ರಾಜ್ಯದ ಅಭಿವೃದ್ಧಿಗೆ ಸಂಸದರ ಸಹಾಯ ಕೋರಿಕೆ,ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಉತ್ತಮ ನಡೆ

ಮೂರನೇ ಕಣ್ಣು
ರಾಜ್ಯದ ಅಭಿವೃದ್ಧಿಗೆ ಸಂಸದರ ಸಹಾಯ ಕೋರಿಕೆ,ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಉತ್ತಮ ನಡೆ
ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನವದೆಹಲಿಯಲ್ಲಿ ರಾಜ್ಯದ ನೂತನ ಸಂಸತ್ ಸದಸ್ಯರೊಂದಿಗೆ ಸಭೆ ನಡೆಯಿಸಿ,ರಾಜ್ಯದ ಅಭಿವೃದ್ದಿಗೆ ಎಲ್ಲ ಸಂಸದರ ಸಹಕಾರ ಕೋರಿದ್ದಾರೆ.ರಾಜ್ಯದ ಹಿತದೃಷ್ಟಿಯಿಂದ ಇದೊಂದು ಉತ್ತಮ ನಿರ್ಧಾರ.ಮುಖ್ಯಮಂತ್ರಿಯವರ ಈ ಸಭೆಯಿಂದ ರಾಜ್ಯದ ಸಂಸದರ ಜವಾಬ್ದಾರಿ ಸಹಜವಾಗಿಯೇ ಹೆಚ್ಚುತ್ತದೆ.ರಾಜ್ಯದ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸದರುಗಳು ಪಕ್ಷಭೇದ ಮರೆತು ರಾಜ್ಯದಧ್ವನಿಯಾಗಬೇಕು.

ನವದೆಹಲಿಯಲ್ಲಿ ನೂತನ ಸಂಸದರ ಸಭೆಯನ್ನು ಆಯೋಜಿಸುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾಣತನದ ನಡೆಯನ್ನು ಇಟ್ಟಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಿಂದಿನಂತೆ ಬಲಿಷ್ಠರಾಗಿಲ್ಲ,ಅವರು ಎನ್ ಡಿ ಎ ಸರಕಾರದ ಭಾಗವಾಗಿರುವ ಮಿತ್ರಪಕ್ಷಗಳ ಮಾತಿಗೆ ಮಣೆಹಾಕಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಬ್ಬರಿಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ಸದಾಭಿಪ್ರಾಯ ಇದೆ.ಸಿದ್ಧರಾಮಯ್ಯನವರು ಕೇಂದ್ರಸರಕಾರದಿಂದ ರಾಜ್ಯಕ್ಕೆ ಲಾಭ ದೊರಕಿಸಿಕೊಳ್ಳಲು ಅವರಿಬ್ಬರ ನೆರವು ಪಡೆಯಬಹುದು.ಅದರ ಪೂರ್ವಭಾವಿಯಾಗಿಯೇ ಅವರು ರಾಜ್ಯದ ಸಂಸದರ ಸಭೆಯನ್ನು ಆಯೋಜಿಸಿರುವುದು.ರಾಜ್ಯದಿಂದ ಬಿಜೆಪಿಯ 17 ಸಂಸದರು ಆಯ್ಕೆಯಾಗಿದ್ದು ಒಂದು ವೇಳೆ ಅವರು ರಾಜ್ಯದ ಅಭಿವೃದ್ಧಿಗೆ ಸಹಕರಿಸದೆ ಇದ್ದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ‘ಬಿಜೆಪಿ ಸಂಸದರಿಗೆ ರಾಜ್ಯದ ಹಿತಾಸಕ್ತಿಗಿಂತ ಪಕ್ಷರಾಜಕಾರಣವೇ ಮುಖ್ಯ’ ಎಂದು ದೂರಲು ಅವಕಾಶವಿದೆ.

