:ಚಂಡೀಗಢ ಮೇಯರ್ ಚುನಾವಣೆ : ಪ್ರಜಾಪ್ರಭುತ್ವವನ್ನು ಬಲಪಡಿಸುವ ಸುಪ್ರೀಂಕೋರ್ಟಿನ ಮಹತ್ವದ ನಡೆ

ಮೂರನೇ ಕಣ್ಣು : ಪ್ರಜಾಪ್ರಭುತ್ವವನ್ನು ಬಲಪಡಿಸುವ ಸುಪ್ರೀಂಕೋರ್ಟಿನ ಮಹತ್ವದ ನಡೆ : ಮುಕ್ಕಣ್ಣ ಕರಿಗಾರ

ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಎಪಿಯ ಕಾರ್ಪೊರೇಟರ್ ಕುಲದೀಪ್ ಕುಮಾರ್ ಅವರು ಆಯ್ಕೆಯಾಗಿದ್ದಾರೆಂದು ತೀರ್ಪಿನಲ್ಲಿ ಘೋಷಿಸುವ ಮೂಲಕ ಸುಪ್ರೀಂಕೋರ್ಟ್ ಭಾರತದ ಚುನಾವಣಾ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಮಹತ್ವದ ಕಾರ್ಯವನ್ನು ಮಾಡಿದೆ .ಚಂಡೀಗಢ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಸೀಹ್ ಅವರು ಎಂಟು ಮತಪತಪತ್ರಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿದ್ದಾರೆ ಎನ್ನುವುದನ್ನು ಮನಗಂಡು ‘ ಚುನಾವಣಾ ಪ್ರಜಾತಂತ್ರದ ಮೂಲಭೂತ ಜನಾದೇಶವು ಜಾರಿಯಾಗುವಂತೆ ನೋಡಿಕೊಳ್ಳಲು ಇಂತಹ ಅಸಾಧಾರಣ ಸನ್ನಿವೇಶಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯ’ ಎಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶ ಡಿ ವೈ ಚಂದ್ರಚೂಡ್,ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾಅವರುಗಳನ್ನುಳ್ಳ ನ್ಯಾಯಪೀಠವು ಅಭಿಪ್ರಾಯಿಸಿದೆ.ಸುಪ್ರೀಂಕೋರ್ಟ್ ಭಾರತದ ಸಂವಿಧಾನದ 142 ನೆಯ ಅನುಚ್ಛೇದದಡಿ ತನಗೆ ಪ್ರಾಪ್ತವಾದ ಪರಮಾಧಿಕಾರವನ್ನು ಬಳಸಿ ಚಂಡೀಗಢ ಮೇಯರ್ ಹುದ್ದೆಗೆ ಕುಲದೀಪ್ ಕುಮಾರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದೆ.ಭಾರತದ ಸಂವಿಧಾನದ 142 ನೆಯ ಅನುಚ್ಛೇದವು ” ಸರ್ವೋಚ್ಚ ನ್ಯಾಯಾಲಯದ ಡಿಕ್ರಿಗಳ ಮತ್ತು ಆದೇಶಗಳ ಜಾರಿ ಮತ್ತು ಬಹಿರಂಗಪಡಿಸುವಿಕೆ ಇತ್ಯಾದಿಗಳ ಬಗ್ಗೆ ಆದೇಶಗಳು” ಎನ್ನುವ ಶೀರ್ಷಿಕೆಯಡಿ ಇದ್ದು ಅನುಚ್ಛೇದ 142(1) ಸರ್ವೋಚ್ಚ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಿ,ತನ್ನ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ವ್ಯಾಜ್ಯದ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಪೂರ್ಣನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂಥ ಡಿಕ್ರಿಯನ್ನು ಹೊರಡಿಸಬಹುದು ಅಥವಾ ಆದೇಶವನ್ನು ನೀಡಬಹುದು ಮತ್ತು ಹಾಗೆ ಹೊರಡಿಸಿದ ಡಿಕ್ರಿ ಅಥವಾ ಹಾಗೆ ನೀಡಿದ ಆದೇಶವು,ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ರೀತಿಯಲ್ಲಿ ಮತ್ತು ಹಾಗೆ ಉಪಬಂಧವನ್ನು ಮಾಡುವವರೆಗೆ ರಾಷ್ಟ್ರಪತಿಯು ಆದೇಶದ ಮೂಲಕ ನಿಯಮಿಸಬಹುದಾದಂಥ ರೀತಿಯಲ್ಲಿ ಭಾರತದ ರಾಜ್ಯಕ್ಷೇತ್ರದಾದ್ಯಂತ ಜಾರಿಗೊಳಿಸುವಂಥದ್ದಾಗಿರತಕ್ಕದ್ದು” ಎನ್ನುತ್ತದೆ

