ಅನುಭಾವ ಚಿಂತನೆ : ಮಂತ್ರಸಾಕ್ಷಾತ್ಕಾರ : ಮುಕ್ಕಣ್ಣ ಕರಿಗಾರ
ದೈವಸಾಕ್ಷಾತ್ಕಾರದಂತೆ ಮಂತ್ರಸಾಕ್ಷಾತ್ಕಾರವೂ ಇದೆ.ಆದರೆ ಇದು ಅತ್ಯುನ್ನತ ನಿಲುವಿನ,ಉಗ್ರಯೋಗಸಾಧಕರುಗಳಿಗೆ ಮಾತ್ರ ಗೋಚರಿಸುವ ಪರಮಾತ್ಮನ ರಹಸ್ಯ.ದೇವರು,ಪರಮಾತ್ಮನ ಸಾಕ್ಷಾತ್ಕಾರದಲ್ಲಿ ಸಾಧಕನ ಸಾಧನೆಗಿಂತ ಪರಮಾತ್ಮನ ಅನುಗ್ರಹದ ಪ್ರಮಾಣ ಅಧಿಕವಾಗಿರುತ್ತದೆ.ಆದರೆ ಮಂತ್ರಸಾಕ್ಷಾತ್ಕಾರದಲ್ಲಿ ಸಾಧಕನ ಪರಿಶ್ರಮವೇ ಅಧಿಕ ಪ್ರಮಾಣದಲ್ಲಿರುತ್ತದೆ.ವಿಶ್ವಾಮಿತ್ರ ಮಹರ್ಷಿಯವರಿಗೆ ಗಾಯತ್ರಿ ಮಂತ್ರ ಸಾಕ್ಷಾತ್ಕಾರವಾಯಿತು.ಆದ್ದರಿಂದ ಮಹರ್ಷಿ ವಿಶ್ವಾಮಿತ್ರರನ್ನು’ ಗಾಯತ್ರಿ ಮಂತ್ರ ದ್ರಷ್ಟಾರ’ ಎಂದು ಕರೆಯಲಾಗುತ್ತದೆ.ಮಂತ್ರ ದ್ರಷ್ಟಾರ ಎಂದರೆ ಮಂತ್ರವನ್ನು ಕಂಡವನು ಎಂದರ್ಥ.ವೇದದ ಋಷಿಗಳು ಮಂತ್ರ ದ್ರಷ್ಟಾರರುಗಳು.ವೇದ ಕಾಲದ ಋಷಿಗಳು ವಿಶ್ವದ ಒಳಿತಿಗಾಗಿ ಮುವ್ವತ್ತುಮೂರು ದೇವತೆಗಳ ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡು ಅವುಗಳನ್ನು ಸಂಹಿತೆಗಳಲ್ಲಿ ವಿಂಗಡಿಸಿದರು.
ಮಂತ್ರಗಳು ಬಾಹ್ಯಾಕಾಶದ ಅತ್ಯುನ್ನತ ನೆಲೆಯಾದ ಮಂತ್ರಲೋಕದಲ್ಲಿವೆ.ಅಲ್ಲಿ 84 ಲಕ್ಷ ಮಂತ್ರಗಳಿವೆ.ಪರಿಶುದ್ಧ ಸ್ವರ್ಣಮಯವಾದ ಮಂತ್ರಲೋಕದಲ್ಲಿ ಪ್ರತಿಮಂತ್ರಕ್ಕೂ ಪ್ರತ್ಯೇಕ ಪೀಠ ಒಂದಿದ್ದು ಆ ಮಂತ್ರಪೀಠದಲ್ಲಿ ಮಂತ್ರವು ತನ್ನ ಅಧಿದೇವತೆ ಮತ್ತು ಉಪಾಸನಾ ತತ್ತ್ವದೊಂದಿಗೆ ಸ್ಥಿತವಾಗಿರುತ್ತದೆ.ಯೋಗಿಗಳ ಸಾಧನೆಗೆ ಅನುಗುಣವಾಗಿ ಅವರಿಗೆ ನಿರ್ದಿಷ್ಟವಾದ ಮಂತ್ರಗಳು ಗೋಚರವಾಗುತ್ತವೆ.ಯೋಗಿಗಳು ತಮ್ಮ ಸಾಧನೆಗೆ ಬೇಕಾದ ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲರು.ಮಂತ್ರಸಾಕ್ಷಾತ್ಕಾರದಿಂದ ಯೋಗಿಯು ಪ್ರಕೃತಿಯ ಮೇಲೆ ಸಂಪೂರ್ಣ ಪ್ರಭುತ್ವವನ್ನು ಸಾಧಿಸುತ್ತಾನೆ.
ಮಂತ್ರಗಳು ಪರಮಾತ್ಮ ಮತ್ತು ಇತರ ದೇವತೆಗಳು ದೇವಿಯರುಗಳ ತತ್ತ್ವಾರ್ಥದ ಸೂತ್ರಗಳು.ಪ್ರತಿ ಮಂತ್ರಕ್ಕೆ ಒಬ್ಬ ಅಧಿದೇವತೆ ಇರುತ್ತಾರೆ,ಪ್ರತಿ ಮಂತ್ರವು ಸಾಧಿಸುವ ಉದ್ದೆಶ ಒಂದು ಇರುತ್ತದೆ.ಮಂತ್ರಗಳಲ್ಲಿ ಕೆಲವು ಸೀಮಿತ ಕಾರ್ಯವ್ಯಾಪ್ತಿಯನ್ನು ಹೊಂದಿದ್ದರೆ ಕೆಲವು ಮಂತ್ರಗಳು ವಿಶ್ವವ್ಯಾಪಕತ್ವವನ್ನು ಹೊಂದಿರುತ್ತವೆ.ಯೋಗಸಾಧನೆಯಲ್ಲಿ ಅನಾಹತ ಮತ್ತು ವಿಶುದ್ಧಿ ಚಕ್ರಗಳ ನಡುವೆ ಮಂತ್ರಲೋಕ ಜಾಗೃತಗೊಳ್ಳುತ್ತದೆ.ಅನಾಹತ ಚಕ್ರದಲ್ಲಿ ಮಂತ್ರವು ಶಬ್ದರೂಪದಲ್ಲಿದ್ದರೆ ವಿಶುದ್ಧಿಚಕ್ರವು ಆ ಶಬ್ದರಹಸ್ಯವನ್ನು ತೆರೆದಿಡುತ್ತದೆ.ವಿಶುದ್ಧಿಚಕ್ರದಿಂದ ಹೊರಸೂಸಲ್ಪಟ್ಟ ಪ್ರಭೆಯು ಅನಾಹತ ಚಕ್ರದ ಮೇಲೆ ಬಿದ್ದಾಗ ಗೋಚರಿಸಲ್ಪಟ್ಟ ಶಬ್ದವು ನಿರ್ದಿಷ್ಟ ದೇವತೆಯ ಆಕಾರತಳೆದು ಸಾಕಾರಗೊಳ್ಳುತ್ತದೆ.ನಮ್ಮ ಶರೀರದಲ್ಲಿ ಆನಂದಮಯ ಕೋಶವು ಮಂತ್ರಗಳ ಕೋಶವಾಗಿದೆ.
೧೦.೦೭.೨೦೨೪