ಬಲವಂತ, ಒತ್ತಡ, ಆಮಿಷಗಳಿಗೆ ಒಳಗಾಗದೆ ಸ್ವತಂತ್ರವಾಗಿ ಮತದಾನ ಮಾಡಿ

ಶಹಾಪುರ : ಲೋಕಸಭಾ ಚುನಾವಣೆಗೆ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿದೆ ದೇಶದ ಮತದಾರ ಪ್ರಭುಗಳು ಮತವನ್ನು ಮಾರಾಟ ಮಾಡದೆ,ಬಲವಂತ, ಒತ್ತಡ, ಆಮಿಷಗಳಿಗೆ ಒಳಗಾಗದೆ ಸ್ವತಂತ್ರವಾಗಿ ಮತದಾನ ಮಾಡಿ.ಪ್ರಜ್ಞಾವಂತರಾದ ನಾವು ಒಳ್ಳೆಯ ವ್ಯಕ್ತಿಗೆ ಮತ ಹಾಕಿ‌ ಎಂದು ರೈತ ಮುಖಂಡ ಹಿರಿಯ ನ್ಯಾಯವಾದಿ ಹಾಗೂ ಸಂಶೋಧಕರಾದ ಭಾಸ್ಕರರಾವ್ ಮುಡುಬೂಳ ಹೇಳಿದರು. ಇಂದು ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಬರೀ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿಯವರು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. 2014 ರಿಂದ 10 ವರ್ಷಗಳ ಕಾಲ ಸುಳ್ಳು ಹೇಳಿ ಅಧಿಕಾರ ನಡೆಸಿದ್ದೀರಿ ಎಂದು ಕಿಡಿಕಾರಿದರು. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಗರಣವೆಂದರೆ ಚುನಾವಣಾ ಬಾಂಡ್ ಖರೀದಿ ಹಗರಣ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಪತಿ ಪ್ರಭಾಕರ್ ಅವರೇ ಹೇಳಿದ್ದಾರೆ.ಚುನಾವಣಾ ಬಾಂಡ್ ಅನ್ನು ಸುಪ್ರೀಂ ಕೋರ್ಟ್ ಸಂವಿಧಾನ ವಿರೋಧಿ ಎಂದು ತೀರ್ಪು ಕೊಟ್ಟಾಗಿಯೂ ತಮ್ಮಲ್ಲಿದ್ದ ಸಾವಿರಾರು ಕೋಟಿ ಭ್ರಷ್ಟಾಚಾರದ ಹಣವನ್ನು ಜನರ ಖಾತೆಗೆ ಇಲ್ಲವೇ ಸರ್ಕಾರದ ಖಾತೆಗೆ ಯಾಕೆ ಜಮಾ ಮಾಡಲಿಲ್ಲ.

