ಪ್ರಜಾಪ್ರಭುತ್ವ, ಶಿಕ್ಷಣಪದ್ಧತಿ ಮತ್ತು ಪಠ್ಯಕ್ರಮ:ಮುಕ್ಕಣ್ಣ ಕರಿಗಾರ

ಪ್ರಜಾಪ್ರಭುತ್ವ ಎಂದರೇನೇ ಪ್ರಜೆಗಳ ಹಕ್ಕುಗಳ ಹಿತರಕ್ಷಣೆಗಾಗಿ ಇರುವ ರಾಜಕೀಯ ಆಡಳಿತ ವ್ಯವಸ್ಥೆ.’ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವ ಪ್ರಜೆಗಳ ಸರ್ಕಾರ’ ಎನ್ನುವ ಪ್ರಜಾಪ್ರಭುತ್ವದ ವ್ಯಾಖ್ಯಾನದಲ್ಲಿಯೇ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಸಂದೇಶ ಅಡಗಿದೆ.ಪ್ರಪಂಚದಲ್ಲಿಂದು ಬಹುತೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ.ಅಮೇರಿಕಾದಂತಹ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವವಾಗಿರಬಹುದು,ಇಂಗ್ಲಂಡ್ ನಂತಹ ನಾಮಮಾತ್ರ ಅರಸುಮುಖ್ಯಸ್ಥರಾಗಿರುವ ಪ್ರಜಾಪ್ರಭುತ್ವವಾಗಿರಬಹುದು ಇಲ್ಲವೇ ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಗಿರಬಹುದು,ಅಂತೂ ಒಂದಿಲ್ಲ ಒಂದು ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಪಂಚದ ಬಹುತೇಕ ರಾಷ್ಟ್ರಗಳು ಅಳವಡಿಸಿಕೊಂಡಿವೆ.ಪ್ರಜಾಪ್ರಭುತ್ವವೇ ಅತ್ಯುತ್ತಮ ರಾಜ್ಯಾಡಳಿತ ಪದ್ಧತಿ.

ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಶಿಕ್ಷಣವು ಮಹತ್ವದ ಪಾತ್ರವನ್ನು ವಹಿಸುತ್ತದೆ.ಪ್ರಜಾಪ್ರಭುತ್ವ ರಾಷ್ಟ್ರ ಒಂದರ ಪ್ರಜೆಗಳೆಲ್ಲರೂ ವಿದ್ಯಾವಂತರಾಗಿದ್ದರೆ ಆ ದೇಶದಲ್ಲಿ ಪ್ರಜಾಪ್ರಭುತ್ವವು ಯಶಸ್ವಿಯಾದಂತೆಯೆ.ಆದರೆ ಭಾರತದಂತಹ ಬಹುಸಂಖ್ಯಾತರು ಅನಕ್ಷರಸ್ಥರಿರುವ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಸವಾಲಿನ ಕೆಲಸ.ಅದೃಷ್ಟವಶಾತ್ ನಾವು ಅತ್ಯುತ್ತಮ ಸಂವಿಧಾನವನ್ನು ಹೊಂದಿರುವುದರಿಂದ ಮತ್ತು ನಮ್ಮ ಸಂವಿಧಾನವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಅಳವಡಿಸಿದ್ದರಿಂದ ಅನಕ್ಷರಸ್ಥರ ನಡುವೆಯೂ ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ.ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಶಿಕ್ಷಣವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ.ರಾಷ್ಟ್ರದ ಪ್ರಜೆಗಳೆಲ್ಲರೂ ವಿದ್ಯಾವಂತರಾಗಿರಬೇಕು.ಭಾರತದಲ್ಲಿ ಬಹಳಷ್ಟು ಜನರು ಅನಕ್ಷರಸ್ಥರಿದ್ದುದರಿಂದ ಅವರಿಗೆ ಕನಿಷ್ಟ ಓದಲು ಬರೆಯಲು,ಇಲ್ಲವೆ ಅವರ ಸಹಿಮಾಡುವಷ್ಟಾದರೂ ಸಾಕ್ಷರರನ್ನಾಗಿ ಮಾಡಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ವಯಸ್ಕರ ಶಿಕ್ಷಣದಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.ಸಹಿಮಾಡುವಷ್ಟು ಸಾಕ್ಷರರಾದ ಜನರಿಂದ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳುವುದಿಲ್ಲ; ದೇಶದ ಆಸ್ತಿಯಾದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು.ವಿದ್ಯಾರ್ಥಿಗಳಲ್ಲಿ ಪೌರಪ್ರಜ್ಞೆ,ಸರಕಾರಿ ಆಡಳಿತ ವ್ಯವಸ್ಥೆ,ಚುನಾವಣೆಗಳ ಮಹತ್ವ ,ಸಂವಿಧಾನದ ಪ್ರಜ್ಞೆ ಮೂಡಿಸಬೇಕು.

