ವ್ಯಕ್ತಿಪೂಜೆ — ವಿಭೂತಿಪೂಜೆ

ಚಿಂತನೆ

ವ್ಯಕ್ತಿಪೂಜೆ — ವಿಭೂತಿಪೂಜೆ

ಮುಕ್ಕಣ್ಣ ಕರಿಗಾರ

ನಮ್ಮ ಆತ್ಮೀಯರಲ್ಲೊಬ್ಬರಾಗಿರುವ ವಿಚಾರವಾದಿ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ ಅವರು ಸ್ವಲ್ಪಹೊತ್ತಿನ ಹಿಂದೆ ಮೊಬೈಲ್ ನಲ್ಲಿ ಮಾತನಾಡುತ್ತ ಒಂದು ವಿಷಯ ಪ್ರಸ್ತಾಪಿಸಿದರು.ವಿಜಯಪುರ ಜಿಲ್ಲೆಯ ಅರಕೇರಿ ಅಮೋಘಸಿದ್ಧ ಗುರು ಪರಂಪರೆಯವರಾದ ಮಲ್ಲಿಕಾರ್ಜುನ ಬಾಗಲವಾಡ ಅವರು ಬಹಳ ವರ್ಷಗಳಿಂದಲೂ ನನ್ನ ಆತ್ಮೀಯರು.ಹಿಂದೆ ನಮ್ಮ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಆಯೋಜಿಸುತ್ತಿದ್ದ ಬಸವಾದಿ ಶರಣರ ಜೀವನ ಸಾಧನೆ ಸಂದೇಶಗಳನ್ನು ಪ್ರಚುರಪಡಿಸುವ ‘ ಅನುಭಾವ ಕವಿಗೋಷ್ಠಿ’ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಆನಂದಿಸುತ್ತಿದ್ದರು.ಸೌಮ್ಯಸ್ವಭಾವದ ಮಲ್ಲಿಕಾರ್ಜುನ ಬಾಗಲವಾಡ ಅವರು ಅಧ್ಯಯನ- ಪ್ರವಾಸದಿಂದ ಸಾಕಷ್ಟು ವಿದ್ವತ್ತು,ಅನುಭವ ಸಂಪಾದಿಸಿದರೂ ಯಾರೊಂದಿಗೂ ಪಾಂಡಿತ್ಯಪ್ರದರ್ಶಿಸುವ ಗೋಜಿಗೆ ಹೋದವರಲ್ಲ.ಆಗಾಗ ನನ್ನನ್ನು ಭೇಟಿ ಮಾಡಿ,ನನ್ನೊಂದಿಗೆ ಚರ್ಚಿಸಿ ನನ್ನ ವಿಚಾರಗಳನ್ನು ಒಪ್ಪಿಕೊಂಡವರಾದ್ದರಿಂದ ಅವರು ನನ್ನ ನಿಕಟವರ್ತಿಗಳಲ್ಲೊಬ್ಬರು.

