ಕ್ಷೇತ್ರ ದರ್ಶನ : ಝರಣಿ ನರಸಿಂಹ ಕ್ಷೇತ್ರಕ್ಕೆ ಭೇಟಿ

ಕ್ಷೇತ್ರ ದರ್ಶನ : ಝರಣಿ ನರಸಿಂಹ ಕ್ಷೇತ್ರಕ್ಕೆ ಭೇಟಿ : ಮುಕ್ಕಣ್ಣ ಕರಿಗಾರ

ಭಾರತದ ಪುರಾತನ ನರಸಿಂಹ‌ ಕ್ಷೇತ್ರಗಳಲ್ಲಿ ಒಂದಾದ ಬೀದರನ ಝರಣಿ ನರಸಿಂಹ ಕ್ಷೇತ್ರಕ್ಕೆ ಭೀಮನ ಅಮವಾಸೆಯ ದಿನವಾದ ಇಂದು (೦೪.೦೮.೨೦೨೪) ದರ್ಶನಾರ್ಥಿಯಾಗಿ ಭೇಟಿ ನೀಡಿದೆ. ಬೀದರ ನಗರಸಭಾ ವ್ಯಾಪ್ತಿಯಲ್ಲಿ ಬರುವ ಝರಣಿ ನರಸಿಂಹದೇವಸ್ಥಾನವು ಹಳೆಬೀದರ ನಗರಕ್ಕೆ ಹೊಂದಿಕೊಂಡು ಅನತಿ ದೂರದಲ್ಲಿದೆ.ಬೆಟ್ಟದಿಂದ ಸದಾ ಹರಿಯುತ್ತಿರುವ ಝರಿ ನೀರಿನಲ್ಲಿ ನಡೆದುಕೊಂಡು ಹೋಗಿಯೇ ನರಸಿಂಹಸ್ವಾಮಿಯ ದರ್ಶನ ಪಡೆಯಬೇಕಿದ್ದರಿಂದ ಇದನ್ನು ‘ಝರಣಿ ನರಸಿಂಹಕ್ಷೇತ್ರ ‘ಎಂದು ಕರೆಯುತ್ತಾರೆ.ಸುಮಾರು ಎಂಟು ನೂರು ಮೀಟರ್ ಗಳವರೆಗೆ ಕತ್ತಿನ ಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಿ ನರಸಿಂಹದೇವರ ದರ್ಶನ ಪಡೆಯಬೇಕು.ಪುರಾತನ ಗುಹಾದೇವಾಲಯವಾಗಿರುವ ಝರಣಿ ನರಸಿಂಹಸ್ವಾಮಿಯು ಉದ್ಭವಮೂರ್ತಿಯಾಗಿದ್ದು ಜಾಗೃತಕ್ಷೇತ್ರವಾಗಿದೆ.ತ್ರಿಕೂಟ ದೇವಸ್ಥಾನದ ಮಾದರಿಯಲ್ಲಿ ಮೂರು ಗುಹೆಗಳಿದ್ದು ಒಂದರಲ್ಲಿ ನರಸಿಂಹಸ್ವಾಮಿ ಮೂರ್ತಿ ಇದ್ದರೆ ಮತ್ತೊಂದು ಗುಹೆಯಲ್ಲಿ ಶಿವಲಿಂಗವಿದ್ದು ಶಿವಲಿಂಗದ ಎದುರು ನಂದಿ ಇದೆ.ಮತ್ತೊಂದು ಪುಟ್ಟಗುಹೆಯಲ್ಲಿ ಪಾಂಡುರಂಗನ ಫೋಟೋ ಇಟ್ಟಿದ್ದಾರೆ.ಬಹುಶಃ ಹಿಂದೆ ಅದು ಬ್ರಹ್ಮಗುಹೆಯಾಗಿರಬೇಕು.ಹಿಂದಿನ ಕಾಲದಲ್ಲಿ ತ್ರಿದೇವತೆಗಳಾದ ಬ್ರಹ್ಮ,ವಿಷ್ಣು ಮತ್ತು ರುದ್ರ ಈ ಮೂರುದೇವತೆಗಳನ್ನು ಒಂದೆಡೆಯಲ್ಲಿ ಒಟ್ಟಾಗಿ ಪೂಜಿಸುವ ಪದ್ಧತಿ ಇತ್ತು.’ತ್ರಿದೇವತೋಪಾಸನೆ’ ಎಂದು ಕರೆಯಲ್ಪಡುತ್ತಿದ್ದ ಈ ಪೂಜಾ ಪದ್ಧತಿಯು ಈಗ ಮರೆಯಾಗಿ ‘ಪಂಚಾಯತನ ಪೂಜೆ’ ಮತ್ತು’ ಷಣ್ಮತೋಪಾಸನೆ’ ಪದ್ಧತಿಗಳು ಇಂದು ಆಚರಣೆಯಲ್ಲಿವೆ.

