ಗರ್ಭಗುಡಿಸಂಸ್ಕೃತಿ’ಗೆ ಸವಾಲೊಡ್ಡುವ ‘ಶೂದ್ರಸಂಸ್ಕೃತಿ’

ಗರ್ಭಗುಡಿಸಂಸ್ಕೃತಿ’ಗೆ ಸವಾಲೊಡ್ಡುವ ‘ಶೂದ್ರಸಂಸ್ಕೃತಿ: ‘ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದಲ್ಲಿ ಮಾರ್ಚ್10 ರ ಶಿವರಾತ್ರಿ ಅಮವಾಸೆಯ ರವಿವಾರದಂದು ನಡೆದ 83 ನೆಯ ‘ ಶಿವೋಪಶಮನ ಕಾರ್ಯ’ದಲ್ಲಿ ಶಿವ ದುರ್ಗಾದೇವಿಯರ ದರ್ಶನಾಶೀರ್ವಾದ ಪಡೆಯಲು ಬಂದಿದ್ದರು ರಾಯಚೂರು ಜಿಲ್ಲೆಯ ಹಿರಿಯ ರಾಜಕಾರಣಿ ಬಿ.ವಿ.ನಾಯಕ್ ಅವರು.ಅವರಿಗೆ ದುರ್ಗಾನುಗ್ರಹವನ್ನು ಕರುಣಿಸಿದ ಬಳಿಕ ಅವರು ತಂದಿದ್ದ ಪುಷ್ಪಮಾಲೆಯನ್ನು ‘ವಿಜಯದುರ್ಗೆ’ ಎಂದು ವಿಖ್ಯಾತಳಾದ ತಾಯಿ ವಿಶ್ವೇಶ್ವರಿ ದುರ್ಗಾದೇವಿಗೆ ಸಮರ್ಪಿಸಲು ಹೇಳಿದೆ.ಅವರು ಅನುಮಾನಿಸುತ್ತಲೇ ಗರ್ಭಗುಡಿಯ ಒಳಪ್ರವೇಶಿಸಿ,ತಾಯಿ ದುರ್ಗಾದೇವಿಗೆ ಹೂಮಾಲೆಯನ್ನರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿದರು.ಬಿ.ವಿ.ನಾಯಕ್ ಅವರು ಗರ್ಭಗುಡಿಯ ಒಳಹೋಗಲು ಅನುಮಾನಿಸಲು ಕಾರಣ ಬಹುಶಃ ಎಲ್ಲ ಶೂದ್ರರಲ್ಲಿರಬಹುದಾದ ಗರ್ಭಗುಡಿ ಸಂಸ್ಕೃತಿಯ ಹೆದರಿಕೆ !

ದೇವರು- ಧರ್ಮವನ್ನು ಗುತ್ತಿಗೆ ಪಡೆದ ಜನ- ಜನಾಂಗ ಶೂದ್ರರಿಂದ ಸೇವೆ ಮಾಡಿಸಿಕೊಳ್ಳುವುದು ತಮ್ಮ ವಿಶೇಷತೆ ಎಂದು ಭಾವಿಸಿದ್ದಾರೆ.ಪುರೋಹಿತಶಾಹಿ ವ್ಯವಸ್ಥೆಯ ಉರುಳಿಗೆ‌ ಕೊರಳೊಡ್ಡುವುದೇ ಜೀವನದ ಸಾರ್ಥಕತೆ ಎಂದು ಭ್ರಮಿಸಿದ್ದಾರೆ ಶೂದ್ರರು ! ಬ್ರಾಹ್ಮಣರೊ ಇಲ್ಲವೋ ಅಯ್ಯಗಳ ಜಾತಿಯವರದ್ದೋ ಮಠ ಮಂದಿರಗಳಿಗೆ ಭಕ್ತಿಯಿಂದ ಕಾಣಿಕೆ ಸಮರ್ಪಿಸುವುದು,ಅವರ ಮಠ ಮಂದಿರಗಳ ಕಸ ಮುಸುರೆ ತಿಕ್ಕುವುದು,ಅವರ ಸೇವೆ ಮಾಡಿಕೊಂಡಿರುವುದೇ ಮನುಷ್ಯರಾಗಿ ಹುಟ್ಟಿದ್ದಕ್ಕೆ ಸಾರ್ಥಕತೆ ಎನ್ನುವ ಮನೋವ್ಯಾಧಿ ಪೀಡಿತರಾಗಿದ್ದಾರೆ ಬಹಳಷ್ಟು ಜನ ಶೂದ್ರರು.ಶೂದ್ರ ಜನಾಂಗದ ಮುಂದುಗಾಣದ ಅಂಧವಿಶ್ವಾಸ,ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡ ಪುರೋಹಿತಶಾಹಿ ವ್ಯವಸ್ಥೆ ರಾಷ್ಟ್ರ ಸಮಾಜಜೀವನವನ್ನು ತನ್ನ ಕಬಂಧಬಾಹುಗಳಲ್ಲಿ ಬಂಧಿಸಿಟ್ಟಿದೆ.