ಇಂದು ಅವರು ಮಾತನಾಡುತ್ತ,ಅರಕೇರಿ ಅಮೋಘಸಿದ್ಧರ ಸೇವೆ ಮಾಡಿಕೊಂಡಿದ್ದ ಒಬ್ಬ ಸಂನ್ಯಾಸಿಯ’ ಆರಾಧನೆ ಬಾದ್ಮಿ ಅಮವಾಸೆಗೆ ಇದ್ದು ನಿಮ್ಮ ಹೆಸರು ಹಾಕಿಸುತ್ತೇವೆ,ಬರುತ್ತೀರಾ ಸರ್’ ಎಂದು ಆಹ್ವಾನಿಸಿದರು.’ ಖಂಡಿತ ಬೇಡ ಮಲ್ಲಿಕಾರ್ಜುನ ಅವರೆ,ನಾನು ಯಾವುದೇ ಮಠ ಪೀಠಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದೆ.’ ಅಂದರೆ ನೀವು ಮಠ ಮಂದಿರಗಳ ಹೋಗುವುದಿಲ್ಲವೆ ಸರ್ ?’ ಮರುಪ್ರಶ್ನಿಸಿದರು ಮಲ್ಲಿಕಾರ್ಜುನ ಬಾಗಲವಾಡ ಅವರು.’ ಹೋಗುವುದು ಅಪರೂಪ.ಹಾಗೊಮ್ಮೆ ಹೋದರೂ ಆ ಮಠ ಪೀಠಗಳ ಸ್ವಾಮಿ,ಗುರು ಜಗದ್ಗುರುಗಳನ್ನು ಭೇಟಿ ಆಗುವುದಿಲ್ಲ.ಶೃಂಗೇರಿಗೆ ಹೋದರೆ ಶಾರದಾಂಬಾ ದೇವಿಯ ದರ್ಶನ ಮಾತ್ರ ಪಡೆಯುತ್ತೇನೆ,ಆದರೆ ಅಲ್ಲಿಯ ಜಗದ್ಗುರುಗಳ ಬಳಿ ಹೋಗುವುದಿಲ್ಲ.ಹೀಗೆ ಯಾವುದೇ ಮಠ ಮಂದಿರಕ್ಕೆ ಹೋದರೆ ದೇವ ದೇವಿಯರ ದರ್ಶನ ಮಾತ್ರ ಪಡೆಯುತ್ತೇನೆ’ ಎಂದು ಉತ್ತರಿಸಿದೆ.’ ಇದು ಯಾಕೆ ಸರ್?’ ಬಿಡದೆ ಪ್ರಶ್ನಿಸಿದರು ಮಲ್ಲಿಕಾರ್ಜುನ ಬಾಗಲವಾಡ ಅವರು.’ ಮಲ್ಲಿಕಾರ್ಜುನ ಅವರೆ,ನಾನು ವ್ಯಕ್ತಿಪೂಜೆಯ ವಿರೋಧಿ.ಮಠ ಪೀಠ ಪರಂಪರೆಗಳ ಗುರು ಜಗದ್ಗುರುಗಳು ಸ್ಥಾವರ ವ್ಯವಸ್ಥೆಯ ಪ್ರತಿನಿಧಿಗಳೇ ಹೊರತು ಶಿವ ಚೈತನ್ಯಾತ್ಮಕ ಜಂಗಮ ಸ್ವರೂಪಿಗಳಲ್ಲ.ಯೋಗಸಾಧಕನಾಗಿರುವ ನಾನು ಯೋಗಿಗಳಲ್ಲದ ಯಾರನ್ನೂ ಗೌರವಿಸುವುದಿಲ್ಲ.ವೇದಪಠಣವನ್ನೋ,ರುದ್ರಾಧ್ಯಾಯವನ್ನೋ ಓದುತ್ತ ಸಾಂಪ್ರದಾಯಿಕ ಪೂಜೆ ಅರ್ಚನಾದಿಗಳನ್ನು ಕೈಗೊಳ್ಳುವ ಜನರಲ್ಲಿ ನನಗೆ ಆಸಕ್ತಿಯಾಗಲಿ,ಅಭಿಮಾನವಾಗಲಿ ಇಲ್ಲವಾದ್ದರಿಂದ ಅಂಥವರ ಬಳಿ ಹೋಗುವುದಿಲ್ಲ ‘

