ಮಹಾಶೈವ ಧರ್ಮಪೀಠದಲ್ಲಿ ಶಿವಾನಂದವನ್ನು ಅನುಭವಿಸಿದ ಡಾ.ವಿಶಾಲ ನಿಂಬಾಳ

ಗಬ್ಬೂರು ಎಪ್ರಿಲ್ 20,2024 : ವಿಜಯಪುರದ ಪ್ರಸಿದ್ಧ ರೆಡಿಯಾಲಾಜಿಸ್ಟ್ ಡಾ. ವಿಶಾಲ ನಿಂಬಾಳ ಅವರು ಇಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಆಶೀರ್ವಾದ ಪಡೆದರು.ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ವಿಶಾಲ ನಿಂಬಾಳ ಅವರಿಗೆ ಆಧ್ಯಾತ್ಮ,ಯೋಗಸಾಧನೆಯಲ್ಲಿ ಅಪರಿಮಿತ ಆಸಕ್ತಿ ಇದ್ದು ಯೋಗಾನುಷ್ಠಾನ ನಿರತರಾಗಿದ್ದಾರೆ.ಯೋಗಸಾಧನಾ ಮಾರ್ಗದ ತೊಡಕು ತೊಂದರೆಗಳ ನಿವಾರಣೆಗಾಗಿ ಸಮರ್ಥಮಾರ್ಗದರ್ಶಕರ ಅನ್ವೇಷಣೆಯಲ್ಲಿದ್ದ ಅವರಿಗೆ ಅವರ ಬಾಲ್ಯದ ಸ್ನೇಹಿತ ಶಿಕ್ಷಕ ಮಲ್ಲಿಕಾರ್ಜುನ ಬಾಗಲವಾಡ ಅವರು ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಧಾರವಾಡ ತಪೋವನದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳ ನೇರ ಶಿಷ್ಯರಾಗಿದ್ದು,ಭಾರತೀಯ ಯೋಗಪರಂಪರೆಗಳನ್ನೆಲ್ಲ ಅನುಷ್ಠಾನಗೊಳಿಸಿದ ಯೋಗೀಶ್ವರರಾಗಿದ್ದು ಅವರ ದರ್ಶನದಿಂದ ನಿಮ್ಮ ಸಂದೇಹ ನಿವಾರಣೆಯಾಗುತ್ತದೆ ಎಂದು ತಿಳಿಸಿದ್ದರಿಂದ ಇಂದು ಡಾ.ವಿಶಾಲ ನಿಂಬಾಳ ಅವರು ಮಲ್ಲಿಕಾರ್ಜುನ ಬಾಗಲವಾಡ ಮತ್ತು ಬಾಗಲವಾಡದ ಗಾಯತ್ರಿ ಮಂತ್ರಾನುಷ್ಠಾನ ಸಿದ್ಧರಾದ ಸಂತ ಶಿವಯ್ಯಸ್ವಾಮಿಗಳೊಂದಿಗೆ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದ್ದರು.

ಪೀಠಾಧ್ಯಕ್ಷರು ಶಿವಯ್ಯಸ್ವಾಮಿಗಳು,ಡಾ.ವಿಶಾಲ ನಿಂಬಾಳ ಮತ್ತು ಮಲ್ಲಿಕಾರ್ಜುನ ಬಾಗಲವಾಡ ಅವರುಗಳನ್ನು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.ಆತ್ಮಜಿಜ್ಞಾಸುಗಳು ಕೂಡ ಪೀಠಾಧ್ಯಕ್ಷರನ್ನು ಶಿವಸನ್ನಿಧಿಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಿದರು.

ಬಳಿಕ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮಹಾಶೈವ ಧರ್ಮಪೀಠದ ಸಿದ್ಧಿಸ್ಥಳ ಪಂಚಾಲವೃಕ್ಷಗಳಡಿ ಸುಮಾರು ನಾಲ್ಕು ಘಂಟೆಗಳ ಕಾಲ ಡಾ.ವಿಶಾಲ ನಿಂಬಾಳ ಅವರಿಗೆ ಕುಂಡಲಿನೀಯೋಗ,ಷಟ್ಚಕ್ರಗಳ ಭೇದನ ರಹಸ್ಯ ,ಹಿಮಾಲಯದ ಅತ್ಯುನ್ನುತ ಯೋಗತಾಣವಾದ ಸಿದ್ಧಾಶ್ರಮದ ಮಹಿಮೆ,ಶಿವ ಸಾಕ್ಷಾತ್ಕರ ಮೊದಲಾದ ವಿಷಯಗಳ ಬಗ್ಗೆ ಸವಿವರವಾಗಿ ವಿವರಿಸಿ ಡಾ. ವಿಶಾಲ ನಿಂಬಾಳ ಅವರ ಸಂದೇಹಗಳಿಗೆ ಪರಿಹಾರ ನೀಡಿದರು.ಪಶ್ಚಿಮಬಂಗಾಳ,ಉತ್ತರ ಪ್ರದೇಶ,ರಾಜಸ್ಥಾನ ಮೊದಲಾದೆಡೆಗಳಲ್ಲಿ ಸಂಚರಿಸಿ,ವಿವಿಧ ಯೋಗಿಗಳು,ಯೋಗಸಾಧಕರುಗಳೊಂದಿಗೆ ಚರ್ಚಿಸಿ ಕ್ರಿಯಾಯೋಗ ಮತ್ತು ಶ್ರೀವಿದ್ಯಾ ಸಾಧನಾ ನಿರತರಾಗಿ ನಿಶ್ಚಿತಗುರಿ ಸಾಧಿಸಲರಿಯದೆ ತೊಳಲಾಟದಲ್ಲಿದ್ದ ಡಾ.ವಿಶಾಲ ನಿಂಬಾಳ ಅವರು ಈ ದಿನ ಮಹಾಶೈವ ಧರ್ಮಪೀಠದಲ್ಲಿ ತಮ್ಮೆಲ್ಲ ಸಂದೇಹಗಳಿಗೆ ಪರಿಹಾರಕಂಡುಕೊಂಡು ಶಿವಾನಂದವನ್ನುಂಡು ಧನ್ಯತೆಯನ್ನು ಅನುಭವಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಗೋಪಾಲ ಮಸೀದಪುರ,ಪತ್ರಕರ್ತ ರಮೇಶ ಖಾನಾಪುರ,ಬಾಬುಗೌಡ ಯಾದವ ಸುಲ್ತಾನಪುರ,ಬಸವರಾಜ ಯಲ್ಲಪ್ಪ ಕರಿಗಾರ, ಬಸವರಾಜ ಗುರುಪಾದಪ್ಪ ಕರಿಗಾರ,ಬೂದೆಪ್ಪ ಬಳ್ಳಾರಿ,ರಂಗನಾಥ ಮಸೀದಪುರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author