ಪುರೋಹಿತರು ಗರ್ಭಗುಡಿ ಸಂಸ್ಕೃತಿಯನ್ನು ಪ್ರತಿಷ್ಠಾಪಿಸಿ,ಪ್ರತಿಪಾದಿಸುತ್ತಿದ್ದಾರೆ.ದೇವಸ್ಥಾನ ಕಟ್ಟಲು,ಮೂರ್ತಿಪ್ರತಿಷ್ಠಾಪನೆ ಮಾಡಲು ಕುಲಹದಿನೆಂಟು ಜಾತಿಗಳಿಂದ ಕಾಣಿಕೆ ದೇಣಿಗೆ ಪಡೆಯುವ ಪುರೋಹಿತವರ್ಗ ದೇವಸ್ಥಾನದ ಉದ್ಘಾಟನೆಯಾದ ಬಳಿಕ ದಲಿತರನ್ನು ದೇವಸ್ಥಾನದ ಆವರಣದಾಚೆ ಇಟ್ಟರೆ ಶೂದ್ರರನ್ನು ಗರ್ಭಗುಡಿಯ ಆಚೆ ನಿಲ್ಲಿಸುತ್ತಾರೆ.ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ದೇವರು ತಮ್ಮ ತಾತನೋ ಮುತ್ತಾತನೋ ಎಂಬಂತೆ ವರ್ತಿಸಿ ಆ ದೇವರ ಪೂಜಾಧಿಕಾರವನ್ನು ಪಡೆಯುವ ಪುರೋಹಿತರು ಗರ್ಭಗುಡಿ ಪ್ರವೇಶದ ವಿಶೇಷಹಕ್ಕು ಕೇವಲ ಬ್ರಾಹ್ಮಣರಿಗೆ ಮಾತ್ರ ಇದೆ ಎನ್ನುವ ಅನಧಿಕೃತಶಾಸನ ರೂಪಿಸುತ್ತಾರೆ.ಖಾಸಗಿ ದೇವಸ್ಥಾನ- ಮಠಗಳಲ್ಲಿ ಹೇಗೋ ಸಹಿಸಿಕೊಳ್ಳಬಹುದು ಆದರೆ ಸರಕಾರದ ಆಧೀನದ ಧಾರ್ಮಿಕದತ್ತಿ ಅಥವಾ ಮುಜರಾಯಿ ಇಲಾಖೆಯಲ್ಲಿಯೂ ಗರ್ಭಗುಡಿ ಸಂಸ್ಕೃತಿ ಇದೆ ಎನ್ನುವುದು ಪ್ರಜಾಪ್ರಭುತ್ವ ಭಾರತದಲ್ಲಿ ಪುರೋಹಿತಶಾಹಿಯ ಪ್ರಾಬಲ್ಯದ ಸಂಕೇತ.ತಮ್ಮನ್ನು ಜಂಗಮರು ಎಂದು ಕರೆದುಕೊಳ್ಳುವ ಶೂದ್ರರೇ ಆದ ಅಯ್ಯಗಳ ಜಾತಿಯವರು ತಮ್ಮ ಮಠ ಮಂದಿರಗಳಲ್ಲಿ ಬ್ರಾಹ್ಮಣರಿಗಿಂತ ಹೆಚ್ಚಾದ ಮಡಿವಂತಿಕೆ ಅನುಸರಿಸುತ್ತಾರೆ.