ಬಸವಣ್ಣನವರ ಶಿವದರ್ಶನ –೦೫ ;; ರುದ್ರಾಕ್ಷಿ ಧರಿಸುವವರು ಶಿವಸ್ವರೂಪರು

  1. ಬಸವಣ್ಣನವರ ಶಿವದರ್ಶನ –೦೫

ರುದ್ರಾಕ್ಷಿ ಧರಿಸುವವರು ಶಿವಸ್ವರೂಪರು

ಮುಕ್ಕಣ್ಣ ಕರಿಗಾರ

ಅಯ್ಯಾ,ಎನಗೆ ರುದ್ರಾಕ್ಷಿಯೇ ಸರ್ವಪಾವನ ;
ಅಯ್ಯಾ,ಎನಗೆ ರುದ್ರಾಕ್ಷಿಯೇ ಸರ್ವಸಿದ್ಧಿ.
ಅಯ್ಯಾ,ನಿಮ್ಮ ಪಂಚವಕ್ತ್ರಗಳೇ
ಪಂಚಮುಖದ ರುದ್ರಾಕ್ಷಿಗಳಾದುವಾಗಿ,
ಅಯ್ಯಾ,ಕೂಡಲ ಸಂಗಮದೇವಾ,
ಎನ್ನ ಮುಕ್ತಿಪಥಕೆ ಈ ರುದ್ರಾಕ್ಷಿ ಸಾಧನವಯ್ಯಾ.

ಶಿವನಿಗೆ ರುದ್ರಾಕ್ಷಿಯು ಅತ್ಯಂತ ಪ್ರಿಯವಾದುದು.ತನ್ನ ಕೊರಳು,ಬಾಹು,ಶಿರಸ್ಸು ಸೇರಿದಂತೆ ದೇಹದ ವಿವಿಧ ಅಂಗಗಳಲ್ಲಿ ರುದ್ರಾಕ್ಷಿಧರಿಸಿದ್ದಾನೆ ಶಿವನು.ರುದ್ರಾಕ್ಷಿಯುನ್ನು ಧರಿಸಿದವರಲ್ಲಿ ಶಿವನು ಪ್ರಸನ್ನನಾಗುವುದರಿಂದ ರುದ್ರಾಕ್ಷಿಯು ಅತ್ಯಂತ ಪಾವನವಾದುದು.ರುದ್ರಾಕ್ಷಿಯ ಧಾರಣೆಯಿಂದ ಶಿವಾನುಗ್ರಹವು ಸಿದ್ಧಿಸುವುದರಿಂದ ರುದ್ರಾಕ್ಷಿಯು ಸರ್ವಸಿದ್ಧಿಗಳನ್ನೊದಗಿಸಿಕೊಡುವ ಸಾಧನವು.ರುದ್ರಾಕ್ಷಿಗಳಲ್ಲಿ ಏಕಮುಖಿ ರುದ್ರಾಕ್ಷಿಯಿಂದ ಹದಿನಾಲ್ಕು ಮುಖದ ರುದ್ರಾಕ್ಷಿಗಳಿವೆಯಾದರೂ ಅವುಗಳಲ್ಲಿ ಪಂಚಮುಖದ ರುದ್ರಾಕ್ಷಿಯೇ ಶ್ರೇಷ್ಠ ಎನ್ನುತ್ತಾರೆ ಬಸವಣ್ಣನವರು.ಈಶಾನ,ತತ್ಪುರುಷ,ಸದ್ಯೋಜಾತ,ವಾಮದೇವ ಮತ್ತು ಅಘೋರ ಎನ್ನುವ ಶಿವನ ಐದು ಮುಖಗಳೇ ಪಂಚಮುಖಿ ರುದ್ರಾಕ್ಷಿಗಳಾದ್ದರಿಂದ ಇಂತಹ ಪಂಚಮುಖಿ ರುದ್ರಾಕ್ಷಿಯನ್ನು ಧರಿಸಿದ್ದರಿಂದ ಎನಗೆ ಮುಕ್ತಿಪಥವು ಸುಲಭವಾಯಿತು ಎನ್ನುತ್ತಾರೆ ಬಸವಣ್ಣನವರು.

