ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ

ವಿಚಾರಜ್ಯೋತಿ : ಜ್ಯೋತಿಷವನ್ನಲ್ಲ,ಜ್ಯೋತಿರ್ಲಿಂಗರೂಪಿ ಪರಶಿವನನ್ನು ನಂಬಿ : ಮುಕ್ಕಣ್ಣ ಕರಿಗಾರ

ಜ್ಯೋತಿಷಿಗಳ ಹಾವಳಿ ಈಗ ಹೆಚ್ಚಾಗಿದೆ.ಈ ಜ್ಯೋತಿಷಿಗಳೂ ಒಂದರ್ಥದಲ್ಲಿ ಭಯೋತ್ಪಾದಕರೆ! ಧಾರ್ಮಿಕ ಮತಾಂಧ ಭಾವನೆಯ ಭಯೋತ್ಪಾದಕರುಗಳು ಅಸ್ತ್ರ ಶಸ್ತ್ರಗಳಿಂದ ವೈರಿಗಳ ದೇಹ ಮತ್ತು ದೇಶಗಳನ್ನು ನಾಶಮಾಡಿದರೆ ಈ ಜ್ಯೋತಿಷಿಗಳು ಅವರನ್ನು ನಂಬಿದವರ ಬುದ್ಧಿಯನ್ನೇ ಸರ್ವನಾಶ ಮಾಡಿ,ಅವರನ್ನು ಬುದ್ಧಿಭ್ರಮಿತರನ್ನಾಗಿಸುತ್ತಾರೆ.ಪ್ರತಿದಿನ ಬೆಳಿಗ್ಗೆ ಎದ್ದು ಪತ್ರಿಕೆಗಳಲ್ಲಿ ಕಣ್ಣಾಡಿಸಿ,ಅಲ್ಲಿ ದಿನಭವಿಷ್ಯವಿರುತ್ತದೆ,ವಾರಭವಿಷ್ಯವಿರುತ್ತದೆ.ಬೆಳಿಗ್ಗೆ ಟಿ ವಿ ಚಾನೆಲ್ ಗಳನ್ನು ಆನ್ ಮಾಡಿದೊಡನೆ ವಕ್ಕರಿಸುವವರೇ ಚಿತ್ರವಿಚಿತ್ರ ಭಾವ ಭಂಗಿಯ ಜ್ಯೋತಿಷಿ ಮಹಾನುಭಾವರುಗಳು.ಸುಪ್ರಭಾತದ ಇವರ ಮುಖದರ್ಶನದಿಂದ ಒಳಿತಿಗಿಂತ ಕೆಡುಕೇ ಹೆಚ್ಚು ! ಬೆಳಿಗ್ಗೆ ಎದ್ದೊಡನೆ ದರ್ಶಿಸಬೇಕಾದದ್ದು ತಂದೆ ತಾಯಿಗಳನ್ನು,ಗುರುಗಳನ್ನು,ದೇವರನ್ನು; ಜ್ಯೋತಿಷಿಗಳನ್ನಲ್ಲ ! ತಂದೆ ತಾಯಿಗಳು,ಗುರು ದೇವರುಗಳ ಫೋಟೋ,ಮೂರ್ತಿಗಳನ್ನು ನೋಡಲಾಗದವರು ಎದ್ದೊಡನೆ ಕನ್ನಡಿಯಲ್ಲಿ ತಮ್ಮ ಮುಖವನ್ನಾದರೂ ನೋಡಿಕೊಳ್ಳಬೇಕು.ಅದನ್ನು ಬಿಟ್ಟು ‘ ಬೊಗಳೇಭಟ್ಟರ’ ವಿಕಾರಮುಖಗಳ ದರ್ಶನಕ್ಕೆ ಹಂಬಲಿಸುತ್ತಾರೆ.

