ಆತ್ಮ- ಜೀವರುಗಳು ಸೂರ್ಯ- ಚಂದ್ರರಿದ್ದಂತೆ

ಅನುಭಾವ ಚಿಂತನೆ : ಆತ್ಮ- ಜೀವರುಗಳು ಸೂರ್ಯ- ಚಂದ್ರರಿದ್ದಂತೆ –ಮುಕ್ಕಣ್ಣ ಕರಿಗಾರ

ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತಪ್ರಾಂಶುಪಾಲರೂ ಕನ್ನಡದ ಹಿರಿಯ ಕವಿಗಳೂ ಆತ್ಮೀಯ ಹಿರಿಯಚೇತನರಾಗಿರುವ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರಿಗೆ ಆತ್ಮ,ಜೀವರುಗಳ ಬಗ್ಗೆ ತಿಳಿದುಕೊಳ್ಳುವ ಬಯಕೆ.ಇಂದು ( ೨೦.೦೫.೨೦೨೪) ಬೆಳಿಗ್ಗೆ ‘ ಆತ್ಮ ಎನ್ನುವುದು ಇದೆಯೆ? ಬದುಕಿರುವಾಗ ಜೀವ ಎಲ್ಲಿರುತ್ತೆ? ಸತ್ತನಂತರ ಅದನ್ನೇ ಆತ್ಮ ಎನ್ನಬಹುದೆ?’ ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ.

ಆತ್ಮ ಎನ್ನುವುದು ಇದೆ ಎನ್ನುವ ನಿಶ್ಚಿತ ಉತ್ತರದೊಂದಿಗೆ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರ ಪ್ರಶ್ನೆಗೆ ಉತ್ತರರೂಪದ ಈ ಲೇಖನವನ್ನು ಪ್ರಾರಂಭಿಸುವೆ.ಆತ್ಮ ಇದೆ ಎಂದೇ ಮನುಷ್ಯನಿಗೆ ಪ್ರಕೃತಿಯಲ್ಲಿ ವಿಶೇಷಸ್ಥಾನವಿದೆ.ಆತ್ಮನ ಅಸ್ತಿತ್ವದ ಕಾರಣದಿಂದಾಗಿಯೇ ಮನುಷ್ಯ ದೇವರು,ಸಾಕ್ಷಾತ್ಕಾರ,ಪರಲೋಕಗಳ ಬಗ್ಗೆ ಆಲೋಚಿಸುತ್ತಾನೆ.ಮನುಷ್ಯರ ಶರೀರದಲ್ಲಿ ಜೀವ ಮತ್ತು ಆತ್ಮಗಳೆರಡೂ ಇವೆ.ಆದರೆ ಆತ್ಮ ಮತ್ತು ಜೀವ ಎರಡೂ ಬೇರೆ ಎನ್ನುವುದನ್ನು ಲಕ್ಷ್ಯದಲ್ಲಿಟ್ಟುಕೊಳ್ಳಬೇಕು.ಕೆಲವರು ಜೀವ ಮತ್ತು ಆತ್ಮ ಒಂದೇ ಎಂದು ತಪ್ಪು ತಿಳಿದಿದ್ದಾರೆ.ಜೀವ ಮತ್ತು ಆತ್ಮ ಒಂದೇ ಅಲ್ಲ,ಅವೆರಡು ಪ್ರತ್ಯೇಕ ಸ್ಥಿತಿಗಳು.ಆತ್ಮ ಮತ್ತು ಜೀವರನ್ನು ಸೂರ್ಯ ,ಚಂದ್ರರಿಗೆ ಹೋಲಿಸಬಹುದು.ಆತ್ಮನು ಸೂರ್ಯನಾದರೆ ಜೀವನು ಚಂದ್ರನು.ಚಂದ್ರನಿಗೆ ಸ್ವಯಂ ಪ್ರಕಾಶವಿಲ್ಲ,ಸೂರ್ಯನ‌ ಬೆಳಕಿನಿಂದ ಶಕ್ತಿ ಪಡೆದು ಬೆಳಗುತ್ತಾನೆ ಚಂದ್ರ.ಹಾಗೆಯೇ ನಮ್ಮ ಶರೀರದಲ್ಲಿ ಆತ್ಮನು ಸ್ವಯಂಪ್ರಕಾಶಿತನಿದ್ದು ಆ ಆತ್ಮನ‌ ಬೆಳಕಿನಲ್ಲಿ ಜೀವನು ಬೆಳಗುತ್ತಿದ್ದಾನೆ.ಜೀವನಿಗೆ ಸ್ವಯಂ ಪ್ರಕಾಶವಿಲ್ಲ.

