ಸ್ವಯಂಭು ಪರಶಿವನಿಗೆ ತಂದೆ- ತಾಯಿಗಳು ಇರುವುದುಂಟೆ ? : ಮುಕ್ಕಣ್ಣ ಕರಿಗಾರ

ಅನುಭಾವ ಚಿಂತನೆ
ಸ್ವಯಂಭು ಪರಶಿವನಿಗೆ
ತಂದೆ- ತಾಯಿಗಳು ಇರುವುದುಂಟೆ ?
ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ನಿಕಟವರ್ತಿಗಳು ಮತ್ತು ನಮ್ಮ ಆತ್ಮೀಯರಾಗಿರುವ ಇಂಡಿಯ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ ಅವರ ಮಗಳು ಭುವನೇಶ್ವರಿ ತನ್ನ ವಯಸ್ಸಿಗೂ ಮೀರಿದ ಮಹಾಪ್ರಶ್ನೆಯೊಂದನ್ನು ಕೇಳಿದಳು ನಿನ್ನೆ.ನಾನು ಆಗಾಗ ಮಲ್ಲಿಕಾರ್ಜುನ ಬಾಗಲವಾಡ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತೇನೆ.ಹಾಗೆ ನಿನ್ನೆ ಮಲ್ಲಿಕಾರ್ಜುನ ಬಾಗಲವಾಡ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವರ ಮಗಳು ಭುವನೇಶ್ವರಿ ‘ ಅಪ್ಪಾ,ಶಿವನ ತಂದೆ ತಾಯಿಗಳಾರು ? ಸರ್ ಅವರನ್ನು ಕೇಳು’ ಎಂದಳು.ಮಲ್ಲಿಕಾರ್ಜುನ ಅವರು ತಮ್ಮ ಮಗಳಿಗೆ ಫೋನ್ ಕೊಟ್ಟು ನನ್ನಿಂದ ಉತ್ತರ ಕೊಡಿಸಿದರು.ಪ್ರಾಥಮಿಕ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿರುವ ಭುವನೇಶ್ವರಿಯ ಈ ಪ್ರಶ್ನೆಯು ಸಾಮಾನ್ಯ ಪ್ರಶ್ನೆಯಲ್ಲ.ಮಕ್ಕಳಲ್ಲಿ ಪ್ರತಿಯೊಂದನ್ನು ತಿಳಿಯುವ ಕುತೂಹಲ,ತವಕ ಇರುವುದಾದರೂ ಧರ್ಮ,ಆಧ್ಯಾತ್ಮಿಕ ಸಂಗತಿಗಳ ಬಗ್ಗೆ ಮಕ್ಕಳ ಆಸಕ್ತಿ ಹರಿಯುವುದು ಅಪರೂಪ.ಆದರೆ ಭುವನೇಶ್ವರಿಗೆ ಎಳವೆಯಲ್ಲಿಯೇ ಇಂತಹ ಧಾರ್ಮಿಕ ಆಸಕ್ತಿ ಮೂಡಿರುವುದು ಅವಳ ಅಸಾಧರಣಪ್ರತಿಭೆಗೆ ನಿದರ್ಶನ.ಭುವನೇಶ್ವರಿಯ ಪ್ರಶ್ನೆಯಿಂದ ಆನಂದಿತನಾದ ನಾನು ಮಲ್ಲಿಕಾರ್ಜುನ ಅವರಿಗೆ ‘ ನಿಮ್ಮ ಮಗಳು ಭುವನೇಶ್ವರಿಗೆ ಶಿವಾನುಗ್ರಹವಾಗಲಿ’ ಎಂದು ಹರಸಿದೆ.