ಪ್ರಜಾಪ್ರಭುತ್ವದಲ್ಲಿ ಶಿಕ್ಷಣವು ಎರಡು ರೀತಿಯ ಕಾರ್ಯಗಳನ್ನು ಮಾಡುತ್ತದೆ.ಒಂದು, ಜನರಿಗೆ ಸಾಮಾನ್ಯ ಶಿಕ್ಷಣ ನೀಡುವುದಾದರೆ ಮತ್ತೊಂದು ಉದ್ಯೋಗಹೊಂದಲು ಬೇಕಾದ ವಿಶೇಷ ನೈಪುಣ್ಯ ಇಲ್ಲವೆ ಕೌಶಲ್ಯ ನೀಡುವುದು.ಸಾಮಾನ್ಯಶಿಕ್ಷಣವೇ ಆಗಲಿ ವೃತ್ತಿಪರಶಿಕ್ಷಣಕ್ಕೆ ಸಂಬಂಧಿಸಿದ ವಿಶೇಷ ಶಿಕ್ಷಣವೇ ಆಗಿರಲಿ ಅದಕ್ಕೆ ನಿರ್ದಿಷ್ಟ ಶಿಕ್ಷಣ ಕ್ರಮ ಮತ್ತು ಪಠ್ಯಕ್ರಮ ಇರಬೇಕಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಶಿಕ್ಷಣ ಪದ್ಧತಿ ಮತ್ತು ಪಠ್ಯಕ್ರಮಗಳು ಪ್ರಜೆಗಳ ಉನ್ನತಿಯನ್ನೇ ಲಕ್ಷ್ಯದಲ್ಲಿರಿಸಿಕೊಳ್ಳುವುದು ಅವಶ್ಯಕ.ವಿಜ್ಞಾನ,ವೈದ್ಯಕೀಯ,ಇಂಜನಿಯರಿಂಗ್ ಗಳಂತಹ ವಿಶೇಷ ನೈಪುಣ್ಯ ನಿರೀಕ್ಷಿಸುವ ಶಿಕ್ಷಣಪದ್ಧತಿಗೆ ಆಯಾ ವಿಷಯಸಂಬಂಧಿ ಪಠ್ಯಕ್ರಮಕ್ಕೆ ಪ್ರಾಧಾನ್ಯ ನೀಡಬೇಕು.ಉಳಿದದ್ದು ಗೌಣ.ಕಲೆ,ಸಮಾಜವಿಜ್ಞಾನ,ವಕಾಲತ್ತು ಮೊದಲಾದ ಶಿಕ್ಷಣಕ್ರಮಗಳಲ್ಲಿ ಭಾಷೆಯ ಕಲಿಕೆಯು ಮಹತ್ವದ್ದಾಗಿರುತ್ತದೆ.ನಮ್ಮಲ್ಲಿ ಪ್ರಾಥಮಿಕ ಶಾಲಾಹಂತದಿಂದಲೂ ಕಲೆ ,ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳಲ್ಲಿ ಮಕ್ಕಳಿಗೆ ಪ್ರಾರಂಭಿಕ ಮಾಹಿತಿ ನೀಡಲಾಗುತ್ತದೆ.ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ವಿಸ್ತೃತಕಲಿಕೆಗೆ ಅವಕಾಶವಿದೆ.ಕಲೆ ಮತ್ತು ಸಮಾಜ ವಿಜ್ಞಾನಗಳ ಬೋಧನೆಯಲ್ಲಿಯೇ ಸಮಸ್ಯೆ ಬಂದೊದಗುತ್ತದೆ– ಯಾವಶಿಕ್ಷಣಕ್ರಮ ಅಳವಡಿಸಿಕೊಳ್ಳಬೇಕು ಮತ್ತು ಯಾವುದು ಪಠ್ಯವಾಗಿರಬೇಕು ಎನ್ನುವ ಸಮಸ್ಯೆ ತಲೆದೋರುತ್ತದೆ.