ಯೋಗಸಾಧನೆಯ ಬಲದಿಂದ ಶರೀರದಲ್ಲಿ ಆತ್ಮ ಮತ್ತು ಜೀವರುಗಳನ್ನು ಗುರುತಿಸಬಹುದು.ಆತ್ಮ ಮತ್ತು ಜೀವಗಳೆರಡು ಸೂಕ್ಷ್ಮ ರೂಪದಲ್ಲಿವೆ.ಹೆಬ್ಬೆರಳ ಗಾತ್ರದ ಹೃದಯವು ಆತ್ಮನ ನಿವಾಸವಾದರೆ ಜೀವನು ಪ್ರಾಣನ ರೂಪದಲ್ಲಿ ರಕ್ತದೊಂದಿಗೆ ದೇಹದಲ್ಲೆಲ್ಲ ಸಂಚರಿಸುತ್ತಿರುತ್ತಾನೆ.ಆತ್ಮನು ಜೀವದ ನಿರ್ಧಾರಕನು.ಆತ್ಮನ ಸಂದೇಶದಂತೆ ಜೀವನು ಶರೀರದ ತುಂಬೆಲ್ಲ ಸಂಚರಿಸಿ,ಕಾರ್ಯನಿರ್ವಹಿಸುವನು.ಆತ್ಮನು ಹೃದಯದಲ್ಲಿ ಸ್ಥಿರವಾಗಿ ಸ್ಥಿತನಾದ ಸ್ಥಿರಪೀಠಾಧಿಪತಿಯಾದರೆ ಜೀವನು ದೇಹದೆಲ್ಲೆಡೆಯಲ್ಲಿಯೂ ಸಂಚರಿಸುವ ಚರಪೀಠಾಧಿಪತಿಯು.ಆತ್ಮ ಮತ್ತು ಜೀವರುಗಳ ಸ್ವಭಾವ ಕಾರ್ಯವೈಖರಿಯನ್ನು ವೈಜ್ಞಾನಿಕವಾಗಿಯೂ ವಿವರಿಸಬಹುದು.ವಸ್ತು( matter) ವಿನ ರೂಪು ಸ್ಥಿತಿಗಳಾದ ಘನ,ದ್ರವ ಮತ್ತು ಅನಿಲಸ್ಥಿತಿಯನ್ನು ಎಲ್ಲರೂ ಬಲ್ಲರು.ಆದರೆ ಇವುಗಳಾಚೆ ವಸ್ತುವಿಗೆ ಇನ್ನೂ ಎರಡು ಸ್ಥಿತಿಗಳಿವೆ.ಪ್ಲಾಸ್ಮಾ ಎನ್ನುವುದು ವಸ್ತುವಿನ ನಾಲ್ಕನೇ ಸ್ಥಿತಿ.ಇದು ಅನಿಲಾತೀತ ಸ್ಥಿತಿ.ಇದರಾಚೆಗೆ ಇರುವ ಬೋಸ್ ಐನಸ್ಟೀನ್ ಸ್ಥಿತಿ ಎನ್ನುವ ವಸ್ತುವಿನ ಐದನೇ ಸ್ಥಿತಿಯನ್ನು ವಿಜ್ಞಾನಿಗಳು 1995 ರಲ್ಲಿ ಗುರುತಿಸಿದ್ದಾರೆ.ಭಾರತದ ವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಮತ್ತು ಐನ್ ಸ್ಟೀನ್ ಅವರಿಬ್ಬರ ವೈಜ್ಞಾನಿಕ ಸಂಶೋಧನೆ,ಸೂತ್ರಗಳನ್ನಾಧರಿಸಿ 1995 ರಲ್ಲಿ ಬೋಸ್ ಐನಸ್ಟೀನ್ ಸ್ಥಿತಿ ( BEC) ಎನ್ನುವ ವಸ್ತುವಿನ ಐದನೇ ಸ್ಥಿತಿಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.ಜೀವವು ನಮ್ಮ ಶರೀರದಲ್ಲಿ ಪ್ಲಾಸ್ಮಾವನ್ನು ಹೋಲಿದರೆ ಆತ್ಮವು ವಸ್ತುವಿನ ಐದನೇ ಸ್ಥಿತಿಯಾದ BEC ಯನ್ನು ಪ್ರತಿನಿಧಿಸುತ್ತದೆ.