ಚಿಕ್ಕಮಗು ಭುವನೇಶ್ವರಿಯಲ್ಲಿ ಉಂಟಾದ ಈ ಪ್ರಶ್ನೆಯು ಬಹಳಷ್ಟು ಜನರ ಸಂದೇಹ- ಗೊಂದಲಗಳ ಪ್ರಶ್ನೆಯೂ ಆಗಿದ್ದರಿಂದ ಇಲ್ಲಿ ಅನುಭಾವ ಚಿಂತನೆಯ ರೂಪದಲ್ಲಿ ಉತ್ತರಿಸುತ್ತಿದ್ದೇನೆ.’ ಶಿವನ ತಂದೆ ತಾಯಿಗಳಾರು ?’ ಎನ್ನುವ ಪ್ರಶ್ನೆ ಮೂಡುವುದು ಸಹಜ.ಯಾಕೆಂದರೆ ಮನುಷ್ಯರಾದ ನಾವೆಲ್ಲರೂ ತಂದೆ ತಾಯಿಗಳನ್ನು ಹೊಂದಿದ್ದೇವೆ.ನಮ್ಮ ಹಾಗೆಯೇ ಶಿವನಿಗೆ ತಂದೆ ತಾಯಿಗಳು ಇರಬಹುದೆ ಎನ್ನುವ ಕುತೂಹಲ ಕಾಡಬಹುದು.ಆದರೆ ಶಿವನು ನಮ್ಮಂತೆ ಮನುಷ್ಯನಲ್ಲವಾದ್ದರಿಂದ ಅವನಿಗೆ ತಂದೆ ತಾಯಿಗಳಿರಲು ಸಾಧ್ಯವಿಲ್ಲ.ಜಗತ್ತಿನ ತಂದೆಯಾದವನಿಗೆ ತಂದೆ ತಾಯಿಗಳಿರುವುದುಂಟೆ ? ಎಲ್ಲರ ತಂದೆಯಾದ ಶಿವನಿಗೆ ತಂದೆ ಇರುವುದುಂಟೆ? ಇಲ್ಲ.ಶಿವನು ಪರಮಾತ್ಮನು,ಪರಬ್ರಹ್ಮನು,ವಿಶ್ವದ ಕಾರಣನು ಮತ್ತು ವಿಶ್ವಾತೀತನು ಆಗಿರುವುದರಿಂದ ಶಿವನಿಗೆ ತಂದೆ ತಾಯಿಗಳಿಲ್ಲ.

ಶಿವನು ಸ್ವಯಂಭು.ಅಂದರೆ ತನ್ನಿಂದ ತಾನೇ ಹುಟ್ಟಿದವನು.ಶಿವನ ಹುಟ್ಟಿಗೆ ಯಾರೂ ಕಾರಣರಲ್ಲ,ಶಿವನೇ ಜಗತ್ತಿನ ಎಲ್ಲರ ಹುಟ್ಟಿಗೆ ಕಾರಣನು.ಪರಶಿವನೂ ಪರಬ್ರಹ್ಮನೂ ಪರಮೇಶ್ವರನೂ ಆಗಿರುವ ಶಿವನು ಹುಟ್ಟು ಸಾವಿಗೆ ಸಿಲುಕಿಲ್ಲವಾದ್ದರಿಂದ ಅವನು ಸ್ವಯಂಭು.ಇತರ ದೇವದೇವಿಯರು ಶಿವನ ಸಂಕಲ್ಪದಿಂದಲೇ ಹುಟ್ಟಿರುವುದರಿಂದ ಅವರಿಗೆ ತಂದೆ ತಾಯಿಗಳಿದ್ದಾರೆ.ಇತರ ದೇವ ದೇವಿಯರಂತೆ ಶಿವನನ್ನು ಭಾವಿಸಲಾಗದು.

ಶಿವನನ್ನು ಲಿಂಗ ಮತ್ತು ಮೂರ್ತಿ ಎರಡು ರೂಪಗಳಲ್ಲಿಯೂ ಪೂಜಿಸಲಾಗುತ್ತಿದೆ.ಲಿಂಗರೂಪಿ ಶಿವನು ಪರಶಿವನಾಗಿದ್ದು ಅವನು ನಿರಾಕಾರಬ್ರಹ್ಮನು.ಮೂರ್ತಿರೂಪದ ಶಿವನು ಸಾಕಾರ ಶಿವನಾಗಿದ್ದು ಆ ಸಾಕಾರ ಶಿವನಿಂದಲೇ ಜಗತ್ತಿನ ಸೃಷ್ಟಿಯಾಗಿದೆ.ಮೂಲತಃ ನಿರಾಕಾರನಾಗಿದ್ದ ಶಿವನು ತನ್ನ ಸಹಜಾನಂದದ ಸಮಾಧಿ ಸ್ಥಿತಿಯಲ್ಲಿರುತ್ತಾನೆ ಅನಂತ ಕಾಲದವರೆಗೆ.ನಿರಾಕಾರಶಿವನಲ್ಲಿ ಜಗತ್ತನ್ನು ಸೃಷ್ಟಿಸಬೇಕು ಎನ್ನುವ ಸಂಕಲ್ಪ ಹುಟ್ಟಲು ‘ನಾನು ಹಲವಾಗಬೇಕು’ ಎಂದು ಇಚ್ಛಿಸುವನು.ಆಗ ಪರಶಿವನು ಹರನಾಗಿ ಪ್ರಕಟಗೊಳ್ಳುವನು.