ಜ್ಯೋತಿಷಿ ಮಹಾನುಭಾವರುಗಳ ದರ್ಶನ ಭಾಗ್ಯ ಟಿ ವಿ ಚಾನೆಲ್ ಗಳಲ್ಲಿ ಮಾತ್ರ ಲಭ್ಯವೆಂದು ಭಾವಿಸಬೇಡಿ.ಸೋಶಿಯಲ್ ಮೀಡಿಯಾಗಳ ಯುಗದ ಈ ದಿನಗಳಲ್ಲಿ ಎಲ್ಲ ಜ್ಯೋತಿಷಿಗಳು ಅವರವರ ವಿಡಿಯೋಗಳನ್ನು ವಾಟ್ಸಾಪ್,ಫೇಸ್ ಬುಕ್,ಇನ್ಸಟ್ರಾಗ್ರಾಮ್ ,ಯುಟ್ಯೂಬ್ ಗಳಲ್ಲೆಲ್ಲ ಹರಿಬಿಡುತ್ತಿದ್ದಾರೆ ತಿಂಡಿ ತಪ್ಪಲದಂತೆ( ತುರಿಕೆಯನ್ನುಂಟು ಮಾಡುವ ಗಿಡದ ಎಲೆಗಳಪುಡಿ) ಆ ವಿಡಿಯೋ ಯಾರಯಾರದೋ ಮೊಬೈಲ್ ಗಳಿಗೂ ಢಿಕ್ಕಿ ಹೊಡೆದು ಆ ಮೊಬೈಲ್ ಮಾಲಕನ ಮೈಯಲ್ಲಿ ತುರಿಕೆಯನ್ನುಂಟು ಮಾಡುತ್ತದೆ.ಸೋಶಿಯಲ್ ಮೀಡಿಯಾಗಳಲ್ಲಿ ಸಾಂಪ್ರದಾಯಿಕ ಜ್ಯೋತಿಷಿಗಳು ಕಾಣಿಸಿಕೊಳ್ಳುವಂತೆ ಜ್ಯೋತಿಷಶಾಸ್ತ್ರವನ್ನು ಅಧ್ಯಯನ ಮಾಡಿದ ಜ್ಯೋತಿಷಪಾರಂಗತರೂ,ಜ್ಯೋತಿಷದಲ್ಲಿ ಡಾಕ್ಟರೇಟ್ ಪಡೆದವರೂ ಕಾಣಸಿಗುತ್ತಾರೆ.ಸಾಂಪ್ರದಾಯಿಕ ಜ್ಯೋತಿಷಿಗಳು ತಲೆತಲಾಂತರದಿಂದ ಬಂದ ತಮ್ಮ ಪರಂಪರೆಯ ಜ್ಯೋತಿಷಜ್ಞಾನವನ್ನು ಹೆಣ್ಣುಮಕ್ಕಳು,ಮಧ್ಯಮ ವರ್ಗದ ಜನರ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರೆ ಜ್ಯೋತಿಷಶಾಸ್ತ್ರವನ್ನು ಅಧ್ಯಯನ ಮಾಡಿದವರು ಅದನ್ನು ವಿಜ್ಞಾನ ಎಂಬಂತೆ,ಜ್ಯೋತಿರ್ವಿಜ್ಞಾನ ಎಂದು ವ್ಯಾಖ್ಯಾನಿಸುತ್ತ ಆಧುನಿಕ ವಿದ್ಯಾವಂತರ ಮೈ ಮನಸ್ಸುಗಳ ಮೇಲೆ ದಾಳಿ ಮಾಡುತ್ತಾರೆ.

ಜ್ಯೋತಿಷಿಗಳಂತೆ ನವಗ್ರಹಗಳು ಭೂಮಿಯ ಮೇಲಿನ ಎಲ್ಲ ಜೀವರುಗಳ ಆಗು ಹೋಗುಗಳ ಕಾರಣಕರ್ತರುಗಳು.ಹಾಗಾಗಿ ಆ ನವಗ್ರಹಗಳ ಚಲನೆಯನ್ನು ಆಧರಿಸಿಯೇ ಇವರು ಜನರ,ಜಗತ್ತಿನ ಭವಿಷ್ಯ ನಿರ್ಧರಿಸುತ್ತಾರೆ( ಅವರ ಭವಿಷ್ಯವೇ ಅವರಿಗೆ ಗೊತ್ತಿರುವುದಿಲ್ಲ ಎನ್ನುವುದಂತೂ ಸತ್ಯ.