ಬೇಸಿಗೆಯಲ್ಲಿ ಝರಿಯ ನೀರು ಸ್ವಲ್ಪ ಕಡಿಮೆಯಾಗುತ್ತದೆಯಾದರೂ ವರ್ಷವಿಡೀ ಝರಿಯ ನೀರು ಪ್ರವಹಿಸುತ್ತಿರುವುದು ಆ ಝರಿಯ ನೀರಿನಲ್ಲಿ ಮಿಂದು,ಮಡಿಯಾಗಿ ನರಸಿಂಹಸ್ವಾಮಿಯ ದರ್ಶನ ಪಡೆಯುವುದು ಈ ಕ್ಷೇತ್ರದ ವಿಶೇಷ.ಜಲತತ್ತ್ವದ ಅಧಿಪತಿಯಾದ ನಾರಾಯಣನು ತಾನು ಎನ್ನುವುದನ್ನು ನಿರೂಪಿಸಲು ನರಸಿಂಹಸ್ವಾಮಿಯು ಜಲಾಂತರ್ಗುಹಾವಾಸಿಯಾಗಿರಬಹುದು ಎನ್ನಿಸುತ್ತದೆ.ನರಸಿಂಹಸ್ವಾಮಿಯು ಉಗ್ರ ಮತ್ತು ಸೌಮ್ಯರೂಪಗಳೆರಡರಲ್ಲಿಯೂ ಭಕ್ತರಿಗೆ ದರ್ಶನ ನೀಡುತ್ತ ಭಕ್ತೋದ್ಧರಣ ಕಾರ್ಯ ಗೈಯುತ್ತಿದ್ದಾನೆ.ದುಷ್ಟಶಕ್ತಿಯ ಪ್ರಭಾವಕ್ಕೆ ಒಳಗಾದವರು,ಅಭಿಚಾರಕರ್ಮಪೀಡಿತರು,ವ್ಯಾಧಿಪೀಡಿತರು ನರಸಿಂಹಸ್ವಾಮಿಯ ದರ್ಶನ ಪಡೆದು ಸಂಕಷ್ಟ ಮುಕ್ತರಾಗುತ್ತಿದ್ದಾರೆ.ನರಸಿಂಹಸ್ವಾಮಿಯ ದರ್ಶನ ಪಡೆದ ಬಳಿಕ ಪರಮೇಶ್ವರ ಶಿವನ ದರ್ಶನ ಪಡೆಯುವುದರಿಂದ ಸಕಲ ಪಾಪ ಮುಕ್ತರಾಗುತ್ತಾರೆ.ಶಿವ ಮತ್ತು ವಿಷ್ಣು ಇಬ್ಬರೂ ಒಂದೇಕ್ಷೇತ್ರದಲ್ಲಿ ನೆಲೆಸಿದ ಅಪರೂಪದ ಕ್ಷೇತ್ರಗಳಲ್ಲಿ ಒಂದಾಗಿರುವ ಝರಣಿ ನರಸಿಂಹಕ್ಷೇತ್ರವು ಭೋಗ ಮೋಕ್ಷಗಳೆರನ್ನು ಕರುಣಿಸುವ ಇಹಪರಸಾಧಕ ಕ್ಷೇತ್ರವಾಗಿದೆ.