ತನ್ನ ದೇಹದ ಎಡಭಾಗದಿಂದ ಶಕ್ತಿಯನ್ನು ಸೃಷ್ಟಿಸುವನು.ನಿರಾಕಾರಪರಶಿವನ ಅಂತರ್ಗತ ಪರಾಶಕ್ತಿಯೇ ಸ್ತ್ರೀರೂಪ ಧರಿಸಿ ಪ್ರಕೃತಿಯಾಗುವಳು.ಹರನು ಪುರುಷನಾದರೆ ಗೌರಿಯು ಪ್ರಕೃತಿಯು.ಹರ ಗೌರಿಯರ ಸಮಾಗಮದಿಂದ ಬ್ರಹ್ಮ,ವಿಷ್ಣು ಮತ್ತು ರುದ್ರರುಗಳು ಹುಟ್ಟುವರು.ಬ್ರಹ್ಮನಿಂದ ದೇವತೆಗಳು,ಋಷಿಗಳು,ಮನುಷ್ಯರು ಮತ್ತು ರಾಕ್ಷಸರು ಸೇರಿದಂತೆ ಸಕಲ ಚರಾಚರಗಳ ಉತ್ಪತ್ತಿಯಾಗುವುದು.ಬ್ರಹ್ಮನಿಂದ ಸೃಷ್ಟಿಗೊಂಡ ಜೀವ ಜಗತ್ತನ್ನು ವಿಷ್ಣುವು ಪೊರೆಯುವನು.ಬ್ರಹ್ಮನ ಸೃಷ್ಟಿಯನ್ನೆಲ್ಲ ನಾಶಮಾಡುವವನು ರುದ್ರನು.ಹೀಗೆ ಬ್ರಹ್ಮ ವಿಷ್ಣು ಮತ್ತು ರುದ್ರರೆಂಬ ತ್ರಿಮೂರ್ತಿಗಳು ಪರಶಿವನ ಆಣತಿಯಂತೆ,ಪರಶಿವನ ವಿಶ್ವನಿಯತಿ ನಿಯಮಗಳಂತೆ ಜಗತ್ತಿನ ವ್ಯವಹಾರ ನಿರ್ವಹಿಸುವರು.

ಬ್ರಹ್ಮ ಸೃಷ್ಟಿಯಲ್ಲಿ ಋಷಿಗಳು ಶ್ರೇಷ್ಠ ಚೇತನರುಗಳು.ಅವರಲ್ಲಿ ಬ್ರಹ್ಮರ್ಷಿ,ದೇವರ್ಷಿ ಮತ್ತು ಋಷಿಗಳು ಎನ್ನುವ ಮೂರು ಪ್ರಭೇದಗಳುಂಟು.ಬ್ರಹ್ಮರ್ಷಿಗಳು ಬ್ರಹ್ಮನ ಮಾನಸಪುತ್ರರು,ಬ್ರಹ್ಮಚಾರಿಗಳು.ದೇವರ್ಷಿಗಳು ಮತ್ತು ಋಷಿಗಳು ಸಂಸಾರವನ್ನು ಹೊಂದಿ ಮಡದಿಮಕ್ಕಳೊಂದಿಗೆ ಯೋಗಸಾಧನೆ ಮಾಡಿ ಅತ್ಯುನ್ನತ ಸಿದ್ಧಿಗಳನ್ನು ಪಡೆದವರು. ಬ್ರಹ್ಮ ಸೃಷ್ಟಿಯಲ್ಲಿ ಋಷಿಗಳ ನಂತರದ ಸ್ಥಾನ ದೇವತೆಗಳದ್ದು.ಸ್ವರ್ಗವು ದೇವತೆಗಳ ನಿವಾಸವಾಗಿದ್ದು ಅದು ಭೋಗಸಾಮ್ರಾಜ್ಯವಾಗಿದೆ.ಇಂದ್ರನು ಸ್ವರ್ಗಾಧಿಪತಿಯಾಗಿದ್ದು ದೇವತೆಗಳ ಒಡೆಯನಾಗಿದ್ದಾನೆ.ಮಾನವರು ಬ್ರಹ್ಮಸೃಷ್ಟಿಯ ಮೂರನೇ ವರ್ಗ.ಮಾನವರಿಗೆ ದೇವನು ಕೆಲವು ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ನೀಡಿದ್ದಾನೆ.ಮನುಷ್ಯರು ತಮ್ಮ ಸಾಧನೆಯ ಬಲದಿಂದ ಸ್ವರ್ಗವನ್ನು ಪಡೆಯಬಹುದು,ಋಷಿಗಳಾಗಬಹುದು,ದೇವರ್ಷಿ ಮತ್ತು ಬ್ರಹ್ಮರ್ಷಿಗಳೂ ಆಗಬಹುದು.ಬ್ರಹ್ಮಸೃಷ್ಟಿಯ ಕೊನೆಯ ಮತ್ತು ಕ್ಷುದ್ರಸೃಷ್ಟಿಯೇ ರಾಕ್ಷಸರು.ಪಾತಾಳಲೋಕವಾಸಿಗಳಾದ ರಾಕ್ಷಸರು ಸ್ವಭಾವತಃ ದುಷ್ಟರು,ಲೋಕಕಂಟಕರು.

