ಕೆ.ಎಸ್.ಈಶ್ವರಪ್ಪನವರ ಕೆಚ್ಚೆದೆಯ ಹೋರಾಟ ಮತ್ತು ಕುರುಬರಿಗೆ ಬಿಜೆಪಿ ಮಾಡಿದ ಅನ್ಯಾಯ

ಮೂರನೇ ಕಣ್ಣು : ಕೆ.ಎಸ್.ಈಶ್ವರಪ್ಪನವರ ಕೆಚ್ಚೆದೆಯ ಹೋರಾಟ ಮತ್ತು ಕುರುಬರಿಗೆ ಬಿಜೆಪಿ ಮಾಡಿದ ಅನ್ಯಾಯ : ಮುಕ್ಕಣ್ಣ ಕರಿಗಾರ

ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರು ಈ ಬಾರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ತಮ್ಮ ನಾಯಕತ್ವದ ಗುಣವನ್ನು ಪ್ರದರ್ಶಿಸಿದ್ದಾರೆ.ನಿನ್ನೆ ಶಿವಮೊಗ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಪಾಲ್ಗೊಂಡಿದ್ದ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳದೆ ಬಿಜೆಪಿಗೆ ಬಂಡಾಯದ ಸ್ಪಷ್ಟ ಸಂದೇಶ ಕಳಿಸಿದ್ದಾರೆ.ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ,ಬಿ.ವೈ.ರಾಘವೇಂದ್ರ ಅವರುಗಳು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದಲ್ಲಿ ವಿಜಯದ ಲೆಕ್ಕಾಚಾರದಲ್ಲಿದ್ದರೆ ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ಜಿಲ್ಲೆಯ ಲಿಂಗಾಯತ ಮಠಾಧೀಶರುಗಳ ಆಶೀರ್ವಾದ ಪಡೆಯಲು ದಿನವಿಡೀ ಓಡಾಡಿದ್ದಾರೆ.ಕೆ.ಎಸ್.ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲದೆ ಇದ್ದರೂ ಬಿಜೆಪಿಗೆ ಒಂದು ಸ್ಪಷ್ಟ ಸಂದೇಶ ಕಳುಹಿಸುವಲ್ಲಿ ಯಶಸ್ವಿಯಾಗಲಿದ್ದಾರೆ.

ಟಿ.ವಿ.9 ಗೆ ಈಶ್ವರಪ್ಪನವರು ನೀಡಿದ ಸಂದರ್ಶನವನ್ನು ಗಮನಿಸಿದರೆ ಈ ಬಾರಿ ಅವರಲ್ಲಿ ಕೆಚ್ಚೆದೆಯ ನಾಯಕ ಹೊರಹೊಮ್ಮಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ.ಇದೇ ಕೆಚ್ಚೆದೆಯಿಂದ ತಾವು ಕಟ್ಟಿದ್ದ ರಾಯಣ್ಣ ಬ್ರಿಗೇಡ್ ಅನ್ನು ಮುಂದುವರೆಸಿಕೊಂಡು ಹೋಗಿದ್ದರೆ ಕೇಂದ್ರ ಬಿಜೆಪಿ ವರಿಷ್ಠರು ಈಶ್ವರಪ್ಪನವರ ಮನೆಬಾಗಿಲಿಗೇ ಬಂದು ಅವರು ಹೇಳಿದ ಅಭ್ಯರ್ಥಿಗಳಿಗೆ ಎಂ ಪಿ ಟಿಕೆಟ್ ಕೊಡುತ್ತಿದ್ದರು.ರಾಜ್ಯದಲ್ಲಿ ಬ್ರಾಹ್ಮಣರು ಮತ್ತು ಯಡಿಯೂರಪ್ಪನವರ ಜಾತಿಪ್ರೇಮದ ವಿರುದ್ಧ ‘ ಶೂದ್ರಶಕ್ತಿ’ ಯು ಒಂದಾಗಿ ಈಶ್ವರಪ್ಪನವರನ್ನು ಬೆಂಬಲಿಸುವ ಮೂಲಕ ರಾಯಣ್ಣ ಬ್ರಿಗೇಡ್ ಗೆ ಬಲತುಂಬಿತ್ತು.ಪಕ್ಷನಿಷ್ಠೆಯ ಕಾರಣದಿಂದ ಈಶ್ವರಪ್ಪನವರು ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರಾಗಿ ಬೆಳೆಯುವ ಅವಕಾಶವನ್ನು ತಾವಾಗಿಯೇ ಕಳೆದುಕೊಂಡರು.ರಾಯಣ್ಣ ಬ್ರಿಗೇಡ್ ನಿಂದ ಹೊರಬರಲು ಯಡಿಯೂರಪ್ಪನವರ ಹಠಮಾರಿತನವೇ ಕಾರಣವೆಂದು ಹೇಳಿರುವ ಈಶ್ವರಪ್ಪನವರು ಕೇಂದ್ರಗೃಹಸಚಿವ ಅಮಿತ್ ಶಾ ಅವರ ‘ಛೋಡೋ ದೋ ಯಾರ್’ ಸಲಹೆಯನ್ನು ಒಪ್ಪಿ ರಾಯಣ್ಣ ಬ್ರಿಗೇಡ್ ನಿಂದ ಹೊರಬಂದರು ಎನ್ನುವುದು ನಿಜವಾದರೆ ಈಗ ಅಮಿತ್ ಶಾ ಅವರು ಕೆ.ಎಸ್.ಈಶ್ವರಪ್ಪನವರ ಹಿತ ಕಾಯಬೇಕಲ್ಲವೆ ? ಬಿಜೆಪಿಯು ಯಡಿಯೂರಪ್ಪನವರ ಕುಟುಂಬ ಹಿತಾಸಕ್ತಿಯನ್ನು ಪೊರೆಯಲು ಈಶ್ವರಪ್ಪನವರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಬಲಿಕೊಡುತ್ತಿರುವುದರಿಂದ ಬಿಜೆಪಿಯು ಮುಂಬರುವ ದಿನಗಳಲ್ಲಿ ದುಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ.ಕೆ.ಎಸ್.ಈಶ್ವರಪ್ಪನವರು ಮಾತ್ರವಲ್ಲ, ಬಿ.ಎಸ್.ಯಡಿಯೂರಪ್ಪನವರಿಂದ ರಾಜಕೀಯ ಅವಕಾಶ ಕಳೆದುಕೊಂಡವರೆಲ್ಲ ಒಂದಾಗಿ ಕೇಂದ್ರ ಬಿಜೆಪಿ ನಾಯಕರುಗಳಿಗೆ ಸ್ಪಷ್ಟ ಸಂದೇಶ ಒಂದನ್ನು ಕಳುಹಿಸಲು2024 ರ ಲೋಕಸಭಾ ಚುನಾವಣೆಯು ಒಂದು ವೇದಿಕೆಯಾಗಲಿದೆ.