ಜಾತಿಜಂಗಮರು ಪೂಜಿಸುವ ದೇವರುಗಳಾದ ಶಿವ,ಬಸವ,ಶರಣರ ದೇವಸ್ಥಾನಗಳು ಶಿವಸಂಸ್ಕೃತಿಯ ಸರ್ವೋದಯ ತತ್ತ್ವದ ನೆಲೆಗಟ್ಟಿನ ಮೇಲೆ ಬೆಳೆದಿದ್ದರೂ ಅಲ್ಲಿಯ ಅರ್ಚಕವರ್ಗದವರು ಅಜ್ಞಾನದಿಂದ ಬ್ರಾಹ್ಮಣರ ವೈದಿಕ ಪೂಜಾಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಬಿ.ವಿ.ನಾಯಕ್ ಅವರು ಸುಸಂಸ್ಕೃತ ಮನೆತನದಿಂದ ಬಂದ ಸಂಸದರಾಗಿದ್ದ ಹಿರಿಯರಾಜಕಾರಣಿಯಾಗಿದ್ದರೂ ಬಹುಶಃ ಅವರು ಶೂದ್ರಸಮುದಾಯಗಳವರದ್ದಲ್ಲದ ಯಾವುದೇ ದೇವಸ್ಥಾನ,ಮಠ ಮಂದಿರಗಳಲ್ಲಿ ಒಳ ಪ್ರವೇಶಿಸಿದಂತೆ ಇಲ್ಲ.ಆ ಕಾರಣದಿಂದಲೆ ನಾನು ‘ಒಳಹೋಗಿ ದುರ್ಗಾದೇವಿಗೆ ಹೂಮಾಲೆ ಅರ್ಪಿಸಿ’ ಎಂದಾಗ ಒಂದುಕ್ಷಣ ಅಧೀರರಾದರು.ಬಿ.ವಿ.ನಾಯಕ್ ಅವರಿಗೆ ಬ್ರಾಹ್ಮಣರು ಮತ್ತು ಜಂಗಮರ ಮಠಗಳ ಆತ್ಮೀಯ ಒಡನಾಟ ಇದೆ,ಅವರು ಎಲ್ಲಕಡೆ ಹೋಗಿ ಬರುತ್ತಾರೆ.ಆದರೆ ಆ ದೇವಸ್ಥಾನದಲ್ಲಿ ದೇವರಿಗೆ ದೂರದಿಂದಲೇ ಕೈಮುಗಿಯುವ,ಆ ಮಠ ಮಂದಿರಗಳ ಸ್ವಾಮಿಗಳ ಪಾದಗಳಿಗೆ ನಮಸ್ಕರಿಸುವ ಭಕ್ತಿಯನ್ನಷ್ಟೇ ವ್ಯಕ್ತಪಡಿಸಲು ಸಾಧ್ಯವಾಗಿರಬೇಕು ಅವರಿಗೆ.ಒಬ್ಬ ರಾಜಕಾರಣಿಯಾಗಿ ಬಿ.ವಿ.ನಾಯಕ್ ಅವರಿಗೆ ಗರ್ಭಗುಡಿ ಸಂಸ್ಕೃತಿಯನ್ನು ಪ್ರಶ್ನಿಸದೆ ಇರುವ ಅನಿವಾರ್ಯತೆ ಇರಬಹುದು.ಆದರೆ ಗರ್ಭಗುಡಿ ಸಂಸ್ಕೃತಿಯು ಶೂದ್ರರ ಹಕ್ಕುಗಳ ಮೇಲಿನ ಆಕ್ರಮಣವಾದ ಸಂವಿಧಾನವಿರೋಧಿ ನಡೆ ಎನ್ನುವುದನ್ನು ಶೂದ್ರಜನತೆ ಮನಗಾಣಬೇಕು.ಇಲ್ಲಿ ನಾನು ನಮ್ಮೂರಿನದೇ ಆದ ಒಂದು ಪ್ರಸಂಗವನ್ನು ಉಲ್ಲೇಖಿಸಲೇಬೇಕು.