ರುದ್ರನ ಕಣ್ಣಹನಿಗಳಿಂದ ಹುಟ್ಟಿದ ಕಾರಣದಿಂದ ರುದ್ರಾಕ್ಷ ಎನ್ನುವ ಹೆಸರನ್ನು ಪಡೆದ ರುದ್ರಾಕ್ಷಮರದ ಕಾಯಿಗಳು ರುದ್ರಾಕ್ಷಿಗಳಾಗಿ ಶಿವನಿಗೆ ಅತ್ಯಂತಪ್ರಿಯ ಎನ್ನಿಸಿವೆ.ರುದ್ರಾಕ್ಷಿಯು ಶಿವಲಾಂಛನವಾಗಿದ್ದು ಶಿವಭಕ್ತರುಗಳು ರುದ್ರಾಕ್ಷವನ್ನು ಧರಿಸಬೇಕು.ಮುಕ್ತಿಗೆ ರುದ್ರಾಕ್ಷಿ ಧಾರಣೆಯೇ ಮಾರ್ಗ ಎನ್ನುತ್ತಾರೆ ಬಸವಣ್ಣನವರು.ಶಿವನಿಗೆ ಯಾವುದು ಪ್ರಿಯವೋ ಶಿವಭಕ್ತರು ಆ ಕಾರ್ಯ ಮಾಡಬೇಕು.ರುದ್ರಾಕ್ಷಿ ಧಾರಣೆಯಿಂದ ಶಿವನು ಸಂಪ್ರೀತನಾಗುವುದರಿಂದ ಶಿವಭಕ್ತರು ರುದ್ರಾಕ್ಷಿಯನ್ನು ಅವಶ್ಯವಾಗಿ ಧಾರಣೆ ಮಾಡಬೇಕು ಎನ್ನುತ್ತಾರೆ ಬಸವಣ್ಣನವರು.

ಮುಂದುವರೆದು ಬಸವಣ್ಣನವರು ರುದ್ರಾಕ್ಷಿಧರಿಸಿದ ಶಿವಭಕ್ತನನ್ನು ಸಾಕ್ಷಾತ್ ಶಿವಸ್ವರೂಪರು ಎಂದು ಪರಿಗಣಿಸಿ ಗೌರವಾದರ ಸಲ್ಲಿಸುವೆ,ರುದ್ರಾಕ್ಷಿ ಧರಿಸಿದ ಯಾರಾದರೇನು ಅವರು ನಿಕೃಷ್ಟರು,ಭವಿಗಳು ಎನ್ನುತ್ತೇನೆ ಎಂದು ಘೋಷಿಸಿದ್ದಾರೆ ;

ಶ್ರೀ ರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ ;
ಶ್ರೀರುದ್ರಾಕ್ಷಿಯ ಧರಿಸದ ಅಧಮನೆ ಭವಿಯೆಂಬೆ !
ಕೂಡಲ ಸಂಗಮದೇವಯ್ಯಾ,
ಶ್ರೀರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ !

ರುದ್ರಾಕ್ಷಿ ಧರಿಸಿದ ವ್ಯಕ್ತಿಯಲ್ಲಿ ಲಿಂಗ ಮತ್ತು ಜಂಗಮ ಶಿವನನ್ನು ಕಾಣುವ ಬಸವಣ್ಣನವರು ರುದ್ರಾಕ್ಷಿಯನ್ನು ಧರಿಸದವರೇ ಕನಿಷ್ಠ ಜೀವಿಗಳು,ಭವಿಗಳು ಎಂದಿದ್ದಾರೆ.ರುದ್ರಾಕ್ಷಿಯನ್ನು ಧರಿಸುವುದರಿಂದ ಭಕ್ತನು ಶಿವಾನುಗ್ರಹಕ್ಕೆ ಪಾತ್ರನಾಗಿ ಮೋಕ್ಷವನ್ನು ಹೊಂದುವನು.ರುದ್ರಾಕ್ಷವನ್ನು ಧಾರಣೆ ಮಾಡದವನು ಹುಟ್ಟು ಸಾವುಗಳ ಪರಿಭ್ರಮಣ ಚಕ್ರದಲ್ಲಿ ಸಿಕ್ಕು ಒದ್ದಾಡುವ ಭವಿಯಾಗುತ್ತಾನೆ.ರುದ್ರಾಕ್ಷಿ ಧರಿಸಿದವನಲ್ಲಿ ಶಿವನನ್ನೇ ಕಾಣುವ ಮೂಲಕ ಬಸವಣ್ಣನವರು ಶಿವಭಕ್ತರು ಶಿವನಿಗೆ ಪ್ರಿಯವಾದ ಶಿವಲಾಂಛನಗಳನ್ನು ಧರಿಸಬೇಕು ಎನ್ನುತ್ತಾರೆ.

೧೦.೦೮.೨೦೨೪

About The Author