ಬಿಜೆಪಿಯು ಇದುವರೆಗೆ ಘೋಷಿಸಿದ 20 ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕುರುಬ ಜನಾಂಗಕ್ಕೆ ಟಿಕೇಟ್ ನೀಡಿಲ್ಲ.ರಾಜ್ಯದ ಶೂದ್ರ ಮತ್ತು ಹಿಂದುಳಿದ ಸಮುದಾಯಗಳ ‘ ನಾಯಕ’ಸಮುದಾಯವಾಗಿರುವ ಕುರುಬ ಜನಾಂಗಕ್ಕೆ ಟಿಕೇಟ್ ನೀಡದೆ ಇರುವ ಮೂಲಕ ಬಿಜೆಪಿಯು ಈಶ್ವರಪ್ಪನವರಿಗೆ ಮಾತ್ರವಲ್ಲ ಕುರುಬರಿಗೂ ಅನ್ಯಾಯ ಮಾಡಿದೆ.ಕುರುಬರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.ಬಿಜೆಪಿಯಲ್ಲಿರುವ ಕುರುಬ ಸಮುದಾಯದ ನಾಯಕರು ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕು.ಪಕ್ಷನಿಷ್ಠೆಯ ಹೆಸರಿನಲ್ಲಿ ಅತಿಯಾದ ವಿಧೇಯತೆಯನ್ನು ತೋರಿಸಿದರೆ ಬಿಜೆಪಿಯಲ್ಲಿರುವ ಕುರುಬ ನಾಯಕರುಗಳು ಮುಂದಿನ ದಿನಗಳಲ್ಲಿ ಕೆ.ಎಸ್.ಈಶ್ವರಪ್ಪನವರ ಸ್ಥಿತಿಯನ್ನೇ ಅನುಭವಿಸಬೇಕಾಗುತ್ತದೆ.ಕುರುಬ ಸಮಾಜಕ್ಕೆ ಎಂಪಿ ಟಿಕೇಟ್ ನೀಡದೆ ವಂಚಿಸಲಾಗಿದೆ ಎಂದು ಪ್ರತಿಭಟನೆಯ ಧ್ವನಿ ಎತ್ತುವ ಮೂಲಕ ಬಿಜೆಪಿಯಲ್ಲಿರುವ ಕುರುಬ ಸಮುದಾಯದ ಮುಖಂಡರುಗಳು ಬಿಜೆಪಿಯ ಅಗ್ರನಾಯಕರುಗಳಿಗೆ ಬಿಸಿ ಮುಟ್ಟಿಸಬೇಕು.ಕಾಂಗ್ರೆಸ್ ಪಕ್ಷದಿಂದ ಎಲ್ಲ ಸೌಲಭ್ಯಗಳನ್ನು ಅನುಭವಿಸಿದ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕ್ರಪ್ಪ ಶಿವಮೊಗ್ಗದ ಸಮಾರಂಭ ಒಂದರಲ್ಲಿ ‘ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗದ ಮತದಾರರು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಬಹಿರಂಗವಾಗಿಯೇ ಕರೆನೀಡಿರುವಾಗ ಬಿಜೆಪಿಯಲ್ಲಿರುವ ಕುರುಬ ಸಮುದಾಯದ ನಾಯಕರು ತಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಬಾರದೇಕೆ ? ಕುರುಬ ಸಮುದಾಯದ ಮತದಾರರು ಕೂಡ ಎಚ್ಚೆತ್ತುಕೊಂಡು ತಮ್ಮ ಸಮುದಾಯಕ್ಕೆ ಲೋಕಸಭೆಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವ ಬಿಜೆಪಿಯ ಕಪಟತನವನ್ನು‌ಕ್ಷಮಿಸಬಾರದು.ಸಮುದಾಯದ ಹಿತದ ಪ್ರಶ್ನೆ ಬಂದಾಗ ಕುರುಬರೆಲ್ಲ ಒಂದಾಗಬೇಕು,ಯಾವ ರಾಜಕೀಯ ಪಕ್ಷ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದೋ ಅಂತಹ ಪಕ್ಷವನ್ನು ಬೆಂಬಲಿಸಬೇಕು.