ಪ್ರಜಾಪ್ರಭುತ್ವವನ್ನು ಬಲಪಡಿಸುವ ಶಿಕ್ಷಣಪದ್ಧತಿ ಮತ್ತು ಪಠ್ಯಕ್ರಮಗಳಿರಬೇಕು ಎನ್ನುವುದು ಆದರ್ಶದ ಮಾತು.ಅಂತಹ ಆದರ್ಶ ಶಿಕ್ಷಣ ವ್ಯವಸ್ಥೆ ಇರಬೇಕಾದರೆ ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗಗಳಂತೆ ಪ್ರತ್ಯೇಕವಾದ ಶಿಕ್ಷಣಾಂಗ ಒಂದು ಇರಬೇಕು.ನಮ್ಮ ಸಂವಿಧಾನದ ನಿರ್ಮಾತೃಗಳ ಕಾಲದಲ್ಲಿ ದೇಶಮುಂದೆ ಎದುರಿಸಬಹುದಾದ ರಾಜಕೀಯ ಸ್ಥಿತ್ಯಂತರಗಳ ಕಲ್ಪನೆ ಇರಲಿಲ್ಲವಾದ್ದರಿಂದ ಬಹುಶಃ ಅವರು ಪ್ರತ್ಯೇಕ ಶಿಕ್ಷಣಾಂಗದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ತೋರುತ್ತದೆ.ಇತ್ತೀಚಿನ ವರ್ಷಗಳ ರಾಜಕೀಯ ವಿದ್ಯಮಾನಗಳನ್ನು ಆರೈದು ನೋಡಿದಾಗ ಭಾರತದಲ್ಲಿ ಪ್ರಜಾಪ್ರಭುತ್ವವು ಬಲಗೊಳ್ಳಬೇಕಾದರೆ ಈಗಿರುವ ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗಗಳಂತೆಯೇ ಪ್ರತ್ಯೇಕ ಅಸ್ತಿತ್ವ ಉಳ್ಳ ನಾಲ್ಕನೆಯ ಅಂಗ ಶಿಕ್ಷಣಾಂಗದ ಅಗತ್ಯ ಇದೆ ಎನ್ನಿಸುತ್ತದೆ.ಈಗ ಶಾಸಕಾಂಗ ಮತ್ತು ಕಾರ್ಯಾಂಗಗಳು ಶೈಕ್ಷಣಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆ ಮತ್ತು ಶಿಕ್ಷಣ ಹಾಗೂ ಪಠ್ಯಕ್ರಮಗಳನ್ನು ನಿರ್ಣಯಿಸುತ್ತವೆ.ಭಾರತದ ಪ್ರಜಾಪ್ರಭುತ್ವವು ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯನ್ನು ಹೊಂದಿದ್ದರೂ ಎರಡು ಪಕ್ಷಗಳೇ ಪ್ರಧಾನ ಪಾತ್ರವಹಿಸುತ್ತಿವೆ ಪ್ರಜಾಪ್ರಭುತ್ವದ ಗತಿನಿರ್ಧಾರದಲ್ಲಿ.ಆಗೊಮ್ಮೆ ಈಗೊಮ್ಮೆ ಸಮ್ಮಿಶ್ರಸರಕಾರಗಳು ಮಿಂಚಿನಂತೆ ಮಿಂಚಿಹೋಗಿದ್ದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷಗಳೇ ಕೇಂದ್ರದಲ್ಲಿ ಅಧಿಪತ್ಯ ನಡೆಸಿದ,ನಡೆಸುತ್ತಿರುವ ಪಕ್ಷಗಳು.ಹೀಗಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ತನಗೆ ಅನುಕೂಲಕರವಾದ ಶಿಕ್ಷಣನೀತಿಯನ್ನು ಹೊಂದಲಿಚ್ಛಿಸುವುದು ಮತ್ತು ತನ್ನ ಪಕ್ಷದ ಧ್ಯೇಯೋದ್ದೇಶಗಳಿಗೆ ಪೂರಕವಾದ ಪಠ್ಯಕ್ರಮವನ್ನು ಹೇರಬಯಸುವುದು ಸಹಜ ಸಂಗತಿ.ನಮ್ಮ ದೇಶದ ಎರಡೂ ಪಕ್ಷಗಳು ಈ ಕೆಲಸವನ್ನು ಮಾಡಿವೆಯಾದ್ದರಿಂದ ಯಾವುದೇ ಪಕ್ಷ ಒಂದನ್ನು ಅಪರಾಧಿ ಸ್ಥಾನದಲ್ಲಿ ಕುಳ್ಳಿರಿಸಲು ಆಗದು.