ಚಂಡೀಗಢ ಮೇಯರ್ ಹುದ್ದೆಗೆ ನಡೆದ ಜನೆವರಿ 30 ರಂದು ನಡೆದಿದ್ದ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಅನಿಲ್ ಮಸೀಹ್ ಅಕ್ರಮವೆಸಗಿ ಬಿಜೆಪಿ ಅಭ್ಯರ್ಥಿ ಮನೋಜ್ ಸೋನಕರ್ 16 ಮತಗಳಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದರು.ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿಮಾಡಿಕೊಂಡಿದ್ದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಎಪಿಯ ಅಭ್ಯರ್ಥಿ 12 ಮತಗಳನ್ನು ಪಡೆದಿದ್ದರು.ಚುನಾವಣಾಧಿಕಾರಿ 8 ಮತಗಳನ್ನು ತಿರಸ್ಕೃತಗೊಳಿಸಿದ್ದರು.ಸುಪ್ರೀಂಕೋರ್ಟಿನ ನ್ಯಾಯಪೀಠವು ಮೇಯರ್ ಚುನಾವಣೆಯ ವಿಡೀಯೋವನ್ನು ನ್ಯಾಯಾಲಯದಲ್ಲಿ ನೋಡಿ ವಿರೂಪಗೊಂಡ ಮತಪತ್ರಗಳನ್ನು ಪರಿಶೀಲಿಸಿತು.ಚುನಾವಣಾಧಿಕಾರಿಯಾಗಿದ್ದ ಅನೀಲ್ ಮಸೀಹ್ ಮೇಯರ್ ಚುನಾವಣೆಯ ಮತದಾನದ ಪ್ರಕ್ರಿಯೆಯನ್ನು ಕಾನೂನು ಬಾಹಿರವಾಗಿ ತಿರುಚಿರುವುದನ್ನು ಖಚಿತಪಡಿಸಿಕೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ ಅನಿಲ್ ಮಸೀಹ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಈ ಅಕ್ರಮದ ಕಾರಣಕ್ಕಾಗಿ ಭಾರತದ ದಂಡ ಸಂಹಿತೆಯ ಸೆಕ್ಷನ್ 340 ರ ಅಡಿ ಕ್ರಮಕೈಗೊಳ್ಳಲು ಸೂಚಿಸಿದೆ.ಚುನಾವಣಾಧಿಕಾರಿಯಾಗಿದ್ದ ಅನಿಲ್ ಮಸೀಹ್ ನಾಮನಿರ್ದೇಶಿತ ಕಾರ್ಪೋರೇಟರ್ ಆಗಿದ್ದು ಅವರು ಬಿಜೆಪಿ ಪಕ್ಷಕ್ಕೆ ಸೇರಿದವರು ಎನ್ನುವುದು ಗಮನಾರ್ಹವಾದುದು.