ಕುರುಬಸಮುದಾಯವು ನಗಣ್ಯಸಮುದಾಯ ಎಂಬಂತೆ ಉದಾಸೀನ ಭಾವನೆ ತೋರಿರುವ ಬಿಜೆಪಿಯ ನಾಯಕರುಗಳಿಗೆ ಪಾಠ ಕಲಿಸಲು ರಾಜ್ಯದ ಕುರುಬಸಮುದಾಯ ಮುಂದಾಗಬೇಕು.ಕುರುಬ ಸಮುದಾಯದ ಧಾರ್ಮಿಕ ಮುಖಂಡರುಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮುದಾಯದ ರಾಜಕೀಯ ಹಿತಾಸಕ್ತಿಯ ಬಗ್ಗೆ ಆಲೋಚಿಸಬೇಕು.ಕನಕಗುರು ಪೀಠ ಹಾವೇರಿ ಜಿಲ್ಲೆಯಲ್ಲಿದೆ,ಆ ಪೀಠದ ಜಗದ್ಗುರುಗಳು ಹಾವೇರಿ ಜಿಲ್ಲೆಯಲ್ಲಿಯೇ ಇದ್ದಾರೆ.ಹಾವೇರಿ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪನವರ ಪುತ್ರ ಕೆ ಇ ಕಾಂತೇಶ ಅವರಿಗೆ ಟಿಕೆಟ್ ನೀಡದೆ ಇರುವ ವಿಷಯ ಕನಕಗುರುಪೀಠದ ಜಗದ್ಗುರುಗಳ ಸಮುದಾಯಪ್ರಜ್ಞೆಯನ್ನು ಬಡಿದೆಬ್ಬಿಸಬೇಕು.’ ಬುದ್ಧಿ’ ಎಂದು ನಯವಂತಿಕೆಯಿಂದ ನಮಸ್ಕರಿಸುವ ಬಸವರಾಜ ಬೊಮ್ಮಾಯಿಯವರನ್ನು ಬೆಂಬಲಿಸುವುದಿಲ್ಲ ಎಂದು ಕನಕಗುರುಪೀಠದ ಜಗದ್ಗುರುಗಳು ಒಂದು ಮಾತು ಹೇಳಿದರೆ ಬಿಜೆಪಿಯು ಬಸವರಾಜ ಬೊಮ್ಮಾಯಿಯವರನ್ನು ಬದಲಿಸಿ ಕಾಂತೇಶ ಅವರಿಗೆ ಲೋಕಸಭಾ ಟಿಕೆಟ್ ನೀಡುತ್ತದೆ.ಚುನಾವಣೆಗೆ ಬಿ ಫಾರಂ ನೀಡುವವರೆಗೂ ಬಿಜೆಪಿಯು ಅಭ್ಯರ್ಥಿಗಳನ್ನು ಬದಲಿಸಲು ಅವಕಾಶ ಇರುವುದರಿಂದ ಕುರುಬಸಮುದಾಯ ಬಿಜೆಪಿಯ ವಿರುದ್ಧ ಸಂಘಟಿತಧ್ವನಿ ಎತ್ತಿದರೆ ಹಾವೇರಿಯ ಎಂ ಪಿ ಟಿಕೇಟ್ ಕಾಂತೇಶ ಅವರಿಗೆ ಸಿಗುವುದರಲ್ಲಿ ಸಂಶಯವಿಲ್ಲ.ಹಾಗೆಯೇ ಈಶ್ವರಪ್ಪನವರು ಪಟ್ಟು ಸಡಲಿಸದೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಒಂದು ಪಾಠ ಕಲಿಸಬಹುದು.

About The Author