ಸೋಜಿಗದ ಸಂಗತಿ ಎಂದರೆ ನಮ್ಮ ಸಂವಿಧಾನದಂತೆ ಶಿಕ್ಷಣವು ರಾಜ್ಯಗಳ ಅಧಿಕಾರವ್ಯಾಪ್ತಿಯಲ್ಲಿ ಬರುವ ವಿಷಯ.ಉನ್ನತ ಶಿಕ್ಷಣ,ಶೈಕ್ಷಣಿಕ ಸುಧಾರಣೆ ಮತ್ತು ಸಂಪನ್ಮೂಲಗಳ ನೆರವಿನ ನೆಪದಲ್ಲಿ ಕೇಂದ್ರಸರ್ಕಾರವು ಶಿಕ್ಷಣಕ್ಷೇತ್ರದಲ್ಲಿ ತನ್ನ ಪಾರಮ್ಯ ಪ್ರತಿಷ್ಠಾಪಿಸಿದೆ.ಕೇಂದ್ರದಲ್ಲಿನ ಸರಕಾರಗಳು ಬದಲಾದಂತೆ ಶಿಕ್ಷಣನೀತಿಯೂ ಬದಲಾಗುತ್ತದೆ.ಹೀಗಾಗುವದರಿಂದಲೇ ಶೈಕ್ಷಣಿಕ ಕ್ಷೇತ್ರವು ಸಮಸ್ಯೆಗಳ ಗೂಡಾಗಿ ಸೊರಗುತ್ತದೆ.ಪ್ರತಿ ರಾಜಕೀಯ ಪಕ್ಷಕ್ಕೆ ಒಂದು ಪ್ರಣಾಳಿಕೆ ಇರುತ್ತದೆ,ಇರಲೂ ಬೇಕು.ಆದರೆ ಶಿಕ್ಷಣದ ವಿಷಯಕ್ಕೆ ಬಂದಾಗ ಪ್ರಜೆಗಳ ಹಿತವನ್ನೇ ಮುಖ್ಯವಾಗಿ ಉಳ್ಳ ಒಂದು ಸರ್ವಸಮ್ಮತ ಶಿಕ್ಷಣನೀತಿ ಮತ್ತು ಪಠ್ಯಕ್ರಮವನ್ನು ಅಳವಡಿಸಿಕೊಳ್ಳಬೇಕು.ಪ್ರಜೆಗಳನ್ನು ನಿಜವಾದ ಅರ್ಥದ ಪ್ರಭುಗಳನ್ನಾಗಿ ಮಾಡುವ ಶಿಕ್ಷಣಪದ್ಧತಿಯನ್ನು ಅಳವಡಿಸಿಕೊಂಡು ಅನುಷ್ಠಾನಕ್ಕೆ ತರುವುದು ರಾಜಕೀಯ ಪಕ್ಷಗಳ ಬದ್ಧತೆ ಆಗಬೇಕು.ಸ್ವತಂತ್ರ ಶಿಕ್ಷಣಾಂಗ ಒಂದು ಇದ್ದರೆ ಮಾತ್ರ ಇದು ಸಾಧ್ಯ‌.

ಹದಿನಾಲ್ಕುವರ್ಷದವರೆಗೆ ಮಕ್ಕಳಿಗೆ ಕಡ್ಡಾಯಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ನಮ್ಮದೇಶದಲ್ಲಿ ಆ ಮಕ್ಕಳಿಗೆ ಕಡ್ಡಾಯವಾಗಿ ಕಲಿಸಬೇಕಾದುದು ಏನು ಎನ್ನುವುದನ್ನು ಆಲೋಚಿಸಬೇಕಾದದ್ದು ಮುಖ್ಯ ಸಂಗತಿ.ಮಕ್ಕಳನ್ನು ಭವಿಷ್ಯದ ಪ್ರಜೆಗಳನ್ನಾಗಿ,ದೇಶದ ಆಸ್ತಿಯನ್ನಾಗಿ ರೂಪಿಸುವ ಶಿಕ್ಷಣ ಮತ್ತು ಪಠ್ಯಕ್ರಮಗಳನ್ನು ಅಳವಡಿಸಬೇಕು.ಕಥೆ,ಪುರಾಣ,ವೈಭವೀಕೃತ ಐತಿಹಾಸಿಕ ವ್ಯಕ್ತಿಗಳ ಪರಿಚಯಕ್ಕಿಂತ ಮಕ್ಕಳಿಗೆ ವರ್ತಮಾನದ ಅಗತ್ಯಗಳನ್ನು ಪೂರೈಸುವ,ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಶಿಕ್ಷಣ ನೀಡಬೇಕು ಮತ್ತು ಅದಕ್ಕೆ ಪೂರಕವಾದ ಪಠ್ಯಕ್ರಮ ಅಳವಡಿಸಬೇಕು.ಮಕ್ಕಳು ದೇಶದ ಆಸ್ತಿ,ಯಾವುದೇ ಪಕ್ಷದ ಆಸ್ತಿಯಲ್ಲ.ವಿದ್ಯಾರ್ಥಿಗಳನ್ನು ನಾಳಿನ ನಾಗರಿಕರು ಎಂದು ನೋಡಬೇಕೇ ಹೊರತು ರಾಜಕೀಯ ಲೆಕ್ಕಾಚಾರದಿಂದ ನೋಡಬಾರದು.ಕಲೆ,ಸಮಾಜವಿಜ್ಞಾನ ಅದರಲ್ಲೂ ಇತಿಹಾಸದ ಪಠ್ಯಕ್ರಮದ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ಇರಬೇಕು.ನಮ್ಮ ಸಂವಿಧಾನದ ಆಶಯಕ್ಕೆ ಪೂರಕವಾದ ಶಿಕ್ಷಣಕ್ರಮ ಮತ್ತು ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು.