ರಾಜ್ಯದಿಂದ ಆಯ್ಕೆಯಾದ ನಾಲ್ವರು ಸಂಸದರಿಗೂ ಪ್ರಧಾನಿ ನರೇಂದ್ರಮೋದಿಯವರ ಸಂಪುಟದಲ್ಲಿ ಉತ್ತಮ‌ಖಾತೆಗಳೇ ಸಿಕ್ಕಿರುವುದರಿಂದ ರಾಜ್ಯಸರ್ಕಾರದೊಂದಿಗೆ ಸಮನ್ವಯಸಾಧಿಸಿ ರಾಜ್ಯದ ಅಭಿವೃದ್ಧಿಗೆ ಪ್ರಯತ್ನಿಸಬೇಕು.ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಅಭಿವೃದ್ಧಿಗೆ ಸಂಸದರ ನೆರವು ಕೋರಿರುವುದರಿಂದ ರಾಜ್ಯದ ನಾಲ್ವರು ಸಚಿವರು ಮತ್ತು ಬಿಜೆಪಿಯ ಇತರ ಸಂಸದರುಗಳಿಗೆ ರಾಜ್ಯದ ಅಭಿವೃದ್ಧಿಯೇ ಮುಖ್ಯವಾಗಬೇಕು.ಹೆಚ್ ಡಿ ಕುಮಾರಸ್ವಾಮಿಯವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳಂತಹ ಮಹತ್ವದ ಸಚಿವಸ್ಥಾನ ಸಿಕ್ಕಿದೆ.ವಿ.ಸೋಮಣ್ಣನವರಿಗೆ ಜಲಶಕ್ತಿ ಮತ್ತು ರೈಲ್ವೆರಾಜ್ಯ ಸಚಿವ ಸ್ಥಾನ ದೊರೆತಿದೆ.ರಾಜ್ಯದ ಅಭಿವೃದ್ಧಿಗೆ ಇವರಿಬ್ಬರು ಗಣನೀಯ ಕೊಡುಗೆ ಸಲ್ಲಿಸಬಹುದು.ಪ್ರಹ್ಲಾದ ಜೋಶಿಯವರಿಗೆ ಗ್ರಾಹಕ ಮತ್ತು ಆಹಾರ ಪೂರೈಕೆ ಖಾತೆ ಸಿಕ್ಕಿದ್ದು ಅವರಿಂದಲೂ ರಾಜ್ಯಕ್ಕೆ ಕೊಡುಗೆ ನಿರೀಕ್ಷಿಸಬಹುದು.ಶೋಭಾ ಕರಂದ್ಲಾಜೆಯವರಿಗೆ ಕಾರ್ಮಿಕ ಖಾತೆಯ ರಾಜ್ಯಸಚಿವ ಸ್ಥಾನ ದೊರೆತಿದ್ದು ರಾಜ್ಯದ ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಪಟ್ಟು ಅವರೂ ಸಾಕಷ್ಟು ಕೊಡುಗೆ ನೀಡಲಿದ್ದಾರೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ನಾಲ್ವರು ಕೇಂದ್ರಸಚಿವರೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ರಾಜ್ಯದ ಪ್ರಗತಿ ಸಾಧಿಸಬಹುದಾಗಿದೆ.

ರಾಜ್ಯದ ಅಭಿವೃದ್ಧಿಯಲ್ಲಿ ಸಂಸದರ ನೆರವನ್ನು ನಿರೀಕ್ಷಿಸುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮನ್ವಯ ಸಮಿತಿ ಒಂದನ್ನು ರಚಿಸಬೇಕು.ನಾಲ್ವರು ಕೇಂದ್ರ ಸಚಿವರು ಸೇರಿದಂತೆ ರಾಜ್ಯದ ಎಲ್ಲ ಸಂಸದರುಗಳು ಸಮನ್ವಯಸಮಿತಿಯ ಸದಸ್ಯರುಗಳಾಗಿರಬೇಕು.ಹೆಚ್.ಕೆ.ಪಾಟೀಲ್ ಅಥವಾ ಕೃಷ್ಣಭೈರೇಗೌಡ ಅವರನ್ನು ಈ ಸಮನ್ವಯ ಸಮಿತಿಯ ಸಂಚಾಲಕರನ್ನಾಗಿಸಿ ಕೇಂದ್ರಸಚಿವರು ಮತ್ತು ಸಂಸದರೊಂದಿಗೆ ನಿರಂತರ ಸಂಪರ್ಕ,ಸಂವಹನ ಸಾಧಿಸುವಂತೆ ಏರ್ಪಾಟು ಮಾಡಬೇಕು. ರಾಜ್ಯದ ಮುಖ್ಯಕಾರ್ಯದರ್ಶಿಯವರನ್ನು ಸಮನ್ವಯ ಸಮಿತಿಯ ಸದಸ್ಯಕಾರ್ಯದರ್ಶಿಯನ್ನಾಗಿ ನೇಮಿಸಬೇಕು.ಮೂರು ತಿಂಗಳಿಗೆ ಒಮ್ಮೆಯಾದರೂ ಮುಖ್ಯಮಂತ್ರಿಯವರು ಸಮನ್ವಯಸಮಿತಿಯ ಸಭೆಯನ್ನು ಕರೆದು ಕೇಂದ್ರಸರಕಾರದ ಹಂತದಲ್ಲಿ ರಾಜ್ಯಕ್ಕೆ ಮಂಜೂರಾಗಬೇಕಾದ ಅಭಿವೃದ್ಧಿ ಯೋಜನೆಗಳು,ಬಿಡುಗಡೆಯಾಗಬೇಕಾದ ಅನುದಾನ,ಆಡಳಿತಾತ್ಮಕ ವಿಷಯಗಳು ಇವೇ ಮೊದಲಾದ ವಿಷಯಗಳನ್ನು ಚರ್ಚಿಸಿ ಪರಿಹಾರಕ್ಕಾಗಿ ನಿರ್ಣಯಿಸಬೇಕು.

ಇದೆಲ್ಲಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಹೆಚ್ ಡಿ ಕುಮಾರಸ್ವಾಮಿ,ವಿ.ಸೋಮಣ್ಣ,ಪ್ರಹ್ಲಾದ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಇವರೆಲ್ಲರೂ ಪ್ರತಿಷ್ಠೆಯನ್ನು ಬದಿಗಿಟ್ಟು,ಪಕ್ಷರಾಜಕಾರಣದಾಚೆಗೆ ನಡೆದು ರಾಜ್ಯದ ಅಭಿವೃದ್ಧಿಯನ್ನು ಸಾಧಿಸುವತ್ತ ಆಲೋಚಿಸಬೇಕು.ಅಂದಾಗ ಮಾತ್ರ ಕೇಂದ್ರದಿಂದ ರಾಜ್ಯಕ್ಕೆ ನಿರೀಕ್ಷಿತ ನೆರವು ದೊರೆಯಬಹುದು.

೨೮.೦೬.೨೦೨೪

About The Author