ನನ್ನ ವಿಚಾರ ಲಹರಿಯಿಂದ ಉತ್ತೇಜಿತರಾದ ಮಲ್ಲಿಕಾರ್ಜುನ ಬಾಗಲವಾಡ ಅವರು ‘ ಸರ್,ಮತ್ತೆ ನೀವು ಬಸವಣ್ಣನವರನ್ನು ಗೌರವಿಸುತ್ತೀರಲ್ಲ.ಅವರೂ ವ್ಯಕ್ತಿಗಳಲ್ಲವೆ ?’. ‘ ಮಲ್ಲಿಕಾರ್ಜುನ ಅವರೆ,ಬಸವಣ್ಣನವರು ವ್ಯಕ್ತಿಗಳಲ್ಲ ಶಿವಶಕ್ತಿ,ಪರಶಿವನ ವಿಭೂತಿಪುರುಷರವರು.ನಾನು ಬಸವಣ್ಣನವರನ್ನು ಮಾತ್ರವಲ್ಲ ಅಲ್ಲಮಪ್ರಭು,ಅಕ್ಕಮಹಾದೇವಿ,ಚೆನ್ನಬಸವಣ್ಣ,ಸಿದ್ಧರಾಮ ಸೇರಿದಂತೆ ಎಲ್ಲ ಶರಣರನ್ನು ಗೌರವಿಸುತ್ತೇನೆ.ಅವರನ್ನಷ್ಟೇ ಅಲ್ಲ, ಯಾರೇ ಶರಣರು ಸಂತರು ಇದ್ದರೆ ಅವರನ್ನೂ ಗೌರವಿಸುವೆ.ಶರಣರು,ಮಹಾಪುರುಷರುಗಳು ಪರಮಾತ್ಮನ ಪ್ರತಿನಿಧಿಗಳಾಗಿ ಲೋಕೋದ್ಧಾರ ಕಾರ್ಯವನ್ನು ಗೈಯುವುದರಿಂದ ಅವರು ವ್ಯಕ್ತಿಗಳಾಗುವುದಿಲ್ಲ ಶಕ್ತಿಗಳಾಗುತ್ತಾರೆ,ವಿಭೂತಿಗಳಾಗುತ್ತಾರೆ.ವ್ಯಕ್ತಿಪೂಜೆಯನ್ನು ಒಪ್ಪದ ನಾನು ಶಕ್ತಿಪೂಜೆ,ವಿಭೂತಿಪೂಜೆಯನ್ನು ಸಮ್ಮತಿಸುತ್ತೇನೆ’ ಎಂದೆ.