ಕೇಂದ್ರದ ಬಿಜೆಪಿ ವರಿಷ್ಠರಿಗೆ ಇದು ಹಿನ್ನಡೆ ಮಾತ್ರವಲ್ಲ ಒಂದು ಎಚ್ಚರಿಕೆ ಕೂಡ.ಅಧಿಕಾರದ ಬಲದಿಂದ ಮೇಯರ್ ಚುನಾವಣೆಯಲ್ಲಿ ಸಹ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳಂಕಿತಗೊಳಿಸಿದ ಬಿಜೆಪಿ ವರಿಷ್ಠರು ಅನ್ಯಾಯದ ಮಾರ್ಗದ ಮೂಲಕ ಅಧಿಕಾರ ಪಡೆಯುವಲ್ಲಿ ಎಲ್ಲ ಕಾಲದಲ್ಲೂ ಯಶಸ್ವಿಯಾಗುವುದಿಲ್ಲ ಎನ್ನುವುದಕ್ಕೆ ಸುಪ್ರೀಂಕೋರ್ಟ್ ತನ್ನ ಪರಮಾಧಿಕಾರ ಬಳಸಿ ನೀಡಿರುವ ಈ ತೀರ್ಪೇ ಸಾಕ್ಷಿ.ಒಂದು ರಾಷ್ಟ್ರೀಯ ಪಕ್ಷವಾಗಿ,ಕೇಂದ್ರದ ಆಡಳಿತಾರೂಢ ಪಕ್ಷವಾಗಿ ಬಿಜೆಪಿಯು ಮೇಯರ್ ಆಯ್ಕೆಯಂತಹ ವಿಷಯವನ್ನು ಸಹ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಚುನಾವಣಾ ಅಧಿಕಾರಿಯನ್ನು ಬಳಸಿಕೊಂಡು ವಾಮಮಾರ್ಗದ ಮೂಲಕ ಚಂಡೀಗಢ ಮೇಯರ್ ಹುದ್ದೆಯನ್ನು ಪಡೆದಿದ್ದು ತತ್ತ್ವ ಸಿದ್ಧಾಂತಗಳ ಬಗ್ಗೆ ಭಾಷಣ ಮಾಡುವ ಬಿಜೆಪಿಗೆ ಶೋಭೆಯನ್ನುಂಟು ಮಾಡುವ ಸಂಗತಿಯಲ್ಲ.ಸಣ್ಣ ಪುಟ್ಟ ಚುನಾವಣೆಗಳಲ್ಲಾದರೂ ಪ್ರಜಾಪ್ರಭುತ್ವವು ಗೆಲ್ಲಬಾರದು ಎಂದರೆ ಹೇಗೆ ? ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರವು ಸಂಸದೀಯ ಪ್ರಜಾಪ್ರಭುತ್ವ ಎಂದು ಸುಪ್ರೀಂಕೋರ್ಟಿನ ತೀರ್ಪುಗಳನ್ನು ಧಿಕ್ಕರಿಸಿ ಶಾಸನಗಳನ್ನು ರೂಪಿಸುತ್ತಿರುವ,ಸಂಸತ್ತಿನಲ್ಲಿ ಸಂಖ್ಯಾಬಲವಿದೆ ಎಂದು ಮನಸ್ವಿಯಾಗಿ ವರ್ತಿಸುತ್ತಿರುವ ‘ಸಲ್ಲದನಡೆ’ ಗೆ ಬ್ರೇಕ್ ಹಾಕುವ ಉದ್ದೇಶದಿಂದಲೇ ಸುಪ್ರೀಂಕೋರ್ಟ್ ಸಂವಿಧಾನದಲ್ಲಿ ದತ್ತವಾದ ಅನುಚ್ಛೇದ 142 ರ ಪರಮಾಧಿಕಾರವನ್ನು ಬಳಸಿಕೊಂಡಿದೆ.ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದ ರಾಜ್ಯಾಂಗ ಪದ್ಧತಿಯಲ್ಲಿ ಸಂಸತ್ತಿಗೆ ಪರಮಾಧಿಕಾರವಿದೆಯಾದರೂ ಸಂಸತ್ತು ರೂಪಿಸುವ ನೀತಿ ನಿಯಮಾವಳಿಗಳನ್ನು ಪರಾಮರ್ಶಿಸುವ ಅಧಿಕಾರ ಸುಪ್ರೀಂಕೋರ್ಟಿಗೆ ಇದೆ,ಸುಪ್ರೀಂಕೋರ್ಟಿಗೂ ಪರಮಾಧಿಕಾರ ಇದೆ ಎನ್ನುವುದು ಸುಪ್ರೀಂಕೋರ್ಟ್ ಚಂಡೀಗಢ ಮೇಯರ್ ಚುನಾವಣೆಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.ಇತ್ತೀಚೆಗೆ ಚುನಾವಣಾ ಬಾಂಡ್ ಗಳನ್ನು ಅಸಾಂವಿಧಾನಿಕ ಎಂದು ಘೋಷಿಸಿ ಅವುಗಳನ್ನು ರದ್ದು ಪಡಿಸಿ ಬಿಜೆಪಿಗೆ ಶಾಕ್ ನೀಡಿದ್ದ ಸುಪ್ರೀಂಕೋರ್ಟ್ ಚಂಡೀಗಢ ಮೇಯರ್ ಚುನಾವಣೆಯ ತನ್ನ ತೀರ್ಪಿನ ಮೂಲಕ ಬಿಜೆಪಿಗೆ ಗಾಯದ ಮೇಲೆ ಬರೆ ಎಳೆದಿದೆ.ಕೇಂದ್ರದ ಬಿಜೆಪಿಯು ತನ್ನ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಲೋಕಸಭಾ ಚುನಾವಣೆಗಳ ಪೂರ್ವದಲ್ಲಿಯೇ ಅದು ಸುಪ್ರೀಂಕೋರ್ಟಿನಿಂದ ಮತ್ತಷ್ಟು ಪ್ರತಿಕೂಲಕರ ತೀರ್ಪುಗಳನ್ನು ಸ್ವಾಗತಿಸಬೇಕಾಗುತ್ತದೆ.

