ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಸ್ವಯಂಕೃತ ಅಪರಾಧಕ್ಕೆ ಬೆಲೆ ತೆರಲಿರುವ ಬಿಜೆಪಿ !

ಮೂರನೇ ಕಣ್ಣು : ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಸ್ವಯಂಕೃತ ಅಪರಾಧಕ್ಕೆ ಬೆಲೆ ತೆರಲಿರುವ ಬಿಜೆಪಿ !

ಮುಕ್ಕಣ್ಣ ಕರಿಗಾರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಾರಿ 370 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲೇಬೇಕು ಎಂದು ನಿರ್ಧರಿಸಿ,ಪಕ್ಷದ ಕಾರ್ಯಕರ್ತರುಗಳಿಗೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸುತ್ತಿದ್ದರೆ ಕರ್ನಾಟಕದ ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ನಿಲುವು ಬಿಜೆಪಿಗೇ ಮುಳುವಾಗಲಿದೆ.ಅಂಥಹ ಕ್ಷೇತ್ರಗಳಲ್ಲೊಂದು ರಾಯಚೂರು ಲೋಕಸಭಾ ಕ್ಷೇತ್ರ.ರಾಜ್ಯ ಬಿಜೆಪಿಯ ವರಿಷ್ಠರ ಸೂಚನೆಯಂತೆ ಮಾಜಿ ಸಂಸದ ಬಿ.ವಿ.ನಾಯಕ್ ಅವರು ಲೋಕಸಭಾಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗುವುದಾಗಿ ಪತ್ರಿಕಾಗೋಷ್ಠಿ ಕರೆದು ಹೇಳಿದ್ದರು,ಪಕ್ಷದ ಕಾರ್ಯಕರ್ತರುಗಳೊಂದಿಗೆ ಚರ್ಚಿಸಿದ್ದರು.ಮಠ ಮಂದಿರಗಳ ಭೇಟಿ ಕೂಡ ಮಾಡಿದ್ದರು. ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಬೆಂಬಲವೂ ಬಿ.ವಿ.ನಾಯಕರಿಗೆ ಇತ್ತು.ಆದರೆ ಬಿಜೆಪಿ ವರಿಷ್ಠರು ಯಾರ ಮಾತುಗಳನ್ನು ಕೇಳಿದರೋ ರಾಯಚೂರು ಲೋಕಸಭಾ ಚುನಾವಣೆಯ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯವಿಳಂಬ ಮಾಡಿದರಲ್ಲದೆ ಕೊನೆಗೆ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿ ತಪ್ಪು ಮಾಡಿದರು.

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್ ಅವರ ಬಗ್ಗೆ ಮತದಾರರಲ್ಲಿ ಅತೃಪ್ತಿ ಇದೆ.ರಾಜಾ ಅಮರೇಶ್ವರ ನಾಯಕ ಅವರು ಆಗೊಂದು ಈಗೊಂದು ಸರಕಾರಿ ಸಭೆ- ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದನ್ನು ಬಿಟ್ಟರೆ ಸಾರ್ವಜನಿಕರೊಂದಿಗೆ ಬೆರೆತದ್ದು ಬಹಳ ಕಡಿಮೆ.ರಾಜಮನೆತನಕ್ಕೆ ಸೇರಿದ ಪ್ರತಿಷ್ಠೆಯೂ ಅವರನ್ನು ಸಾರ್ವಜನಿಕರೊಂದಿಗೆ ಹೆಚ್ಚು ಬೆರೆಯದಂತೆ ತಡೆಹಿಡಿದಿರಬಹುದಾದರೂ ಅಂತಹ ಸ್ವಯಂನಿರ್ಬಂಧಗಳು ಮತದಾರರ ವಿರೋಧಕ್ಕೆ ಕಾರಣವಾಗುತ್ತವೆ.ರಾಜಾ ಅಮರೇಶ್ವರ ನಾಯಕ ಅವರ ಬಗೆಗಿನ ಮತದಾರರ ಅತೃಪ್ತಿಯ ಸ್ಯಾಂಪಲ್ ನೋಡುವುದಾದರೆ ಅವರಿಗೆ ಪಕ್ಷದ ಟಿಕೆಟ್ ಘೋಷಣೆ ಆದ ಕೂಡಲೆ ಯುವಕರುಗಳು ‘ ಐದುವರ್ಷ ಕಾಣೆಯಾಗಿದ್ದ ರಾಜಾ ಅಮರೇಶ್ವರ ನಾಯಕ ಟಿಕೆಟ್ ನೊಂದಿಗೆ ಪ್ರತ್ಯಕ್ಷರಾಗಿದ್ದಾರೆ’ ಎನ್ನುವಂತಹ ಸ್ಟೇಟಸ್ ಗಳನ್ನು ಸ್ಮಾರ್ಟ್ ಫೋನ್ ಗಳಲ್ಲಿ ಇಟ್ಟಿದ್ದು.ಅಮರೇಶ್ವರ ನಾಯಕ ಅವರ ಜನರೊಂದಿಗೆ,ಮತದಾರರೊಂದಿಗೆ ಬೆರೆಯದ ಪ್ರವೃತ್ತಿಯು ಅವರ ವಿರುದ್ಧ ಮತದಾರರು ತಿರುಗಿ ಬೀಳಲು ಕಾರಣವಾಗಿತ್ತು.ಚುನಾವಣೆ ಘೋಷಣೆ ಆಗುವವರೆಗೂ ಅವರು ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ವದಂತಿ ಇತ್ತು.ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಅಮರೇಶ್ವರ ನಾಯಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದರು,ನಾನು ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳತೊಡಗಿದರು.

ಅಷ್ಟು ಹೊತ್ತಿಗಾಗಲೆ ರಾಜ್ಯ ಬಿಜೆಪಿ ವರಿಷ್ಠರ ಸೂಚನೆಯಂತೆ ಬಿ.ವಿ.ನಾಯಕ್ ಅವರು ಲೋಕಸಭಾಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.ಬಿ.ವಿ.ನಾಯಕ್ ಅವರು ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಬಿಜೆಪಿಯ ಕಾರ್ಯಕರ್ತರು ಮತ್ತು ಬಿ ವಿ ನಾಯಕ್ ಅವರ ಅಭಿಮಾನಿಗಳು ಚುರುಕಾದರು,ಬಿ.ವಿ.ನಾಯಕ್ ಅವರನ್ನು ಗೆಲ್ಲಿಸುವ ಕಾರ್ಯತಂತ್ರ ಹೆಣೆಯತೊಡಗಿದರು.ಬಿ.ವಿ.ನಾಯಕ್ ಅವರ ಕಾರ್ಯವೈಖರಿಯ ಬಗೆಗೂ ಜನರಲ್ಲಿ ಅತೃಪ್ತಿ ಇದೆಯಾದರೂ ಇತರ ರಾಜಕಾರಣಿಗಳಿಗಿಂತ ಅವರು ಸುಸಂಸ್ಕೃತರು,ಸಂಭಾವಿತರು ಎನ್ನುವ ಕಾರಣಕ್ಕೆ ಮತದಾರರಲ್ಲಿ ಬಿ ವಿ ನಾಯಕ್ ಅವರ ಬಗ್ಗೆ ಒಲವು ಇದೆ.ಮಾನ್ವಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಳೆಯ ಪ್ರವೃತ್ತಿಯನ್ನು ಬದಲಾಯಿಸಿಕೊಂಡು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ ಬಿ.ವಿ.ನಾಯಕ್ ಅವರು ಈಗ ಮತದಾರರ ನಾಡಿಮಿಡಿತ ಅರ್ಥಮಾಡಿಕೊಂಡಿದ್ದಾರೆ.ಬಿ.ವಿ.ನಾಯಕ್ ಅವರ ವಿರುದ್ಧದ ದೂರು ಎಂದರೆ ‘ಅವರು ಮಧ್ಯಾಹ್ನದವರೆಗೂ ಕಾರ್ಯಕರ್ತರಿಗೆ,ಜನರಿಗೆ ಸಿಗುವುದಿಲ್ಲ,ಕಾಯಿಸುತ್ತಾರೆ’ ಎನ್ನುವುದು.ಈ ಅತೃಪ್ತಿ ಒಂದನ್ನು ಹೊರತು ಪಡಿಸಿದರೆ ಬಿ ವಿ ನಾಯಕ್ ಅವರ ಬಗ್ಗೆ ಬಿಜೆಪಿಯಲ್ಲಿ ಮಾತ್ರವಲ್ಲ ಎಲ್ಲ ಪಕ್ಷಗಳ ಮತದಾರರಲ್ಲಿಯೂ ಅವರ ಬಗ್ಗೆ ಸದಭಿಪ್ರಾಯವಿದೆ.ಬಿ.ವಿ.ನಾಯಕ್ ಅವರ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಅವರು ತಮ್ಮ ಬಳಿ ಬರುವ ಜನರೊಂದಿಗಾಗಲಿ,ಕಾರ್ಯಕರ್ತರುಗಳೊಂದಿಗಾಗಲಿ ಮುಖಸಿಂಡರಿಸಿಕೊಳ್ಳುವುದಿಲ್ಲ,ಒರಟಾಗಿ ಮಾತನಾಡುವುದಿಲ್ಲ.’ಬನ್ನಿ,ಕುಳಿತುಕೊಳ್ಳಿ’ ಎಂದು ನಗುಮುಖದಿಂದಲೇ ಸ್ವಾಗತಿಸುತ್ತಾರೆ,ಬಳಿ ಬಂದವರ ಸಮಸ್ಯೆಗಳನ್ನು ಪರಿಹರಿಸುತ್ತಾರೆ.ಈ ಹಿಂದೆ ಸಂಸದರಾಗಿದ್ದ ಅವಧಿಯಲ್ಲಿ ರಾಯಚೂರಿನಲ್ಲಿದ್ದ ದಿನಗಳಲ್ಲಿ ಅವರು ಲೋಕಸಭಾ ಸದಸ್ಯರ ಕಛೇರಿಯಲ್ಲಿ ಜನರಿಗೆ ಸಿಗುತ್ತಿದ್ದರು.ಆದರೆ ರಾಜಾ ಅಮರೇಶ್ವರ ನಾಯಕರು ರಾಯಚೂರಿನ ಅವರ ಕಛೇರಿಯಲ್ಲಿ ಸಿಗುತ್ತಿದ್ದುದೇ ಅಪರೂಪ; ಅವರ ಪಿಎಗಳು ಮಾತ್ರ ಅಲ್ಲಿ ಇರುತ್ತಿದ್ದರು.