ಯಾಕೆಂದರೆ ಜನರ ಬದುಕಿನ ಕಷ್ಟ ನಷ್ಟ,ಇಷ್ಟ ಅನಿಷ್ಟಗಳ ಬಗ್ಗೆ ಅದ್ಭುತವಾಗಿ ಬಣ್ಣಿಸುವ ಯಾವ ಜ್ಯೋತಿಷಿಯೂ ತನ್ನ ಬದುಕಿನಲ್ಲಿ ಬಂದೊದಗುವ ಸಂಗತಿಗಳ ಬಗ್ಗೆ ಅರಿಯಲಾರದಷ್ಟು ದಡ್ಡನಿರುತ್ತಾನೆ.ಹುಟ್ಟಿದ್ದೇನೋ ಸರಿ ಗೊತ್ತಿಲ್ಲ, ಆದರೆ ತಾನು ಎಂದು ಸಾಯುತ್ತೇನೆ ಎಂದು ಯಾವ ಜ್ಯೋತಿಷಿಯೂ ಹೇಳಿಲ್ಲ,ಹೇಳಲಾರ ಕೂಡ‌) ನಭೋ ಮಂಡಲದಲ್ಲಿ ಕೇವಲ ನವಗ್ರಹಗಳಷ್ಟೇ ಇವೆಯೆ ? ಸಾವಿರಾರು ಗ್ರಹ ಉಪಗ್ರಹ,ನಕ್ಷತ್ರ,ನೀಹಾರಿಕೆ ಆಕಾಶ ಕಾಯಗಳೂ ಇವೆಯಲ್ಲ! ಪ್ಲೋಟೋ ಮತ್ತು ನೆಪ್ಚೂನ್ ಗಳು ನಮ್ಮ ಜ್ಯೋತಿಷಿಗಳ ಲೆಕ್ಕಕ್ಕಿಲ್ಲ.ಸೂರ್ಯ,ಚಂದ್ರ,ಮಂಗಳ,ಬುಧ,ಗುರು,ಶುಕ್ರ ಮತ್ತು ಶನಿಯ ಜೊತೆಗೆ ರಾಹು ಕೇತುಗಳನ್ನು ತಮ್ಮ ಶಾಸ್ತ್ರದಲ್ಲಿ ಸೇರಿಸಿಕೊಂಡಿದ್ದಾರೆ ಜ್ಯೋತಿಷಿಗಳು.ಈ ನವಗ್ರಹಗಳಿಗೆ ಬುದ್ಧಿವಂತರಾದ ಜ್ಯೋತಿಷಿಗಳು ಮನುಷ್ಯರ ಗುಣ ಸ್ವಭಾವಗಳನ್ನೆಲ್ಲ ಆರೋಪಿಸಿದ್ದಾರೆ.ಗುರುವು ಸರ್ವಶ್ರೇಷ್ಠನಾದ ಗ್ರಹವಾದರೆ ಸೂರ್ಯ ಶನಿಯಂತಹ ಗ್ರಹಗಳು ಪಾಪಗ್ರಹಗಳಂತೆ‌.ಕೆಲವು ಕ್ರೂರ ಗ್ರಹಗಳಂತೆ ಮತ್ತೆ ಕೆಲವು ಸೌಮ್ಯಗ್ರಹಗಳಂತೆ.ಮನುಷ್ಯರಲ್ಲಿರುವ ಹಾಗೆಯೇ ಆ ಗ್ರಹಗಳಲ್ಲಿಯೂ ಶತ್ರುತ್ವ ಮಿತ್ರತ್ವವೂ ಇದೆಯಂತೆ.ಕಂಡವರಾರು ? ‘ ಇದು ಪೂರ್ವಿಕರ ಅನುಭವೋಕ್ತಿ’ ತಟ್ಟನೆ ಉತ್ತರಿಸುತ್ತಾರೆ.ನದಿಮೂಲ ಋಷಿಮೂಲ ಹುಡುಕಬಾರದು ಎನ್ನುವ ಮಾತಿದ್ದರೂ ಬುದ್ಧಿವಂತ ಶಾಸ್ತ್ರಿಗಳು ಎಲ್ಲದರ ಹಿಂದೆಯೂ ಋಷಿಗಳನ್ನು ಎಳೆತಂದು ಸನಾತನ ಋಷಿಪರಂಪರೆಯ ಭಾರತ ಎಂದು ಬೊಗಳೆ ಹೊಡೆಯುತ್ತಾರೆ.ಪರಾಶರ ಋಷಿಯೊಬ್ಬರ ಹೆಸರನ್ನಂತೂ ಎಲ್ಲ ಜ್ಯೋತಿಷಿಗಳು ಉರುಹೊಡೆಯುತ್ತಾರೆ.