ಹಾಲುಮತದವರನ್ನು ನಿರ್ಲಕ್ಷಿಸುತ್ತಿರುವ ಸಚಿವರು,ಶಾಸಕರು : ಅಯ್ಯಣ್ಣ ಒಡವಾಟಿಗೆ ತಪ್ಪಿದ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಎಲ್ಲೆಡೆ ಆಕ್ರೋಷ

ಬಸವರಾಜ ಕರೇಗಾರ 

ರಾಯಚೂರು : ಜಿಲ್ಲೆಯಲ್ಲಿ ಸಚಿವರು ಮತ್ತು ಶಾಸಕರ ಬಗ್ಗೆ ಯಾವುದೇ ಹೊಂದಾಣಿಕೆ ಇಲ್ಲವೆನ್ನುವುದು ರಾಯಚೂರು ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಬೇರೆಯವರಿಗೆ ನೀಡಿರುವುದರಿಂದ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.ರಾಯಚೂರು ನಗರ ಮತ್ತು ರಾಯಚೂರು ಗ್ರಾಮೀಣದಲ್ಲಿ ಹಾಲುಮತ ಸಮಾಜದ ಮತಗಳು ನಿರ್ಣಾಯಕ ಮತಗಳಾಗಿವೆ. 30,000ಕ್ಕೂ ಅಧಿಕ ಮತದಾರರು ಪ್ರತಿ ಕ್ಷೇತ್ರದಲ್ಲೂ ಇದ್ದಾರೆ. ಇಂದಿನವರೆಗೂ ಹಾಲುಮತ ಸಮಾಜದವರನ್ನು ರಾಷ್ಟ್ರೀಯ ಪಕ್ಷಗಳ ಜೊತೆಗೆ ಎಲ್ಲಾ ಪಕ್ಷಗಳು ಕಡೆಗಣಿಸುತ್ತಿವೆ ಎನ್ನುವುದಕ್ಕೆ ಹಾಲುಮತ ಸಮಾಜದ ಮತ್ತು ಕಾಂಗ್ರೆಸ್ಸಿನ ಮುಖಂಡರಾದ ಅಯ್ಯಣ್ಣ ವಡವಟಿಯವರೆ ರಾಯಚೂರು ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡದಿರುವುದೇ ಸಾಕ್ಷಿಯಾಗಿದೆ.

ಷಡ್ಯಂತ್ರ ರೂಪಿಸಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ತಪ್ಪಿಸಿದರು?

ಜಿಲ್ಲೆಯಾದ್ಯಂತ ಕುರುಬರಿಗೆ ಇದುವರೆಗೂ ಯಾವುದೇ ರೀತಿಯ ಸ್ಥಾನಮಾನ ಕೊಟ್ಟಿಲ್ಲ. ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಕುರುಬರೇ ನಿರ್ಣಾಯಕರು.ವಿಧಾನಸಭಾ ಅಭ್ಯರ್ಥಿಗಳು ಜಯಗಳಿಸಿದ ಮೇಲೆ ಕುರುಬರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿದೆ. ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ತುರುವಿಹಾಳ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ ಇವರು ಕೆ.ಅಯ್ಯಣ್ಣ ವಡವಟ್ಟಿಯವರಿಗೆ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನವನ್ನು ಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮಾಡಿದ್ದರು. ಇನ್ನುಳಿದ ಕೆಲ ಶಾಸಕರುಗಳು, ಸಚಿವರು ಅಯ್ಯಣ್ಣ ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಶಡ್ಯಂತ್ರ ರೂಪಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿದ್ದಾರೆ ಎನ್ನಲಾಗುತ್ತಿದೆ.

ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರ ಸ್ಥಾನ ಬೇರೆಯವರ ಪಾಲಾಯಿತು.ಈಗ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಲಿಂಗಾಯತ ಸಮಾಜಕ್ಕೆ ನೀಡಬೇಕೆಂದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಗಿಟ್ಟಿಸಿಕೊಂಡಿದ್ದಾರೆ.ಹಾಲುಮತದವರು ಕೇವಲ ಮಾತು ಹಾಕುವುದಕ್ಕೆ ಮಾತ್ರ.ಅಧಿಕಾರ ಇತರ ಸಮಾಜದವರಿಗೆ ಎನ್ನುವ ಹಾಗಾಗಿದೆ.