ಎರಡುವಾರಗಳ ಹಿಂದೆ ನಾನು ನಮ್ಮ ಮಹಾಶೈವ ಧರ್ಮಪೀಠದ ನಿಷ್ಟಾವಂತ ಕಾರ್ಯಕರ್ತರಲ್ಲೊಬ್ಬರಾಗಿರುವ ಮೃತ್ಯುಂಜಯ ಯಾದವ ಅವರ ಸೊಸೆಯ ಮಗಳ ತೊಟ್ಟಿಲು ಸಮಾರಂಭಕ್ಕೆ ಹೋಗಿದ್ದೆ.ಸಮಾರಂಭ ನಡೆದದ್ದು ನಮ್ಮೂರಿನ ಕೃಷ್ಣ ಗುಡಿಯಲ್ಲಿ.ಅಲ್ಲಿ ತೊಟ್ಟಿಲು ಸಮಾರಂಭ ಇದ್ದರೂ ಕೃಷ್ಣನ ಗರ್ಭಗುಡಿಗೆ ಬೀಗ ಜಡಿಯಲಾಗಿತ್ತು! ಮಂದಿರದ ಪಡಸಾಲೆಯಲ್ಲಿ ಇವರು ತೊಟ್ಟಿಲು ಸಮಾರಂಭ ನೆರವೇರಿಸಿದರು.ಆಶ್ಚರ್ಯವೆಂದರೆ ಆ ದೇವಾಲಯಕ್ಕೆ ಭೂಮಿ ಕೊಟ್ಟವರು ಗೊಲ್ಲರು,ದೇವಸ್ಥಾನ ಕಟ್ಟಿಸಿದವರೂ ಗೊಲ್ಲರು,ಕೃಷ್ಣನ ಪೂಜೆ ಮಾಡುವ ಅರ್ಚಕನಿಗೆ ಸಂಬಳ ಕೊಡುವವರೂ ಗೊಲ್ಲರೆ.ಆದರೂ ಗೊಲ್ಲರ ಕೃಷ್ಣನ ವಂಶಜರೇ ಆದ ಗೊಲ್ಲರಿಗೆ ಕೃಷ್ಣನ ಗರ್ಭಗುಡಿಯಲ್ಲಿ ಪ್ರವೇಶವಿಲ್ಲ ! ಇದು ಪುರೋಹಿತಶಾಹಿಯ ಪೈಶಾಚಿಕ ಮನೋಭಾವಕ್ಕೆ ಹಿಡಿದ ಕೈಗನ್ನಡಿ.ಇಂತಹ ವಿಕೃತಿಯನ್ನು ಪ್ರಶ್ನಿಸದೆ ಪೊರೆದು ಪೋಷಿಸುವ ಶೂದ್ರಜನರ ಔದಾರ್ಯವು ಅವರ ಅವನತಿಯ ಕಾರಣ ಎನ್ನುವುದನ್ನು ಬೇರೆ ಹೇಳಬೇಕಿಲ್ಲ.

ಶೂದ್ರರ ಇಂತಹ ದಯನೀಯಸ್ಥಿತಿಯಿಂದ ಅವರನ್ನು ಮೇಲಕ್ಕೆತ್ತಲೆಂದೇ ನಾನು ನಮ್ಮೂರು ಗಬ್ಬೂರಿನಲ್ಲಿ ಮಹಾಶೈವ ಧರ್ಮಪೀಠವನ್ನು ಕಟ್ಟಿದ್ದು.ಮಹಾಶೈವ ಧರ್ಮಪೀಠ ಕಟ್ಟಿದ್ದು ಮಾತ್ರವಲ್ಲ,ಕಾಶಿಯಿಂದ ಬಂದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಪ್ರಾಣಪ್ರತಿಷ್ಠೆಯನ್ನು ಶಾಸ್ತ್ರೋಕ್ತವಾಗಿ, ಉಪಚಾರದ ಶಾಸ್ತ್ರಕ್ಕೂ ಅಧಿಕವಾಗಿ ಆಧ್ಯಾತ್ಮಿಕಶಕ್ತಿಪ್ರವಹಿಸುವಂತೆ ಶಕ್ತಿಪ್ರಾಣಪ್ರತಿಷ್ಠೆ ಮಾಡಿದ್ದೂ ನಾನೇ ! ಯಾವ ಸ್ವಾಮಿ,ಪುರೋಹಿತರನ್ನು ಕರೆಯದೆ ಮೂರ್ತಿಪ್ರತಿಷ್ಠಾಪನೆ,ಪ್ರಾಣಪ್ರತಿಷ್ಠೆ ಕಾರ್ಯ ನೆರವೇರಿಸಿದೆ.