ರಾಯಚೂರು ಜಿಲ್ಲೆಯ ಬಹುಭಾಗವು ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಮತದಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಎಂ ಪಿ ಆಫೀಸ್ ಗೆ ಬಂದಾಗ ಸಂಸದರು ಸಿಗಬೇಕು ಎಂದು ನಿರೀಕ್ಷಿಸುವುದು ಅಸಹಜವೇನಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿಯಲ್ಲಿ ಸ್ಪರ್ಧಿಸಿ ಸೋತ ಅನುಕಂಪವೂ ಬಿ ವಿ ನಾಯಕರ ಪರ ಕೆಲಸ ಮಾಡುತ್ತಿತ್ತು.ಬಿ.ವಿ.ನಾಯಕ್ ಅವರ ತಂದೆ ದಿವಂಗತ ವೆಂಕಟೇಶ ನಾಯಕ್ ಅವರು ರಾಯಚೂರು ಜಿಲ್ಲೆ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರಲ್ಲದೆ ಅವರು ಪಕ್ಷಾತೀತವಾಗಿ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದ ‘ ಅಜಾತಶತ್ರು’ ವಾಗಿದ್ದರು.ಸುಸಂಸ್ಕೃತ ವ್ಯಕ್ತಿತ್ವದ ವೆಂಕಟೇಶ ನಾಯಕ್ ಅವರು ರಾಯಚೂರು ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದ್ದರು.ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದ ವೆಂಕಟೇಶ ನಾಯಕರ ಮಗನಾಗಿ ಕಾಂಗ್ರೆಸ್ ಪಕ್ಷದಿಂದಲೇ ಸಂಸದರಾಗಿದ್ದ ಬಿ.ವಿ.ನಾಯಕ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ತುಳಿದು,ಮೂಲೆಗುಂಪು ಮಾಡುತ್ತಿರುವ ಕಾಂಗ್ರೆಸ್ ನಾಯಕರ ಒಳಪೆಟ್ಟುಗಳಿಂದ ಬೇಸರಗೊಂಡು ರಾಜಕೀಯ ನೆಲೆ ಕಂಡುಕೊಳ್ಳಲು ಬಿಜೆಪಿಯನ್ನು ಸೇರಿದ್ದರು.ಬಿಜೆಪಿಯು ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ವಿಧಾನಸಭೆಯ ಟಿಕೆಟ್ ನೀಡಿತ್ತಾದರೂ ಆಗ ಸಮಯ ಕಡಿಮೆ ಇತ್ತಾದ್ದರಿಂದ ಬಿ.ವಿ.ನಾಯಕರು ಸೋತರು.ಬಿ.ವಿ.ನಾಯಕ್ ಅವರಿಗೆ ಅವರದೇ ಆದ ಅಭಿಮಾನಿಗಳಿದ್ದಾರೆ,ಮತದಾರರ ಪಡೆಯೂ ಇದೆ.ಬಿ.ವಿ.ನಾಯಕ್ ಅವರು ಬರಿಯ ಎಸ್ ಟಿ ನಾಯಕರು ಎಂದು ಬಿಂಬಿಸಿಕೊಳ್ಳದೆ ಎಲ್ಲ ಜಾತಿ ಜನಾಂಗಗಳೊಂದಿಗೆ ಸೌಹಾರ್ದ ಸಂಬಂಧ ಕಾಪಾಡಿಕೊಂಡಿದ್ದರಿಂದ ಬಿಜೆಪಿಯು ಅವರಿಗೆ ಟಿಕೆಟ್ ನೀಡಿದ್ದರೆ ಬಿ.ವಿ.ನಾಯಕರು ಖಂಡಿತವಾಗಿಯೂ ಗೆಲ್ಲುತ್ತಿದ್ದರು.ಬಿಜೆಪಿಯು ತನ್ನ ಕಲ್ಲನ್ನು ತನ್ನ ಕಾಲಮೇಲೆಯೇ ಹಾಕಿಕೊಂಡಿತು.

