ಬಯಲು’ ಆಗದ ಹೊರತು ಪರಮಾತ್ಮನ ದರ್ಶನ ಸಾಧ್ಯವಿಲ್ಲ

ಅನುಭಾವ ಚಿಂತನೆ : ಬಯಲು’ ಆಗದ ಹೊರತು ಪರಮಾತ್ಮನ ದರ್ಶನ ಸಾಧ್ಯವಿಲ್ಲ : ಮುಕ್ಕಣ್ಣ ಕರಿಗಾರ

ಪರಮಾತ್ಮನ ದರ್ಶನ,ಸಾಕ್ಷಾತ್ಕಾರಗಳ ಬಗ್ಗೆ ಮನುಷ್ಯರಿಗೆ ಎಲ್ಲಿಲ್ಲದ ಕುತೂಹಲ.ಆದರೆ ಪರಮಾತ್ಮನ ದರ್ಶನ ಪಡೆಯುವವರ ಸಂಖ್ಯೆ ತೀರ ವಿರಳ.’ ಇದು ಕಲಿಯುಗ,ಪರಮಾತ್ಮನ ದರ್ಶನ ಸಾಧ್ಯವಿಲ್ಲ’ ಎನ್ನುವ ಮಾತನ್ನು ಒಪ್ಪಲಾಗದು.ಕಲಿಯುಗವೇ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಶ್ರೇಷ್ಠಯುಗ.ಕೃತಯುಗ,ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ ಕನಿಷ್ಟ ಹನ್ನೆರಡು ವರ್ಷಗಳ ಕಾಲ ದೀರ್ಘ ತಪಸ್ಸು ಮಾಡಬೇಕಿತ್ತು.ಆದರೆ ಕಲಿಯುಗದಲ್ಲಿ ಮನೆ,ಸಂಸಾರ ತೊರೆದು ಕಾಡಿಗೆ ಹೋಗಿಯೋ ಗುಡ್ಡ ಗುಹೆಗಳಲ್ಲಿ ಕುಳಿತೋ ತಪಸ್ಸು ಮಾಡುವ ಅಗತ್ಯವಿಲ್ಲ.ಮನೆಗಳಲ್ಲಿ ಇದ್ದುಕೊಂಡೇ ಪರಮಾತ್ಮನ ದರ್ಶನ,ಸಾಕ್ಷಾತ್ಕಾರ ಪಡೆಯಬಹುದು.ಪರಮಾತ್ಮನು ಕಲಿಯುಗದ ಜೀವರುಗಳಾದ ನಮ್ಮ ಮೇಲೆ ವಿಶೇಷ ಪ್ರೀತಿ,ಅನುಕಂಪ ತೋರಿಸಿದ್ದಾನೆ.

ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಂಸಾರವಾಗಲಿ ಪ್ರಪಂಚವಾಗಲಿ ಅಡ್ಡಿಯಾಗುವುದಿಲ್ಲ.ಸಂಸಾರದೊಳಿದ್ದೇ ಪರಮಾತ್ಮನ ದರ್ಶನ ಪಡೆಯಬಹುದು.ಪ್ರಪಂಚ ಪರಮಾತ್ಮನ ಸಾಕ್ಷಾತ್ಕಾರದ ಸಾಧನಾ ಭೂಮಿ.ಸಂಸಾರವನ್ನು ಪರಮಾತ್ಮನು ವಹಿಸಿದ ಕರ್ತವ್ಯವೆಂದೂ ಪ್ರಪಂಚವು ಪರಮಾತ್ಮನ ಲೀಲಾಭೂಮಿ ಎಂದು ತಿಳಿದು ನಡೆದದ್ದಾದರೆ ಪರಮಾತ್ಮನ ಸಾಕ್ಷಾತ್ಕಾರ ಕಷ್ಟಕರವಲ್ಲ.