ಶೂದ್ರನಿಂದ ಪ್ರಾಣಪ್ರತಿಷ್ಠೆಗೊಂಡೆವೆಂದು ಶಿವ ದುರ್ಗಾದೇವಿಯರೇನು ಸಿಟ್ಟಾಗಲಿಲ್ಲ.ನಮ್ಮ ವಿಶ್ವೇಶ್ವರ ಶಿವನು ತನ್ನ ಸನ್ನಿಧಿಗೆ ಬರುವ ಭಕ್ತರ ಎಲ್ಲ ಸಂಕಷ್ಟಗಳನ್ನು ಕಳೆಯುತ್ತ ‘ ಮಾತನಾಡುವ ಮಹಾದೇವ’ ಎಂದು ಪ್ರಸಿದ್ಧನಾಗಿದ್ದರೆ ತನ್ನಲ್ಲಿ ಶರಣುಬರುವ ರಾಜಕಾರಣಿಗಳಿಗೆ ಗೆಲ್ಲುವ ನಿಶ್ಚಿತ ಅಭಯನೀಡುವ ಮೂಲಕ ‘ ವಿಜಯದುರ್ಗೆ’ ಎಂದು ಬಿರುದುಗೊಂಡಿದ್ದಾಳೆ ತಾಯಿ ವಿಶ್ವೇಶ್ವರಿ ದುರ್ಗಾದೇವಿ.ನಾವು ಮಹಾಶೈವ ಧರ್ಮಪೀಠದಲ್ಲಿ ಶಿವೋಪಶಮನ ಕಾರ್ಯ ಪ್ರಾರಂಭಿಸಿ ನಿನ್ನೆಯ ರವಿವಾರಸೇರಿ ಕೇವಲ 83 ವಾರಗಳಷ್ಟೇ ಆಗಿದೆ.ಇಷ್ಟು ಕಡಿಮೆ ಅವಧಿಯಲ್ಲಿ ವಿಶ್ವೇಶ್ವರ ಶಿವನ ಕೀರ್ತಿ ನಾಡಿನುದ್ದಗಲಕ್ಕೂ ಹರಡಿದ್ದಲ್ಲದೆ ತೆಲಂಗಾಣ,ಆಂದ್ರಪ್ರದೇಶ,ಮಹಾರಾಷ್ಟ್ರ ರಾಜ್ಯಗಳವರೆಗೂ ವ್ಯಾಪಿಸಿ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಿದ್ದಾರೆ.ಇದು ಶೂದ್ರಶಿವನ ಶಕ್ತಿ,ಶೂದ್ರಶಿವಯೋಗಿಯ ಸಾಮರ್ಥ್ಯ! ನಾವು ಇಂತಹ ಸಾಮರ್ಥ್ಯವನ್ನು ಸಂಪಾದಿಸಬೇಕೇ ಹೊರತು ಕಂಡವರಮುಂದೆ ಮಂಡಿಯೂರಬಾರದು.ಶೂದ್ರರಿಗೆ ಇನ್ನೂ ಬುದ್ಧಿ ಬಂದಿಲ್ಲ,ಕಂಡವರ ಪಾದಗಳಲ್ಲಿ ಅಡ್ಡ ಉದ್ದಬೀಳುವುದೇ ದೊಡ್ಡಸ್ತಿಕೆ ಎನ್ನುವ ಭ್ರಮೆಗೊಳಗಾಗಿ ಬಳಲುತ್ತಿದ್ದಾರೆ.