ಮನುಷ್ಯರು ಸತ್ತಾಗ ‘ ಜೀವ ಹೋಯಿತು’ , ‘ ಪ್ರಾಣ ಹೋಯಿತು’ ಎನ್ನುತ್ತಾರೆ.ಪ್ರಾಣರೂಪದಲ್ಲಿರುವ ಜೀವವು ಹೊರಟುಹೋಗುತ್ತದೆ.ಜೀವ ಹೋದೊಡನೆ ಜೀವರುಗಳು ಸತ್ತುಹೋಗುತ್ತಾರೆ.ಜೀವದ ಸಂಚಾರ ಶರೀರದಲ್ಲಿ ನಡೆದಿರುವವರೆಗೆ ಮನುಷ್ಯರಾದಿ ಜೀವಿಗಳು ಬದುಕಿರುತ್ತಾರೆ.ಜೀವವೇ ಜೀವರುಗಳಿಗೆ ಶಕ್ತಿ,ಅಂತಃಸತ್ತ್ವ,ಸ್ಫೂರ್ತಿ,ಪ್ರೇರಣೆಗಳನ್ನು ನೀಡುತ್ತದೆ.ಜೀವನು ಜೀವರುಗಳ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಿದರೆ ಆತ್ಮನು ಜೀವರುಗಳ ಅಧ್ಯಾತ್ಮಿಕ ಅಭಿಪ್ಸೆಗೆ ಕಾರಣನು.ಎಲ್ಲ ಮನುಷ್ಯರ ಶರೀರಗಳಲ್ಲಿ ಸುಪ್ತನಾಗಿರುವ ಆತ್ಮನು ಮಹಾಪುರುಷರುಗಳು ಮತ್ತು ಯೋಗಿಗಳ ಶರೀರಗಳಲ್ಲಿ ಜಾಗ್ರತನಾಗುವನು.ಆತ್ಮಜಾಗ್ರತಗೊಂಡವರೇ ಆತ್ಮಜ್ಞಾನಿಗಳು.ಆತ್ಮನು ಎಚ್ಚರಗೊಳ್ಳುವುದರಿಂದ ಯೋಗಿಗಳು ಪರಮಾತ್ಮನ ದರ್ಶನ,ಮೋಕ್ಷವನ್ನು ಪಡೆಯುತ್ತಾರೆ.