ಸದ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ನರಸಿಂಹಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ಜಲಾಂತರ್ಗುಹೆಯಲ್ಲಿ ನಡೆದು ಹೋಗಲು ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಹಲವು ಪೂರಕ ವ್ಯವಸ್ಥೆ ಮಾಡಲಾಗಿದೆ.ಕ್ಷೇತ್ರಕ್ಕೆ ರವಿವಾರ,ಮಂಗಳವಾರ ಮತ್ತು ಅಮವಾಸೆಯ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರುಗಳು ಬರುತ್ತಿದ್ದು ಇನ್ನೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ.ಇತ್ತೀಚಿನ ವರ್ಷಗಳಲ್ಲಿ ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ,ಪ್ರವಾಸೋದ್ಯಮ ಇಲಾಖೆ ಮತ್ತು ಮುಜರಾಯಿ ಇಲಾಖೆಗಳಿಂದ ಮೂಲಭೂತ ಸೌಕರ್ಯ ಮತ್ತು ಕ್ಷೇತ್ರಕ್ಕೆ ಅವಶ್ಯಕವಾದ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿ ಪ್ರಗತಿಯಲ್ಲಿವೆ.ಬೀದರ ಜಿಲ್ಲೆಗೆ ತಮ್ಮ ಅನ್ಯಾದೃಶ ಕೊಡುಗೆ ನೀಡಿದ ಬೀದರನ‌ಇತಿಹಾಸ ಪುನರೋತ್ಥಾನಕರ್ತರಾದ ಬೀದರನ ಹಿಂದಿನ ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಹರ್ಷಗುಪ್ತ ಅವರು ಝರಣಿ ನರಸಿಂಹಕ್ಷೇತ್ರಕ್ಕೆ ಅಚ್ಚುಕಟ್ಟಾದ ರಸ್ತೆಯನ್ನು ಸಹ ಮಾಡಿಸಿದ್ದರಿಂದ ವಾಹನಗಳ ಸಂಚಾರಕ್ಕೆ ಅನುಕೂಲವಾಗಿದೆ.ಆದರೆ ಕಾರು ಮತ್ತು ಆಟೋ ರಿಕ್ಷಾಗಳು ಮಾತ್ರ ಕ್ಷೇತ್ರಕ್ಕೆ ಬರುತ್ತಿದ್ದು ಜನಸಾಮಾನ್ಯರಿಗೆ ಸ್ವಲ್ಪ ತೊಂದರೆಯಾಗುತ್ತಿದೆ.ಕಲ್ಯಾಣ ಕರ್ನಾಟಕ ಸಾರಿಗೆಯವರು ಒಂದೆರಡು ಸಿಟಿ ಬಸ್ಸುಗಳನ್ನು ಓಡಿಸಿದರೆ ಜನಸಾಮಾನ್ಯರು ಕ್ಷೇತ್ರಕ್ಕೆ ಭೇಟಿ ನೀಡಲು ಅನುಕೂಲವಾಗುತ್ತದೆ.

ಕ್ಷೇತ್ರದರ್ಶನದ ಸಂದರ್ಭದಲ್ಲಿ ಝರಣಿ ನರಸಿಂಹ ಕ್ಷೇತ್ರದ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್ ಕುಲ್ಕರ್ಣಿಯವರು ನನ್ನನ್ನು ಆತ್ಮೀಯವಾಗಿ ಆದರಿಸಿ,ಸತ್ಕರಿಸಿದರು.ನನ್ನ ಪಿಎ ಶ್ರೀನಿವಾಸ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಯ ಮ್ಯಾನೇಜರ್ ಮಕರಂದ ಕುಲ್ಕರ್ಣಿ ಅವರಿಬ್ಬರು ನನ್ನ ಜೊತೆಗಿದ್ದರು.

೦೪.೦೮.೨೦೨೪

About The Author