ಪರಾಶರರು ಇದ್ದ ಕಾಲ ಯಾವುದು,ಈ ನರಾಚರರು ಇರುವ ಕಾಲ ಯಾವುದು ? ಪರಾಶರರು ಇದ್ದ ಕಾಲದಲ್ಲಿದ್ದಂತೆ ಈಗ ಇದೆಯೆ ಪ್ರಕೃತಿ? ಸೂರ್ಯೋದಯ- ಸೂರ್ಯಾಸ್ತ,ಗ್ರಹಣಾದಿ ಖಗೋಳ ವಿದ್ಯಮಾನಗಳು ಪರಾಶರರ ಕಾಲದಲ್ಲಿ ಇದ್ದಂತೆ ಇಂದು ಇವೆಯೆ? ಪ್ರತಿ ಸಾವಿರ ವರ್ಷಕ್ಕೊಮ್ಮೆ ಕಾಲ,ಋತುಮಾನ ಮೊದಲಾದ ಪ್ರಾಕೃತಿಕ ಸಂಗತಿಗಳಲ್ಲಿ ವ್ಯತ್ಯಾಸವಾಗುತ್ತ ಹೋಗುತ್ತದೆ.ಕೃತಯುಗದಲ್ಲಿ ಮನುಷ್ಯರು ಹತ್ತುಸಾವಿರ ವರ್ಷಗಳ ಕಾಲ ಬದುಕುತ್ತಿದ್ದರು ಎನ್ನಲಾಗುತ್ತದೆ.ಆದರೆ ನಮ್ಮ ಈ ವಿಪರೀತ ಕಲಿಯುಗದಲ್ಲಿ ಮನುಷ್ಯರು ನೂರು ವರ್ಷವು ಬದುಕುವ ಖಾತ್ರಿ ಇಲ್ಲ.ಇದು ಕಾಲಮಾನದಲ್ಲಾಗುವ ಪಲ್ಲಟದ ವಿಷಯ.

ಜ್ಯೋತಿಷವು ವಿಜ್ಞಾನ ಎಂಬುದನ್ನು ಒಪ್ಪದ ನಾನು ಅದನ್ನು ಒಂದು ಶಾಸ್ತ್ರ ಎಂದು ಒಪ್ಪುತ್ತೇನೆ.ವಿಜ್ಞಾನವು ಸುಳ್ಳಾಗಲು ಸಾಧ್ಯವಿಲ್ಲ ಆದರೆ ಶಾಸ್ತ್ರವು ನಿಜವಾಗಲೇಬೇಕು ಎಂಬ ನಿಯಮವಿಲ್ಲ.ಆ ಅರ್ಥದಲ್ಲಿ ಒಂದು ಶಾಸ್ತ್ರವಾಗಿ ಜ್ಯೋತಿಷಕ್ಕೆ ತಕ್ಕಮಟ್ಟಿನ ಮಾನ್ಯತೆ ನೀಡಬಹುದೇ ಹೊರತು ವಿಜ್ಞಾನದ ಸ್ಥಾನ ಮಾನ ನೀಡಲಾಗದು.ವಿಜ್ಞಾನವು ದೇವರು ಇಲ್ಲ ಎನ್ನಬಹುದಾದರೂ ಪ್ರಕೃತಿಯನ್ನು,ಪ್ರಕೃತಿಯ ಅಗೋಚರ ಶಕ್ತಿಯನ್ನು ಅಲ್ಲಗಳೆಯುವುದಿಲ್ಲ.ಆ ಮಟ್ಟಿಗೆ ವಿಜ್ಞಾನವು ನಮಗೆ ನಿರುಪ್ರವಿ.ಆದರೆ ಜ್ಯೋತಿಷಿಗಳು ನವಗ್ರಹಗಳನ್ನೇ ಸರ್ವಸ್ವ ಎಂದು ಸಾರುತ್ತ ಜನರನ್ನು ದೇವರು,ಆಧ್ಯಾತ್ಮ ಪಥದಿಂದ ವಿಮುಖರನ್ನಾಗಿಸುವ ಉಪದ್ರವ ಜೀವಿಗಳು.ಮನುಷ್ಯರ ಬದುಕಿನಲ್ಲಿ ಬಂದೊದಗುವ ಕಷ್ಟ,ಅನಿಷ್ಟ,ತಾಪತ್ರಯಗಳಿಗೆ ನವಗ್ರಹಗಳೇ ಕಾರಣರೆಂದು ಹೇಳುತ್ತ ನವಗ್ರಹಶಾಂತಿ,ನವಗ್ರಹಹೋಮಾದಿಗಳನ್ನು ಮಾಡಿಸುತ್ತ ಜನರನ್ನು ದಾರಿತಪ್ಪಿಸುತ್ತಿದ್ದಾರೆ,ಮೂರ್ಖರನ್ನಾಗಿಸುತ್ತಿದ್ದಾರೆ.