ಆತ್ಮನು ಪರಮಾತ್ಮಸ್ವರೂಪಿಯಾದುದರಿಂದ ಅವನಿಗೆ ಹುಟ್ಟು ಸಾವುಗಳಿಲ್ಲ, ನಾಮ- ರೂಪ,ಕ್ರಿಯೆ- ಕಳಾಪಗಳಾದಿ ಉಪಾಧಿಗಳಿಲ್ಲ.ಆತ್ಮನಿಗೆ ದ್ವಂದ್ವಗಳಿಲ್ಲ,ದಂದುಗವೂ ಇಲ್ಲ,ಅವನು ನಿತ್ಯಮುಕ್ತನು.ಜೀವದ ಗತಿನಿರ್ಧಾರಕ ಶಕ್ತಿಯಾಗಿಯೂ ಆತ್ಮನು ನಿರ್ಲಿಪ್ತನು.ಜೀವದ ಕಾರಣದಿಂದ ಮನುಷ್ಯರು ಸುಖ- ದುಃಖಗಳನ್ನು ಅನುಭವಿಸುತ್ತಾರೆ,ಪುಣ್ಯ – ಪಾಪ ಕಾರ್ಯಗಳನ್ನೆಸಗುತ್ತಾರೆ.ಜೀವನು ಗೈದ ಕರ್ಮಗಳಿಗೆ ಅನುಗುಣವಾದ ಸದ್ಗತಿಯೋ ದುರ್ಗತಿಯನ್ನೋ ಅನುಭವಿಸಬೇಕಾಗುತ್ತದೆ.ಮನುಷ್ಯರು ಸತ್ತ ಬಳಿಕ ಅವರು ಗೈದ ಕರ್ಮಾನುಸಾರ ಸ್ವರ್ಗ ಇಲ್ಲವೆ ನರಕಕ್ಕೆ ತೆರಳುತ್ತಾರೆ.ಸತ್ತವರು ಜೀವ ಹೋದೊಡನೆ ಹೆಣವಾಗುತ್ತಾರೆ.ಅವರ ಶರೀರ ಪಂಚಭೂತಗಳಲ್ಲೇ ಲೀನವಾಗುವಾಗ ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋದರು ಎಂದು ಅರ್ಥೈಸುವುದು ಹೇಗೆ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ.ಮನುಷ್ಯರು ಸತ್ತ ಬಳಿಕ ಈ ಭೌತಿಕ ಕಾಯ ಅಥವಾ ಸ್ಥೂಲಕಾಯದೊಂದಿಗೆ ಸ್ವರ್ಗ ನರಕಗಳನ್ನು ಪ್ರವೇಶಿಸಲಾರರು.ಮನುಷ್ಯರು ಗೈದ ಸತ್ಕಾರ್ಯ ಮತ್ತು ಪಾಪಕೃತ್ಯಗಳಿಗೆ ಅನುಗುಣವಾಗಿ,ಪ್ರಕೃತದೇಹದ ಭಾವನೆ- ವಾಸನೆಗಳಿಗೆ ಅನುಗುಣವಾಗಿ ಮರಣೋತ್ತರ ಶರೀರ ಒಂದು ಸೃಷ್ಟಿಯಾಗುತ್ತದೆ.ಪುಣ್ಯಕಾರ್ಯಗಳನ್ನು ಮಾಡಿದವರಿಗೆ ಶ್ವೇತವರ್ಣದ ಶರೀರವು,ಪಾಪಕಾರ್ಯಗಳನ್ನು ಮಾಡಿದವರಿಗೆ ಕಪ್ಪುಶರೀರವು ಸಿದ್ಧವಾಗುತ್ತದೆ.ಜೀವರುಗಳ ಪ್ರಾಣಹೋಗುವ ವೇಳೆಗೆ ಸರಿಯಾಗಿ ಈ ಶರೀರಗಳು ಅಲ್ಲಿಗೆ ಬರುತ್ತವೆ.