ತುಳಿತಕ್ಕೆ ಒಳಗಾಗುತ್ತಿದ್ದಾರಾ ಹಾಲುಮತ ಸಮಾಜದವರು.

ರಾಯಚೂರು ಜಿಲ್ಲೆಯಲ್ಲಿ ಮಾಜಿ ಸಂಸತ್ ಸದಸ್ಯರಾದ ದಿವಂಗತ ವೆಂಕಟಪ್ಪ ನಾಯಕ್ ದೇವದುರ್ಗರವರು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತಮ್ಮ ಪ್ರಭಾವ ಬಳಸಿ ಜಿಲ್ಲೆಯ ಮಸ್ಕಿ,ಮಾನ್ವಿ, ರಾಯಚೂರು ಗ್ರಾಮೀಣ, ದೇವದುರ್ಗ,ಸೇರಿದಂತೆ ರಾಯಚೂರು ಲೋಕಸಭಾ ಕ್ಷೇತ್ರವನ್ನು ಕೂಡ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುವಂತೆ ನೋಡಿಕೊಂಡರು.ಇದರಿಂದ ಕುರುಬರು ಸೇರಿದಂತೆ ಇತರ ಸಣ್ಣಪುಟ್ಟ ಸಮಾಜಗಳಿಗೆ ಭಾರಿ ನಷ್ಟವಾಯಿತು.ಜೈಕಾರ ಹಾಕುವುದೇ ಕುರುಬರ ಕೆಲಸವಾಗಿದೆ.

ಗೆದ್ದ ಮೇಲೆ ಕುರುಬರನ್ನು ನಿರ್ಲಕ್ಷಿಸುತ್ತಿರುವ ಸಚಿವರು ಶಾಸಕರು.

ರಾಯಚೂರು ಗ್ರಾಮೀಣ ಸೇರಿದಂತೆ ಇತರ ಕ್ಷೇತ್ರದ ಶಾಸಕರು ಮತ್ತು ಸಚಿವರು ಕುರುಬ ಸಮಾಜದವರನ್ನು ತೀವ್ರವಾಗಿ ನಿರ್ಲಕ್ಷಿಸುತ್ತಿದ್ದಾರೆ. ಕುರುಬ ಸಮಾಜದವರು ಯಾವುದೇ ಸಮಸ್ಯೆಗಳನ್ನು ತೆಗೆದುಕೊಂಡು ಸಚಿವರು ಮತ್ತು ಶಾಸಕರ ಬಳಿ ಹೋದರೆ ನೋಡೋಣ. ಅನುದಾನವಿಲ್ಲ ಎಂದು ಹೇಳುತ್ತಿರುವುದು ಮೇಲ್ನೋಟಕ್ಕೆ ಸಮಾಜದವರನ್ನು ನಿರ್ಲಕ್ಷಿಸುತ್ತಿರುವುದು ಕಂಡು ಬರುತ್ತಿದೆ.

ಹೋರಾಟ ಅನಿವಾರ್ಯ :
ಸಮೀಪಿಸುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಲು ಹಾಲುಮತ ಸಮಾಜದವರು ಸಿದ್ದರಾಗಬೇಕಿದೆ !

ಹಾಲುಮತ ಸಮಾಜದವರನ್ನು ಪದೇ ಪದೇ ನಿರ್ಲಕ್ಷಿಸುತ್ತಿರುವುದರಿಂದ ಈಗಾಗಲೇ ರಾಯಚೂರು ಕ್ಷೇತ್ರದಿಂದ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರ ಮತ್ತು ಸಚಿವರ ಬಳಿ ತಮ್ಮ ಕೆಲಸಗಳು ಆಗುತ್ತಿಲ್ಲವೆಂದು ಗೋಗರೆಯುತ್ತಿದ್ದಾರೆ. ಸಮಾಜದ ಮುಖಂಡರು ಕೂಡ ಕಾರ್ಯಕರ್ತರ ಕೆಲಸಗಳಿಗೆ ಮನ್ನಣೆ ಕೊಡದೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು ಸುಮ್ಮನಾಗುತ್ತಿರುವುದು ಕ್ಷೇತ್ರದಾದ್ಯಂತ ಕುರುಬ ಸಮಾಜದ ಸಾಮಾನ್ಯರಿಂದ ಕೇಳಿ ಬರುತ್ತಿದೆ. ಇದರಿಂದ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಸಮಾಜದವರು ಎಂದಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

About The Author