ಬ್ರಹ್ಮಸೃಷ್ಟಿಯನ್ನು ಕಾಲಗತಿಯಲ್ಲಿ,ಯುಗಪ್ರಮಾಣದಲ್ಲಿ ನಿರ್ಧರಿಸಲಾಗಿದೆ.ಕೃತಯುಗ,ತ್ರೇತಾಯುಗ,ದ್ವಾಪರಯುಗ ಮತ್ತು ಕಲಿಯುಗ ಎನ್ನುವ ನಾಲ್ಕುಯುಗಗಳಿವೆ.ನಾವಿರುವುದು ಕಲಿಯುಗದಲ್ಲಿ.ಈ ನಾಲ್ಕುಯುಗಗಳು ಒಂದಾವರ್ತಿ ಸುತ್ತಲು ಪ್ರಳಯ ಸಂಭವಿಸುತ್ತದೆ.ನಾಲ್ಕುಯುಗಗಳ ಕಾಲಕ್ಕೆ ಒಬ್ಬ ಮನುವಿನ ಆಯುಷ್ಯ ಮುಗಿಯುತ್ತದೆ.ಹೀಗೆ ಎಪ್ಪತ್ತು ಜನ ಮನುಗಳಿದ್ದಾರೆ.ಎಪ್ಪತ್ತು ಜನ ಮನುಗಳು ಸತ್ತಾಗ ಬ್ರಹ್ಮನಿಗೆ ಒಂದು ದಿನವಾಗುತ್ತದೆಯಂತೆ ! ಇಂತಹ ಬ್ರಹ್ಮನು ಸತ್ತಾಗ ವಿಷ್ಣುವಿಗೆ ಒಂದು ಘಂಟೆಯಾಗುತ್ತದೆಯಂತೆ ! ಇಂತಹ ವಿಷ್ಣುವು ಸತ್ತಾಗ ರುದ್ರನಿಗೆ ಒಂದು ಕ್ಷಣವಾಗುತ್ತದೆಯಂತೆ.ಇಂತಹ ರುದ್ರನು ಸತ್ತಾಗ ಶಿವಸ್ವರೂಪನಾಗಿರುವ ರೋಮಶ ಮಹರ್ಷಿಯ ಒಂದು ಕೂದಲು ಉದುರುವುದಂತೆ ! ಪರಶಿವನು ಬ್ರಹ್ಮ,ವಿಷ್ಣು,ರುದ್ರ ಮತ್ತು ದೇವತೆಗಳನ್ನು ತನ್ನ ಕಾಲಚಕ್ರದಡಿ ನಿಯಮಿಸಿ ಜಗತ್ತು ಬ್ರಹ್ಮಾಂಡದ ವ್ಯವಹಾರವನ್ನು ನಿರ್ವಹಿಸುವ, ಕಾಲಕ್ಕೆ ಅತೀತನಾದ್ದರಿಂದ ಅವನನ್ನು ಮಹಾಕಾಲ ಎನ್ನುತ್ತಾರೆ.ಅಂದರೆ ಪರಶಿವನಿಗೆ ಆಯುಷ್ಯವೆಂಬುದೇ ಇಲ್ಲ ! ಹುಟ್ಟಿ ಸಾಯುವ ಜೀವರುಗಳಿಗೆ ಆಯುರ್ಮಾನದ ಲೆಕ್ಕ ಇರುತ್ತದೆಯಲ್ಲದೆ ಅವಿನಾಶಿಯಾದ ಪರಶಿವನಿಗೆ ಆಯುಷ್ಯವು ಇರಬಲ್ಲುದೆ ?