ದೇಶದಲ್ಲಿ ನಿರಂಕುಶ ಪ್ರಭುತ್ವದ ಆಳ್ವಿಕೆ ಇದ್ದು ಪ್ರಜಾಪ್ರಭುತ್ವ ಮಾಯವಾಗಿದೆ. ಸಂಸತ್ ಸದಸ್ಯರಾಗಿ ಆಯ್ಕೆಯಾದ ಸಂಸತ್ ಸದಸ್ಯರು ಇಂದಿನ ದಿನಗಳಲ್ಲಿ ದೇಶಕ್ಕಾಗಿ ದುಡಿಯುತ್ತಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.ಜನಹಿತ ಮಾಯವಾಗಿದೆ. ನಿಮ್ಮ ಸ್ವಾರ್ಥಕ್ಕಾಗಿ ನಡೆದುಕೊಳ್ಳುತ್ತಿದ್ದೀರಿ. ದೇಶದ ಪ್ರಜೆಗಳನ್ನು ಮರೆಯುತ್ತಿದ್ದೀರಿ.ಇದರ ಬಗ್ಗೆ ನಿಮಗೆ ಸ್ವಲ್ಪನಾದರೂ ಪ್ರಜ್ಞಾವಸ್ಥೆ ಇಲ್ಲವೆ. ದೇಶದ ಸಂವಿಧಾನದಂತೆ ಇಂದಿನ ದಿನಗಳಲ್ಲಿ ಆಡಳಿತ ನಡೆಯುತ್ತಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುತ್ತಿರುವಿರಿ. ನಿರಂಕುಶ ಮತ್ತು ದಬ್ಬಾಳಿಕೆ ಆಡಳಿತ ಬಹಳ ದಿನಗಳ ಕಾಲ ನಡೆಯುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಿಂದ 28 ಜನ ಸಂಸದರು ಐದು ವರ್ಷದಲ್ಲಿ ಒಂದು ದಿನವಾದರೂ ಈ ದೇಶ ಹಾಗೂ ರಾಜ್ಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತದೆ ಜೀ ಹೂಜೂರ್ ಎಂದು ಕೈಕಟ್ಟಿ ತಲೆ ಅಳ್ಳಾಡಿಸಿ ಕೊಂಡು ಜನಸೇವೆ ಮಾಡೋ ಬದಲು ಪಕ್ಷದ ಸೇವಕರಾಗಿ ಕಾರ್ಯನಿರ್ವಹಿಸಿದ ಸಂಸದರಿಗೆ ಮತ ಕೇಳುವ ಅರ್ಹತೆ ಇದೆಯೇ ಎಂದು ಭಾಸ್ಕರ್ ರಾವ್ ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ಟೀಕಾ ಪ್ರಹಾರ : 2014ರಲ್ಲಿ ದೇಶದ ಪ್ರತಿ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದು ಅಧೀಕಾರಕ್ಕೆ ಬಂದ ಬಿಜೆಪಿ ಪಕ್ಷದವರು, ಶ್ರೀಮಂತರ 15 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಿರಿ. ಶ್ರೀಮಂತರ ಸಾಲ ಮನ್ನಾ ಮಾಡಿ ಎಂದು ಶ್ರೀಮಂತರು ಕೇಳಿದ್ದರೇನು ಎಂದು ಪ್ರಶ್ನಿಸಿದರು. ಅದೇ ರೀತಿ ರೈತರ ಸಾಲ ಮನ್ನಾ ಮಾಡಿರಿ ಎಂದರೆ ದೇಶ ಆರ್ಥಿಕವಾಗಿ ದುರ್ಬಲವಾಗುತ್ತದೆ ಎಂದು ಹೇಳುತ್ತೀರಿ. 13 ತಿಂಗಳ ಕಾಲ ನವದೆಹಲಿಯಲ್ಲಿ ರೈತರ ಬೇಡಿಕೆಗಳಿಗಾಗಿನ ಹೋರಾಟದಲ್ಲಿ 750ಕ್ಕೂ ಹೆಚ್ಚು ರೈತರು ಮೃತಪಟ್ಟರು. ಯಾವ ರೈತರ ಕುಟುಂಬಕ್ಕೆ ಸೌಜನ್ಯಕ್ಕಾದರೂ ಸಾಂತ್ವಾನ ಹೇಳಲಿಲ್ಲ. ರೈತರು ಬೆಳೆದ ಬೆಲೆ ದ್ವಿಗುಣ ಮಾಡಿ ಎಂದು ಹೇಳಿದ್ದೀರಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದಿರಿ ಅದು ಕೂಡ ಮಾಡಲಿಲ್ಲ.ಡಾ. ಸ್ವಾಮಿನಾಥನ್ ವರದಿ ಜಾರಿಗೆ ತರಲಿಲ್ಲ. ಪ್ರಧಾನಿ ಪರಿಹಾರ ನಿಧಿ ಹಣ ಎಲ್ಲಿಗೆ ಹೋಯಿತು ಎನ್ನುವುದೇ ತಿಳಿಯದಾಗಿದೆ. ಆರ್‌ಟಿಐ ಮಾಹಿತಿಯಲ್ಲಿ ಮಾಹಿತಿ ಕೊಡಲಿಲ್ಲ. ಚುನಾವಣೆ ಸಮಯದಲ್ಲಿ ಹಲವು ಆಶೋತ್ತರಗಳನ್ನು ಈಡೇರಿಸುತ್ತೇನೆ ಎಂದು ಹೇಳಿ 10 ವರ್ಷಗಳ ಕಾಲ ಅಧಿಕಾರ ನಡೆಸಿದ ನೀವು ಯೋಗ್ಯರಲ್ಲ ಎಂದು ಕಿಡಿ ಕಾರಿದರು.

About The Author