ರಾಯಚೂರು ಲೋಕಸಭಾ ಚುನಾವಣೆ ಜಯದ ವಿಜಯಮಾಲೆ ಯಾರಿಗೆ ?

ವರದಿ : ಬಸವರಾಜ ಕರೇಗಾರ 

ಶಹಾಪುರ : 2024ರ ಲೋಕಸಭಾ ಚುನಾವಣೆಯು ದಿನದಿಂದ ದಿನಕ್ಕೆ ಕಾವೇರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ಅಧಿಕಾರದಲ್ಲಿದ್ದು, ಶತಾಯಗತಾಯ ರಾಜ್ಯದಲ್ಲಿರುವ 28 ಕ್ಷೇತ್ರಗಳಲ್ಲಿ 15 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲೆಬೇಕು ಎಂದು ಪಣತೊಟ್ಟಿದ್ದು, ಹೆಚ್ಚಿನ ಜವಾಬ್ದಾರಿಯನ್ನು ಆಯಾ ಉಸ್ತುವಾರಿ ಸಚಿವರ ಮೇಲಾಕಿದೆ.

ಅಮರೇಶ ನಾಯಕ್

ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದು, ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೆಚ್ಚಿಕೊಂಡಿದೆ. ಬಿಜೆಪಿ ಪಕ್ಷದಿಂದ ಅಮರೇಶ ನಾಯಕ್, ಕಾಂಗ್ರೆಸ್ ಪಕ್ಷದಿಂದ ಜಿ. ಕುಮಾರ ನಾಯಕ್ ಕಣದಲ್ಲಿದ್ದಾರೆ. ಬಿಜೆಪಿ ಪಕ್ಷವು ರಾಷ್ಟ್ರದ ಸುಭದ್ರತೆಗಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಹಾಗೂ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ರಾಷ್ಟ್ರದ ಪ್ರಧಾನಿಯನ್ನಾಗಿಸಿ ಎಂದು ಮತದಾರರನ್ನು ಓಲೈಸುತ್ತಿದೆ. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಮೇಲೆ ಬಲವಾದ ನಂಬಿಕೆ ಇಟ್ಟುಕೊಂಡಿದೆ.ಇವೆರಡರಲ್ಲಿ ಯಾವುದರ ಕಡೆ ಮತದಾರನ ಒಲವಿದೆ ಎನ್ನುವುದು ಮತ ಎಣಿಕೆಯ ನಂತರ ಗೊತ್ತಾಗಲಿದೆ.

ಜಿ.ಕುಮಾರ ನಾಯಕ್

ಬಿಜೆಪಿ ಪಕ್ಷದ ಅಭ್ಯರ್ಥಿ ಅಮರೇಶ ನಾಯಕ್ ಕಳೆದ ಬಾರಿ ಸಂಸದರಾಗಿದ್ದು, ಸುಮಾರು ಮೂವತ್ತು ಸಾವಿರ ಕೋಟಿ ಕೇಂದ್ರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮತ್ತೊಮ್ಮೆ ನನ್ನ ಕೈ ಹಿಡಿಯಿರಿ ಎನ್ನುತ್ತಿದ್ದಾರೆ.ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಅಮರೇಶ ನಾಯಕ್ ಹಲವು ಬಾರಿ ರಾಜ್ಯದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಯಾದಗಿರಿ ಕ್ಷೇತ್ರದಲ್ಲಿ ಬರುವ ಶಹಪುರ ಯಾದಗಿರಿ ಸುರಪುರ ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ ಪಕ್ಷವು ಮುನ್ನಡೆ ಸಾಧಿಸಿತ್ತು.

ಜಿ.ಕುಮಾರ ನಾಯಕ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಈ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದವರು.ರಾಯಚೂರು ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದವರು. ಲಿಂಗಸೂಗುರು, ಮಾನ್ವಿ, ರಾಯಚೂರು ನಗರ, ರಾಯಚೂರು ಗ್ರಾಮೀಣ,ಮಸ್ಕಿ, ದೇವದುರ್ಗ, ಸಿಂಧನೂರು ಕ್ಷೇತ್ರಗಳನ್ನು ಪುನರ್ ವಿಂಗಡಿಸಿ ಮೀಸಲಾತಿ ನಿಗದಿಪಡಿಸುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟರೆ ಕ್ಷೇತ್ರಕ್ಕೆ ಹೊಸಬರು.ಯಾದಗಿರಿ ಜಿಲ್ಲೆಯ ಜನರಿಗೆ ಅಷ್ಟೊಂದು ಪರಿಚಯ ಇರಲಾರದವರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಹೈಕಮಾಂಡ್ ಶ್ರೀರಕ್ಷೆ ಇದೆ ಎನ್ನಲಾಗುತ್ತಿದ್ದು, ಅವರಿಂದ ಟಿಕೆಟ್ ಗಿಟ್ಟಿಸಿದ ಜಿ. ಕುಮಾರ ನಾಯಕ್ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಕೈಹಿಡಿಯ ಬಹುದು ಹಾಗೂ ರಾಯಚೂರು ಗ್ರಾಮೀಣ, ಮಸ್ಕಿ, ಮಾನ್ವಿ, ಶಹಾಪುರ, ಯಾದಗಿರಿ, ಸುರಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಬಲ ಹೆಚ್ಚಿಸಬಹುದು. ಸುರುಪುರದಲ್ಲಿ ವಿಧಾನಸಭೆಯ ಜೊತೆಗೆ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಅನುಕಂಪದ ಅಲೆ ಇದೆ ಎನ್ನಲಾಗುತ್ತಿದೆ.ಮತದಾರ ಚಾಣಾಕ್ಷನಾಗಿದ್ದು ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಗಳಲ್ಲಿ ಯಾರ ಪರ ವಾಲುತ್ತಾನೆ ಎನ್ನುವುದು ಕುತೂಹಲಕಾರಿಯಾಗಿದೆ.

About The Author