ಪರಮಾತ್ಮನ ಸಾಕ್ಷಾತ್ಕಾರಕ್ಕೆ ‘ಬಯಲು’ ಆಗಬೇಕು.’ ಆಲಯ’ ವು ಬಂಧನದ ಕಾರಣವಾದರೆ ‘ ಬಯಲು’ ಮುಕ್ತಿಯ ಮೂಲ.ಆಲಯ ಎಂದರೆ ಮನುಷ್ಯ ನಿರ್ಮಿತಿಯಾದ ಮನೆ,ಸಂಸಾರ,ವ್ಯವಸ್ಥೆ,ಮತ, ಜಾತಿ,ಮತ,ಧರ್ಮ ಮತ್ತು ಪಂಥಗಳು ಇವೇ‌ಮೊದಲಾದವುಗಳು.ಇವುಗಳ ಮೋಹ ಇರುವವರೆಗೆ ನಾವು ಮುಕ್ತರಾಗಲು ಸಾಧ್ಯವಿಲ್ಲ.ಪರಮಾತ್ಮನ ದರ್ಶನ ಅಥವಾ ಸಾಕ್ಷಾತ್ಕಾರ ಪಡೆಯಬೇಕು ಎನ್ನುವವರು ಆಲಯದ ಹಂಗನ್ನು ಹರಿದೊಗೆದು ಬಯಲಿಗೆ ಬರಬೇಕು ಬಯಲು ಆಗಬೇಕು.ಜಾತಿ,ಮತ,ಧರ್ಮ,ಪಂಥ,ಪಂಗಡಗಳ ಗುಂಗಿಗೆ‌ ಒಳಗಾಗಬಾರದು,ಸತ್ಪುರುಷರ ಸಂಗದೊಳಿರಬೇಕು.ಯಾವ ಜಾತಿಯೂ ಶ್ರೇಷ್ಠವಲ್ಲ,ಯಾವ ಜಾತಿಯೂ ಕನಿಷ್ಟವಲ್ಲ; ಅದು ಮನುಷ್ಯ ನಿರ್ಮಿತ ಸಾಮಾಜಿಕ ವ್ಯವಸ್ಥೆ ಅಷ್ಟೆ.ಮುಕ್ತಿಯನ್ನು ಪಡೆಯಬೇಕು ಎನ್ನುವವರು ಜಾತಿಯ ಅಭಿಮಾನ, ಅವಲಂಬನೆಯಿಂದ ಹೊರಬರಬೇಕು.ಜಾತಿಯನ್ನಳಿದುಕೊಂಡು ಜ್ಯೋತಿಸ್ವರೂಪರಾಗುವವರೇ ಮುಕ್ತಾತ್ಮರುಗಳು.ಮತವೂ ಬಂಧನ ಕಾರಿ.ನನ್ನದು ಆ ಮತ,ಈ ಮತ ಎನ್ನುವ ಭ್ರಾಂತಿಗೆ ಒಳಗಾಗದೆ ನನ್ನದು ಮನುಜಪಥ,ಪರಮಾತ್ಮನ ಪಥ ಎಂದರಿತರೆ ಪರಮಾತ್ಮನ ಸಮೀಪ ಹೋದಂತೆಯೇ.ಧರ್ಮವೂ ಕೂಡ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಡ್ಡಿಯೆ.ಧರ್ಮ ಎಂದರೆ ಮಾನವತೆಯನ್ನು ಎತ್ತಿಹಿಡಿಯುವ ಮೌಲ್ಯಗಳ ಸಂಗಮತತ್ತ್ವ ಎಂದರ್ಥ.ಆದರೆ ಪ್ರಪಂಚದಲ್ಲಿ ಇಂದು ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳು ಅವುಗಳ ಮೂಲಸ್ವರೂಪದಿಂದ ಹೊರಬಂದು ಶುಷ್ಕ ಆಚರಣೆ,ಕ್ರಿಯಾವಿಧಿಗಳಲ್ಲೇ ಸಂತೃಪ್ತಿಯನ್ನು ಕಾಣುತ್ತಿವೆ.ಮನುಷ್ಯರ ಕಲ್ಯಾಣವೇ ಗುರಿಯಾಗಿದ್ದ ಧರ್ಮಗಳು ಅಲ್ಪಮತಿಗಳ,ಅವಿವೇಕಿಗಳ ಕೈಯಲ್ಲಿ ಸಿಕ್ಕು ನನ್ನ ಧರ್ಮಶ್ರೇಷ್ಠ,ನಿನ್ನ ಧರ್ಮ‌ಕನಿಷ್ಟ ಎನ್ನುವ ಭೇದಬುದ್ಧಿಯು ಹುಟ್ಟಿ ಧರ್ಮದ ಹೆಸರಿನಲ್ಲಿ ಹಿಂಸೆ,ಅನಾಚಾರಗಳು ತಾಂಡವವಾಡುತ್ತಿವೆ.ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ,ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ.ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ.ಧರ್ಮಕ್ಕಾಗಿ ಮನುಷ್ಯರನ್ನು ಕೊಲ್ಲು ಎಂದು ಹೇಳುವ ಧರ್ಮವು ಧರ್ಮವೇ ಅಲ್ಲ.ಇನ್ನು ಪಂಥಗಳ ಹಾವಳಿಯಂತೂ ಜೋರಾಗಿಯೇ ಇದೆ ಎಲ್ಲ ದೇಶಗಳಲ್ಲಿಯೂ.ನಮ್ಮಲ್ಲಿ ಬಲಪಂಥೀಯರು ಮತ್ತು ಎಡಪಂಥಿಯರುಗಳು ಪರಸ್ಪರ ಶತ್ರುಗಳಂತೆ ವಿರೋಧ ಸಾಧಿಸುತ್ತಿದ್ದಾರೆ.ದೇಶಾಭಿಮಾನ,ಧರ್ಮಾಭಿಮಾನ,ಸಂಸ್ಕೃತಿಯ ಅಭಿಮಾನ ಉಳ್ಳವರು ಬಲಪಂಥಿಯರು ಆದರೆ ಇದಕ್ಕೆ ವಿರುದ್ಧವಾಗಿ ವರ್ತಿಸುವವರು ಎಡಪಂಥೀಯರು.ಬಲಪಂಥಿಯರಲ್ಲಿ ‘ಅನುಸರಣಾಭಾವ’ ದಟ್ಟವಾಗಿದ್ದರೆ ಎಡಪಂಥಿಯರಲ್ಲಿ ‘ಕೆಣಕುವ ಭಾವ’ ಪ್ರಧಾನವಾಗಿರುತ್ತದೆ.ಆದರೆ ಬಲಪಂಥಕ್ಕಾಗಲಿ ಎಡಪಂಥಕ್ಕಾಗಲಿ ಪರಮಾತ್ಮನ ಸಮ್ಮತಿಯ ಮುದ್ರೆ ಇಲ್ಲ ಎನ್ನುವುದನ್ನು ಮನಗಾಣಬೇಕು.ಬಲಪಂಥವನ್ನು ಸ್ವೀಕರಿಸದ ಮಾತ್ರಕ್ಕೆ ಪರಮಾತ್ಮನ ಅನುಗ್ರಹಕ್ಕೆ‌ ಪಾತ್ರರಾಗಬಹುದೆ? ಎಡಪಂಥವನ್ನು ಅಪ್ಪಿದ ಮಾತ್ರಕ್ಕೆ ಪರಮಾತ್ಮನಿಂದ ದೂರವಾಗಬಹುದೆ ? ಇಲ್ಲ,ಖಂಡಿತ ಇಲ್ಲ.ಪರಮಾತ್ಮನು ಬಲಪಂಥಿಯವರಿಗೆ ವಿಶೇಷ ಪ್ರೀತಿಯನ್ನು ತೋರಿಸಲಾರ,ಎಡಪಂಥಿಯವರನ್ನು ದೂರ ಇಡಲಾರ.ಮನುಷ್ಯರು ಕಟ್ಟಿಕೊಂಡ ಪಂಥ ಪಂಗಡಗಳಿಂದ ಪರಮಾತ್ಮನಿಗೆ ಆಗಬೇಕಾದುದು ಏನು ? ಪಂಥದ ಶಿಫಾರಸ್ಸು ಪತ್ರಗಳಿಂದ ಪರಮಾತ್ಮನ ಅನುಗ್ರಹ ಪಡೆಯಲು ಸಾಧ್ಯವಿಲ್ಲ.ಪರಮಾತ್ಮನ ದರ್ಶನ,ಮುಕ್ತಿ ಪಡೆಯಬೇಕು ಎನ್ನುವವರು ಪಂಥಗಳ ಮೋಹ, ವ್ಯಾಮೋಹದಿಂದ ಮುಕ್ತರಾಗಬೇಕು.ಬಲಪಂಥಿಯರೋ ಎಡಪಂಥಿಯರೋ ಆಗದೆ ಸಮಪಂಥಿಗಳು ಆಗಬೇಕು, ಸತ್ಯಪಂಥಿಗಳು ಆಗಬೇಕು ,ಪರಮಾತ್ಮ ಪಂಥಿಗಳು ಆಗಬೇಕು.ಪಂಥಗಳ ಹಂಗು ಅಭಿಮಾನಮುಕ್ತರಾಗಿ ಸಂತತ್ವವನ್ನು ಅಳವಡಿಸಿಕೊಳ್ಳಬೇಕು,ಸಂತರಾಗಬೇಕು.