ಬಿಜೆಪಿಯು ಬಿ.ವಿ ನಾಯಕ್ ಅವರಿಗೆ ಟಿಕೆಟ್ ನೀಡದೆ ಇದ್ದುದರಿಂದ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರನಾಯಕ್ ಅವರ ಗೆಲುವಿನ ಹಾದಿ ಸುಲಭವಾಯಿತು.ಹಿಂದೊಮ್ಮೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರನಾಯಕ್ ಅವರು ಅಂತಹ ಸಮರ್ಥ ಅಭ್ಯರ್ಥಿಯೂ ಆಗಿರಲಿಲ್ಲ.ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕುರುಬ ಸಮುದಾಯವು ಬಾಹುಳ್ಯವಿರುವ ಕ್ಷೇತ್ರಗಳನ್ನು ಎಸ್.ಟಿ.ಮೀಸಲು ಕ್ಷೇತ್ರಗಳನ್ನಾಗಿಸಿದ ಅವರ ನಡೆಯಿಂದ ರಾಯಚೂರು ಜಿಲ್ಲೆಯ ಕುರುಬರು ಮತ್ತು ಸಾಮಾನ್ಯ ವರ್ಗದ ಮತದಾರರು ಅವರ ವಿರುದ್ಧ ಅತೃಪ್ತರಾಗಿದ್ದರು.ಈಗ ಕುಮಾರನಾಯಕ್ ಅವರನ್ನು ಸೋಲಿಸಿ ಪಾಠಕಲಿಸಲು ಮತದಾರರು ಕಾಯುತ್ತಿದ್ದರು.ಆದರೆ ಬಿಜೆಪಿಯು ತನ್ನ ತಪ್ಪಿನಿಂದಾಗಿ ಕುಮಾರನಾಯಕ್ ಅವರ ಗೆಲುವಿಗೆ ತಾನೇ ಕಾರಣವಾಯಿತು.ರಾಜಾ ಅಮರೇಶ್ವರ ನಾಯಕ್ ಅವರು ಗೆದ್ದರೆ ಬಹುಶಃ’ ಬೇರೆ ಯಾವುದೋ ಕಾರಣ’ ದಿಂದ ಗೆಲ್ಲಬಹುದೇ ಹೊರತು ಮತದಾರರ ಒಲವಿನಿಂದ ಅವರು ಖಂಡಿತಗೆಲ್ಲಲಾರರು !

26.03.2024

About The Author