ಶೂದ್ರರನ್ನು ಗರ್ಭಗುಡಿಗೆ ಬಿಡಲೊಪ್ಪದ ಬ್ರಾಹ್ಮಣರ ವಿಕೃತಮನೋಭಾವಕ್ಕೆ ಸೆಡ್ಡು ಹೊಡೆದು ಶಿವಲಿಂಗವನ್ನು ಸ್ಥಾಪಿಸಿದ ಮೊದಲ ಶೂದ್ರರು ಎನ್ನುವ ಹೆಗ್ಗಳಿಕೆಯು ನಾರಾಯಣ ಗುರು ಅವರದ್ದಾದರೆ ನಾರಾಯಣ ಗುರುಗಳ ಬಳಿಕ ಶಿವಲಿಂಗವನ್ನಷ್ಟೇ ಅಲ್ಲ ದುರ್ಗಾದೇವಿ ಮತ್ತು ಮಹಾಕಾಳಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರಾಣಪ್ರತಿಷ್ಠೆ ನೆರವೇರಿಸಿದ ಎರಡನೆಯ ವ್ಯಕ್ತಿ ಎಂದರೆ ನಾನೇ ! ನನ್ನ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಮಾಡಿದ ಮೂರನೆಯ ಶೂದ್ರರು ! ನರೇಂದ್ರಮೋದಿಯವರು ಶೂದ್ರರು,ಅವರಿಗೆ ರಾಮನ ಮೂರ್ತಿಯ ಪ್ರತಿಷ್ಠಾಪನೆಯ ಹಕ್ಕು ಇಲ್ಲ ಎನ್ನುವ ಕಾರಣದಿಂದ ಶಂಕರಾಚಾರ್ಯಪರಂಪರೆಯ ಇಬ್ಬರು ಜಗದ್ಗುರುಗಳು ಮೋದಿಯವರು ರಾಮನ ಪ್ರಾಣಪ್ರತಿಷ್ಠಾಪನೆ ಮಾಡಿದ್ದನ್ನು ವಿರೋಧಿಸಿದ್ದು.ಸ್ವಾತಂತ್ರ್ಯ ಬಂದು ಏಳು ದಶಕಗಳೇ ಮುಗಿದಿದ್ದರೂ,ಭಾರತವು ವಿಶ್ವಕ್ಕೆ ಮಾದರಿಯಾಗುವ ಒಂದು ಆದರ್ಶ ಸಂವಿಧಾನವನ್ನು ಹೊಂದಿದ್ದರೂ ಬ್ರಾಹ್ಮಣರ ಮನೋಸ್ಥಿತಿಯು ಬದಲಾಗಿಲ್ಲ ಎನ್ನುವುದಕ್ಕೆ ಮೋದಿಯವರ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಇಬ್ಬರು ಶಂಕರಾಚಾರ್ಯರೇ ನಿದರ್ಶನ.ದುರಂತ ಎಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮನ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ತಮ್ಮನ್ನು ಉಪವಾಸವ್ರತಮುಕ್ತಗೊಳಿಸಿದ ರಾಮಮಂದಿರದ ಪ್ರಧಾನ ಅರ್ಚಕ ಬ್ರಾಹ್ಮಣನ ಪಾದಗಳಿಗೆ ನಮಸ್ಕರಿಸಿ ದೈನ್ಯ ಪ್ರದರ್ಶಿಸಿದ್ದು.ನರೇಂದ್ರಮೋದಿಯವರು ಎಂತಹ ಪ್ರಬಲನಾಯಕರೇ ಆಗಿದ್ದರೂ ನಾವು ಅವರನ್ನು ಮಣಿಸಬಲ್ಲೆವು ಎನ್ನುವ ಬ್ರಾಹ್ಮಣರ ಅಹಂಕಾರ,ಅಟ್ಟಹಾಸವನ್ನು ಮೋದಿಯವರು ಸಮರ್ಥಿಸಿದರು ಅರ್ಚಕನ ಪಾದಗಳಿಗೆ ನಮಸ್ಕರಿಸುವ ಮೂಲಕ. ಇದು ಮೋದಿಯವರ ರಾಜಕೀಯ ಚಾಣಾಕ್ಷನಡೆಯಾಗಿರಬಹುದಾದರೂ ಭಾರತದ ಪ್ರಧಾನ ಮಂತ್ರಿಯಾಗಿ ಸಂವಿಧಾನದ ಘನತೆ ಗೌರವಗಳನ್ನು ಎತ್ತಿಹಿಡಿಯಬೇಕಿದ್ದ ನರೇಂದ್ರಮೋದಿಯವರು ಅಯೋಧ್ಯೆಯ ರಾಮಮಂದಿರದ ಅರ್ಚಕನ ಪಾದಗಳಿಗೆ ನಮಸ್ಕರಿಸಿದ್ದು ಸಮರ್ಥನೀಯವಲ್ಲ.ನಿನ್ನೆಯಷ್ಟೇ ಲೋಕಸಭಾಚುನಾವಣೆಗಳಲ್ಲಿ ನಾಲ್ಕುನೂರು ಸ್ಥಾನಗಳನ್ನು ಗೆದ್ದರೆ ನಮ್ಮಿಷ್ಟದಂತೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದು ಅಣಿಮುತ್ತುಗಳನ್ನು ಉದುರಿಸಿದ್ದಾರೆ ಸಂಸ್ಕೃತಿ,ಸಭ್ಯತೆ,ಸಜ್ಜನಿಕೆಗಳ ಅರಿವೇ ಇರದ ಉತ್ತರಕನ್ನಡ ಜಿಲ್ಲೆಯ ಎಂಪಿ ಅನಂತಕುಮಾರ ಹೆಗಡೆ.ಶೂದ್ರಶಕ್ತಿಯಾಗಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಮನುಸ್ಮೃತಿಯ ವಿಕಾರಮನಸ್ಸುಗಳ ವಿಷಸರ್ಪಗಳಿಗೆ ಹಾಲುಣಿಸುತ್ತಿದ್ದಾರೆ.

