ವಡಗೇರಾ : ತಾಲೂಕಿನ ತಡಿಬಿಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವು ಸ್ಪರ್ಧಾತ್ಮಕ ಪುಸ್ತಕಗಳು ಕಥೆ ಕಾವ್ಯ ಕವನ ಸಂಕಲನ ಜೊತೆಗೆ ಇತರ ಪುಸ್ತಕಗಳಿದ್ದು, ಗ್ರಾಮದ ಪದವಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಕರು ದಿನಂಪ್ರತಿ ಗ್ರಂಥಾಲಯಕ್ಕೆ ಭೇಟಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವ್ಯಾಸಂಗ ಮಾಡುತ್ತಿದ್ದಾರೆ. ಇದನ್ನು ಮನಗಂಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಸಂಗ್ವಾರ್ ಗ್ರಂಥಾಲಯಕ್ಕೆ ಭೇಟಿ ನೀಡಿ ಟಿಇಟಿ, ಪಿಡಿಒ, ಕೆಎಎಸ್, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯಗಳು ಸಹಕಾರಿಯಾಗಿವೆ. ಸದುಪಯೋಗ ಪಡಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಕರೆ ನೀಡಿದರು. ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ10ನೇ ತರಗತಿ ವಿದ್ಯಾರ್ಥಿಗಳು ಮತ್ತು ಗ್ರಾಮದ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ಗ್ರಂಥಾಲಯದಲ್ಲಿ ದಿನಪತ್ರಿಕೆ ತಿಂಗಳ ಮ್ಯಾಗ್ಝಿನ್ ಗಳು ಇತಿಹಾಸ ಅರ್ಥಶಾಸ್ತ್ರ ಸಮಾಜ ವಿಜ್ಞಾನ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಿದ್ದು ಅವುಗಳ ಉಪಯೋಗ ಪಡೆದುಕೊಂಡು ಉನ್ನತ ಅಧಿಕಾರಿಗಳಾಗಬೇಕೆಂದು ತಿಳಿಸಿದರು. ನಿಮ್ಮ ಗುರಿ ಮತ್ತು ಉದ್ದೇಶ ಸಾಧಿಸಬೇಕಾದರೆ ದಿನದ ಆರು ಗಂಟೆಗಳ ಕಾಲ ಸತತ ಅಭ್ಯಾಸ ಮಾಡಬೇಕು. ಜ್ಞಾನವನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ. ಸತತ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.