‌ ಜಾತಿ,ಮತ,ಧರ್ಮ,ಪಂಥ,ಪಂಗಡಗಳು ದೇಹದ ನೆಲೆಯಲ್ಲಿಯೇ ವ್ಯವಹರಿಸಲ್ಪಡುವ ಸಂಗತಿಗಳಾಗಿದ್ದರಿಂದ ಅವುಗಳ ಮಿತಿಗೆ ಒಳಗಾಗಿರುವವರೆಗೆ ಅತೀತನಾದ ಪರಮಾತ್ಮನನ್ನು ಪಡೆಯಲು ಸಾಧ್ಯವಿಲ್ಲ.ಪರಮಾತ್ಮನು ಯಾವುದಕ್ಕೂ ಅಂಟಿಲ್ಲ,ಭೂಮಿಯ ಮೇಲಣ ಯಾವ ವ್ಯಕ್ತಿ,ವಸ್ತು,ಸಂಗತಿಗಳೊಂದಿಗೆ ನಂಟಿಸ್ತಿಕೆ ಇಟ್ಟುಕೊಂಡಿಲ್ಲ.ಪ್ರಪಂಚದ ನಿರ್ಮಾಣಕ್ಕೆ ಕಾರಣನಾಗಿ,ಪ್ರಪಂಚನಿಯಾಮಕ ಶಕ್ತಿಯಾಗಿ,ಪ್ರಪಂಚದಲ್ಲಿ ಇದ್ದೂ ಪರಮಾತ್ಮನು ಪ್ರಪಂಚಕ್ಕೆ ಅಂಟಿಕೊಂಡಿಲ್ಲ ; ಪ್ರಪಂಚ ವ್ಯವಹಾರದಲ್ಲಿ ನಿರ್ಲಿಪ್ತಭಾವನೆಯನ್ನು ತಳೆದಿದ್ದಾನೆ ಪರಮಾತ್ಮನು.ಪರಮಾತ್ಮನ ಸಾಕ್ಷಾತ್ಕಾರ ಪಡೆಯಬೇಕು ಎನ್ನುವವರು ಪರಮಾತ್ಮನಂತೆಯೇ ಪ್ರಪಂಚದ ಸ್ಥಾವರಸಂಗತಿಗಳಲ್ಲಿ ನಿರ್ಲಿಪ್ತಭಾವನೆಯನ್ನು ತಳೆದು ತಮ್ಮೊಳಗಣ ಅಂತರಾತ್ಮನಾದ ಜಂಗಮಶಕ್ತಿಯನ್ನು ಜಾಗ್ರತಗೊಳಿಸಿಕೊಳ್ಳಬೇಕು.ದೇಹಭಾವವನ್ನು ಅಳಿದುಕೊಂಡು ದೇವ ಭಾವವನ್ನು ಅಳವಡಿಸಿಕೊಳ್ಳಬೇಕು,ಆತ್ಮಭಾವವನ್ನು ಅಂಗವಿಸಿಕೊಳ್ಳಬೇಕು.ಮನುಷ್ಯರಲ್ಲಿ ದೇಹಭಾವ ಇರುವವರೆಗೆ ಆಲಯ ಇಲ್ಲವೆ ಸ್ಥಾವರದ ಮೋಹ ಮಮಕಾರ ಇರುತ್ತದೆ.ಆಲಯ ಇಲ್ಲವೆ ಸ್ಥಾವರಕ್ಕೆ ಅಂಟಿಕೊಂಡಿರುವವರೆಗೆ ಪರಮಾತ್ಮನ ದರ್ಶನ,ಸಾಕ್ಷಾತ್ಕಾರ ಸಾಧ್ಯವಿಲ್ಲ.ಆತ್ಮಭಾವವನ್ನು ಎಚ್ಚರಿಸಿಕೊಂಡು ದಿವ್ಯಾತ್ಮರಾದರೆ ಮಾತ್ರ ಪರಮದಿವ್ಯನೂ ಪರಮ ಸತ್ಯನೂ ಆದ ಪರಮಾತ್ಮನನ್ನು ಕಾಣಲು ಸಾಧ್ಯ.ಪರಮಾತ್ಮನು ಎಂದರೆ ಬಯಲು.ಪರಮಾತ್ಮನನ್ನು ಕಾಣಬಯಸುವವರು ಬಯಲು ಆಗಬೇಕು.ಬಯಲ ತತ್ತ್ವವನ್ನು ಅಂಗವಿಸಿಕೊಂಡು ಬಯಲು ಆಗದೆ ಪರಮಬಯಲಪ್ರಭೆಯೊಳು ಒಂದಾಗಲು ಸಾಧ್ಯವಿಲ್ಲ.

About The Author