ಶಿವನು ಪರಶಿವನು,ಪರಾತ್ಪರ ಪರಬ್ರಹ್ಮನು ಮತ್ತು ಜಗತ್ತಿನ ತಂದೆಯಾದ ಪರಮೇಶ್ವರನು ಎನ್ನುವದನ್ನು ನಿರೂಪಿಸುವ‌ ಪ್ರಸಂಗ ಒಂದು ಬರುತ್ತದೆ ಮಹರ್ಷಿ ವೇದವ್ಯಾಸರಿಂದ ರಚಿಸಲ್ಪಟ್ಟ ಶಿವಮಹಾಪುರಾಣದಲ್ಲಿ.ಅದು ಗಿರಿಜಾ ಕಲ್ಯಾಣ ಪ್ರಸಂಗ.ಸತಿಯು ದಕ್ಷಯಜ್ಞದಲ್ಲಿ ಶಿವನಿಂದನೆಯನ್ನು ಕೇಳಿ,ಸಹಿಸದೆ ಆತ್ಮಾರ್ಪಣೆ ಮಾಡಿಕೊಳ್ಳುವಳು ಯೋಗಾಗ್ನಿಯಲ್ಲಿ.ಶಿವನ ಕೋಪದಿಂದ,ರುದ್ರತೇಜಸ್ಸಿನಿಂದ ಹುಟ್ಟಿದ ವೀರಭದ್ರನು ದಕ್ಷನನ್ನು ಸಂಹರಿಸಿ, ದಕ್ಷಯಜ್ಞವನ್ನು ಧ್ವಂಸಗೊಳಿಸುವನು.ಸತಿಯ ವಿಯೋಗದಿಂದ ದುಃಖಿತನಾದ ಶಿವನು,ಪರಮವೈರಾಗ್ಯವನ್ನು ಹೊಂದಿ ಹಿಮಾಲಯಕ್ಕೆ ತೆರಳಿ ತಪಸ್ಸನ್ನಾಚರಿಸತೊಡಗಿದನು ತನ್ನ ಸಹಜಾನಂದದಸ್ಥಿತಿಯನ್ನು ಹೊಂದಿ.ಈ ಸಮಯದಲ್ಲಿ ತಾರಕಾಸುರನೆಂಬ ರಾಕ್ಷಸನು ಹುಟ್ಟಿ, ಬ್ರಹ್ಮನಿಂದ ದೇವದಾನವರು ಮಾನವರಿಂದ ತನಗೆ ಮರಣಬಾರದಂತೆ ಆದರೆ ಶಿವಪುತ್ರನಿಂದ ಮರಣಬರುವಂತೆ ವರವನ್ನು ಪಡೆದು ಉನ್ಮತ್ತನಾಗಿ ಲೋಕಕಂಟಕನಾಗುವನು. ತಾರಕಾಸುರನು ರಾಕ್ಷಸನಾಗಿದ್ದರೂ ಬುದ್ಧಿವಂತನೆ! ಅವನು ಬ್ರಹ್ಮನನ್ನು ಅಮರತ್ವದ ವರವನ್ನು ಕರುಣಿಸಲು ಕೋರಿದಾಗ ಬ್ರಹ್ಮನು ‘ ಹುಟ್ಟಿದ ಜೀವಿಗಳೆಲ್ಲರೂ ಸಾಯಲೇಬೇಕು ಎನ್ನುವುದು ಸೃಷ್ಟಿ ನಿಯಮವಾದ್ದರಿಂದ ನಿನಗೆ ಅಮರತ್ವವನ್ನು ಅನುಗ್ರಹಿಸಲಾಗದು, ಅದರ ಬದಲಾಗಿ ಬೇರೊಂದು ವರವನ್ನು ಕೇಳು’ ಎಂದು ಸೂಚಿಸುವನು.ವಿಚಾರಮಗ್ನನಾದ ತಾರಕಾಸುರನು ‘ಶಿವಪುತ್ರನಿಂದ ತನಗೆ ಮರಣವಾಗಲಿ ‘ಎಂದು ಬೇಡುವನು.ಸತಿಯು ಈಗಾಗಲೇ ಯೋಗಾಗ್ನಿಯಲ್ಲಿ ಆತ್ಮಾಹುತಿ ಮಾಡಿಕೊಂಡಿರುವುದನ್ನು ಮತ್ತು ಸತಿಯ ವಿರಹ ತಾಪದಿ ಶಿವನು ಹಿಮಾಲಯದಲ್ಲಿ ತಪೋನಿರತನಾದುದನ್ನು ತಾರಕಾಸುರನು ಬಲ್ಲನು.ಹೆಂಡತಿಯಿಲ್ಲದ ಶಿವನಿಗೆ ಮಗನು ಹುಟ್ಟುವುದು ಹೇಗೆ ? ತಪೋ ನಿತರನಾದ ಶಿವನು ತಪಸ್ಸಿನಿಂದ ಹೊರಬರುವುದಾದರೂ ಹೇಗೆ ? ಇದು ಅಸಂಭವವಾದ್ದರಿಂದ’ ಶಿವಪುತ್ರನಿಂದ ನನಗೆ ಸಾವು ಬರಲಿ’ ಎಂದು ಬ್ರಹ್ಮನನ್ನು ಬೇಡುತ್ತಾನೆ.ಬ್ರಹ್ಮವರಗರ್ವಿತನಾದ ತಾರಕಾಸುರನು ಇಂದ್ರಾದಿ ದೇವತೆಗಳನ್ನು ಸೋಲಿಸಿ ಸ್ವರ್ಗಾಧಿಪತಿಯಾಗುವನು.ಭೂಲೋಕದಲ್ಲೂ ಕೂಡ ಋಷಿಗಳು,ಸಾಧು ಸಜ್ಜನರನ್ನು ಬಹುವಿಧವಾಗಿ ಪೀಡಿಸುವನು.ಸ್ವರ್ಗ,ಮರ್ತ್ಯ ಮತ್ತು ಪಾತಾಳಗಳೆಂಬ ಮೂರುಲೋಕಗಳ ಅಧಿಪತಿಯಾಗಿ ಮೆರೆಯುವನು ತಾರಕಾಸುರ.

