ಸತಿ ಪತಿಗಳಿಬ್ಬರೂ ಶಿವಭಕ್ತರಾಗಿರಬೇಕು

ಬಸವೋಪನಿಷತ್ತು ೪೯ : ಸತಿ ಪತಿಗಳಿಬ್ಬರೂ ಶಿವಭಕ್ತರಾಗಿರಬೇಕು : ಮುಕ್ಕಣ್ಣ ಕರಿಗಾರ

ಗಂಡ ಶಿವಲಿಂಗದೇವರ ಭಕ್ತ ;
ಹೆಂಡತಿ ಮಾರಿ- ಮಸಣಿಯ ಭಕ್ತೆ !
ಗಂಡ ಕೊಂಬುದು ಪಾದೋದಕ ಪ್ರಸಾದ ;
ಹೆಂಡತಿ ಕೊಂಬುದು ಸುರೆ- ಮಾಂಸ !
ಭಾಂಡ– ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ,
ಕೂಡಲ ಸಂಗಮದೇವಾ !

ಗಂಡಹೆಂಡತಿ ಇಬ್ಬರು ಶಿವಭಕ್ತರಾಗಿ ಶಿವನನ್ನು ಪೂಜಿಸಿದರೆ ಶ್ರೇಯಸ್ಸು ಎನ್ನುತ್ತಾರೆ ಬಸವಣ್ಣನವರು ಈ ವಚನದಲ್ಲಿ.ಆದರೆ ಗಂಡನೊಂದು ದೇವರನ್ನು ಹೆಂಡತಿ ಮತ್ತೊಂದು ದೇವರನ್ನು ಪೂಜಿಸುತ್ತಿದ್ದರೆ ಅದು ಅರ್ಥಹೀನ ಆರಾಧನೆ ಎಂದೂ ಎಚ್ಚರಿಸಿದ್ದಾರೆ ಬಸವಣ್ಣನವರು.ಒಂದು ಕುಟುಂಬದಲ್ಲಿ ಗಂಡಶಿವಭಕ್ತನು,ಲಿಂಗಪೂಜಕನು.ಆದರೆ ಅವನ ಹೆಂಡತಿಯು ಮಾರಿ- ಮಸಣಿಯನ್ನು ಪೂಜಿಸುವವಳು! ಶಿವಲಿಂಗದೇವರ ಭಕ್ತನಾದ ಕಾರಣ ಗಂಡನು ತನ್ನ ಗುರು ಇಲ್ಲವೆ ಜಂಗಮನ ಪಾದೋದಕ ಪ್ರಸಾದವನ್ನು ಸೇವಿಸುತ್ತಿದ್ದರೆ ಹೆಂಡತಿಯು ಸೇವಿಸುವುದು ಮದ್ಯ ಮಾಂಸವನ್ನು.ಭಾಂಡೆ ಪಾತ್ರೆಗಳು ಶುದ್ಧವಿಲ್ಲದವರ ಭಕ್ತಿಯನ್ನು ದುರ್ಗಂಧ ನಾರುತ್ತಿರುವ ಹೆಂಡದ ಕೊಡವನ್ನು ಹೊರಗೆ ತೊಳೆದಂತೆ ನಿಷ್ಪ್ರಯೋಜಕ ಕ್ರಿಯೆ ಎನ್ನುತ್ತಾರೆ ಬಸವಣ್ಣನವರು.