ಮತ್ತೆ ಕೆಲವರು ಜನರನ್ನು ಸಂಕಷ್ಟಮುಕ್ತರನ್ನಾಗಿಸಲು,ಜನರನ್ನು ಕಾಡುತ್ತಿರುವ ಸಂಕಷ್ಟ- ಸಮಸ್ಯೆಗಳ ಪರಿಹಾರದ ಹೊಣೆಹೊತ್ತವರಂತೆ ತಮ್ಮ ಯಾಗಶಾಲೆಯಲ್ಲಿ ಆ ಹೋಮ ಮಾಡುತ್ತೇವೆ,ಈ ಹೋಮ ಮಾಡುತ್ತೇವೆ ಎಂದು ಅಬ್ಬರಿಸುತ್ತ ಅದಕ್ಕೆ ತಗಲುವ ಶುಲ್ಕ ಪೀಕಿ,ಏನೋ ಪಾರ್ಸಲ್ ಕಳಿಸುತ್ತಾರಂತೆ ! ತಮ್ಮ ಜ್ಯೋತಿಷದ ಮಂತ್ರದಿಂದ ಜನರಿಗೆ ಕೊಡಲ್ಪಡುವ ವಸ್ತು ಪರಿಕರಗಳನ್ನು ಇವರು energise ಬೇರೆ ಮಾಡುತ್ತಾರಂತೆ ! ಬಹುಶಃ ಸೂರ್ಯನಿಗೂ ಮಿಗಿಲಾದ ಶಕ್ತಿಕೇಂದ್ರಗಳಾಗಿರಬೇಕು ಈ ಪರಿಹಾರ ಜ್ಯೋತಿಷಿಗಳು.ಮುಗ್ಧ ಜನರನ್ನು ಮರುಳುಮಾಡಿ ಹಣ ದೋಚಲು ಏನೆಲ್ಲ ತಂತ್ರ, ಕರಾಮತ್ತುಗಳನ್ನು ಮಾಡುತ್ತಿದ್ದಾರೆ ಈ ಜ್ಯೋತಿಷಿಗಳು.ಯಾವುದೋ ಟಿ ವಿ ವಾಹಿನಿಯ ಬೆಂಗಳೂರಿನ ಸ್ಟುಡಿಯೋದಲ್ಲಿ ಕುಳಿತಿರುವ ಜ್ಯೋತಿಷಿ ಮಹಾನುಭಾವ ದೂರದ ಬೀದರ ಜಿಲ್ಲೆಯ ಮಹಿಳೆಯೊಬ್ಬರ ಕರೆಸ್ವೀಕರಿಸಿ ಅವರ ಸಮಸ್ಯೆ ಕೇಳಿ( ಎಲ್ಲರಿಗೂ ಕೇಳಿಸಿ) ‘ ಅಮ್ಮ ತಾಯಿ,ನಿನಗೆ ಆ ಗ್ರಹಕಾಟ ಇದೆ,ಈ ದೋಷವಿದೆ.ಹೀಗೆ ಮಾಡಿ ಹಾಗೆ ಮಾಡಿ ಎಂದು ಗಳಹುತ್ತಾರಲ್ಲ, ಇದು ನಿಜವೆ? ಇದು ಶಾಸ್ತ್ರವೆ ? ಮಾತು ಮಾತಿಗೂ ಪರಾಶರಾದಿ ಋಷಿಗಳನ್ನು ಉಲ್ಲೇಖಿಸುವ ಜ್ಯೋತಿಷಿಗಳು ಪರಾಶರರಾದಿ ಋಷಿಗಳು ಪ್ರಶ್ನೆ ಕೇಳುವವನು ಜ್ಯೋತಿಷಿಯ ಎದುರಿನಲ್ಲಿರಬೇಕು ಎನ್ನುವ ಶಾಸ್ತ್ರನಿಯಮ ವಿಧಿಸಿದ್ದನ್ನು ತಿಳಿದಿಲ್ಲವೆ ? ಪರಾಶರರು ಜ್ಯೋತಿಷಶಾಸ್ತ್ರ ಬರೆದಿರಬಹುದು ಆದರೆ ಅವರ ಕಾಲದಲ್ಲಿ ಟಿ ವಿ ಇರಲಿಲ್ಲ,ಯಾವುದೋ ದೂರದ ಮೂಲೆಯಲ್ಲಿ ಕುಳಿತು ಪ್ರಶ್ನೆಕೇಳುವ ವ್ಯಕ್ತಿಯನ್ನು ಕಲ್ಪಿಸಿಕೊಂಡು ಪರಾಶರರು ಜ್ಯೋತಿಷಶಾಸ್ತ್ರ ಬರೆಯಲಿಲ್ಲ.