ಸುಪ್ರೀಂಕೋರ್ಟ್ ಮುಂಬರಲಿರುವ ಲೋಕಸಭಾ ಚುನಾವಣೆಗಳಲ್ಲಿ ಕೇಂದ್ರ ಚುನಾವಣಾ ಆಯೋಗವು ಸೇರಿದಂತೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ರಾಜಕೀಯ ನಿರ್ಲಿಪ್ತತೆಯನ್ನಳವಡಿಸಿಕೊಂಡು ಮುಕ್ತ ಮತ್ತು ನ್ಯಾಯಸಮ್ಮತ ( Free and Fair elections)ಚುನಾವಣೆಗಳನ್ನು ನಡೆಸುವಲ್ಲಿ ಬದ್ಧರಾಗಿರಬೇಕು ಎನ್ನುವ ಎಚ್ಚರಿಕೆಯ ಸಂದೇಶವನ್ನು ನೀಡುವ ಉದ್ದೇಶದಿಂದಲೇ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಿದ ಚುನಾವಣಾಧಿಕಾರಿ ಅನಿಲ್ ಮಸೀಹ್ ವಿರುದ್ಧ ಕ್ರಿಮಿನಲ್ ಕೋಡ್ ನ‌ ಸೆಕ್ಷನ್ 340 ರಡಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.ಇಂಡಿಯಾ ಮೈತ್ರಿಕೂಟದವರು ಲೋಕಸಭಾ ಚುನಾವಣೆಗಳಲ್ಲಿ ಅಕ್ರಮಗಳು ಘಟಿಸದಂತೆ ಎಚ್ಚರಿಕೆ ವಹಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಮತ್ತು ಅಗತ್ಯ ಬಿದ್ದರೆ ಲೋಕಸಭಾ ಚುನಾವಣೆಗಳ ವಿಷಯದಲ್ಲಿ ಸುಪ್ರೀಂಕೋರ್ಟ್ ಭಾರತದ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಸಂವಿಧಾನದ 142 ನೆಯ ಅನುಚ್ಛೇದದಂತೆ ಪ್ರದತ್ತವಾದ ಪರಮಾಧಿಕಾರವನ್ನು ಬಳಸಿಕೊಂಡು Free and Fair election ನಡೆಯಲು ಮಧ್ಯೆ ಪ್ರವೇಶಿಸುವಂತೆ ಕೋರಲು ಇದು ಸರಿಯಾದ ಸಮಯ.

೨೧.೦೨.೨೦೨೪

About The Author