ಪುಣ್ಯಾತ್ಮರ ಪ್ರಾಣವು ಬಿಳಿಯ ಶರೀರದಲ್ಲಿ ಪ್ರವೇಶಿಸಿದರೆ ಪಾಪಾತ್ಮರ ಶರೀರವು ಕಪ್ಪು ಶರೀರವನ್ನು ಪ್ರವೇಶಿಸುತ್ತದೆ.ಬಿಳಿಯ ಶರೀರವು ಸ್ವರ್ಗಕ್ಕೆ ಹೋದರೆ ಕಪ್ಪು ಶರೀರವು ನರಕಕ್ಕೆ ಹೋಗುತ್ತದೆ.ಜೀವರುಗಳು ಮರ್ತ್ಯದಲ್ಲಿ ಗೈದ ಕಾರ್ಯಗಳಿಗನುಗುಣವಾಗಿ ಮರಣೋತ್ತರಕಾಯಗಳ ಮೂಲಕ ಸುಖ- ದುಃಖಗಳನ್ನು ಅನುಭವಿಸುತ್ತಾರೆ.ಒಂದೊಂದು ಸಾರೆ,ಅವಸಾನಕಾಲದಲ್ಲಿದ್ದ ವ್ಯಕ್ತಿಯು ಬೇಗನೆ ಸಾಯದೆ ಬಿಕ್ಕುತ್ತಿರುವುದನ್ನು ನೋಡಿದ್ದೇವೆ.ಆ ವ್ಯಕ್ತಿಯ ಮರಣೋತ್ತರ ಶರೀರ ಬರಲು ತಡವಾಗಿರುವುದರಿಂದ ಆ ವ್ಯಕ್ತಿಯು ಏದುಸಿರು ಬಿಡುತ್ತ,ಬಿಕ್ಕುತ್ತ ಒದ್ದಾಡುತ್ತಿರುತ್ತಾನೆ.ಮರಣೋತ್ತರ ಶರೀರ ಬಂದೊಡನೆ ಹಾರಿ ಹೋಗುತ್ತದೆ ಬಿಕ್ಕಿ ಬಳಲುತ್ತಿರುವ ವ್ತಕ್ತಿಯ ಪ್ರಾಣಪಕ್ಷಿ.ವ್ಯಕ್ತಿಯೊಬ್ಬನು ಸತ್ತಕೂಡಲೆ ಏನಾಗುತ್ತದೆ ಎನ್ನುವುದು ಸಾಮಾನ್ಯ ಜನರಿಗೆ ಗೊತ್ತಾಗದೆ ಇದ್ದರೂ ಯೋಗಿಗಳು ತಮ್ಮ ಯೋಗಬಲದಿಂದ ಮೃತವ್ಯಕ್ತಿಯು ಸ್ವರ್ಗಕ್ಕೆ ಹೋದನೆ,ನರಕದ ಪಾಲಾದನೆ ಎನ್ನುವುದನ್ನು ಕಾಣುತ್ತಾರೆ. ಸೂಕ್ಷ್ಮ ಶರೀರದ ಕೋಶಗಳು ಮರಣೋತ್ತರ ಕಾಯವನ್ನು ರೂಪಿಸುತ್ತವೆ.

ಆತ್ಮನು ಹುಟ್ಟು ಸಾವುಗಳಿಗೆ ಒಳಗಾಗದವನಾದ್ದರಿಂದ ಅವನು ಮರಣೋತ್ತರ ಬಿಳಿಯ ಶರೀರ ಇಲ್ಲವೆ ಕಪ್ಪು ಶರೀರದಲ್ಲಿ ಪ್ರವೇಶಿಸಲಾರನು.ವ್ಯಕ್ತಿಯು ಸತ್ತೊಡನೆ ಆತ್ಮನು ಅವನ ದೇಹದಿಂದ ಪ್ರತ್ಯೇಕಗೊಂಡು ಆಕಾಶದ ಆತ್ಮಲೋಕವನ್ನು ಪ್ರವೇಶಿಸುವನು.ಮತ್ತೆ ಸತ್ತಜೀವಿಯು ಮನುಷ್ಯ ಜನ್ಮ ತಳೆಯುವಾಗ ಆತ್ಮನು ಅವನನ್ನು ಹುಡುಕಿಕೊಂಡುಬಂದು ಅವನ ಶರೀರವನ್ನು ಪ್ರವೇಶಿಸುವನು.ಆದರೆ ಯೋಗಿಗಳ ಮರಣಾನಂತರ ಆತ್ಮನು ಆತ್ಮಲೋಕ ಸೇರದೆ ಯೋಗಿಗಳ ಸಿದ್ಧಯೋಗಕಾಯವನ್ನು ಪ್ರವೇಶಿಸುವನು.