ವಸತಿ ಶಾಲೆಗಳಲ್ಲಿ ಕೈ ಮುಗಿದು ಒಳಗೆ ಬಾ ಘೋಷವಾಕ್ಯ ಬದಲಾವಣೆಗೆ ಕರಣ್ ಸುಬೇದಾರ ಖಂಡನೆ

ಶಹಾಪೂರಸರ್ಕಾರಿ ವಸತಿ ಶಾಲೆಗಳಲ್ಲಿ ಕೈ ಮುಗಿದು ಒಳಗೆ ಬಾ ಎಂಬ ಘೋಷ ವಾಕ್ಯ ಬದಲಾವಣೆ ಮಾಡಿರುವುದು ಖಂಡನಾರ್ಹ ಎಂದು ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಲೆಗಳೆಂದರೆ ಪವಿತ್ರ ತಾಣ. ಅದನ್ನು ಅರ್ಥೈಸಿಕೊಳ್ಳದ ಸರ್ಕಾರ ಇಲಾಖೆಯ ಹಿರಿಯ ಅಧಿಕಾರಿಯ ಮೂಲಕ ಸರ್ಕಾರಿ ವಸತಿ ಶಾಲೆಗಳ ದ್ವಾರದಲ್ಲಿ ಬರೆಸಲಾಗಿದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷವಾಕ್ಯವನ್ನು ಬದಲಿಸಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬರೆಸಲು ಪ್ರಾರಂಭಿಸಿದೆ. ವಸತಿ ಶಾಲೆಗಳ ಶಿಕ್ಷಕರಿಂದಲೇ ತ್ರೀವ್ರ ವಿರೋಧ ವ್ಯಕ್ತವಾಗಿದೆ. ಆದರೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮೌಖಿಕ ಸೂಚನೆ ಮೂಲಕ ಬದಲಾವಣೆ ಮಾಡಲು ತಿಳಿಸಿದ್ದಾರೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಏಕಾಏಕಿ ಬದಲಾವಣೆ ಮಾಡುವ ಉದ್ದೇಶವೇನು? ಜ್ಞಾನದೇಗುಲಕ್ಕೆ ವಿದ್ಯಾರ್ಥಿ ಕೈ ಮುಗಿಯುವುದೇ ತಪ್ಪಾ? ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ದ ಎತ್ತಿಕಟ್ಟಲು ಈ ಸಾಲುಗಳು ಪ್ರಚೋದನೆ ನೀಡುವಂತಿದೆ. ಕೈ ಮುಗಿದು ಒಳಗೆ ಬಾ ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳು ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂದು ಘೋಷವಾಕ್ಯ ಬರೆಸಿದೆ. ಇದನ್ನೇ ಸರ್ಕಾರಿ ಶಾಲೆಗಳಲ್ಲೂ ಅನುಸರಿಸಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಸಾಲು ತೆಗೆದುಹಾಕಿದ್ದಾರೆ. ಇದು ಕುವೆಂಪುರವರಿಗೆ ಮಾಡಿದ ಅಪಮಾನವಾಗಿದೆ. ಸರ್ಕಾರವು ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಒತ್ತಾಯಿಸಿದ್ದಾರೆ.

About The Author