ತಾರಕಾಸುರನ ಪೀಡೆಯಿಂದ ಬಾಧಿತರಾದ ದೇವತೆಗಳು,ಋಷಿಗಳು ವಿಷ್ಣುವಿನ ಮೊರೆಹೋಗುವರು.ವಿಷ್ಣುವು ಬ್ರಹ್ಮನ ವರದಂತೆ ಶಿವಪುತ್ರನಿಂದ ಮಾತ್ರ ತಾರಕಾಸುರನ ಸಂಹಾರವಾಗುವುದಾಗಿ ತಿಳುಹಿ ಉಪಾಯದಿಂದ ಶಿವನನ್ನು ತಪೋವಿಮುಖನಾಗುವಂತೆ ಮಾಡಿ ಮದುವೆ ಮಾಡಿಕೊಳ್ಳುವಂತೆ ಮಾಡಬೇಕು ಎಂದು ಸೂಚಿಸುವನಲ್ಲದೆ ದೇವತೆಗಳು ಪರಾಶಕ್ತಿಯನ್ನು ಕುರಿತು ತಪಸ್ಸು ಮಾಡಿ ಆಕೆಯು ಅವತರಿಸುವಂತೆ ಪ್ರಾರ್ಥಿಸಲು ಸೂಚಿಸುವನು.ದೇವತೆಗಳ ಪ್ರಾರ್ಥನೆಯಂತೆ ಪರಾಶಕ್ತಿ ಪರಬ್ರಹ್ಮೆಯು ಪರ್ವತರಾಜ ಹಿಮಮಂತ ಮತ್ತು ಮೈನಾದೇವಿಯರ ಮಗಳಾಗಿ ಅವತರಿಸಿ ಪಾರ್ವತಿ,ಗಿರಿಜೆ ಎನ್ನುವ ಹೆಸರಿನಿಂದ ಪ್ರಸಿದ್ಧಳಾಗುವಳು.

ಶಿವನು ಹಿಮಾಲಯದಲ್ಲಿ ತಪೋನಿರತನಾಗಿರುವದನ್ನರಿತ ಹಿಮವಂತನು ತನ್ನ‌ಮಗಳು ಪಾರ್ವತಿಯನ್ನು ತಪಸ್ವಿ ಶಿವನ ಸೇವೆಗೆ ನಿಯೋಜಿಸುವನು.ಶಿವನೇ ತನಗೆ ಪತಿಯಾಗಬೇಕು ಎಂದು ಸಂಕಲ್ಪಿಸಿದ್ದ ಪಾರ್ವತಿಯು ಪರಶಿವನ ಸೇವೆಯನ್ನು ಸಖಿಯರೊಡಗೂಡಿ ಸಂತೋಷದಿಂದ ಕೈಗೊಳ್ಳುವನು. ಪ್ರತಿದಿನ ಶುಚೀರ್ಭೂತಳಾಗಿ ಶಿವನ ತಪೋಸ್ಥಳಕ್ಕೆ ತೆರಳಿ ದೂರದಿಂದಲೇ ಸುಗಂಧ ಪುಷ್ಪಗಳನ್ನರ್ಪಿಸಿ ಶಿವನೆದುರು ಗೀತ ನೃತ್ಯಾದಿ ಸೇವೆ ಸಲ್ಲಿಸುತ್ತಿದ್ದಳು.ಇಷ್ಟಾದರೂ‌ ಶಿವನು ಒಮ್ಮೆಯೂ ಬಹಿರ್ಮುಖನಾಗಲಿಲ್ಲ,ಪಾರ್ವತಿಯ ಸೇವೆಯನ್ನು ನೋಡಲಿಲ್ಲ.ಇಂದ್ರನ ಉಪಾಯದಂತೆ ಶಿವನ ತಪೋಭಂಗಕ್ಕೆ ಆಗಮಿಸಿದ ಮನ್ಮಥನು ತನ್ನ ಕಾಮಬಾಣಪ್ರಯೋಗದಿಂದ ಶಿವನನ್ನು ತಪೋವಿಮುಖನನ್ನಾಗಿಸಿ ಶಿವನ ಮೂರನೇಕಣ್ಣಿನ ಅಗ್ನಿಗೆ ಗುರಿಯಾಗಿ ಸುಟ್ಟುಬೂದಿಯಾಗುವನು.ರತಿಯ ಪ್ರಲಾಪ ಮತ್ತು ಪಾರ್ವತಿಯ ಆಗ್ರಹಕ್ಕೆ ಮಣಿದ ಶಿವನು ಮನ್ಮಥನು ಕಾಲಾಂತರದಲ್ಲಿ ಹುಟ್ಟಿಬರುವನಾದ್ದರಿಂದ ಅವನ ಬೂದಿಯನ್ನು ಸಂಗ್ರಹಿಸಿಕೊಟ್ಟಲು ರತಿಗೆ ಸೂಚಿಸಿ ಮನ್ಮಥನು ಅನಂಗನಾಗುವಂತೆ ವರವನ್ನಿತ್ತು ಅನುಗ್ರಹಿಸುವನು.ಪಾರ್ವತಿಯನ್ನು ಮದುವೆಯಾಗಲು ಒಪ್ಪಿದ ಶಿವನು‌ಲೋಕರೂಢಿಯಂತೆ ನಿನ್ನ ಕೈಹಿಡಿಯುವುದಾಗಿ ಹೇಳಿ ಕೈಲಾಸಕ್ಕೆ ತೆರಳುವನು.