ಸ್ಥೂಲ ಮತ್ತು ಸೂಕ್ಷ್ಮ ಶರೀರಗಳು ಜೀವರುಗಳ ಸಾಮಾನ್ಯಗತಿನಿರ್ಧಾರಕ ಶರೀರಗಳು.ಇವುಗಳಾಚೆ ಕಾರಣಶರೀರವಿದೆ.ಕಾರಣಶರೀರವು ಮೋಕ್ಷಕ್ಕೆ ಕಾರಣವಾದ ಶರೀರವು.ಕಾರಣ ಶರೀರದಾಚೆ ಮಹಾಕಾರಣ ಶರೀರವಿದೆ.ಮಹಾಕಾರಣ ಶರೀರವನ್ನು ಸಿದ್ಧಮಾಡಿಕೊಂಡ ಯೋಗಿಯು ಸೂಕ್ಷ್ಮರೂಪದಲ್ಲಿ ಈ ಭೂಮಂಡಲದ ಎಲ್ಲೆಡೆಯು ಸಂಚರಿಸಬಲ್ಲನು.ಸಣ್ಣಬೆಳಕಿನ ಕಾಯದ ರೂಪದಲ್ಲಿ ಮಹಾಕಾರಣ ಶರೀರ ಸಿದ್ಧರು ಸಂಚರಿಸುತ್ತಿರುತ್ತಾರೆ.ಮಹಾಕಾರಣ ಶರೀರದ ಆಚೆಗೆ ಇರುವುದೇ ಕೊನೆಯ ಶರೀರವಾದ ಬ್ರಹ್ಮಶರೀರ ಇಲ್ಲವೆ ಬ್ರಹ್ಮಕಾಯ.ಬ್ರಹ್ಮಕಾಯ ಸಿದ್ಧರುಗಳು ಸಶರೀರಿಗಳಾಗಿ ಇಂದ್ರಲೋಕ,ಚಂದ್ರಲೋಕ,ಸೂರ್ಯಲೋಕ,ಬ್ರಹ್ಮಲೋಕ,ವೈಕುಂಠ ಮತ್ತು ಕೈಲಾಸಗಳಿಗೆ ತೆರಳಬಲ್ಲರು.ಭೂಮಿಯ ಆಚೆಯ ಲೋಕಗಳಲ್ಲಿ ಸಂಚರಿಸಬೇಕಾದರೆ ಸ್ಥೂಲ ಶರೀರವು ಪರಿವರ್ತನೆಗೊಂಡು ಸೂಕ್ಷ್ಮ,ಕಾರಣ,ಮಹಾಕಾರಣ ಮತ್ತು ಬ್ರಹ್ಮಕಾಯಗಳ ಸಿದ್ಧಿಯನ್ನು ಪಡೆಯಬೇಕಾಗುತ್ತದೆ.ಹಠಯೋಗಸಾಧನೆಯಿಂದ ಶರೀರಪರಿವರ್ತನೆ ಮಾಡಿಕೊಳ್ಳಬಹುದು.ಇಪ್ಪತ್ನಾಲ್ಕು ವರ್ಷಗಳ ಯೋಗಸಾಧನೆಯಿಂದ ಮಹಾಕಾರಣ ಶರೀರವು ಸಿದ್ಧವಾದರೆ ಮುವ್ವತ್ತಾರು ವರ್ಷಗಳ ಯೋಗಸಾಧನೆಯಿಂದ ಬ್ರಹ್ಮಕಾಯವು ಸಿದ್ಧಗೊಳ್ಳುತ್ತದೆ.ಮಹಾಕಾರಣ ಶರೀರ ಸಿದ್ಧರುಗಳು ಮತ್ತು ಬ್ರಹ್ಮಕಾಯ ಸಿದ್ಧರುಗಳು ಅಣು ಮಹತ್ ತತ್ತ್ವವನ್ನು ಅಳವಡಿಸಿಕೊಳ್ಳುವರು.ಬೆಳಕಿನ ಅಣುರೂಪ ಧರಿಸಿ ಇಷ್ಟ ಬಂದೆಡೆಗೆ ಸಂಚರಿಸಿ ಬಲ್ಲ ಈ ಮಹಾನ್ ಕಾಯಸಿದ್ಧರುಗಳು ತಾವು ಇಚ್ಛಿಸಿದ ವ್ಯಕ್ತಿಗಳೆದುರು ತಮ್ಮ ಶರೀರದೊಂದಿಗೆ ಪ್ರಕಟಗೊಳ್ಳುತ್ತಾರೆ.

About The Author