ಇಂದು ಮಲ್ಲಿಕಾರ್ಜುನ ಬಾಗಲವಾಡ ಅವರೊಂದಿಗೆ ನಡೆಸಿದ ಈ ಚರ್ಚೆ ನನ್ನ ಒಲವು- ನಿಲುವುಗಳನ್ನು ತಿಳಿದುಕೊಳ್ಳಬಯಸುವವರಿಗೆ ಅನುಕೂಲವಾಗಬಹುದಾದ್ದರಿಂದ ಅದಕ್ಕೆ ಬರಹರೂಪ ಕೊಟ್ಟಿದ್ದೇನೆ.ಈ ಹಿಂದೆ ಅಂದರೆ ನಾನು ಮಹಾಶೈವ ಧರ್ಮಪೀಠವನ್ನು ಸ್ಥಾಪಿಸುವ ಪೂರ್ವದಲ್ಲಿ ಬಹಳಷ್ಟು ಜನ ಮಠಾಧೀಶರುಗಳು,ಸ್ವಾಮಿಗಳೊಂದಿಗೆ ಆತ್ಮೀಯವಾದ ಒಡನಾಟ ಇಟ್ಟುಕೊಂಡಿದ್ದೆ.೨೦೦೯ ರಿಂದ ಯಾವ ಮಠಪೀಠಧೀಶರುಗಳೊಂದಿಗೆ ಸಂಬಂಧ ಸಂಪರ್ಕ ಇಟ್ಟುಕೊಂಡಿಲ್ಲ.ಶಿವೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ಧೇಶ್ವರಸ್ವಾಮಿಗಳವರೊಬ್ಬರ ಬಳಿ ಮಾತ್ರ ಹೋಗುತ್ತಿದ್ದೆ ಸಮಯ ಸಿಕ್ಕಾಗಲೆಲ್ಲ.ಉಳಿದಂತೆ ನಮ್ಮ ಮಠಕ್ಕೆ ಆಹ್ವಾನಿಸುತ್ತಿದ್ದ ಸ್ವಾಮಿಗಳೆಂದರೆ ಇಪ್ಪತ್ತು ವರ್ಷಗಳಿಂದಲೂ ನನ್ನೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ದೇವರಗುಡ್ಡ ಅಮಾತೇಶ್ವರ ಮಠದ ಗಿರಿಮಲ್ಲದೇವರು ಸ್ವಾಮಿಗಳವರು ಮತ್ತು ಮಲ್ಲಿಕಾರ್ಜುನ ಬಾಗಲವಾಡ ಅವರಿಂದಲೇ ಪರಿಚಿತರಾದ ಬಳ್ಳಾರಿಸ್ವಾಮಿಗಳು ಎಂದು ಖ್ಯಾತರಾದ ಗಾಯತ್ರಿಯೋಗಾನುಷ್ಠಾನ ಸಂತ ಶಿವಯ್ಯಸ್ವಾಮಿಗಳನ್ನು ಮಾತ್ರ.ಗಿರಿಮಲ್ಲದೇವರು ಸ್ವಾಮಿಗಳು ಮತ್ತು ಮಲ್ಲಯ್ಯಸ್ವಾಮಿಗಳು ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಸ್ವಾಮಿಗಳಾಗಿದ್ದರಿಂದ ಅವರಿಬ್ಬರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೇನೆ.ನನ್ನ ಒಲವು ನಿಲುವುಗಳು ಇತರರಿಗೆ ಅರ್ಥವಾಗುವುದಿಲ್ಲ.ಜನಸಾಮಾನ್ಯರಿಗೆ ದೇವರು ಧರ್ಮದ ಸತ್ಯ ತತ್ತ್ವ ಏನೆಂದು ಗೊತ್ತಿರುವುದಿಲ್ಲವಾದ್ದರಿಂದ ಅವರು ಕಾವಿಧಾರಿಗಳು,ಮಠ ಪೀಠಗಳ ಸ್ವಾಮಿಗಳನ್ನು ದೇವರು ಎಂದೇ ಭ್ರಮಿಸುತ್ತಾರೆ.ಜಗತ್ತಿಗೆ ನಿಯಾಮಕನಾಗಿ ಒಬ್ಬನೇ‌ಪರಮಾತ್ಮನಿದ್ದಾನೆ.ಅವನು ಮಾತ್ರ ದೇವರು.ಭೂಮಿಯಲ್ಲಿ ಹುಟ್ಟಿದ ಮನುಷ್ಯರಾರೂ ದೇವರಲ್ಲ.