ಪ್ರಶ್ನೆ ಕೇಳುವ ವ್ಯಕ್ತಿ ಜ್ಯೋತಿಷಿಯ ಬಳಿ ಹೋಗಿಯೇ ಕೇಳಬೇಕು ಎನ್ನುವ ನಿಯಮ ಅಥವಾನಿರ್ಬಂಧನೆ ವಿಧಿಸಿದ್ದಾರೆ ಪರಾಶರಾದಿ ಋಷಿಗಳು.ಆದರೆ ನಮ್ಮ ಜ್ಯೋತಿಷಿ ಮಹಾನುಭಾವರುಗಳು ಟಿ ವಿ ಪರದೆಯಲ್ಲಿ ಕಾಣುವ ಪ್ರೇಕ್ಷಕರ ಮುಖವನ್ನು ಪ್ರತ್ಯಕ್ಷವಾಗಿ ತಮ್ಮೆದುರು ಕುಳಿತಿದ್ದಾರೆ ಎನ್ನುವಂತೆ ಭ್ರಮಿಸಿ ಪರಿಹಾರ ಸೂಚಿಸುತ್ತಾರೆ.ಟಿ.ವಿ ಯನ್ನೇ ಊಹಿಸದೆ ಇದ್ದ ಋಷಿಗಳು ತಮ್ಮ ಕಾಲದ ಅಗತ್ಯ ಹಾಗೂ ಅವಶ್ಯಕತೆಗನುಗುಣವಾಗಿ ರಚಿಸಿದ ಜ್ಯೋತಿಷಶಾಸ್ತ್ರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಂಡು ಹೊಟ್ಟೆ ಹೊರೆಯುತ್ತಾರೆ ಜ್ಯೋತಿಷಿಗಳು.ಪ್ರಶ್ನಿಸುವವರ ಸಮಸ್ಯೆ ಪರಿಹಾರ ಆಗದೆ ಇದ್ದರೂ ಚಿಂತೆಯಿಲ್ಲ ಟಿ ವಿ ವಾಹಿನಿಯ ಟಿ ಆರ್ ಪಿ ಹೆಚ್ಚುತ್ತದೆ,ಜ್ಯೋತಿಷಿಗೆ ಹಣಬರುತ್ತದೆ.ಸಾಕಲ್ಲವೆ?

ಜನತೆ ಬುದ್ಧಿವಂತರಾಗಬೇಕು.ಪ್ರಪಂಚದ ನಿರ್ಮಾತೃವಾಗಿ ಪರಮಾತ್ಮನು ಇದ್ದಾನೆ.ಆ ಪರಮಾತ್ಮನ ಸಂಕಲ್ಪದಂತೆ ಇಡೀ ಭೂಮಂಡಲ,ಬ್ರಹ್ಮಾಂಡದ ವ್ಯವಹಾರ ಸಾಗುತ್ತಿದೆ.ಪ್ರಪಂಚದ ನಾನಾ ಜನರು ಬೇರೆ ಬೇರೆ ಹೆಸರು,ರೂಪ,ಉಪಾಧಿಗಳಿಂದ ಕರೆದು ಗುರುತಿಸಬಹುದಾದರೂ ಆ ಎಲ್ಲದರ ಮೂಲವೂ ಪ್ರಪಂಚ ನಿಯಾಮಕನಾದ ಒಬ್ಬನೇ ಪರಮಾತ್ಮ.ನಮ್ಮ ಭೂಮಿ ಅಷ್ಟೇ ಅಲ್ಲ ಪರಮಾತ್ಮನಿರ್ಮಿತ ಬ್ರಹ್ಮಾಂಡದಲ್ಲಿ ಇಂತಹ ಸಾವಿರಾರು ಲೋಕಗಳಿವೆ.ಸಾವಿರಾರು ಸೂರ್ಯ ಚಂದ್ರರುಗಳಿದ್ದಾರೆ.