಮಧೇನು ಬೇಡಿದ ಎಲ್ಲವನ್ನೂ ನೀಡುತ್ತದೆ.ಶಿವನಾಮವು ತನ್ನನ್ನು ಸ್ಮರಿಸುವ ಭಕ್ತರಿಗೆ ಕಾಮಧೇನುವಿನಂತೆ ವರ್ತಿಸಿ ಅವರ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತದೆ.
ಶಿವಮಂತ್ರೋಪದೇಶ,ಶಿವದೀಕ್ಷೆಯನ್ನು ಗುರುಮುಖೇನ ಪಡೆದ ಶಿವಭಕ್ತರು ಬದುಕಿರವವರೆಗೂ ಶಿವಭಕ್ತಿಯನ್ನಾಚರಿಸುತ್ತಿರಬೇಕು. ಇಷ್ಟುವರ್ಷ ಸಾಧನೆ ಮಾಡಿದ್ದೇನೆ,ಶಿವಾನುಗ್ರಹಪ್ರಾಪ್ರಿ ಯಾಯಿತು ಎಂದು ಶಿವಪೂಜೆ,ಶಿವಧ್ಯಾನಗಳನ್ನು ಬಿಡುವಂತಿಲ್ಲ.ನಿಷ್ಠಾವಂತ ಶಿವಭಕ್ತನು ತನ್ನ ಕೊನೆಯ ಉಸಿರಿರುವವರೆಗೆ ಶಿವನಾಮ ಸ್ಮರಣೆ ಮಾಡುತ್ತಿರಬೇಕು.ಇದುವೆ ಶಿವನಾಮ ನಿತ್ಯೋಪದೇಶದ ಬೆಡಗು.ಶಿವನಾಮ ಎನ್ನುವ ಮಹಾಮಂತ್ರವು ಭಕ್ತರಿಗೆ ಭೋಗ ಮೋಕ್ಷವಾದಿ ಸರ್ವವನ್ನೂ ಕೊಡುತ್ತಿರುವಾಗ ಶಿವಮಂತ್ರವಲ್ಲದೆ ಅನ್ಯಕ್ಷುದ್ರ ಮಂತ್ರಗಳ ಹಂಗೇಕೆ?ಶಿವನಾಮವು ಕಾಮಧೇನುವಿನಂತೆ ಶಿವಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವಾಗ ಶಿವನಾಮವಲ್ಲದೆ ಅನ್ಯ ದೇವರುಗಳ ಮಂತ್ರಗಳ ಅವಲಂಬನೆ ಏಕೆ? ಶಿವನಾಮದಲ್ಲಿ ನಿಜನಿಷ್ಠೆಯುಳ್ಳವನೇ ನಿಜವಾದ ಶಿವಭಕ್ತನು.ಶಿವಾಚಾರಸಂಪನ್ನನೇ ಶಿವಯೋಗಿಯು.
೧೧.೦೮.೨೦೨೪
Re
|