ನಮ್ಮದು ಜಾತ್ಯಾತೀತ ರಾಷ್ಟ್ರ.ನಮ್ಮ ಸಂವಿಧಾನವು ಭಾರತೀಯರೆಲ್ಲರ ಸರ್ವತೋಮುಖ ಅಭಿವೃದ್ಧಿಗೆ ಹಕ್ಕು ಅವಕಾಶಗಳನ್ನು ನೀಡಿದೆಯಾದ್ದರಿಮದ ಸಂವಿಧಾನದ ಪೀಠಿಕೆ ( preamble),ರಾಜ್ಯನೀತಿ ನಿರ್ದೇಶಕ ತತ್ತ್ವಗಳು( Directive principles of state policy) ಮತ್ತು ಮೂಲಭೂತಹಕ್ಕುಗಳಿಗೆ ಚ್ಯುತಿಯಾಗದಂತಹ ಶಿಕ್ಷಣಕ್ರಮ ಮತ್ತು ಪಠ್ಯಕ್ರಮಗಳ ಸಂಯೋಜನೆ ಅವಶ್ಯಕ.

ನಮ್ಮ ಸಂವಿಧಾನವು ಜಾತ್ಯಾತೀತ ಮೌಲ್ಯವನ್ನು ಪ್ರತಿಪಾದಿಸುವುದರಿಂದ ನಮ್ಮ ಶಿಕ್ಷಣವು ಜಾತಿ,ಧರ್ಮಗಳ ಹಂಗು- ಅಭಿಮಾನಗಳಿಗೆ ಒಳಗಾಗದ ಮುಕ್ತಶಿಕ್ಷಣ ಕ್ರಮವಾಗಿರಬೇಕು ಮತ್ತು ಅದಕ್ಕೆ ಪೂರಕವಾದ ಪಠ್ಯವಸ್ತುವನ್ನು ಒಳಗೊಳ್ಳಬೇಕು.ನಮ್ಮ ಸಂವಿಧಾನವು ಮೂಢನಂಬಿಕೆಯನ್ನು ಅಲ್ಲಗಳೆಯುತ್ತದೆ,ವ್ಯಕ್ತಿಪೂಜೆಯನ್ನು ಒಪ್ಪುವುದಿಲ್ಲವಲ್ಲದೆ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಒತ್ತಾಯಿಸುತ್ತಿರುವುದರಿಂದ ಇದಕ್ಕೆ ಅನುಗುಣವಾದ ಪಠ್ಯವಸ್ತುವನ್ನು ಶಿಕ್ಷಣದಲ್ಲಿ ಸೇರಿಸಬೇಕು.ಸಂವಿಧಾನದ ಪೀಠಿಕೆ,ರಾಜ್ಯನೀತಿ ನಿರ್ದೇಶಕ ತತ್ತ್ವಗಳು ಮತ್ತು ಮೂಲಭೂತಹಕ್ಕುಗಳ ಸೀಮೋಲ್ಲಂಘನೆ ಮಾಡದಂತಹ ಶಿಕ್ಷಣ ವ್ಯವಸ್ಥೆ ಮತ್ತು ಪಠ್ಯವಸ್ತುಗಳ ಅಗತ್ಯ ಇದೆ.ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದವರು,ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎನ್ನುವವರು ಮತ್ತು ಸಂವಿಧಾನದ ಪಾರಮ್ಯವನ್ನು ಒಪ್ಪುವವರು ಈ ನಿಟ್ಟಿನಲ್ಲಿ ಆಲೋಚಿಸುತ್ತಾರೆ ಎನ್ನುವುದು ನನ್ನ ಭಾವನೆ.

17.05.2022

About The Author