ಹುಟ್ಟು ಸಾವುಗಳಿಗೆ ಅತೀತನೆಂಬುದೇ ಪರಮಾತ್ಮನ ವಿಶೇಷ.ಹುಟ್ಟಿ ಸಾಯುವ ಮನುಷ್ಯರಲ್ಲಿ ಕೆಲವರು ಪರಮಾತ್ಮನ ಪ್ರೇರಣೆಯಂತೆ ಲೋಕೋದ್ಧಾರ ಕಾರ್ಯಗೈಯುತ್ತಾರೆ.ಅವರು ಪರಮಾತ್ಮನ ಪ್ರೇರಣೆಯಿಂದ ಹುಟ್ಟಿರುತ್ತಾರಾದ್ದರಿಂದ,ಪರಮಾತ್ಮನ ಅನುಗ್ರಹವನ್ನುಂಡಿರುತ್ತಾರಾದ್ದರಿಂದ ಅಂತಹ ವಿಭೂತಿಪುರುಷರುಗಳು ಪೂಜ್ಯರಾಗುತ್ತಾರೆ,ಪೂಜಿಸಲ್ಪಡುವ ಅರ್ಹತೆಯನ್ನು ಪಡೆಯುತ್ತಾರೆ.ಅಂತಹ ಪರಮಾತ್ಮನ ವಿಭೂತಿಗಳನ್ನು ಪೂಜಿಸಿದರೆ ಫಲ ಉಂಟು.ಆದರೆ ಕಾವಿಧರಿಸಿ,ಮಠಾಧೀಶರುಗಳಾದವರೆಲ್ಲರೂ ಪೂಜ್ಯರಲ್ಲ,ಗೌರವಾರ್ಹರಲ್ಲ.ಯಾರಲ್ಲಿ ಅನುಗ್ರಹಶಕ್ತಿ ಜಾಗೃತಗೊಂಡಿದೆಯೋ ಅವನೇ ಯೋಗಿ,ಶರಣ,ಸಂತ.ಅಂಥಹವರನ್ನು ಪೂಜಿಸಬಹುದು.ಅನುಗ್ರಹಶಕ್ತಿ ಇಲ್ಲದ ಯಾರೂ ಪೂಜ್ಯರಲ್ಲ.ನಾನು ಆಗಾಗ ಹೇಳುತ್ತಿರುತ್ತೇನೆ,’ಸ್ವಾಮಿಗಳು ಮಠಾಧೀಶರುಗಳು ಆದವರು ಸಂಪಾದಿಸಬೇಕಾದದ್ದು ಹಣ,ಐಶ್ವರ್ಯವನ್ನಲ್ಲ,ಕಾವಿಧಾರಿಗಳು ಸಂಪಾದಿಸಬೇಕಾದದ್ದು ಅನುಗ್ರಹ ಸಾಮರ್ಥ್ಯವನ್ನು’ ಅಂತ.ಲೋಕೋದ್ಧಾರ ಸಾಮರ್ಥ್ಯವನ್ನು ಸಂಪಾದಿಸದೆ ಇದ್ದರೂ ಚಿಂತೆಯಿಲ್ಲ,ತಮ್ಮ ಬಳಿ ಬಂದವರನ್ನು,ತಮ್ಮನ್ನು ಆಶ್ರಯಿಸಿದವರನ್ನಾದರೂ ಉದ್ಧರಿಸುವ ಶಕ್ತಿ ಸಂಪಾದಿಸಬೇಕು.ಇಂತಹ ಅನುಗ್ರಹಶಕ್ತಿ ಸಂಪನ್ನರನ್ನು ಜನರು ಪೂಜಿಸಬಹುದು. ವೇಷಲಾಂಛನಧಾರಿಗಳೆಲ್ಲರನ್ನೂ ದೊಡ್ಡವರು ಎಂದು ಭ್ರಮಿಸಬಾರದು.ಆದರೆ ಜಗತ್ತಿನಲ್ಲಿ ಸತ್ಯ ಮರೆಯಾಗಿ ಅಸತ್ಯದ ಮೆರವಣಿಗೆ ನಡೆದಿದೆ‌ ;ತತ್ತ್ವ ಸತ್ತ್ವಗಳು ಹಿನ್ನಲೆಗೆ ಸರಿದು ಅಸತ್ತ್ವಕ್ಕೆ ಮಾನ ಮನ್ನಣೆ ದೊರೆತಿದೆ ಕಲಿಯುಗ ವಿಪರೀತ ಎಂಬಂತೆ.

ಜಗತ್ತಿನಲ್ಲಿ ಎಲ್ಲರೂ ವಿಚಾರವಂತರು,ವಿವೇಕಿಗಳು ಎಂದು ಭಾವಿಸುವಂತೆ ಇಲ್ಲ.ವೈಚಾರಿಕ ನಿಲುವಿನ ಜನರ ಸಂಖ್ಯೆ ತೀರ ಕಡಿಮೆ ಇದೆ.ಅಂತಹ ವಿಚಾರವಂತರ ಮನಸ್ಸುಗಳನ್ನು ನನ್ನ ವಿಚಾರಧಾರೆಯು ಸ್ಫೂರ್ತಿಗೊಳಿಸಿದರೆ ಸಾಕು.

About The Author