ಜ್ಯೋತಿಷಿಗಳು ಪ್ರಪಂಚದ ಆಗುಹೋಗುಗಳ ಕಾರಣಕರ್ತರೆಂದು ಹೇಳುವ ಸೂರ್ಯಚಂದ್ರಾದಿ ನವಗ್ರಹಗಳೂ ಕೂಡ ಪರಮಾತ್ಮನ ಆಧೀನದಲ್ಲಿ,ಪರಮಾತ್ಮನ ಸಂಕಲ್ಪದಂತೆ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ಮರೆಯಬಾರದು.ಶನಿಯು ಕ್ರೂರಗ್ರಹವೆಂದು ಪರಮಾತ್ಮನ ನಿಯಮವನ್ನು ಮೀರಿ ನಡೆಯಲಾರ.ಸೂರ್ಯನು ಸಿಂಹರಾಶಿಗೆ ರಾಶ್ಯಾಧಿಪತಿ ಎಂದು ಪರಮಾತ್ಮನ ಅವಕೃಪೆಗೆ ಪಾತ್ರರಾದ ತನ್ನ ರಾಶಿಯ ಜನರಿಗೆ ಭಾಗ್ಯವನ್ನು ಕರುಣಿಸಲಾರ. ನವಗ್ರಹಗಳು ಪರಮಾತ್ಮನೆಂಬ ಸಾರ್ವಭೌಮ,ಸಾಮ್ರಾಟನ ಸೇವೆಯಲ್ಲಿರುವ ಸೇವಕರುಗಳೇ ಹೊರತು ಅವರೇ ಸರ್ವಶಕ್ತರಲ್ಲ,ಸಾಮ್ರಾಟರಲ್ಲ.ಅರಸನ ಅನುಗ್ರಹ ಪಡೆದರೆ ಪ್ರಜೆಗಳು ಸುಖಿಯಾಗಿರಬಹುದು.ಅರಸನ ಆಗ್ರಹಕ್ಕೆ ತುತ್ತಾದ ಜನರನ್ನು ಅರಸನ ಸೇವಕರು ಕಾಪಾಡಬಲ್ಲರೆ? ಹಾಗಾಗಿ ಜನತೆ ಪರಮಪ್ರಭುವಾದ ಪರಮಾತ್ಮನನ್ನು ಆಶ್ರಯಿಸಬೇಕೇ ಹೊರತು ಜ್ಯೋತಿಷಿಗಳು ಮತ್ತು ಅವರ ನವಗ್ರಹಗಳನ್ನಲ್ಲ.

ನಾವು ತಿಳಿದುಕೊಳ್ಳಬೇಕಾದ ಮೂಲಸತ್ಯ ‘ ಪ್ರಪಂಚವು ಪರಮಾತ್ಮನ ಸಂಕಲ್ಪದಂತೆ ನಿರ್ಮಾಣಗೊಂಡಿದೆ.ಹಾಗೆ ನಿರ್ಮಾಣಕೊಂಡ ಈ ಪ್ರಪಂಚದಲ್ಲಿ ಹುಟ್ಟಿದ ಎಲ್ಲರ ಬದುಕು ಪೂರ್ವನಿರ್ಧಾರಿತವಾದುದು.ಇಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಏನು ಮಾಡಬೇಕು, ಏನು ಮಾಡಬಾರದು ಎಂದು ಅವನು ಹುಟ್ಟುವ ಪೂರ್ವದಲ್ಲಿಯೇ ನಿರ್ಧಾರವಾಗಿರುತ್ತದೆ.ಒಬ್ಬ ವ್ಯಕ್ತಿ ಹುಟ್ಟಿದ ದಿನದಿಂದ ಅವನು ಸಾಯುವ ಕ್ಷಣಗಳವರೆಗಿನ ಅವನ ಬದುಕಿನಲ್ಲಿ ಬಂದೊದಗುವ ಸಂಬಂಧಗಳು,ವ್ಯಕ್ತಿಗಳು,ಸಂಗತಿಗಳು ಎಲ್ಲವೂ ಪೂರ್ವನಿರ್ಧಾರಿತವೆ,ಈ ಮೊದಲೇ ನಿರ್ಧರಿಸಲ್ಪಟ್ಟ ಸಂಗತಿಗಳೆ.ಅಂದ ಬಳಿಕ ಜ್ಯೋತಿಷಿಗಳ ನವಗ್ರಹಗಳಿಗೂ ಅವರು ಹೇಳುವ ಪರಿಹಾರಗಳಿಗೂ ಏನು ಅರ್ಥ ?