ಬ್ರಹ್ಮ,ವಿಷ್ಣು ಮತ್ತು ಇಂದ್ರರ ನೇತೃತ್ವದಲ್ಲಿ ಶಿವ ಪಾರ್ವತಿಯರ ವಿವಾಹದ ಏರ್ಪಾಟು ನಡೆಯುವುದು.ಸಪ್ತರ್ಷಿಗಳು ಶಿವನ ಪರವಾಗಿ ಪರ್ವತರಾಜನಲ್ಲಿ ಕನ್ಯಾರ್ಥಿಗಳಾಗಿ ತೆರಳುವರು.ಬ್ರಹ್ಮ ವಿಷ್ಣುಗಳು ತಮ್ಮ ಸತಿಯರಾದ ಸರಸ್ವತಿ ಮತ್ತು ಲಕ್ಷ್ಮೀದೇವಿಯರೊಡನೆ ಶಿವನ ಪರಿವಾರವಾಗಿ ತೆರಳುವರು.ದೇವತೆಗಳೆಲ್ಲರು ಇಂದ್ರನ ನೇತೃತ್ವದಲ್ಲಿ ಶಿವನ ಬಂಧು ಬಾಂಧವರುಗಳಾಗಿ ಹಿಮವಂತರಾಜನ ಮನೆಗೆ ತೆರಳುವರು ಶಿವಪಾರ್ವತಿಯರ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು.ಮದುವೆಯ ಸಮಯ.ಪಾಣಿಗ್ರಹಣದ ಸಮಯ.ಹಿಮವಂತನ‌ಕುಲಪುರೊಹಿತನು ಲೋಕರೂಢಿಯಂತೆ ವರನಾಗಿದ್ದ ಪರಶಿವನನ್ನು ‘ ವರಮಹಾಶಯನೆ ನಿನ್ನ ತಂದೆ ತಾಯಿಗಳಾರು,ಗೋತ್ರವಾವುದು,ನೆಲೆಯಾವುದು ?’ ಎಂದು ಪ್ರಶ್ನಿಸುವನು.ಬ್ರಹ್ಮ ವಿಷ್ಣು ಇಂದ್ರಾದಿ ದೇವತೆಗಳು ಸೇರಿದಂತೆ ಇಡೀ ಮದುವೆಯ ಮಂಟಪವೇ ಒಂದು ಕ್ಷಣ ಸ್ತಬ್ಧವಾಗುವುದು.ದೇವತೆಗಳು ಪರಸ್ಪರ ಮುಖನೋಡಿಕೊಳ್ಳುವರು.ಕುಲಪುರೋಹಿತನ ಈ ಪ್ರಶ್ನೆಯಿಂದ ಬ್ರಹ್ಮ ವಿಷ್ಣ್ವಾದಿ ದೇವತೆಗಳು ಶಂಕಾತಂಕಕ್ಕೆ ಈಡಾಗುವರು.ಆಗ ಬ್ರಹ್ಮರ್ಷಿ ನಾರದರು ಎದ್ದು ಬಂದು ಪರ್ವತರಾಜನ ಕುಲಪುರೋಹಿತನನ್ನು ಕುರಿತು ‘ ಆಚಾರ್ಯರೆ ಇದೆಂತಹ ಪ್ರಶ್ನೆಯನ್ನು ಕೇಳುತ್ತಿದ್ದೀರಿ ? ಪರಶಿವನು ಲೋಕಸಾಮಾನ್ಯರಂತೆ ಮನುಷ್ಯನೆ ಅವನಿಗೆ ತಂದೆ ತಾಯಿಗಳಿರಲು ? ಜಗತ್ತಿನ ತಂದೆಯಾದ ಶಿವನಿಗೆ ತಂದೆ ತಾಯಿಗಳರಲು ಸಾಧ್ಯವೆ ? ಅನಾದಿ ಪರಬ್ರಹ್ಮನಾದ ಶಿವನ ತಂದೆ ತಾಯಿಗಳು ಯಾರು ಎಂಬುದನ್ನು ಸ್ವಯಂ ಬ್ರಹ್ಮ ವಿಷ್ಣುಗಳೇ ಅರಿಯರು.