ಗರ್ಭಗುಡಿಸಂಸ್ಕೃತಿಯ ಜನರ ದುರ್ವಿಚಾರಗಳಿಗೆ ಬಲಿಯಾಗದೆ ನಾವೇ ದೇವರಾಗಬೇಕು.ದೈವತ್ವ ನಮ್ಮಲ್ಲಿಯೂ ಇದೆ ಎಂದರಿತು ನಾವು ದೊಡ್ಡವರಾಗಬೇಕು.ಒಣ ಪೊಗರಿನ ಮಂದಿಯೆದುರು ಶರಣಾಗಿ ‘ಸಣ್ಣವರು’ ಎನ್ನಿಸಿಕೊಳ್ಳುವುದಕ್ಕಿಂತ ನಮ್ಮ ದೇಹವನ್ನೇ ದೇವಾಲಯವನ್ನಾಗಿ ಮಾರ್ಪಡಿಸಿಕೊಂಡು ‘ದೊಡ್ಡವರು’ ಆಗಬೇಕು.ಕೃಷ್ಣ ತನ್ನ ಕಾಲದಲ್ಲಿ ಬ್ರಾಹ್ಮಣರ ಅಟ್ಟಹಾಸವನ್ನು ಮೆಟ್ಟಿನಿಂತಿದ್ದಲ್ಲದೆ ಇಂದು ಬ್ರಾಹ್ಮಣರಿಂದಲೇ ಪೂಜೆಗೊಳ್ಳುವ ದೇವರಾಗಿ ಬೆಳೆದು ನಿಂತಿದ್ದಾನೆ ಎನ್ನುವ ಕೃಷ್ಣನಶೂದ್ರಶಕ್ತಿ ಶೂದ್ರರಿಗೆ ಏಕೆ ಆದರ್ಶವಾಗಬಾರದು ? ದಲಿತರನ್ನು ಅಸ್ಪೃಶ್ಯರೆಂದು ಹೊರಗೆ ಇಟ್ಟ ಜನರ ರಕ್ಕಸೀಕೃತ್ಯವನ್ನು ಖಂಡಿಸಲೆಂದೇ ಶಿವನು ಮಾದಾರ ಚೆನ್ನಯ್ಯನ ಮನೆಯ ಅಂಬಲಿಯನ್ನು ಉಂಡನು ಎನ್ನುವ ಸತ್ಯವನ್ನು ಶೂದ್ರರು,ದಲಿತರು ಮನಗಾಣಬಾರದೇಕೆ ? ಶುದ್ಧಸಾತ್ತ್ವಿಕ ದೇವರಾದರೂ ಶಿವನು ಬೇಡರ ಕಣ್ಣಪ್ಪನು ಇತ್ತ ಮಾಂಸದ ತುಂಡುಗಳನ್ನು ಚಪ್ಪರಿಸಿ ತನ್ನ ಭಕ್ತವತ್ಸಲ ಲೀಲೆಯನ್ನು ಮೆರೆದು ತಾನು ಮನುಷ್ಯನಿರ್ಮಿತಿಯ ಕುಟಿಲತೆಗಳಿಗೆ ಅತೀತನು ಎಂದು ಸಾರಿದ ಶಿವಬೆಡಗನ್ನು ಶೂದ್ರರು,ದಲಿತರು ಅರ್ಥೈಸಿಕೊಳ್ಳಬಾರದೇಕೆ ?

೧೧.೦೩.೨೦೨೪

About The Author