ನಾವು ಜ್ಯೋತಿಷಿಗಳನ್ನು ನಂಬಬಾರದು,ಜ್ಯೋತಿರ್ಲಿಂಗಗಳ ರೂಪದಲ್ಲಿ ಜಗತ್ತಿನಲ್ಲಿದ್ದುಕೊಂಡು ಜಗದೋದ್ಧಾರಕಾರ್ಯವನ್ನೆಸಗುತ್ತಿರುವ ವಿಶ್ವನಿಯಾಮಕ ಪರಶಿವನನ್ನು ನಂಬಬೇಕು.ಜ್ಯೋತಿರ್ಲಿಂಗಗಳು ಲಕ್ಷಾಂತರ ವರ್ಷಗಳಿಂದಲೂ ಅಸ್ತಿತ್ವದಲ್ಲಿವೆ.ಜಗತ್ತು ಹುಟ್ಟುವ ಪೂರ್ವದಲ್ಲಿಯೇ,ಸೂರ್ಯಚಂದ್ರರು ಹುಟ್ಟುವ ಪೂರ್ವದಲ್ಲಿಯೇ ದ್ವಾದಶ ಜ್ಯೋತಿರ್ಲಿಂಗಗಳಿದ್ದವು.ಸೃಷ್ಟಿಯ ಪ್ರಾರಂಭದಲ್ಲಿ ಸಾವಿರಾರು ವರ್ಷಗಳವರೆಗೆ ದಟ್ಟಕತ್ತಲೆ ಇತ್ತು.ಪರಮಾತ್ಮನು ಸೃಷ್ಟಿಯನ್ನು ಸಂಕಲ್ಪಿಸಿ ಹನ್ನೆರಡು ಲಿಂಗಗಳ ರೂಪದಲ್ಲಿ ಪ್ರಕಟಗೊಂಡು ಜಗತ್ತಿಗೆ ಬೆಳಕನ್ನು ಉಂಟು ಮಾಡಿದನು.ಪರಶಿವನ ಸ್ವಯಂಭೂ ಸ್ವಯಂ ಪ್ರಕಾಶ ತತ್ತ್ವದ ಸಂಕೇತಗಳು ದ್ವಾದಶ ಜ್ಯೋತಿರ್ಲಿಂಗಗಳು.ಪ್ರಪಂಚದಲ್ಲಿ ಬೆಳಕು ಮೊದಲು ಕಾಣಿಸಿಕೊಂಡಿದ್ದು ಈ ಜ್ಯೋತಿರ್ಲಿಂಗಗಳ ಮೂಲಕ.ಜ್ಯೋತಿರ್ಲಿಂಗಗಳು ಹುಟ್ಟಿದ ಸಾವಿರಾರು ವರ್ಷಗಳ ನಂತರ ಸೂರ್ಯ ಚಂದ್ರರು ಹುಟ್ಟಿದರು,ನವಗ್ರಹದೇವತೆಗಳು ಹುಟ್ಟಿದರು.ಅಜ್ಞಾನ ಮತ್ತು ಅಂಧಕಾರವನ್ನು ಕಳೆದು ಸುಂದರ ಬದುಕನ್ನು ಅನುಗ್ರಹಿಸುವ ಪರಶಿವನ ಜ್ಯೋತಿರ್ಲಿಂಗ ತತ್ತ್ವವನ್ನು ಅರ್ಥೈಸಿಕೊಳ್ಳಬೇಕು,ಜ್ಯೋತಿಸ್ವರೂಪನಾದ,ಸ್ವಯಂಪ್ರಕಾಶನಾದ ಪರಶಿವನಲ್ಲಿ ಶರಣುಹೋಗಬೇಕು.ಜ್ಯೋತಿಷಿಗಳ ತಾಳೆಯೋಲೆಗ್ರಂಥಗಳಲ್ಲಾಗಲಿ,ಹೊತ್ತುಗೆಗಳಲ್ಲಾಗಲಿ ಪರಿಹಾರ ಇಲ್ಲದೆ ಇರಬಹುದು ಆದರೆ ಕಾಲಾತೀತನೂ ಮಹಾಕಾಲನೂ ಆದ ಜ್ಯೋತಿರ್ಲಿಂಗರೂಪಿ ಪರಶಿವನಿಂದ ಪರಿಹಾರ ಆಗದೆ ಇರುವ ಸಮಸ್ಯೆಯೇ ಇಲ್ಲ.ಆದ್ದರಿಂದ ನಾವು ಪರಮಾತ್ಮನಾದ ಪರಶಿವನನ್ನು ಆಶ್ರಯಿಸಿ,ಆರಾಧಿಸಿ ಮುಕ್ತರಾಗಬಹುದು,ಉದ್ಧಾರವನ್ನು ಹೊಂದಬಹುದು.

೧೪.೦೫.೨೦೨೪

About The Author