ಮತ್ತೊಂದು ವಚನದಲ್ಲಿ ಬಸವಣ್ಣನವರು ‘ ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ’ ಎಂದು ಹಾಡಿದ್ದನ್ನು ಇಲ್ಲಿ ಗಮನಿಸಬಹುದು.ಕುಟುಂಬ ಎನ್ನುವ ಬಂಡಿಗೆ ಗಂಡ ಹೆಂಡತಿ ಎನ್ನುವ ಎರಡು ಚಕ್ರಗಳಿದ್ದು ಆ ಎರಡು ಚಕ್ರಗಳು ಸಮನಾಗಿ,ಒಂದುಗೂಡಿ ಓಡಿದರೆ ಮಾತ್ರ ಬಂಡಿಯು ಸರಾಗವಾಗಿ ಓಡಬಲ್ಲದು,ಹೊಲಮನೆಗಳನ್ನು ಮುಟ್ಟಬಲ್ಲದು,ಗುರಿ ಸೇರಬಲ್ಲದು.ಹಾಗೆಯೇ ಸಂಸಾರವೂ ಧರ್ಮವಾಗಿದ್ದು ಸಂಸಾರ ಧರ್ಮದಲ್ಲಿ ಗಂಡ ಹೆಂಡತಿಯರು ಪರಸ್ಪರ ಅರ್ಥಮಾಡಿಕೊಂಡು ಬದುಕಬೇಕು.ಗಂಡ ಹೆಂಡತಿ ಇಬ್ಬರ ದೇಹಗಳು ಒಂದಾದರೆ ಸಾಲದು,ಭಾವಗಳು ಒಂದಾಗಬೇಕು,ಮನಸ್ಸುಗಳು ಒಂದಾಗಬೇಕು.ಗಂಡನು ಶಿವಭಕ್ತನಾದರೆ ಹೆಂಡತಿಯೂ ಶಿವಭಕ್ತೆಯಾಗಬೇಕು,ಗಂಡನು ಲಿಂಗೋಪಾಸನೆ ಮಾಡಿದರೆ ಹೆಂಡತಿಯೂ ಲಿಂಗಾರ್ಚನೆ ಮಾಡಬೇಕು.ಗಂಡ ಶಿವಭಕ್ತನಾಗಿ ಹೆಂಡತಿ ಮಾರಿ ಮಸಣಿಯರ ಭಕ್ತೆಯಾದರೆ ಅದು ಅಸಂಬದ್ಧವೇ ಹೊರತು ಅನೋನ್ಯ ದಾಂಪತ್ಯವಲ್ಲ.ಶಿವಲಿಂಗಪೂಜಕನಾದ ಗಂಡನದು ಪಾದೋದಕ ಪ್ರಸಾದಗಳನ್ನು ಸ್ವೀಕರಿಸುವ ಸಾತ್ತ್ವಿಕ ಬದುಕಾದರೆ ಹೆಂಡತಿಯದು ಹೆಂಡ ಮಾಂಸ ಸೇರಿಸುವ ತಾಮಸ ಜೀವನ ! ಇಬ್ಬರು ಪೂಜಿಸುತ್ತಿರುವ ದೇವರುಗಳ ಗುಣ ಸ್ವಭಾವವೇ ಹಾಗೆ.ಶಿವನು ವಿಶ್ವನಿಯಾಮಕನಾದ ವಿಶ್ವೇಶ್ವರ ಶಿವನಿದ್ದು ಅವನು ಜೀವಸಮಸ್ತರ ತಂದೆಯಿರುವುದರಿಂದ ಜೀವರುಗಳನ್ನು ಕಾಡನು,ಏನನ್ನೂ ಬೇಡನು.ಭಕ್ತರು ಸಮರ್ಪಿಸಿದ ಬೆಲ್ಲವೋ ಅನ್ನವೋ ಆದ ಸಾತ್ತ್ವಿಕ ಆಹಾರವನ್ನು ನೈವೇದ್ಯವನ್ನಾಗಿ ಸ್ವೀಕರಿಸಿ ಸಂತೃಪ್ತನಾಗುವನು.ಆದರೆ ಮಾರಿ ಮಸಣಿಯರಂತಹ ಕ್ಷುದ್ರದೇವತೆಗಳ ಪಾಡು ಹಾಗಲ್ಲ.ಕ್ಷುದ್ರದೇವಿಯರಾದ ಮಾರಿ ಮಸಣಿಯರುಗಳು ಜೀವಗಳ ಬಲಿಬೇಡುತ್ತಾರೆ,ರಕ್ತಕುಡಿಯುತ್ತಾರೆ.ಆ ದೇವಿಯರ ಭಕ್ತರು ಮಾಂಸವನ್ನುಣ್ಣುವುದು,ಮದ್ಯಪಾನ ಸೇವಿಸುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.ಇಂತಹ ವಿರೋಧಿ ಮನೋಪ್ರವೃತ್ತಿಯ ಗಂಡ ಹೆಂಡಿರ ಸಂಸಾರ ಚೆನ್ನಾಗಿ ನಡೆಯುವುದಾದರೂ ಹೇಗೆ ? ಗಂಡ ಹೆಂಡತಿಯರು ಬೇರೆ ಬೇರೆ ದೇವರನ್ನು ಪೂಜಿಸುವುದು ಹೆಂಡದ ಮಡಕೆಯನ್ನು ಹೊರಗೆ ತೊಳದಂತೆ ನಿಷ್ಪ್ರಯೋಜಕ ಕ್ರಿಯೆಯು.ಹೆಂಡವನ್ನು ತುಂಬಿಟ್ಟ ಮಗಿಯು ದುರ್ಗಂಧ ವಾಸನೆಯನ್ನು ಬೀರುತ್ತದೆ.ಹೆಂಡದ ವಾಸನೆಯನ್ನು ತಡೆಯಬೇಕು ಎಂದರೆ ಹೆಂಡದ ಖಾಲಿಮಗಿಯನ್ನು ಒಳಗೆ ತೊಳೆದು ಸ್ವಚ್ಛಗೊಳಿಸಬೇಕು.ಅದನ್ನು ಬಿಟ್ಟು ಹೆಂಡದ ಮಗಿಯನ್ನು ಹೊರಗೆ ತೊಳೆದರೆ ಹೆಂಡದ ದುರ್ವಾಸನೆ ಹೋಗುತ್ತದೆಯೆ ?ಇಲ್ಲ.