ವಿಶ್ವನಿಯಾಮಕನಾದ ವಿಶ್ವೇಶ್ವರ ಶಿವನೇ ಜಗತ್ತಿನ ಸೃಷ್ಟಿಸ್ಥಿತಿ ಸಂಹಾರಗಳ ಕರ್ತನಾಗಿರಲು ಅವನಿಗೆ ಗೋತ್ರ ಇರುವುದುಂಟೆ? ಜಗತ್ತನ್ನು ಸೃಷ್ಟಿಸಿ ಜಗತ್ತಿನ ಎಲ್ಲೆಡೆಯೂ ಇರಬಲ್ಲ ಶಿವನಿಗೆ ಒಂದು ಸದನ ಎಂದು ಇರಬಹುದೆ ? ದೇವತೆಗಳಿಂದ ನಿತ್ಯಪೂಜಿತನಾದ ದೇವಾದಿದೇವ ಮಹಾದೇವ ಶಿವನಿಗೆ ಬಂಧುಗಳಿರುವುದುಂಟೆ? ಶಿವನು ಪಾರ್ವತಿಯನ್ನು ವರಿಸುತ್ತಿರುವುದು ಶಿವಲೀಲೆಯಲ್ಲದೆ ಮತ್ತೇನೂ ಅಲ್ಲ.ಆ ಶಿವಲೀಲೆಗೆ ಬ್ರಹ್ಮ ವಿಷ್ಣು ಇಂದ್ರಾದಿ ದೇವತೆಗಳೇ ಸಾಕ್ಷಿಯಾಗಿರುವಾಗ ನೀವು ಇಂತಹ ಪ್ರಶ್ನೆಗಳನ್ನು ಉಚಿತವಲ್ಲ’ ಎನ್ನುವರು.ನಾರದರ ಉಪದೇಶದಿಂದ ಪ್ರಭಾವಿತರಾದ ಹಿಮಾಲಯನ ಕುಲಗುರು ಶಿವನಲ್ಲಿ ತನ್ನ ಅನುಚಿತ ಪ್ರಶ್ನೆಗಾಗಿ ಕ್ಷಮೆಯಾಚಿಸುವನು.ಶಿವನು ಪಾರ್ವತಿಯ ಪಾಣಿಗ್ರಹಣ ಮಾಡಿ,ಪಾರ್ವತೀವಲ್ಲಭನಾದನು.ಮುಂದೆ ಶಿವಪಾರ್ವತಿಯರಿಗೆ ಹುಟ್ಟಿದ ಕಾರ್ತಿಕೇಯ ಷಣ್ಮುಖನಿಂದ ತಾರಾಸುರನ ವಧೆಯಾಗುವುದು.

ಬ್ರಹ್ಮರ್ಷಿ ನಾರದರು ಪರ್ವತರಾಜನ ಕುಲಪುರೋಹಿತನಿಗೆ ನೀಡಿದ ಬೋಧೆಯಲ್ಲಿ ಶಿವನು ನಿರಾಕಾರ ಪರಬ್ರಹ್ಮನು,ಅಚಿಂತ್ಯನೂ,ಅವ್ಯಕ್ತನೂ,ನಿರ್ಗುಣನೂ ಆದರೂ ಲೀಲಾಕಾರಣದಿಂದ ಸಗುಣನಾಗಿ ಪ್ರಕಟನಾಗುವ ಪರಾತ್ಪರ ಪರಬ್ರಹ್ಮನೂ ಸ್ವಯಂಭುವೂ ಎನ್ನುವುದು ವಿದಿತವಾಗುತ್ತದೆ.ಶಿವಭಕ್ತರಾದವರು ಶಾಸ್ತ್ರ ಸಂಪ್ರದಾಯಗಳ ವಂಶ ಗೋತ್ರಗಳಿಗೆ ಕಟ್ಟುಬೀಳದೆ ತಮ್ಮನ್ನು ತಾವು ಶಿವವಂಶಜರು,ಶಿವಗೋತ್ರೋತ್ಪನ್ನರು ಎಂದು ಹೇಳಿಕೊಳ್ಳಲು ಹೆಮ್ಮೆಪಡಬೇಕು.

೨೪.೦೬.೨೦೨೪

About The Author