ಶರಣದಂಪತಿಗಳು ಶಿವಪೂಜಕರಾಗಿರಬೇಕಲ್ಲದೆ ಬೇರೆ ದೇವರನ್ನು ಪೂಜಿಸಬಾರದು.ಮಾರಿ ಮಸಣಿಯರು ಕಾಡುವ ಬೇಡುವ ಕ್ಷುದ್ರ ದೈವಗಳಲ್ಲದೆ ವರವನ್ನು ನೀಡಲರಿಯವು.ಸರ್ವಶಕ್ತನೂ ಸರ್ವಜ್ಞನೂ ಸರ್ವಾಂತರ್ಯಾಮಿಯೂ ಆಗಿರುವ ಪರಮೇಶ್ವರ ಶಿವನನ್ನು ಪೂಜಿಸಿ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು.ಶಿವನ ಸಾತ್ತ್ವಿಕ ಪೂಜೆಯು ಭಕ್ತರಿಗೆ ಯಾವ ರೀತಿಯಲ್ಲೂ ಹೊರೆಯಲ್ಲ.ಶಿವನ ಪೂಜೆಗೆ ಬೇಕಾಗುವ ವಸ್ತು,ಪಡಿಪದಾರ್ಥಗಳೆಂದರೆ ಪ್ರಕೃತಿಯಲ್ಲಿ ಸಹಜವಾಗಿ ಸಿಗುವ ನೀರು,ಬಿಲ್ವಪತ್ರೆ,ಫಲ ಪುಷ್ಪಗಳು ಮಾತ್ರ.ಆದರೆ ಮಾರಿ ಮಸಣಿಯರ ಪೂಜೆಗೆ ಮಾಂಸದ ನೈವೇದ್ಯವೇ ಆಗಬೇಕು.ಜನಸಾಮಾನ್ಯರು ‘ ದೇವರು ಮಾಡುವುದು’ ಎಂದು ಯಲ್ಲಮ್ಮ,ಹುಲಿಗೆಮ್ಮ,ಮಾರಮ್ಮ,ಸವಾರಮ್ಮ ಆ ಅಮ್ಮ ಈ ಅಮ್ಮ ಎಂದು ಆಡು ಕೋಣಗಳನ್ನು ಬಲಿಕೊಡುತ್ತಾರೆ.ದೇವರು ಮಾಡುವುದು ಎಂದರೆ ಲಕ್ಷಾಂತರ ರೂಪಾಯಿಗಳ ವ್ಯರ್ಥ ಖರ್ಚು.ಹೀಗೆ ಲಕ್ಷಾಂತರ ರೂಪಾಯಿಗಳ ಖರ್ಚು ಮಾಡಿಸಿ ಪೂಜಿಸಿಕೊಂಡ ಕ್ಷುದ್ರ ದೇವಿಯರು ತಮ್ಮ ಭಕ್ತರುಗಳನ್ನು ಕಾಪಾಡುವುದು ಅಷ್ಟರಲ್ಲೇ ಇದೆ ! ದೇವಿಯರ ಹೆಸರಿನಲ್ಲಿ ಜೀವಿಗಳ ಬಲಿಕೊಡುವುದು ಪಾಪ ಕಾರ್ಯ.ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ದೇವರನ್ನು ಮಾಡುವುದಲ್ಲದೆ ಆಡು ಕುರಿ ಕೋಳಿ ಕೋಣಗಳನ್ನು ಬಲಿಕೊಟ್ಟ ಜೀವಹತ್ಯೆಯ ಪಾಪಕ್ಕೂ ಗುರಿಯಾಗಬೇಕು.ಆ ಪಾಪವನ್ನು ತಾನೇ ಅನುಭವಿಸಬೇಕಲ್ಲದೆ ಯಾವ ದೇವಿಯರೂ ಕಳೆಯಲಾರರು.ಕ್ಷುದ್ರದೇವಿಯರ ಪೂಜೆ ಉಪಾಸನೆಗಳಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಬಡವರು ದೇವರನ್ನು ಮಾಡಲು ಸಾಲಸೋಲ ಮಾಡಿ ಮತ್ತಷ್ಟು ಪರಿತಪಿಸಬೇಕಾಗುತ್ತದೆ.ಜನರಿಂದ ಪೂಜಿಸಿಕೊಳ್ಳುವುದು,ಸೇವೆ ಮಾಡಿಸಿಕೊಳ್ಳುವುದು ತಮ್ಮ ದೈವಿಕಹಕ್ಕು ಎಂದು ಭಾವಿಸುವ ಮಾರಿ ಮಸಣಿಯರಂತಹ ಕ್ಷುದ್ರದೈವಗಳು ತಮ್ಮ ಭಕ್ತರ ಆರ್ಥಿಕ ಸಮಸ್ಯೆಯನ್ನೇನೂ ಕಳೆಯಲಾರರು.ಆದ್ದರಿಂದ ಭಕ್ತರು ಮಾರಿ ಮಸಣಿಯರಂತಹ ಕ್ಷುದ್ರದೈವಗಳನ್ನು ಪೂಜಿಸದೆ ಏನನ್ನೂ ಬೇಡದ ಮರುಳಶಂಕರ ಶಿವನನ್ನು ಪೂಜಿಸಿ ಭೋಗ ಮೋಕ್ಷಗಳೆರಡನ್ನೂ ಪಡೆಯಬಹುದು.

೨೧.೦೨.೨೦೨೪

About The Author